ಮೊದಲು ಓದಲು

ನಾರಾಯಣನು ಶ್ರೀ ವೇದವ್ಯಾಸಋಷಿಯ ರೂಪದಲ್ಲಿ ೫೮೨೩ ವರ್ಷದ ಹಿಂದೆ ಈ ಭಾರತದೇಶದಲ್ಲಿ ಅವತರಿಸಿದನು. ವ್ಯಾಸಮಹರ್ಷಿಗಳು ಮಾನವರ ಓದಿಗಾಗಿ ವೇದಗಳನ್ನು ಉದ್ಧರಿಸಿದರು. ವೇದಗಳಿಗಿಂತಲೂ ಮಿಗಿಲೆನಿಸುವಂತೆ ಮಹಾಭಾರತವನ್ನು ರಚಿಸಿದರು. ಪಂಚಪಾಂಡವರ ಪ್ರಧಾನಕತೆಯಾಗಿ ಸಂಸ್ಕೃತ ಭಾಷೆಯಲ್ಲಿ ಮೂಡಿಬಂದ ಮಹಾಭಾರತವು ಎಲ್ಲರಿಗೂ ಎಲ್ಲವನ್ನೂ ಇಂದಿಗೂ ಮಾರ್ಗದರ್ಶಕವಾದ ದೊಡ್ಡ ಶಾಸ್ತ್ರಗ್ರಂಥವಾಗಿದೆ.

ಪಾಂಡವರು ದ್ಯೂತದಲ್ಲಿ ಕೌರವರಿಂದ ಸೋತು ಶರ್ತದಂತೆ ವನವಾಸ-ಅಜ್ಞಾತವಾಸಗಳನ್ನು ಮುಗಿಸಿ ಬಂದು ತಮ್ಮ ರಾಜ್ಯವನ್ನು ಮರಳಿ ಕೊಡುವಂತೆ ಕೇಳಿಕೊಳ್ಳುತ್ತಾರೆ. ಪಾಂಡವರ ದೂತನಾಗಿ ಶ್ರೀಕೃಷ್ಣನು ಕೌರವರ ಬಳಿ ತೆರಳಿ ಪಾಂಡವರಿಗೆ ರಾಜ್ಯದ ಪಾಲು ಎಷ್ಟಾದರೂ ನೀಡುವಂತೆ ತಿಳಿ ಹೇಳುತ್ತಾನೆ. ಕೌರವರು ತುಂಡು ಜಾಗವನ್ನೂ ಕೊಡದಿದ್ದಾಗ ಪಾಂಡವ-ಕೌರವರ ನಡುವೆ ಯುದ್ಧ ಏರ್ಪಡುವುದು. ೧೮ ದಿನಗಳ ಹೋರಾಟವು ಕುರುಕ್ಷೇತ್ರದಲ್ಲಿ ನಡೆದಿದೆ. ರಥವೇರಿ ಹೋರಾಡುವ ಅರ್ಜುನನಿಗೆ ಕೃಷ್ಣನೇ ಸಾರಥಿಯಾಗಿ ಯುದ್ಧದಲ್ಲಿ ಸೇರಿದ್ದಾನೆ. ಇನ್ನೂ ಅನೇಕ ರಣತಂತ್ರಗಳಲ್ಲಿ ಕೃಷ್ಣನು ಸಲಹೆ-ಸೂಚನೆಗಳನ್ನಿತ್ತು ಪಾಂಡವರನ್ನು ಯುದ್ಧದಲ್ಲಿ ರಕ್ಷಿಸಿದ್ದಾನೆ. ಪಾಂಡವರು ಜಯಗಳಿಸಿದ್ದಾರೆ. ಶ್ರೀಕೃಷ್ಣನ ನೇತೃತ್ವದಲ್ಲಿ ೩೬ ವರ್ಷಗಳ ಕಾಲ ರಾಜ್ಯಭಾರ ನಡೆಸಿದ್ದಾರೆ.

ಪಾಂಡವ-ಕೌರವರ ಕಾದಾಟವನ್ನು ಕೌರವರ ತಂದೆ ಧೃತರಾಷ್ಟ್ರನು ಕುರುಡನಾದ ಕಾರಣ ತನ್ನ ಸೂತನಾದ ಸಂಜಯನಲ್ಲಿ ಕೇಳಿ ತಿಳಿದುಕೊಳ್ಳುತ್ತಾನೆ. ಕುರುಕ್ಷೇತ್ರದಲ್ಲಿನ ಹೋರಾಟವನ್ನು ಹತ್ತು ದಿನ ಹತ್ತಿರದಲ್ಲಿ ಕಂಡ ಸಂಜಯನು ಧೃತರಾಷ್ಟ್ರನ ಬಳಿ ಬಂದು ಭೀಷ್ಮಪಾತವನ್ನು ಗಾಬರಿಗೊಂಡು ಹೇಳುವನು. ಇದನ್ನು ಕೇಳಿದ ಧೃತರಾಷ್ಟ್ರನು ಆರಂಭದಿಂದಲೇ ಯುದ್ಧದ ವಿವರಗಳನ್ನೆಲ್ಲ ವಿಸ್ತಾರವಾಗಿ ಹೇಳಲು ಕೇಳಿಕೊಳ್ಳುತ್ತಾನೆ. ವ್ಯಾಸರ ವಿಶೇಷ ಅನುಗ್ರಹದಿಂದ ತುಂಬುರು ಗಂಧರ್ವನಾದ ಸಂಜಯನು ಆ ಹೊತ್ತಿಗೆ ರಣಾಂಗಣದಲ್ಲಿನ ಎಲ್ಲವನ್ನು ಕಂಡವನಂತೆ, ಕೇಳಿದವನಂತೆ, ಯೋಧರು ಯೋಚನೆ ಮಾಡಿದ್ದೆಲ್ಲವನ್ನೂ ತಿಳಿದವನಂತೆ ಧೃತರಾಷ್ಟ್ರನ ಎಲ್ಲ ಪ್ರಶ್ನೆಗಳಿಗೂ ಸಂಶಯಗಳಿಗೂ ಸಮರ್ಪಕವಾಗಿ ಉತ್ತರಿಸುತ್ತಾನೆ. ಹೀಗೆ ಯುದ್ಧದ ಮೊದಲ ದಿನದ ಹೋರಾಟದ ಆರಂಭದಲ್ಲಿ ನಡೆದ ಅರ್ಜುನ-ಕೃಷ್ಣರ ಮಾತುಕತೆಯೇ ಭಗವದ್ಗೀತೆಯಾಗಿ ಸಂಜಯನಿಂದ ಹೊರಹೊಮ್ಮಿದೆ.

ಇದೋ ಇಲ್ಲಿದೆ ಕೃಷ್ಣನ ಸಂದೇಶಗಳು ಮತ್ತು ಕನ್ನಡ ಭಾಷೆಯಲ್ಲಿ ಮಾಡಿದ ಅದರ ಸಣ್ಣ ಸಮೀಕ್ಷೆ. ಹತ್ತಾರು ಅರ್ಥಗಳುಳ್ಳ ಗೀತೆಗೆ ಇದು ಒಂದು ಕೃಷ್ಣನ ಸಿದ್ಧಾಂತಕ್ಕೆ ವಿರೋಧವಿಲ್ಲದೆ ಬರೆದ ಚಿಂತನೆಯ ಸೇವೆಯಾಗಿ ನನ್ನ ಸಮರ್ಪಣೆ-ಗುರುಕಾಣಿಕೆ.

ಈ ಗೀತಾಸಮೀಕ್ಷೆಯನ್ನು ಹಲವು ಭಾಷಾಂತರಗಳಲ್ಲಿಯೂ ನೀಡಿರುವೆ. ಭಾಷಾಂತರದಲ್ಲಿ ಸಹಕಾರ ನೀಡಿದ ಹಿರಿಯರಾದ ಅವರೆಲ್ಲರಿಗೂ ತುಂಬುಹೃದಯದ ಅಭಿವಂದನೆಗಳು.

ಮಂಗಳಾಚರಣೆ

ನಾರಾಯಣಂ ಸುರ-ಗುರುಂ ಜಗದೇಕ-ನಾಥಂ ಭಕ್ತ-ಪ್ರಿಯಂ ಸಕಲ-ಲೋಕ-ನಮಸ್ಕೃತಂ ಚ ।
ತ್ರೈಗುಣ್ಯ-ವರ್ಜ್ಜಿತಮಜಂ ವಿಭುಮಾದ್ಯಮೀಶಂ ವಂದೇ ಭವಘ್ನಂ ಅಮರಾಸುರ-ಸಿದ್ಧ-ವಂದ್ಯಮ್ ॥
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇ ॥