ಅಥ ಪ್ರಥಮೋಽಧ್ಯಾಯಃ ಅಧ್ಯಾಯ ೧

ಧೃತರಾಷ್ಟ್ರ ಉವಾಚ
1 ಧರ್ಮ-ಕ್ಷೇತ್ರೇ ಕುರು-ಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥
ಧೃತರಾಷ್ಟ್ರನು ಸಂಜಯನ ಬಳಿ ಪ್ರಶ್ನಿಸುತ್ತಾನೆ - ಪುಣ್ಯಭೂಮಿ ಕುರುಕ್ಷೇತ್ರ. ಇಲ್ಲಿ ಯುದ್ಧ ಮಾಡಲು ಬಯಸಿ ಸೇರಿದ ನನ್ನ ಮಕ್ಕಳು ಮತ್ತು ತಮ್ಮನಾದ ಪಾಂಡುವಿನ ಮಕ್ಕಳು ಏನು ಮಾಡಿದರು?
ಸಂಜಯ ಉವಾಚ
2 ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ । ಆಚಾರ್ಯಮುಪ ಸಂಗಮ್ಯ ರಾಜಾ ವಚನಮಬ್ರವೀತ್ ॥
ಸಂಜಯನು ಉತ್ತರಿಸುತ್ತಾನೆ - ದೊರೆ ದುರ್ಯೋಧನನು ಯುದ್ಧಕ್ಕೆ ತಯಾರಾದ ಪಾಂಡವರ ಸೈನ್ಯವನ್ನು ನೋಡಿದಾಗಲೇ ದ್ರೋಣಾಚಾರ್ಯರ ಬಳಿಗೆ ಹೋಗಿ ಹೀಗೆ ಹೇಳಿದನು.
3 ಪಶ್ಶೈತಾಂ ಪಾಂಡು-ಪುತ್ರಾಣಾಂ ಆಚಾರ್ಯ ಮಹತೀಂ ಚಮೂಮ್ । ವ್ಯೂಢಾಂ ದ್ರುಪದ-ಪುತ್ರೇಣ ತವ ಶಿಷ್ಯೇಣ ಧೀಮತಾ ॥
ಓ ಆಚಾರ್ಯ, ಪಾಂಡವರ ಈ ದೊಡ್ಡ ಸೈನ್ಯವನ್ನು ನೋಡು. ದ್ರುಪದರಾಜನ ಮಗ ಧೃಷ್ಟದ್ಯುಮ್ನ ನಿನ್ನ ಶಿಷ್ಯ ಬುದ್ಧಿಮಂತಿಕೆಯಿಂದ ಈ ಸೈನ್ಯವನ್ನು ಸಜ್ಜುಗೊಳಿಸಿದ್ದಾನೆ, ನೋಡು.
4 ಅತ್ರ ಶೂರಾ ಮಹೇಷ್ವಾಸಾಃ ಭೀಮಾರ್ಜುನ-ಸಮಾ ಯುಧಿ । ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ॥
5 ಧೃಷ್ಟಕೇತುಶ್ಚೇಕಿತಾನಃ ಕಾಶಿ-ರಾಜಶ್ಚ ವೀರ್ಯ-ವಾನ್ । ಪುರು-ಜಿತ್ ಕುಂತಿ-ಭೋಜಶ್ಚ ಶೈಬ್ಯಶ್ಚ ನರ-ಪುಂಗವಃ ॥
6 ಯುಧಾಮನ್ಯುಶ್ಚ ವಿಕ್ರಾಂತಃ ಉತ್ತಮೌಜಾಶ್ಚ ವೀರ್ಯ-ವಾನ್ । ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥
ಈ ಸೈನ್ಯದಲ್ಲಿರುವ ಎಲ್ಲರೂ ಮಹಾರಥಿಗಳೇ, ಶೂರರೂ, ವೀರರೂ, ಪರಾಕ್ರಮಿಗಳೂ, ದೊಡ್ಡ ಬಿಲ್ಗಾರರೂ, ಭೀಮ ಮತ್ತು ಅರ್ಜುನನಿಗೆ ಸಮನಾಗಿ ಹೋರಾಡುವವರೂ ಆಗಿದ್ದಾರೆ. ಯುಯುಧಾನ (ಸಾತ್ಯಕಿ), ವಿರಾಟ, ದ್ರುಪದ, ಶಿಶುಪಾಲನ ಮಗ ಧೃಷ್ಟಕೇತು, ಯದುವಂಶದ ಚೇಕಿತಾನ, ಭೀಮನ ಮಾವ ಕಾಶಿರಾಜ, ಕುಂತಿಭೋಜನ ಮಗ ಪುರುಜಿತ್, ಕುಂತಿಭೋಜ, ಕೇಕಯರ ತಂದೆ ಶೈಬ್ಯ, ಪಾಂಚಾಲಪುತ್ರರಾದ ಯುಧಾಮನ್ಯು ಮತ್ತು ಉತ್ತಮೋಜಸ್, ಸುಭದ್ರೆಯ ಮಗ ಅಭಿಮನ್ಯು ಮತ್ತು ದ್ರೌಪದಿಯ ಮಕ್ಕಳೈವರು- ಪ್ರತಿವಿಂಧ್ಯ, ಸುತಸೋಮ, ಶ್ರುತಕೀರ್ತಿ, ಶತಾನೀಕ, ಶ್ರುತಕ್ರಿಯ.
7 ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ ನಿಬೋಧ ದ್ವಿಜೋತ್ತಮ । ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ॥
ಓ ಆಚಾರ್ಯ, ನಮ್ಮಲ್ಲಿನ ಶ್ರೇಷ್ಠರನ್ನೂ ಹೇಳುವೆ, ಕೇಳು. ನನ್ನ ಸೈನ್ಯದ ನಾಯಕರಿವರು, ನಿನ್ನ ನೆನಪಿಗಾಗಿ ಹೇಳುತ್ತೇನೆ.
8 ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂ-ಜಯಃ । ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥
ತಾವು, ಭೀಷ್ಮ, ಕರ್ಣ, ಯುದ್ಧ ಗೆಲ್ಲುವ ಕೃಪ,ಅಶ್ವತ್ಥಾಮ, ವಿಕರ್ಣ(ದುರ್ಯೋಧನನ ತಮ್ಮ), ಸೋಮದತ್ತನ ಮಗ ಭೂರಿಶ್ರವಸ್.
9 ಅನ್ಯೇ ಚ ಬಹವಃ ಶೂರಾಃ ಮದರ್ಥೇ ತ್ಯಕ್ತ-ಜೀವಿತಾಃ । ನಾನಾ-ಶಸ್ತ್ರ-ಪ್ರಹರಣಾಃ ಸರ್ವೇ ಯುದ್ಧ-ವಿಶಾರದಾಃ ॥
ನನಗಾಗಿ ಪ್ರಾಣಕೊಡಲು ಸಿದ್ಧರಾದ ಇನ್ನೂ ಬಹಳ ಮಂದಿ ಶೂರರು ಇರುವರು. ಅವರೆಲ್ಲರೂ ಬಗೆಬಗೆಯ ಆಯುಧಗಳಿಂದ ಹೋರಾಡಬಲ್ಲವರು, ಯುದ್ಧದಲ್ಲಿ ನಿಪುಣರು.
10 ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿ-ರಕ್ಷಿತಮ್ । ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿ-ರಕ್ಷಿತಮ್ ॥
ಭೀಷ್ಮರ ರಕ್ಷಣೆಯಲ್ಲಿರುವ ನಮ್ಮ ಆ ಸೈನ್ಯ ಸಾಲದು. ಭೀಮನ ರಕ್ಷಣೆಯಲ್ಲಿರುವ ಇವರ ಈ ಸೇನೆ ಬೇಕಾದಷ್ಟಿದೆ.
11 ಅಯನೇಷು ಚ ಸರ್ವೇಷು ಯಥಾ-ಭಾಗಮವ-ಸ್ಥಿತಾಃ । ಭೀಷ್ಮಮೇವಾಭಿ ರಕ್ಷಂತು ಭವಂತಃ ಸರ್ವ ಏವ ಹಿ ॥
ಹೋರಾಟದ ಎಲ್ಲ ಕಡೆಗಳಲ್ಲಿಯೂ ತಮಗೆ ನೀಡಿದ ಜಾಗದಲ್ಲಿದ್ದು ನೀವೆಲ್ಲರೂ ಭೀಷ್ಮನನ್ನೇ ತಪ್ಪದೇ ಕಾಪಾಡಬೇಕು.
12 ತಸ್ಯ ಸಂ-ಜನಯನ್ ಹರ್ಷಂ ಕುರು-ವೃದ್ಧಃ ಪಿತಾಮಹಃ । ಸಿಂಹ-ನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪ-ವಾನ್ ॥
ಕುರುವಂಶದ ಹಿರಿಯ ಭೀಷ್ಮ ಅಜ್ಜ ದುರ್ಯೋಧನನಿಗೆ ಖುಷಿ ಕೊಡಲು ಸಿಂಹದಂತೆ ಗಟ್ಟಿಯಾಗಿ ಘರ್ಜಿಸಿ ವೈರಿಗಳಿಗೆ ಸಂಕಟವಾಗುವಂತೆ ಶಂಖ ಊದಿದನು.
13 ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕ-ಗೋಮುಖಾಃ । ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋಽಭವತ್ ॥
ಆಮೇಲೆ ಕೂಡಲೆ ಶಂಖಗಳು, ನಗಾರಿಗಳು, ತಮಟೆಗಳು, ಡೋಲುಗಳು, ಕಹಳೆಗಳು ಒಟ್ಟೊಟ್ಟಿಗೆ ಬಾರಿಸಲ್ಪಟ್ಟವು. ಆ ಶಬ್ದವೇ ಗದ್ದಲವಾಯಿತು.
14 ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ । ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥
ಆ ಬಳಿಕ ನಾಲ್ಕು ಬಿಳಿಕುದರೆ ಕಟ್ಟಿದ ದೊಡ್ಡ ರಥದಲ್ಲಿದ್ದ ಕೃಷ್ಣ ಮತ್ತು ಅರ್ಜುನ ಅತ್ಯುತ್ತಮವಾದ ಶಂಖಗಳನ್ನು ಊದಿದರು.
15 ಪಾಂಚಜನ್ಯಂ ಹೃಷೀಕೇಶೋ ದೇವ-ದತ್ತಂ ಧನಂ-ಜಯಃ । ಪೌಂಡ್ರಂ ದಧ್ಮೌ ಮಹಾಶಂಖಂ ಭೀಮ-ಕರ್ಮಾ ವೃಕೋದರಃ ॥
ಕೃಷ್ಣನು ಸಮುದ್ರದಲ್ಲಿದ್ದ ಪಂಚಜನನೆಂಬ ದೈತ್ಯನನ್ನು ತಾನೇ ಕೊಂದು ಪಡೆದ ಪಾಂಚಜನ್ಯವೆಂಬ ಶಂಖವನ್ನು ಊದಿದನು. ಅರ್ಜುನನು ಸ್ವರ್ಗದಲ್ಲಿ ಇಂದ್ರ ನೀಡಿದ ದೇವದತ್ತವೆಂಬ ಶಂಖವನ್ನು ಊದಿದನು. ದುರುಳರಿಗೆ ಭಯವನ್ನು ಹುಟ್ಟಿಸುವ, ಸಜ್ಜನರಿಗೆ ಶಾಸ್ತ್ರೋಪದೇಶ ನೀಡುವ ಭೀಮಸೇನನು ಪೌಂಡ್ರವೆಂಬ ದೊಡ್ಡ ಶಂಖವನ್ನು ಊದಿದನು.
16 ಅನಂತ-ವಿಜಯಂ ರಾಜಾ ಕುಂತೀ-ಪುತ್ರೋ ಯುಧಿಷ್ಠಿರಃ । ನಕುಲಃ ಸಹ-ದೇವಶ್ಚ ಸುಘೋಷ-ಮಣಿ-ಪುಷ್ಪಕೌ ॥
ಕುಂತಿಯ ಮಗ ಯುಧಿಷ್ಠಿರರಾಜನು ಅನಂತವಿಜಯವೆಂಬ ಶಂಖವನ್ನು ಊದಿದನು. ನಕುಲನು ಸುಘೋಷವೆಂಬ ಶಂಖವನ್ನೂ, ಸಹದೇವನು ಮಣಿಪುಷ್ಪ ಎಂಬ ಶಂಖವನ್ನೂ ಊದಿದನು.
17 ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ । ಧೃಷ್ಟ-ದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ॥
18 ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀ-ಪತೇ । ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್-ಪೃಥಕ್ ॥
ಓ ಧೃತರಾಷ್ಟ್ರರಾಜನೆ, ದೊಡ್ಡ ಬಿಲ್ಲುಗಾರ ಕಾಶಿರಾಜ, ಮಹಾರಥಿ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಸೋಲದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು, ಆಜಾನುಬಾಹು ಅಭಿಮನ್ಯು ಹೀಗೆ ಎಲ್ಲರೂ ಒಬ್ಬೊಬ್ಬರಾಗಿ ತಮ್ಮ ತಮ್ಮ ಶಂಖಗಳನ್ನು ಊದಿದರು.
19 ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ । ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನು-ನಾದಯನ್ ॥
ಆ ಗಡಸು ಶಬ್ದವು ಆಕಾಶ-ಭೂಮಿಗಳನ್ನು ಪ್ರತಿಧ್ವನಿಗಳಿಂದ ತುಂಬಿಸಿ ನೂರು ಕೌರವರ ಎದೆಗಳನ್ನು ಬಡಿದು ಹರಿದವು.
20 ಅಥ ವ್ಯವಸ್ಥಿತಾನ್ ದೃಷ್ಟ್ವಾಧಾರ್ತರಾಷ್ಟ್ರಾನ್ ಕಪಿ-ಧ್ವಜಃ । ಪ್ರವೃತ್ತೇ ಶಸ್ತ್ರ-ಸಂಪಾತೇ ಧನುರುದ್ಯಮ್ಯ ಪಾಂಡವಃ ॥
21 ಹೃಷೀಕೇಶಂ ತದಾ ವಾಕ್ಯಂ ಇದಮಾಹ ಮಹೀ-ಪತೇ । ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ ॥
ಓ ದೊರೆಯೆ, ಆಮೇಲೆ ಹೋರಾಟ ಆರಂಭವಾಗಲು, ತಯಾರಾದ ಕೌರವರನ್ನು ಕಂಡು ಹನುಮಧ್ವಜದ ಅರ್ಜುನನು ಬಿಲ್ಲನ್ನು ಬಗ್ಗಿಸಿ ಕಟ್ಟಿ ಕೃಷ್ಣನ ಬಳಿ ಹೇಳಿದನು- ಓ ಅಚ್ಯುತನೇ, ನನ್ನ ರಥವನ್ನು ಎರಡೂ ಸೇನೆಗಳ ನಡುವೆ ಕೊಂಡೊಯ್ಯು.
22 ಯಾವದೇತಾನ್ ನಿರೀಕ್ಷೇಽಹಂ ಯೋದ್ಧು-ಕಾಮಾನವ-ಸ್ಥಿತಾನ್ । ಕೈರ್ಮಯಾ ಸಹ ಯೋದ್ಧವ್ಯಂ ಅಸ್ಮಿನ್ ರಣ-ಸಮುದ್ಯಮೇ ॥
ಯುದ್ಧ ಮಾಡಲು ಬಂದ ಇವರನ್ನೆಲ್ಲ ನಾನೊಮ್ಮೆ ನೋಡುತ್ತೇನೆ. ಈ ಹೋರಾಟದಲ್ಲಿ ಯಾರ‍್ಯಾರೊಡನೆ ನಾನು ಯುದ್ಧ ಮಾಡಬೇಕು?
23 ಯೋತ್ಸ್ಯಮಾನಾನವೇಕ್ಷೇಽಹಂ ಯ ಏತೇಽತ್ರ ಸಮಾಗತಾಃ । ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃ ಯುದ್ಧೇ ಪ್ರಿಯ-ಚಿಕೀರ್ಷವಃ ॥
ಯುದ್ಧಾಭಿಲಾಷಿಗಳನ್ನು ನಾನು ನೋಡಬೇಕು. ಯಾರೆಲ್ಲ ಇಲ್ಲಿ ಬಂದು ಸೇರಿದ್ದಾರೋ ಅವರೆಲ್ಲ ಬುದ್ಧಿಕೆಟ್ಟ ದುರ್ಯೋಧನನಿಗೆ ಹೋರಾಟದಲ್ಲಿ ಗೆಲುವು ಕೊಡಲು ದುಡಿಯುವವರು.
24 ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ । ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥
25 ಭೀಷ್ಮ-ದ್ರೋಣ-ಪ್ರಮುಖತಃ ಸರ್ವೇಷಾಂ ಚ ಮಹೀ-ಕ್ಷಿತಾಮ್ । ಉವಾಚ ಪಾರ್ಥ ಪಶ್ಶೈತಾನ್ ಸಮವೇತಾನ್ ಕುರೂನಿತಿ ॥
ಓ ದೊರೆಯೆ, ಹೀಗೆ ಅರ್ಜುನ ಹೇಳಿ ಕೃಷ್ಣನು ದೊಡ್ಡ ರಥವನ್ನು ಎರಡು ಸೇನೆಗಳ ನಡುವೆ ತಂದು, ಎಲ್ಲ ರಾಜರ ನಡುವೆ ಭೀಷ್ಮ-ದ್ರೋಣರ ಎದುರಿಗೇ ನಿಲ್ಲಿಸಿ, ಓ ಅರ್ಜುನನೆ, ಸೇರಿರುವ ಈ ಎಲ್ಲಾ ಕುರುಗಳನ್ನು ನೋಡೆಂದ.
26 ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತೄನಥ ಪಿತಾಮಹಾನ್ । ಆಚಾರ್ಯಾನ್ ಮಾತುಲಾನ್ ಭ್ರಾತೄನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ॥
27 ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ।
ಅಲ್ಲಿ ಎರಡೂ ಕಡೆಯ ಸೇನೆಗಳಲ್ಲಿರುವ ತಂದೆಯಂತಿರುವವರನ್ನು, ಮತ್ತೆ ಅಜ್ಜಂದಿರನ್ನು, ಗುರುಗಳನ್ನು, ಸೋದರಮಾವರನ್ನು, ಅಣ್ಣ-ತಮ್ಮಂದಿರನ್ನು, ಮಕ್ಕಳನ್ನು, ಮೊಮ್ಮಕ್ಕಳನ್ನು, ಗೆಳೆಯರನ್ನು ಮತ್ತೆ ಮಾವಂದಿರನ್ನು, ಹಾಗೆಯೇ ಹಿತೈಷಿಗಳನ್ನೂ ಅರ್ಜುನನು ನೋಡಿದನು.
ಕೃಪಯಾ ಪರಯಾಽಽವಿಷ್ಟೋ ವಿಷೀದನ್ನಿದಮಬ್ರವೀತ್ ॥
28 ತಾನ್ ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ ಬಂಧೂನವ-ಸ್ಥಿತಾನ್ ।
ಅಲ್ಲಿ ಸೇರಿರುವ ಎಲ್ಲ ರೀತಿಯ ಬಂಧುಗಳನ್ನು ಹತ್ತಿರದಲ್ಲಿ ನೋಡಿ ಆ ಅರ್ಜುನನು ತುಂಬಾ ಕರುಣೆಗೆ ಒಳಗಾಗಿ ಸಂಕಟಪಡುತ್ತಾ ಹೀಗೆ ಹೇಳಿದನು-
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪ-ಸ್ಥಿತಮ್ ॥
29 ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿ-ಶುಷ್ಯತಿ । ವೇಪಥುಶ್ಚ ಶರೀರೇ ಮೇ ರೋಮ-ಹರ್ಷಶ್ಚ ಜಾಯತೇ ॥
ಓ ಕೃಷ್ಣಾ, ಯುದ್ಧ ಬಯಸಿ ಬಂದು ಸೇರಿದ ಈ ನನ್ನ ಒಬ್ಬೊಬ್ಬ ಸಂಬಂಧಿಯನ್ನೂ ನೋಡಿ ನನ್ನ ಅಂಗಾಂಗಗಳು ಕುಸಿಯುತ್ತಿವೆ, ಬಾಯಿ ಒಣಗುತ್ತಿದೆ, ನನ್ನ ಮೈಯಲ್ಲಿ ನಡುಕವುಂಟಾಗಿ ರೋಮಗಳು ಸೆಟೆದು ನಿಂತಿವೆ.
30 ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿ-ದಹ್ಯತೇ । ನಚ ಶಕ್ನೋಮ್ಯವ-ಸ್ಥಾತುಂ ಭ್ರಮತೀವ ಚ ಮೇ ಮನಃ ॥
ಗಾಂಡೀವ ಬಿಲ್ಲು ಕೈಯಿಂದ ಜಾರುತ್ತಿದೆ, ಮೈ ಬಿಸಿಯಾಗುತ್ತಿದೆ. ನೆಟ್ಟಗೆ ನಿಲ್ಲಲಾಗುತ್ತಿಲ್ಲ. ನನ್ನ ಮನಸ್ಸು ಎಲ್ಲೋ ಸುತ್ತುತ್ತಿದೆ.
31 ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ । ನಚ ಶ್ರೇಯೋಽನು ಪಶ್ಯಾಮಿ ಹತ್ವಾ ಸ್ವ-ಜನಮಾಹವೇ ॥
ಓ ಕೇಶವನೇ, ಹಾಳು ಸೂಚನೆಗಳನ್ನೇ ಕಾಣುತ್ತಿರುವೆನು. ಯುದ್ಧದಲ್ಲಿ ನನ್ನವರನ್ನು ಕೊಂದ ಬಳಿಕ ಒಳ್ಳೆಯದಾಗುವುದನ್ನು ಕಾಣಲಾರೆ.
32 ನ ಕಾಂಕ್ಷೇ ವಿಜಯಂ ಕೃಷ್ಣ ನಚ ರಾಜ್ಯಂ ಸುಖಾನಿ ಚ । ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥
ಕೃಷ್ಣನೆ, ನಾನು ಗೆಲುವನ್ನು ಬಯಸುವುದಿಲ್ಲ. ನಾನು ರಾಜ್ಯವನ್ನಾಗಲಿ ಸುಖಗಳನ್ನಾಗಲಿ ಬಯಸೆನು. ಓ ಗೋವಿಂದನೇ, ನಮಗೆ ರಾಜ್ಯದಿಂದ ಏನು ಒಳಿತಿದೆ? ಭೋಗ-ಭಾಗ್ಯದ ಬದುಕಾದರೂ ನಮಗೆ ಯಾಕೆ ಬೇಕು?
33 ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ । ತ ಇಮೇಽವ-ಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ॥
ಯಾರಿಗಾಗಿ ನಾವು ರಾಜ್ಯ, ಭೋಗ-ಭಾಗ್ಯಗಳನ್ನೆಲ್ಲ ಬಯಸಿದೆವೋ ಅವರೇ ಇಲ್ಲಿ ಯುದ್ಧದಲ್ಲಿ ಎಲ್ಲ ಬಗೆಯ ಸಂಪತ್ತು ತೊರೆದು, ಜೀವವನ್ನೂ ಬಿಡಲು ತಯಾರಾಗಿ ನಿಂತಿದ್ದಾರೆ.
34 ಆಚಾರ್ಯಾಃ ಪಿತರಃ ಪುತ್ರಾಃ ತಥೈವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ॥
ಆಚಾರ್ಯರು, ತಂದೆಯಂತಿರುವವರು, ಮಕ್ಕಳು, ಹಾಗೆಯೇ ಅಜ್ಜಂದಿರು, ಸೋದರಮಾವರು, ಮಾವರು, ಮೊಮ್ಮಕ್ಕಳು, ಮೈದುನರು ಮತ್ತು ಸಂಬಂಧಿಗಳು.
35 ಏತಾನ್ ನ ಹಂತುಮಿಚ್ಛಾಮಿ ಘ್ನತೋಽಪಿ ಮಧು-ಸೂದನ । ಅಪಿ ತ್ರೈಲೋಕ್ಯ-ರಾಜ್ಯಸ್ಯ ಹೇತೋಃ ಕಿಂ ನು ಮಹೀ-ಕೃತೇ ॥
ಓ ಮಧುಸೂದನನೇ, ಮೂರು ಲೋಕ ಸಿಗುವುದಾದರೂ ಹೊಡೆಯುವ ಇವರನ್ನು ನಾನು ಕೊಲ್ಲಲು ಬಯಸುವುದಿಲ್ಲ. ಇಲ್ಲಿನ ಈ ತುಂಡು ನೆಲಕ್ಕಾಗಿ ಏಕೆ ಹೋರಾಡಲಿ?
36 ನಿಹತ್ಯ ಧಾರ್ತರಾಷ್ಟ್ರಾನ್ ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ । ಪಾಪಮೇವಾಽಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥
ಜನಾರ್ದನನೆ, ಕೌರವರನ್ನು ಕೊಂದರೆ ನಮಗೇನು ಖುಷಿ ಆಗಲಿದೆ? ಈ ಬೆಂಕಿ ಕೊಟ್ಟ, ವಿಷವಿಕ್ಕಿದ, ಸೊತ್ತು ಸೆಳೆದ ಶತ್ರುಗಳನ್ನು ಕೊಂದರೆ ನಮ್ಮನ್ನು ಪಾಪವೇ ಮುತ್ತಿಕೊಂಡೀತು !
37 ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವ-ಬಾಂಧವಾನ್ । ಸ್ವ-ಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ॥
ಆದ್ದರಿಂದ ನಮ್ಮ ಸಂಬಂಧಿಗಳಾದ ಕೌರವರನ್ನು ನಾವು ಕೊಲ್ಲಲು ಯೋಗ್ಯರಲ್ಲ. ಓ ಮಾಧವನೆ, ನಮ್ಮವರನ್ನೆ ನಾವು ಕೊಂದು ಹೇಗೆ ಸುಖಿಗಳಾದೇವು?
38 ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪ-ಹತ-ಚೇತಸಃ । ಕುಲ-ಕ್ಷಯ-ಕೃತಂ ದೋಷಂ ಮಿತ್ರ-ದ್ರೋಹೇ ಚ ಪಾತಕಮ್ ॥
ಇವರ ಬುದ್ಧಿ ದುರಾಸೆಯಿಂದ ಕೆಟ್ಟಿದೆ. ಹಾಗಾಗಿ ಇವರು ವಂಶನಾಶದಿಂದ ಆಗುವ ಹಾಳನ್ನು, ಮತ್ತೆ ಮಿತ್ರರಿಗೆ ಮಾಡಿದ ಮೋಸದ ಪಾಪವನ್ನೂ ಕಾಣುತ್ತಿಲ್ಲ.
39 ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ । ಕುಲ-ಕ್ಷಯ-ಕೃತಂ ದೋಷಂ ಪ್ರ-ಪಶ್ಯದ್ಭಿರ್ಜನಾರ್ದನ ॥
ಓ ಜನಾರ್ದನ, ಈ ವಂಶನಾಶದ ಹಾಳನ್ನು ಚೆನ್ನಾಗಿ ಮೊದಲೇ ಕಾಣಬಲ್ಲ ನಮಗೆ, ಈ ಕೆಟ್ಟ ಹೋರಾಟದಿಂದ ಹಿಂಜರಿಯಲು ಯಾಕೆ ತಿಳಿಯದು?
40 ಕುಲ-ಕ್ಷಯೇ ಪ್ರಣಶ್ಯಂತಿ ಕುಲ-ಧರ್ಮಾಃ ಸನಾತನಾಃ । ಧರ್ಮೇ ನಷ್ಟೇ ಕುಲಂ ಕೃತ್ಸ್ನಂ ಅಧರ್ಮೋಽಭಿ-ಭವತ್ಯುತ ॥
ವಂಶಗಳೆಲ್ಲ ನಶಿಸಿಹೋದರೆ ಹಿಂದಿನಿಂದ ನಡೆದು ಬಂದ ವಂಶದ ನಡಾವಳಿಗಳು ನಶಿಸುತ್ತವೆ. ಧರ್ಮಾಚರಣೆಗಳು ಇಲ್ಲವಾದರೆ ವಂಶವನ್ನೆಲ್ಲ ಅಧರ್ಮವೇ ಆಕ್ರಮಿಸುತ್ತದೆ.
41 ಅಧರ್ಮಾಭಿ-ಭವಾತ್ ಕೃಷ್ಣ ಪ್ರ-ದುಷ್ಯಂತಿ ಕುಲ-ಸ್ತ್ರಿಯಃ । ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣ-ಸಂಕರಃ ॥
ವೃಷ್ಣಿವಂಶದ ಕೃಷ್ಣನೇ, ಅಧರ್ಮದ ಮೇಲಾಟದಿಂದ ಮನೆಮನೆಯ ಹೆಣ್ಮಕ್ಕಳು ದಾರಿಗೆಡುತ್ತಾರೆ. ಹೆಣ್ಣು ಹಾಳಾದರೆ ಮಿಶ್ರಸಮಾಜ ರೂಪುಗೊಳ್ಳುತ್ತದೆ.
42 ಸಂಕರೋ ನರಕಾಯೈವ ಕುಲ-ಘ್ನಾನಾಂ ಕುಲಸ್ಯ ಚ । ಪತಂತಿ ಪಿತರೋ ಹ್ಯೇಷಾಂ ಲುಪ್ತ-ಪಿಂಡೋದಕ-ಕ್ರಿಯಾಃ ॥
ಈ ಅಶುದ್ಧತೆ ವಂಶಕೆಡಿಸಿದವರ ಮತ್ತು ವಂಶದವರ ನರಕಕ್ಕೆ ಕಾರಣ. ಇಂಥವರ ಹಿಂದಿನವರು ಪಿಂಡ-ತರ್ಪಣಗಳಿಲ್ಲದೆ ದುರ್ಗತಿಯನ್ನೆ ಪಡೆವರು.
43 ದೋಷೈರೇತೈಃ ಕುಲ-ಘ್ನಾನಾಂ ವರ್ಣ-ಸಂಕರ-ಕಾರಕೈಃ । ಉತ್ಸಾದ್ಯಂತೇ ಜಾತಿ-ಧರ್ಮಾಃ ಕುಲ-ಧರ್ಮಾಶ್ಚ ಶಾಶ್ವತಾಃ ॥
ವಂಶಕೆಡಿಸಿದವರ ಈ ಜನಾಂಗ ಮಿಶ್ರಣಗೊಳಿಸಿದ ತಪ್ಪುಗಳಿಂದ ಹಿಂದಿನಿಂದ ಆಚರಣೆಯಲ್ಲಿದ್ದ ವಂಶನಡಾವಳಿಗಳೂ, ಹುಟ್ಟಿನಿಂದ ಬಂದ ವೃತ್ತಿಗಳೂ ಶಾಸ್ತ್ರದ ಚೌಕಟ್ಟನ್ನು ಕಳಚಿಕೊಂಡು ಹಾಳಾಗಲಿವೆ.
44 ಉತ್ಸನ್ನ-ಕುಲ-ಧರ್ಮಾಣಾಂ ಮನುಷ್ಯಾಣಾಂ ಜನಾರ್ದನ । ನರಕೇ ನಿಯತಂ ವಾಸೋ ಭವತೀತ್ಯನು ಶುಶ್ರುಮ ॥
ಓ ಜನಾರ್ದನನೇ, ವಿಧಿ-ವಿಧಾನ ತಪ್ಪಿದ ವಂಶಧರ್ಮಗಳ ಆಚರಣೆಯಿಂದ ಮನುಷ್ಯರಿಗೆ ಖಡ್ಡಾಯವಾಗಿ ನರಕವೇ ಆಗಲಿದೆ ಎಂದು ಚೆನ್ನಾಗಿಯೇ ಕೇಳಿದ್ದೇವೆ.
45 ಅಹೋ ಬತ ಮಹತ್ ಪಾಪಂ ಕರ್ತುಂ ವ್ಯವಸಿತಾ ವಯಮ್ । ಯದ್ರಾಜ್ಯ-ಸುಖ-ಲೋಭೇನ ಹಂತುಂ ಸ್ವ-ಜನಮುದ್ಯತಾಃ ॥
ಅಯ್ಯೋ! ರಾಜ್ಯದ ಸುಖದ ಆಸೆಯಿಂದ ನಮ್ಮ ಜನರನ್ನೆ ಕೊಲ್ಲಲು ತಯಾರಾದ ನಾವು ಎಂಥ ದೊಡ್ಡ ಪಾಪ ಮಾಡಲು ಹೊರಟಿದ್ದೇವೆಯಲ್ಲ!
46 ಯದಿ ಮಾಮಪ್ರತೀಕಾರಂ ಅಶಸ್ತ್ರಂ ಶಸ್ತ್ರ-ಪಾಣಯಃ । ಧಾರ್ತರಾಷ್ಟ್ರಾ ರಣೇ ಹನ್ಯುಃ ತನ್ಮೇ ಕ್ಷೇಮ-ತರಂ ಭವೇತ್ ॥
ಒಂದೊಮ್ಮೆ ಹೋರಾಡದ ಆಯುಧವಿಲ್ಲದ ನನ್ನನ್ನು ಆಯುಧ ಹಿಡಿದ ಕೌರವರು ಯುದ್ಧದಲ್ಲಿ ಕೊಲ್ಲುವರೆಂದಾದರೆ ಅದು ನನಗೆ ಹೆಚ್ಚಿನ ಕ್ಷೇಮವೇ ಆದೀತು.
47 ಏವಮುಕ್ತ್ವಾಽರ್ಜುನಃ ಸಂಖೇ ರಥೋಪಸ್ಥ ಉಪಾವಿಶತ್ । ವಿಸೃಜ್ಯ ಸ-ಶರಂ ಚಾಪಂ ಶೋಕ-ಸಂವಿಗ್ನ-ಮಾನಸಃ ॥
ಹೀಗೆಲ್ಲ ಹೇಳಿ ಮನಸಾರೆ ದುಃಖಗೊಂಡ ಅರ್ಜುನನು ಬಿಲ್ಲುಬಾಣಗಳನ್ನು ರಣರಂಗದಲ್ಲಿ ಎಸೆದು ರಥದ ಮಧ್ಯದಲ್ಲಿ ಕುಳಿತೇಬಿಟ್ಟನು.

ಇತಿ ಪ್ರಥಮೋಽಧ್ಯಾಯಃ