ಅಥ ಅಷ್ಟಾದಶೋಽಧ್ಯಾಯಃ ಅಧ್ಯಾಯ ೧೮
| ಅರ್ಜುನ ಉವಾಚ | |
| 1 | ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ । ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿ-ನಿಷೂದನ ॥ |
| ಅರ್ಜುನ ಹೇಳಿದನು - ಓ ಮಹಾಬಾಹುವೆ, ಹೃಷೀಕೇಶನೆ, ಕೇಶಿದೈತ್ಯನನ್ನು ಕೊಂದವನೆ, ಸಂನ್ಯಾಸದ ಮತ್ತು ತ್ಯಾಗದ ಸ್ವರೂಪವನ್ನು ಮತ್ತು ವ್ಯತ್ಯಾಸವನ್ನು ತಿಳಿಯಲು ಬಯಸುತ್ತೇನೆ. | |
| ಭಗವಾನ್ ಉವಾಚ | |
| 2 | ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ । ಸರ್ವ-ಕರ್ಮ-ಫಲ-ತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥ |
| ಕೃಷ್ಣನು ಹೇಳಿದನು - ಕಾಮ್ಯ (ನಿತ್ಯ-ನೈಮಿತ್ತಿಕವಲ್ಲದ) ಕರ್ಮಗಳನ್ನು ಬಿಡುವುದನ್ನು ಜ್ಞಾನಿಗಳು ಸಂನ್ಯಾಸ ಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೇ ಬಿಡುವುದನ್ನು ಪಂಡಿತರು ತ್ಯಾಗ ಎನ್ನುವರು. | |
| 3 | ತ್ಯಾಜ್ಯಂ ದೋಷ-ವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ । ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮಿತಿ ಚಾಪರೇ ॥ |
| ದೋಷವುಳ್ಳ ಕರ್ಮವನ್ನು ಬಿಡಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಮತ್ತೆ ಕೆಲವರು ಯಜ್ಞ-ದಾನ-ತಪಸ್ಸುಗಳನ್ನು ಬಿಡಬಾರದು ಎನ್ನುತ್ತಾರೆ. | |
| 4 | ನಿಶ್ಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತ-ಸತ್ತಮ । ತ್ಯಾಗೋ ಹಿ ಪುರುಷ-ವ್ಯಾಘ್ರ ತ್ರಿ-ವಿಧಃ ಸಂಪ್ರ-ಕೀರ್ತಿತಃ ॥ |
| ಓ ಭರತಶ್ರೇಷ್ಠನೆ, ಇಲ್ಲಿ ತ್ಯಾಗದ ವಿಷಯದಲ್ಲಿ ನನ್ನ ನಿರ್ಣಯ ಕೇಳು. ಓ ಪುರುಷಶ್ರೇಷ್ಠನೆ, ತ್ಯಾಗವು ಮೂರು ಬಗೆ ಎಂದು ಹೇಳಲ್ಪಟ್ಟಿದೆ. | |
| 5 | ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ । ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥ |
| ಯಜ್ಞ-ದಾನ-ತಪಸ್ಸುಗಳನ್ನು ಬಿಡಬಾರದು. ಆ ಕರ್ಮಗಳನ್ನು ಮಾಡಲೇಬೇಕು. ಯಜ್ಞ, ದಾನ ಮತ್ತು ತಪಸ್ಸು, ಜ್ಞಾನಿಗಳನ್ನೂ ಶುದ್ಧಗೊಳಿಸುವ ಕರ್ಮಗಳು. | |
| 6 | ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ । ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥ |
| ಓ ಪಾರ್ಥನೆ, ಈ ಕರ್ಮಗಳನ್ನು ನಾನು ಮಾಡುವೆನೆಂಬ ಅಭಿಮಾನ ಬಿಟ್ಟು ಮತ್ತು ಫಲದ ಆಸೆಯನ್ನೂ ತೊರೆದು ಮಾಡಬೇಕು ಎಂದು ನನ್ನ ದೃಢವಾದ ಅಭಿಪ್ರಾಯ, ಶ್ರೇಷ್ಠವೂ ಆಗಿದೆ. | |
| 7 | ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪ-ಪದ್ಯತೇ । ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿ-ಕೀರ್ತಿತಃ ॥ |
| ನಿಯತವಾದ (ತನಗೆ ಹೇಳಿದ) ಕರ್ಮವನ್ನು ಬಿಡುವುದು ಸರಿಯಲ್ಲ. ತಪ್ಪುತಿಳಿವಿನಿಂದ ಅದನ್ನು ತೊರೆಯುವುದು ತಾಮಸ ತ್ಯಾಗ ಎನಿಸುತ್ತದೆ. | |
| 8 | ದುಃಖಮಿತ್ಯೇವ ಯತ್ ಕರ್ಮ ಕಾಯ-ಕ್ಲೇಶ-ಭಯಾತ್ ತ್ಯಜೇತ್ । ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗ-ಫಲಂ ಲಭೇತ್ ॥ |
| ಕೆಲಸ ಕಷ್ಟ ನೀಡಲಿದೆ ಎಂದು ಬಗೆದು, ದೇಹದ ಬಾಧೆಗೆ ಬೆದರಿ ಮಾಡದೆ ಇರುವುದು ರಾಜಸ ತ್ಯಾಗ. ಇಂಥ ತ್ಯಾಗ ಮಾಡಿಯೂ ತ್ಯಾಗದ ಫಲ ಸಿಗದು. | |
| 9 | ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇಽರ್ಜುನ । ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥ |
| ಓ ಅರ್ಜುನನೆ, ಕರ್ತವ್ಯ ಎಂಬ ನಿಲುವಿನಿಂದ ನಿಯತ ಕರ್ಮವನ್ನು ಮಾಡುತ್ತ, ನಾನು ಮಾಡುವೆನು ಎಂಬ ಅಭಿಮಾನ ಮತ್ತು ಫಲದ ಆಸೆಯನ್ನು ಬಿಡುವುದು ಸಾತ್ತ್ವಿಕ ತ್ಯಾಗ. | |
| 10 | ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನು-ಷಜ್ಜತೇ । ತ್ಯಾಗೀ ಸತ್ತ್ವ-ಸಮಾವಿಷ್ಟೋ ಮೇಧಾವೀ ಛಿನ್ನ-ಸಂಶಯಃ ॥ |
| ತಿಳಿದವನು, ಸಂದೇಹ ಇಲ್ಲದವನು ಸಾತ್ತ್ವಿಕತ್ಯಾಗಿಯು ಸುಖ ನೀಡದ ಕರ್ಮವನ್ನು ವಿರೋಧಿಸನು, ಸುಖ ಕೊಡುವ ಕರ್ಮವನ್ನು ಅತಿಯಾಗಿ ಮೆಚ್ಚನು. | |
| 11 | ನ ಹಿ ದೇಹ-ಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ । ಯಸ್ತು ಕರ್ಮ-ಫಲ-ತ್ಯಾಗೀ ಸ ತ್ಯಾಗೀತ್ಯಭಿ-ಧೀಯತೇ ॥ |
| ದೇಹ ಹೊತ್ತಿರುವ ಜೀವನಿಂದ ಕರ್ಮಗಳನ್ನು ಪೂರ್ತಿಯಾಗಿ ಬಿಡಲು ಆಗುವುದೆ ಇಲ್ಲ. ಕರ್ಮದ ಫಲವನ್ನು ಬಿಡುವವನೆ ಕರ್ಮತ್ಯಾಗಿ ಎನಿಸುತ್ತಾನೆ. | |
| 12 | ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿ-ವಿಧಂ ಕರ್ಮಣಃ ಫಲಮ್ । ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥ |
| ಕರ್ಮದ ಫಲ ಮೂರು ರೀತಿಯದ್ದು - ದುಃಖ, ಸುಖ ಮತ್ತು ಎರಡರ ಬೆರಕೆ. ಫಲ ತ್ಯಾಗ ಮಾಡದವರಿಗೆ ಇವು ಸತ್ತ ಮೇಲೆ ಸಿಗುತ್ತದೆ. ಫಲದ ಆಸೆ ಬಿಟ್ಟವರಿಗೆ ಇದು ಅಂಟಿಕೊಳ್ಳುವುದಿಲ್ಲ. | |
| 13 | ಪಂಚೈತಾನಿ ಮಹಾ-ಬಾಹೋ ಕಾರಣಾನಿ ನಿಬೋಧ ಮೇ । ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ-ಕರ್ಮಣಾಮ್ ॥ |
| ಓ ಮಹಾಬಾಹುವೆ, ಎಲ್ಲ ಕಾರ್ಯಗಳು ಆಗಲು ಇವು ಐದು ಕಾರಣಗಳು. ಸಾಂಖ್ಯ (ವೈದಿಕಜ್ಞಾನದ) ಶಾಸ್ತ್ರದಲ್ಲಿ ಚೆನ್ನಾಗಿ ಹೇಳಿದ ಅವುಗಳನ್ನು ನನ್ನಿಂದ ತಿಳಿದುಕೊಳ್ಳು. | |
| 14 | ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ । ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥ |
| ಕ್ರಿಯೆ ನಡೆಯುವ ಜಾಗ, ಮಾಡುವ ದೇವ (ಜೀವ), ಬೇರೆ ಬೇರೆ ಉಪಕರಣಗಳು, ನಾನಾ ರೀತಿಯ ಪ್ರಪ್ರತ್ಯೇಕ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ (ದೇವ). | |
| 15 | ಶರೀರ-ವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ । ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ॥ |
| ಮನುಷ್ಯನು ದೇಹ-ಮಾತು-ಮನಸ್ಸುಗಳಿಂದ ಮಾಡುವ ಸರಿಯಾದ ಅಥವಾ ತಪ್ಪಾದ ಕೆಲಸಕ್ಕೆ ಇವು ಐದು ಕಾರಣಗಳು. | |
| 16 | ತತ್ರೈವಂ ಸತಿ ಕರ್ತಾರಂ ಆತ್ಮಾನಂ ಕೇವಲಂ ತು ಯಃ । ಪಶ್ಯತ್ಯಕೃತ-ಬುದ್ಧಿತ್ವಾತ್ ನ ಸ ಪಶ್ಯತಿ ದುರ್ಮತಿಃ ॥ |
| ಹೀಗಿರುವಾಗ, ತಾನೊಬ್ಬನೆ ಎಲ್ಲ ಮಾಡಿದವನು ಎಂದು ತಿಳಿದವನು ಕೆಟ್ಟ ಬುದ್ಧಿಯವನು. ಬುದ್ಧಿ ಕೆಟ್ಟವನಾದ್ದರಿಂದಲೆ ಆತ ಏನೂ ತಿಳಿದಿಲ್ಲ. | |
| 17 | ಯಸ್ಯ ನಾಹಂ-ಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ । ಹತ್ವಾಽಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ॥ |
| ನಾನು ಮಾಡಿದೆ ಎಂಬ ಸ್ವಾತಂತ್ರ್ಯದ ಅಭಿಮಾನ ಇಲ್ಲದವನು, ರಾಗದ್ವೇಷಗಳಿಲ್ಲದ ಶುದ್ಧ ಮನದವನು ಈ ಎಲ್ಲ ಜನರನ್ನು ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಬಂಧನವೂ ಇಲ್ಲ. | |
| 18 | ಜ್ಞಾನಂ ಜ್ಞೇಯಂ ಪರಿ-ಜ್ಞಾತಾ ತ್ರಿ-ವಿಧಾ ಕರ್ಮ-ಚೋದನಾ । ಕರಣಂ ಕರ್ಮ ಕರ್ತೇತಿ ತ್ರಿ-ವಿಧಃ ಕರ್ಮ-ಸಂಗ್ರಹಃ ॥ |
| ಕರ್ಮವಿಧಿಯ ಉದ್ದೇಶ ಮೂರು - ಮಾಡಬೇಕೆಂಬ ಜ್ಞಾನ, ಅದಕ್ಕಾಗಿ ತಿಳಿಯಬೇಕಾದ ಕರ್ಮ- ಕರ್ಮಫಲ ಮತ್ತು ತಿಳಿದು ಮಾಡುವವನು. ಉಪಕರಣ, ಕ್ರಿಯೆ ಮತ್ತು ಮಾಡುವವನು ಎಂದು ಕರ್ಮದ ಕಾರಣವೂ ಸಂಕ್ಷೇಪವಾಗಿ ಮೂರು ರೀತಿಯು. | |
| 19 | ಜ್ಞಾನಂ ಕರ್ಮ ಚ ಕರ್ತಾ ಚ ತ್ರಿ-ಧೈವ ಗುಣ-ಭೇದತಃ । ಪ್ರೋಚ್ಯತೇ ಗುಣ-ಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥ |
| ಜ್ಞಾನ, ಕ್ರಿಯೆ ಮತ್ತು ಮಾಡುವವ - ಇವು ಮೂರು ಗುಣಗಳಿಂದಾಗಿ ಮೂರು ರೀತಿ ಎಂದು ಗುಣಗಳನ್ನು ಲೆಕ್ಕ ಮಾಡಿದ ಸಾಂಖ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಅವುಗಳನ್ನು ಸರಿಯಾಗಿಯೆ ಕೇಳು. | |
| 20 | ಸರ್ವ-ಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ । ಅವಿಭಕ್ತಂ ವಿಭಕ್ತೇಷು ತಜ್‌ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥ |
| ಪ್ರಪ್ರತ್ಯೇಕ ಭೇದವುಳ್ಳ ಎಲ್ಲ ಜೀವಿಗಳಲ್ಲಿ, ನಾಶವಿರದ ಭೇದವಿಲ್ಲದ ಒಬ್ಬನೇ ದೇವನನ್ನು ಕಾಣುವ ಜ್ಞಾನ ಸಾತ್ತ್ವಿಕ ಎಂದು ತಿಳಿ. | |
| 21 | ಪೃಥಕ್ತ್ವೇನ ತು ಯಜ್‌ಜ್ಞಾನಂ ನಾನಾ-ಭಾವಾನ್ ಪೃಥಗ್ವಿಧಾನ್ । ವೇತ್ತಿ ಸರ್ವೇಷು ಭೂತೇಷು ತಜ್‌ಜ್ಞಾನಂ ವಿದ್ಧಿ ರಾಜಸಮ್ ॥ |
| ಏಕದೇವನನ್ನು ತಿಳಿಯದೆ, ಎಲ್ಲ ಜೀವಿಗಳಲ್ಲಿ ಭೇದಮಾತ್ರದ ತಿಳಿವು ಅಂದರೆ ಪ್ರಪ್ರತ್ಯೇಕವಾದ ಬೇರೆ ಬೇರೆ ಧರ್ಮಗಳನ್ನು ತಿಳಿಯುವುದು ರಾಜಸ ಜ್ಞಾನ. | |
| 22 | ಯತ್ ತು ಕೃತ್ಸ್ನ-ವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ । ಅತತ್ವಾರ್ಥ-ವದಲ್ಪಂ ಚ ತತ್ ತಾಮಸಮುದಾಹೃತಮ್ ॥ |
| ಒಬ್ಬ ಜೀವನನ್ನೆ ಪೂರ್ಣನಾದ ದೇವನೆಂದು ತಿಳಿಯುವುದು, ಯುಕ್ತಿ ಇಲ್ಲದ ಜ್ಞಾನ, ತಪ್ಪುಕಲ್ಪನೆ ಉಳ್ಳದ್ದು, (ಹೆಚ್ಚು ಅಜ್ಞಾನವಿದ್ದು) ಸ್ವಲ್ಪ ಜ್ಞಾನವೂ ತಾಮಸ ಎಂದೆ ಹೇಳಲ್ಪಟ್ಟಿದೆ. | |
| 23 | ನಿಯತಂ ಸಂಗ-ರಹಿತಂ ಅರಾಗ-ದ್ವೇಷತಃ ಕೃತಮ್ । ಅಫಲ-ಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ ॥ |
| ತಾನು ಮಾಡಿದೆ ಎಂಬ ಅಭಿಮಾನವಿಲ್ಲದೆ, ಪ್ರೀತಿ-ಕೋಪಗಳಿಲ್ಲದೆ, ಫಲದ ಆಸೆ ಇಲ್ಲದೆ ಮಾಡಿದ ತನಗೆ ಹೇಳಿದ ಕರ್ಮ ಸಾತ್ತ್ವಿಕ ಎನಿಸುತ್ತದೆ. | |
| 24 | ಯತ್ ತು ಕಾಮೇಪ್ಸುನಾ ಕರ್ಮ ಸಾಹಂ-ಕಾರೇಣ ವಾ ಪುನಃ । ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್ ॥ |
| ಫಲದ ಆಸೆಯಿಂದ ಅಥವಾ ತಾನು ಮಾಡಿದೆ ಎಂಬ ಅಭಿಮಾನದಿಂದ ಬಹಳ ಕಷ್ಟಪಟ್ಟು ಮಾಡಿದ ಕರ್ಮ ರಾಜಸ ಎನಿಸುತ್ತದೆ. | |
| 25 | ಅನುಬಂಧಂ ಕ್ಷಯಂ ಹಿಂಸಾಂ ಅನಪೇಕ್ಷ್ಯ ಚ ಪೌರುಷಮ್ । ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ ॥ |
| ಫಲ, ನಷ್ಟ, ಪೀಡೆ ಮತ್ತು ಪ್ರಯತ್ನಗಳನ್ನು ಯೋಚಿಸದೆ ತಪ್ಪುತಿಳಿವಿನಿಂದ ಮಾಡಿದ ಕರ್ಮ ತಾಮಸ ಎನಿಸಿದೆ. | |
| 26 | ಮುಕ್ತ-ಸಂಗೋಽನಹಂ-ವಾದೀ ಧೃತ್ಯುತ್ಸಾಹ-ಸಮನ್ವಿತಃ । ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥ |
| ಫಲದ ಆಸೆ ಬಿಟ್ಟವನು, ನಾನು ಮಾಡಿದೆ ಎಂದು ಹೇಳಿಕೊಳ್ಳದವನು, ಧೈರ್ಯ-ಉತ್ಸಾಹಗಳಿಂದ ತುಂಬಿದವನು, ಕೆಲಸ ಆದರೂ-ಆಗದಿದ್ದರೂ ವಿಕಾರವಿಲ್ಲದವನು ಸಾತ್ತ್ವಿಕ ಕರ್ತೃ ಎನಿಸಿದ್ದಾನೆ. | |
| 27 | ರಾಗೀ ಕರ್ಮ-ಫಲ-ಪ್ರೇಪ್ಸುಃ ಲುಬ್ಧೋ ಹಿಂಸಾತ್ಮಕೋಽಶುಚಿಃ । ಹರ್ಷ-ಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥ |
| ಕರ್ಮದ ಇಹ-ಪರ ಫಲಗಳನ್ನು ಬಯಸುವವ, ಜಿಪುಣ, ಹಿಂಸೆ ಪಡುವವ, ಮಡಿಯಿರದವ, ಫಲ ದೊರೆತಾಗ ಖುಷಿ ಪಡುವವ ಮತ್ತು ಸಿಗದಾಗ ದುಃಖಿಸುವವ ರಾಜಸ ಕರ್ತೃ ಎನಿಸಿದ್ದಾನೆ. | |
| 28 | ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋಽಲಸಃ । ವಿಷಾದೀ ದೀರ್ಘ-ಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥ |
| ಆಚಾರ ಕೆಟ್ಟವ, ಸಂಸ್ಕಾರವಿಲ್ಲದವ, ದುರಹಂಕಾರಿ, ಉದ್ಧಟ, ಮೋಸಗಾರ, ಸೋಮಾರಿ, ಸಂಕಟಪಡುವವ, ಕೆಲಸವನ್ನು ಮುಂದೆ ದೂಡುವವ ತಾಮಸ ಕರ್ತೃ ಎನಿಸಿದ್ದಾನೆ. | |
| 29 | ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿ-ವಿಧಂ ಶೃಣು । ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂ-ಜಯ ॥ |
| ಓ ಧನಂಜಯನೆ, ಮೂರು ಗುಣಗಳಿಂದ ಬುದ್ಧಿ ಮತ್ತು ಧೈರ್ಯವೂ ಮೂರು ರೀತಿ. ಇದರ ಪ್ರಪ್ರತ್ಯೇಕ ಪೂರ್ತಿ ವಿವರಣೆಯನ್ನು ಕೇಳು. | |
| 30 | ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ । ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥ |
| ಓ ಪಾರ್ಥನೆ, ಇಹ ಮತ್ತು ಪರದ ಧರ್ಮಗಳನ್ನು, ಮಾಡಬೇಕಾದ ಮತ್ತು ಮಾಡಬಾರದ ಕರ್ಮಗಳನ್ನು, ಹೆದರಬೇಕಾದ ಮತ್ತು ಹೆದರಬಾರದ ವಿಷಯಗಳನ್ನು, ಬಂಧನದ ಮತ್ತು ಬಿಡುಗಡೆಯ ಮಾರ್ಗವನ್ನು ತಿಳಿಯಬಲ್ಲ ಬುದ್ಧಿಯು ಸಾತ್ವಿಕ. | |
| 31 | ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ । ಅಯಥಾ-ವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥ |
| ಓ ಪಾರ್ಥನೆ, ಧರ್ಮ ಮತ್ತು ಅಧರ್ಮವನ್ನು, ಹಾಗೆಯೆ ಮಾಡಬೇಕಾದ ಮತ್ತು ಮಾಡಬಾರದ ಕರ್ಮಗಳನ್ನು ಸರಿಯಾಗಿ ನಿರ್ಣಯಿಸಲಾಗದ ಬುದ್ಧಿ ರಾಜಸವು. | |
| 32 | ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾಽಽವೃತಾ । ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥ |
| ಓ ಪಾರ್ಥನೆ, ತಮೋಗುಣ ಆವರಿಸಿದಾಗ ಅಧರ್ಮವನ್ನೇ ಧರ್ಮವೆಂದು ತಿಳಿಯುವನು. ಹೀಗೆ ಎಲ್ಲ ಸಂಗತಿಗಳನ್ನೂ ವಿಪರೀತವಾಗಿಯೆ ತಿಳಿಯುವ ಬುದ್ಧಿ ತಾಮಸ. | |
| 33 | ಧೃತ್ಯಾ ಯಯಾ ಧಾರಯತೇ ಮನಃ-ಪ್ರಾಣೇಂದ್ರಿಯ-ಕ್ರಿಯಾಃ । ಯೋಗೇನಾವ್ಯಭಿ-ಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥ |
| ಓ ಪಾರ್ಥನೆ, ಯೋಗದಿಂದಾಗಿ ತಪ್ಪೆಸಗದ ಧೈರ್ಯವು ಮನಸ್ಸಿನ, ಪ್ರಾಣಗಳ ಮತ್ತು ಇಂದ್ರಿಯಗಳ ಕೆಲಸಗಳನ್ನು ಸರಿಯಾಗಿ ಧರಿಸುತ್ತದೆ. ಇದು ಸಾತ್ತ್ವಿಕ ಧೈರ್ಯ. | |
| 34 | ಯಯಾ ತು ಧರ್ಮ-ಕಾಮಾರ್ಥಾನ್ ಧೃತ್ಯಾ ಧಾರಯತೇಽರ್ಜುನ । ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥ |
| ಪೃಥೆಯ ಮಗನಾದ ಓ ಅರ್ಜುನನೆ, ಧರ್ಮ-ಕಾಮ-ಅರ್ಥಗಳನ್ನು ಚೆನ್ನಾಗಿ ಗಮನಿಸುವ ಧೈರ್ಯ ಅತಿಯಾದ ಆಸಕ್ತಿಯಿಂದ ಫಲವನ್ನೂ ಬಯಸುವುದು. ಇದು ರಾಜಸ ಧೈರ್ಯ. | |
| 35 | ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ । ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥ |
| ಓ ಪಾರ್ಥನೆ, ನಿದ್ದೆ, ಹೆದರಿಕೆ, ದುಃಖ, ಸಂಕಟ, ಸೊಕ್ಕುಗಳನ್ನು ಬಿಟ್ಟಿರದ ಕೆಟ್ಟಬುದ್ಧಿಯವನ ಧೈರ್ಯವು ತಾಮಸವು. | |
| 36 | ಸುಖಂ ತ್ವಿದಾನೀಂ ತ್ರಿ-ವಿಧಂ ಶೃಣು ಮೇ ಭರತರ್ಷಭ । ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥ |
| 37 | ಯತ್ ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್ । ತತ್ ಸುಖಂ ಸಾತ್ವಿಕಂ ಪ್ರೋಕ್ತಂ ಆತ್ಮ-ಬುದ್ಧಿ-ಪ್ರಸಾದ-ಜಮ್ ॥ |
| ಓ ಭರತಶ್ರೇಷ್ಠನೆ, ಮೂರು ಬಗೆಯ ಸುಖವನ್ನು ನನ್ನಿಂದ ಈಗ ಕೇಳು - ಮಾಡುತ್ತ ಮಾಡುತ್ತ ಖುಷಿಕೊಡುವ, ದುಃಖವನ್ನು ನಿಶ್ಚಯವಾಗಿ ತೆಗೆಯುವ ಸುಖವಿದು, ಮೊದಮೊದಲು ವಿಷದಂತೆ ಅಪ್ರಿಯವಾಗಿ ಕೊನೆಗೆ ಅಮೃತದಂತೆ ಪ್ರಿಯವಾಗಲಿದೆ. ತನ್ನ ಬುದ್ಧಿಯು ತಿಳಿಯಾದಾಗ ದೇವನ ಅನುಗ್ರಹದಿಂದ ಬರುವ ಸುಖ ಸಾತ್ತ್ವಿಕ. | |
| 38 | ವಿಷಯೇಂದ್ರಿಯ-ಸಂಯೋಗಾತ್ ಯತ್ ತದಗ್ರೇಽಮೃತೋಪಮಮ್ । ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ॥ |
| ವಿಷಯಗಳ ಮತ್ತು ಇಂದ್ರಿಯಗಳ ಸಂಪರ್ಕದಿಂದ ಆದ ಸುಖವಿದು. ಆರಂಭದಲ್ಲಿ ಅಮೃತದಂತೆ ರುಚಿಕರ, ಫಲದಲ್ಲಿ ವಿಷದಂತೆ ವಿಕಾರಗೊಳಿಸುವ ಸುಖ ರಾಜಸವು. | |
| 39 | ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ । ನಿದ್ರಾಲಸ್ಯ-ಪ್ರಮಾದೋತ್ಥಂ ತತ್ ತಾಮಸಮುದಾಹೃತಮ್ ॥ |
| ನಿದ್ದೆ, ಸೋಮಾರಿತನ, ಎಚ್ಚರಗೇಡಿತನಗಳಿಂದ ಸಿಗುವ ಸುಖ ಮೊದಲು ಮತ್ತೆ ಕೊನೆಗೂ ತನ್ನನ್ನೆ ಭ್ರಮೆಗೊಳಪಡಿಸುವುದು. ಇದು ತಾಮಸ ಸುಖ. | |
| 40 | ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ । ಸತ್ವಂ ಪ್ರಕೃತಿ-ಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ ॥ |
| ಭೂಮಿಯಲ್ಲಾಗಲಿ ಮತ್ತೆ ಸ್ವರ್ಗದ ದೇವತೆಗಳಲ್ಲಾಗಲಿ ಯಾವೊಬ್ಬ ಜೀವಿಯೂ ಪ್ರಕೃತಿಯಿಂದ ಉಂಟಾದ ಈ ಮೂರು ಗುಣಗಳಿಂದ ಬಿಡುಗಡೆ ಪಡೆದವನು ಇಲ್ಲ. | |
| 41 | ಬ್ರಾಹ್ಮಣ-ಕ್ಷತ್ರಿಯ-ವಿಶಾಂ ಶೂದ್ರಾಣಾಂ ಚ ಪರಂ-ತಪ । ಕರ್ಮಾಣಿ ಪ್ರವಿ-ಭಕ್ತಾನಿ ಸ್ವ-ಭಾವ-ಪ್ರಭವೈರ್ಗುಣೈಃ ॥ |
| ಓ ತಿಳಿದವನೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ (ಅವರವರ) ಸ್ವಭಾವದಿಂದ ಉಂಟಾದ ಗುಣಗಳಿಂದಾಗಿ ಬೇರೆ ಬೇರೆ ಆಗಿವೆ. | |
| 42 | ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ । ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮ-ಕರ್ಮ ಸ್ವ-ಭಾವ-ಜಮ್ ॥ |
| ದೇವನಲ್ಲಿ ನಿಷ್ಠೆ, ಇಂದ್ರಿಯನಿಗ್ರಹ, ಉಪವಾಸಾದಿ ವ್ರತಗಳು, ಮೈಮನಗಳ ಮಡಿ, ಕ್ಷಮೆ, ನೇರ ನಡೆ-ನುಡಿ, ಜ್ಞಾನ-ವಿಜ್ಞಾನ ಮತ್ತು ಆಸ್ತಿಕತೆ ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು. | |
| 43 | ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ । ದಾನಮೀಶ್ವರ-ಭಾವಶ್ಚ ಕ್ಷಾತ್ರಂ ಕರ್ಮ ಸ್ವ-ಭಾವ-ಜಮ್ ॥ |
| ಶೂರತನ, ಬಲ, ಧೈರ್ಯ, ದಕ್ಷತೆ, ಹೋರಾಟದಲ್ಲಿ ಹಿಂದೆ ಓಡದಿರುವುದು, ದಾನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು. | |
| 44 | ಕೃಷಿ-ಗೋ-ರಕ್ಷ-ವಾಣಿಜ್ಯಂ ವೈಶ್ಯ-ಕರ್ಮ ಸ್ವ-ಭಾವ-ಜಮ್ । ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವ-ಭಾವ-ಜಮ್ ॥ |
| ವ್ಯವಸಾಯ, ದನಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮಗಳು. ಸೇವಾರೂಪವಾದ ಕೆಲಸ ಶೂದ್ರ ಸ್ವಭಾವಕ್ಕೆ ಸಹಜವಾದದ್ದು. | |
| 45 | ಸ್ವೇ ಸ್ವೇ ಕರ್ಮಣ್ಯಭಿ-ರತಃ ಸಂಸಿದ್ಧಿಂ ಲಭತೇ ನರಃ । ಸ್ವ-ಕರ್ಮ-ನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ॥ |
| ತನ್ನತನ್ನ ಸಹಜ ಕರ್ಮದಲ್ಲಿ ಪೂರ್ತಿ ತೊಡಗಿದ ಮನುಷ್ಯ ಚೆನ್ನಾಗಿ ಸಿದ್ಧಿಯನ್ನು ಪಡೆಯುತ್ತಾನೆ. ತನ್ನ ಕೆಲಸದಲ್ಲಿ ನಿರತನು ಹೇಗೆ ಸಿದ್ಧಿಯನ್ನು ಪಡೆವನು ಎನ್ನುವುದನ್ನು ಕೇಳಿಕೊ. | |
| 46 | ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ । ಸ್ವ-ಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥ |
| ಎಲ್ಲರ ಎಲ್ಲ ಕರ್ಮಗಳನ್ನು (ಒಳಗಿನಿಂದ) ನಡೆಸುವ, ಇದೆಲ್ಲವನ್ನು (ಹೊರಗಿನಿಂದ) ವ್ಯಾಪಿಸಿರುವ ದೇವನನ್ನು ಮನುಷ್ಯನು ಸ್ವಭಾವಸಹಜವಾದ ಕರ್ಮದಿಂದ ಪೂರ್ತಿ ಆರಾಧಿಸಿ ಸಿದ್ಧಿಯನ್ನು ಹೊಂದುವನು. | |
| 47 | ಶ್ರೇಯಾನ್ ಸ್ವ-ಧರ್ಮೋ ವಿಗುಣಃ ಪರ-ಧರ್ಮಾತ್ ಸ್ವನುಷ್ಠಿತಾತ್ । ಸ್ವ-ಭಾವ-ನಿಯತಂ ಕರ್ಮ ಕುರ್ವನ್ ನಾಽಪ್ನೋತಿ ಕಿಲ್ಬಿಷಮ್ ॥ |
| ಚೆನ್ನಾಗಿ ನಡೆಸಿದ ಪರಧರ್ಮಕ್ಕಿಂತ ತನ್ನ ಸಹಜಧರ್ಮವು ಕೊರತೆ ಹೊಂದಿದ್ದರೂ ಶ್ರೇಷ್ಠವೇ ಆಗಿದೆ. ತನ್ನ ಸ್ವಭಾವಕ್ಕೆ ಸರಿಯಾದ ಕರ್ಮ ಮಾಡಿದಾಗ ಪಾಪ ಹೊಂದುವುದಿಲ್ಲ. | |
| 48 | ಸಹ-ಜಂ ಕರ್ಮ ಕೌಂತೇಯ ಸ-ದೋಷಮಪಿ ನ ತ್ಯಜೇತ್ । ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾಽಮೃತಾಃ ॥ |
| ಓ ಕೌಂತೇಯನೆ, ಸಹಜವಾದ ಕರ್ಮವನ್ನು ದೋಷ ಇದ್ದರೂ ಬಿಡಬಾರದು. ಬೆಂಕಿಯು ಹೊಗೆಯಿಂದ ಮುಚ್ಚಿಕೊಂಡಿರುವಂತೆ ಎಲ್ಲ ಕರ್ಮಗಳೂ ದೋಷದಿಂದಲೆ ಕೂಡಿರುತ್ತವೆ. | |
| 49 | ಅಸಕ್ತ-ಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತ-ಸ್ಪೃಹಃ । ನೈಷ್ಕರ್ಮ್ಯ-ಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥ |
| ಮನಸ್ಸನ್ನು ಗೆದ್ದು ಎಲ್ಲಿಯೂ ಬುದ್ಧಿಯನ್ನು ಅಂಟಿಸಿಕೊಳ್ಳದೆ ಆಸೆ ತೊರೆದವನು ಇಂಥ ಸಂನ್ಯಾಸದಿಂದ ಅನಿಷ್ಟಕರ್ಮಗಳ ನಾಶವೆಂಬ ಉತ್ತಮ ಸಿದ್ಧಿಯನ್ನು ಪಡೆಯುತ್ತಾನೆ. | |
| 50 | ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಽಽಪ್ನೋತಿ ನಿಬೋಧ ಮೇ । ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥ |
| ಓ ಕೌಂತೇಯನೆ, ಯಾವ ರೀತಿಯ ಸಿದ್ಧಿ ಪಡೆದವನು ಹೇಗೆ ಬ್ರಹ್ಮನನ್ನು ಹೊಂದುತ್ತಾನೆ ಎನ್ನುವುದನ್ನು ಸಂಗ್ರಹವಾಗಿ ನನ್ನಿಂದ ಕೇಳು. ಈ ಸಿದ್ಧಿ ಜ್ಞಾನದ ಕೊನೆಯ ಹಂತ. | |
| 51 | ಬುದ್ಧ್ಯಾವಿಶುದ್ಧಯಾ ಯುಕ್ತೋ ಧೃತ್ಯಾಽಽತ್ಮಾನಂ ನಿಯಮ್ಯ ಚ । ಶಬ್ದಾದೀನ್ ವಿಷಯಾಂಸ್ತ್ಯಕ್ತ್ವಾ ರಾಗ-ದ್ವೇಷೌ ವ್ಯುದಸ್ಯ ಚ ॥ |
| ಶುದ್ಧವಾದ ಬುದ್ಧಿ ಇರಬೇಕು. ಧೈರ್ಯದಿಂದ ತನ್ನನ್ನೇ ಯಮ-ನಿಯಮಗಳಲ್ಲಿ ತೊಡಗಿಸಬೇಕು. ಶಬ್ದ ಮುಂತಾದ ಇಂದ್ರಿಯ ವಿಷಯಗಳನ್ನು ಬಿಡಬೇಕು. ಪ್ರೀತಿ-ವೈರಗಳನ್ನು ಬಿಟ್ಟಿರಬೇಕು. | |
| 52 | ವಿವಿಕ್ತ-ಸೇವೀ ಲಘ್ವಾಶೀ ಯತ-ವಾಕ್ಕಾಯ-ಮಾನಸಃ । ಧ್ಯಾನ-ಯೋಗ-ಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥ |
| ಏಕಾಂತದಲ್ಲಿ ಇರಬೇಕು. ಲಘು ಆಹಾರ ಸೇವಿಸಬೇಕು. ಮಾತು-ದೇಹ-ಮನಸ್ಸುಗಳನ್ನು ನಿಗ್ರಹಿಸಬೇಕು. ನಿತ್ಯವೂ ಧ್ಯಾನಯೋಗವನ್ನು ನಡೆಸುತ್ತ ವೈರಾಗ್ಯವನ್ನು ಹೊಂದಬೇಕು. | |
| 53 | ಅಹಂ-ಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ । ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮ-ಭೂಯಾಯ ಕಲ್ಪತೇ ॥ |
| ಬಲಾತ್ಕಾರ, ಸೊಕ್ಕು, ಕಾಮ, ಕೋಪಗಳನ್ನು ಬಿಡಬೇಕು. ಯಾರಿಂದಲೂ ಏನನ್ನೂ ಪಡೆಯಬಾರದು. ನಾನು-ನನ್ನದು ಎಂಬ ಅಭಿಮಾನ ತೊರೆದು ಆನಂದವಾಗಿರಬೇಕು. ಆಗ ಮನಸ್ಸು ಬ್ರಹ್ಮನಲ್ಲಿ ನೆಲೆಗೊಳ್ಳುತ್ತದೆ. | |
| 54 | ಬ್ರಹ್ಮ-ಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ । ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ ॥ |
| ಬ್ರಹ್ಮನಲ್ಲಿ ನೆಲೆಸಿದವನು ಮನಸ್ಸು ಶಾಂತವಾಗಿ ಯಾವುದಕ್ಕೂ ದುಃಖಿಸುವುದಿಲ್ಲ, ಯಾವುದನ್ನೂ ಬಯಸುವುದಿಲ್ಲ. ಎಲ್ಲ ಜೀವಿಗಳಲ್ಲೂ ಸಮನಾಗಿದ್ದು ನನ್ನಲ್ಲಿ ಹೆಚ್ಚಿನ ಭಕ್ತಿಯನ್ನು ಹೊಂದುತ್ತಾನೆ. | |
| 55 | ಭಕ್ತ್ಯಾ ಮಾಮಭಿ-ಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ । ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥ |
| ಭಕ್ತಿಯಿಂದ, ನಾನು ಎಂಥವನು! ನಿಜವಾಗಿ ನಾನು ಹೇಗಿದ್ದೇನೆ! ಎಂದು ನನ್ನನ್ನು ಪೂರ್ತಿ ಸರಿಯಾಗಿ ತಿಳಿಯುತ್ತಾನೆ. ಭಕ್ತಿಯಿಂದ ಸರಿಯಾಗಿ ನನ್ನನ್ನು ತಿಳಿದು ಅನಂತರ ನನ್ನನ್ನೆ ಸೇರುತ್ತಾನೆ. | |
| 56 | ಸರ್ವ-ಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ । ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥ |
| ನನ್ನನ್ನೇ ಆಶ್ರಯಿಸಿದವನು, ಎಲ್ಲ ಕೆಲಸಗಳನ್ನೂ ಯಾವಾಗಲೂ ಮಾಡುತ್ತಿರುವವನು, ನನ್ನ ಅನುಗ್ರಹದಿಂದ ನಾಶವಿಲ್ಲದ ನಿತ್ಯವಾದ ಸ್ಥಾನವನ್ನು ಹೊಂದುತ್ತಾನೆ. | |
| 57 | ಚೇತಸಾ ಸರ್ವ-ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ । ಬುದ್ಧಿ-ಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥ |
| ಬುದ್ಧಿಪೂರ್ವಕ ಎಲ್ಲ ಕೆಲಸಗಳನ್ನು ನನಗೆ ಸಮರ್ಪಿಸಿ, ನಾನೇ ಸರ್ವೋತ್ತಮನೆಂದು ತಿಳಿದು ಜ್ಞಾನಯೋಗವನ್ನು ನಡೆಸಿ ನಿತ್ಯವೂ ನನ್ನನ್ನೆ ಯೋಚಿಸುವವನು ಆಗು. | |
| 58 | ಮಚ್ಚಿತ್ತಃ ಸರ್ವ-ದುರ್ಗಾಣಿ ಮತ್ಪ್ರಸಾದಾತ್ ತರಿಷ್ಯಸಿ । ಅಥ ಚೇತ್ ತ್ವಮಹಂ-ಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ ॥ |
| ನನ್ನನ್ನೆ ಯೋಚಿಸುತ್ತ ನೀನು ನನ್ನ ಅನುಗ್ರಹದಿಂದ ಎಲ್ಲಾ ತೊಂದರೆಗಳನ್ನು ದಾಟುವೆ. ಮತ್ತೆ ನೀನು ಅಹಂಕಾರದಿಂದ ಕೇಳದಿದ್ದರೆ ನಾಶವಾಗುವೆ. | |
| 59 | ಯದಹಂ-ಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ । ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥ |
| ದುರಹಂಕಾರದಿಂದ ಹೋರಾಡುವುದಿಲ್ಲ ಎಂದು ತಿಳಿದೆಯಾದರೆ, ನಿನ್ನ ಈ ಯೋಚನೆ ಸುಳ್ಳು. ನಿನ್ನನ್ನು ನಿನ್ನ ಸ್ವಭಾವವೆ ಹೋರಾಡಿಸುತ್ತದೆ. | |
| 60 | ಸ್ವ-ಭಾವ-ಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ । ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋಽಪಿ ತತ್ ॥ |
| ಓ ಕೌಂತೇಯನೆ, ಸ್ವಭಾವಸಹಜವಾದ ನಿನ್ನ ಕರ್ಮದಿಂದ ಕಟ್ಟಿಹಾಕಲ್ಪಟ್ಟಿರುವೆ. ಅಜ್ಞಾನದಿಂದಾಗಿ ಯಾವುದನ್ನು ಮಾಡಲು ಬಯಸುವುದಿಲ್ಲ ಅದನ್ನು ಗೊತ್ತಿಲ್ಲದೆಯೆ (ದೇವರ ವಶನಾಗಿ) ಮಾಡುವೆ. | |
| 61 | ಈಶ್ವರಃ ಸರ್ವ-ಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ । ಭ್ರಾಮಯನ್ ಸರ್ವ-ಭೂತಾನಿ ಯಂತ್ರಾರೂಢಾನಿ ಮಾಯಯಾ ॥ |
| ಓ ಅರ್ಜುನನೆ, ಎಲ್ಲ ಜೀವಿಗಳ ಹೃದಯದಲ್ಲಿ ದೇವರು ಇದ್ದಾನೆ. ವಿಶ್ವಯಂತ್ರವನ್ನು ಹತ್ತಿರುವ ಎಲ್ಲರನ್ನೂ ತನ್ನ ಇಚ್ಛೆಯಿಂದ - ಪ್ರಕೃತಿಯ ಮಾಯೆಯಿಂದ ತಿರುಗಿಸುತ್ತ ಇದ್ದಾನೆ. | |
| 62 | ತಮೇವ ಶರಣಂ ಗಚ್ಛ ಸರ್ವ-ಭಾವೇನ ಭಾರತ । ತತ್-ಪ್ರಸಾದಾತ್ ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥ |
| ಓ ಭಾರತನೆ, ಪೂರ್ಣ ಭಕ್ತಿಯಿಂದ ಅವನನ್ನೆ ಶರಣು ಹೊಂದು. ಅವನ ಅನುಗ್ರಹದಿಂದ ಪೂರ್ಣಸುಖವನ್ನೂ ನಿತ್ಯವಾದ ತಾಣವನ್ನೂ ಹೊಂದುವೆ. | |
| 63 | ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯ-ತರಂ ಮಯಾ । ವಿಮೃಶ್ಶೈತದಶೇಷೇಣ ಯಥೇಚ್ಛಸಿ ತಥಾ ಕುರು ॥ |
| ಹೀಗೆ ನಿನಗೆ ನಾನು ಅತ್ಯಂತ ರಹಸ್ಯವಾದ ಜ್ಞಾನವನ್ನು ಹೇಳಿರುವೆ. ಇದನ್ನೆಲ್ಲ ವಿಮರ್ಶೆ ಮಾಡಿ ನಿನ್ನ ಇಚ್ಛೆಯಂತೆ ಮಾಡು. | |
| 64 | ಸರ್ವ-ಗುಹ್ಯ-ತಮಂ ಭೂಯಃ ಶೃಣು ಮೇ ಪರಮಂ ವಚಃ । ಇಷ್ಟೋಽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥ |
| ಎಲ್ಲಕ್ಕಿಂತ ಹೆಚ್ಚು ರಹಸ್ಯವಾದ ನನ್ನ ಈ ಉತ್ತಮ ಮಾತನ್ನು ಮತ್ತೊಮ್ಮೆ ಕೇಳು-ನೀನು ನನಗೆ ತುಂಬಾ ಪ್ರಿಯನು ಎಂದು. ಆದ್ದರಿಂದಲೆ ನಿನಗೆ ಒಳ್ಳೆಯದನ್ನು ಹೇಳುತ್ತಿದ್ದೇನೆ. | |
| 65 | ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು । ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥ |
| ನನ್ನಲ್ಲೆ ಮನಸ್ಸಿಡು. ನನ್ನ ಭಕ್ತನಾಗು, ನನ್ನನ್ನೆ ಪೂಜಿಸು. ನನ್ನನ್ನೇ ನಮಿಸು. ನನ್ನನ್ನೇ ಸೇರುವೆ. ನಿನಗೆ ಆಣೆ ಮಾಡಿ ಸತ್ಯ ಹೇಳುತ್ತಿದ್ದೇನೆ - ನನಗೆ ನೀನು ಇಷ್ಟ. | |
| 66 | ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ । ಅಹಂ ತ್ವಾ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ |
| ಇತರ ಎಲ್ಲರ ಆಚರಣೆಗಳನ್ನು ಪೂರ್ತಿ ಬಿಟ್ಟು ನನ್ನನ್ನೊಬ್ಬನನ್ನೆ ಶರಣು ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡುಗಡೆಗೊಳಿಸುತ್ತೇನೆ, ದುಃಖಿಸಬೇಡ. | |
| 67 | ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ । ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಽಭ್ಯಸೂಯತಿ ॥ |
| ಇದನ್ನು ನೀನು ವ್ರತ-ಉಪವಾಸ ಮಾಡದವರಿಗೆ ಹೇಳಬೇಡ. ಭಕ್ತನಲ್ಲದವನಿಗೆ ಎಂದಿಗೂ ಹೇಳದಿರು. ಕೇಳುವ ಇಚ್ಛೆ ಇಲ್ಲದವನಿಗೂ ಹೇಳಬೇಡ. ನನ್ನ ಬಗ್ಗೆ ಮತ್ಸರ ಉಳ್ಳವರಿಗೂ ಹೇಳದಿರು. | |
| 68 | ಯ ಇಮಂ ಪರಮಂ ಗುಹ್ಯಂ ಮದ್-ಭಕ್ತೇಷ್ವಭಿ-ಧಾಸ್ಯತಿ । ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥ |
| ತುಂಬ ರಹಸ್ಯವಾದ ಇದನ್ನು ನನ್ನ ಭಕ್ತರಲ್ಲಿ ತಿಳಿಸುವವನು ನನ್ನಲ್ಲಿ ಶ್ರೇಷ್ಠ ಭಕ್ತಿಯನ್ನು ಮಾಡಿ ನನ್ನನ್ನೆ ಸೇರುವನು, ಸಂಶಯವಿಲ್ಲ. | |
| 69 | ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯ-ಕೃತ್ತಮಃ । ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯ-ತರೋ ಭುವಿ ॥ |
| ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಇಷ್ಟನು ನನಗೆ ಇನ್ನೊಬ್ಬನು ಇಲ್ಲ. ಅವನಿಗಿಂತ ಹೆಚ್ಚು ಇಷ್ಟನಾದ ಇನ್ನೊಬ್ಬ ಭೂಮಿಯಲ್ಲಿ ಮುಂದೆಯೂ ಹುಟ್ಟಲಾರ. | |
| 70 | ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ । ಜ್ಞಾನ-ಯಜ್ಞೇನ ತೇನಾಹಂ ಇಷ್ಟಃ ಸ್ಯಾಮಿತಿ ಮೇ ಮತಿಃ ॥ |
| ಧರ್ಮಕ್ಕೆ ಸಂಬಂಧಿಸಿದ ನಮ್ಮ ಈ ಪ್ರಶ್ನೋತ್ತರವನ್ನು ಅಧ್ಯಯನ ಮಾಡುವವನೂ ಆ ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದನೆಂದೆ ನನ್ನ ಮತ. | |
| 71 | ಶ್ರ್ರದ್ಧಾ-ವಾನನಸೂಯಶ್ಚ ಶೃಣುಯಾದಪಿ ಯೋ ನರಃ । ಸೋಽಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ಪುಣ್ಯ-ಕರ್ಮಣಾಮ್ ॥ |
| ಶ್ರದ್ಧೆ ಉಳ್ಳ, ಮತ್ಸರಪಡದ ಮನುಷ್ಯನು ಕೇಳಿದರೂ ಅಂಥವನು ಪಾಪದಿಂದ ಬಿಡುಗಡೆ ಹೊಂದಿ ಪುಣ್ಯಕರ್ಮ ಮಾಡಿದವರ ಒಳ್ಳೆಯ ಲೋಕಗಳನ್ನು ಪಡೆದಾನು. | |
| 72 | ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ । ಕಚ್ಚಿದಜ್ಞಾನ-ಸಂಮೋಹಃ ಪ್ರನಷ್ಟಸ್ತೇ ಧನಂ-ಜಯ ॥ |
| ಓ ಪಾರ್ಥನೆ, ಒಂದೇ ಕಡೆ ಗಮನವಿತ್ತು ಇದನ್ನು ನೀನು ಕೇಳಿದೆಯಾ? ಓ ಧನಂಜಯನೆ, ನಿನ್ನ ಅಜ್ಞಾನದ ಗೊಂದಲ ಪೂರ್ತಿ ಹೋಯಿತೆ? | |
| ಅರ್ಜುನ ಉವಾಚ | |
| 73 | ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್-ಪ್ರಸಾದಾನ್ಮಯಾಽಚ್ಯುತ । ಸ್ಥಿತೋಽಸ್ಮಿ ಗತ-ಸಂದೇಹಃ ಕರಿಷ್ಯೇ ವಚನಂ ತವ ॥ |
| ಅರ್ಜುನನು ಹೇಳಿದನು - ಅಚ್ಯುತನೆ, ಅಜ್ಞಾನ ಹೋಯಿತು. ನಿನ್ನ ಅನುಗ್ರಹದಿಂದ ನನಗೆ ನೆನಪು ಬಂತು. ಸಂಶಯ ಹೋಗಿ ಸರಿಯಾಗಿದ್ದೇನೆ. ನಿನ್ನ ಮಾತನ್ನು ನಡೆಸುವೆನು. | |
| 74 | ಇತ್ಯಹಂ ವಾಸು-ದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ । ಸಂವಾದಮಿಮಮಶ್ರೌಷಂ ಅದ್ಭುತಂ ರೋಮ-ಹರ್ಷಣಮ್ ॥ |
| ಇಷ್ಟು ನಾನು ಮಹಾತ್ಮರಾದ ಕೃಷ್ಣ ಮತ್ತು ಅರ್ಜುನರ ಅಚ್ಚರಿಯ, ರೋಮಾಂಚನದ ಈ ಪ್ರಶ್ನೋತ್ತರವನ್ನು ಕೇಳಿದೆ. | |
| 75 | ವ್ಯಾಸ-ಪ್ರಸಾದಾಚ್ಛ್ರುತವಾನ್ ಏತದ್ ಗುಹ್ಯಮಹಂ ಪರಮ್ । ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ ॥ |
| ಶ್ರೀವೇದವ್ಯಾಸರ ಅನುಗ್ರಹದಿಂದ ನಾನು, ಈ ಅತಿರಹಸ್ಯ ವಿಷಯವಾದ ಯೋಗವನ್ನು, ಎಲ್ಲ ಯೋಗಗಳ ಒಡೆಯನಾದ ಕೃಷ್ಣನಿಂದ ನೇರ ಹೇಳುತ್ತಿರುವಾಗಲೆ ಕೇಳಿದೆನು. | |
| 76 | ರಾಜನ್ ಸಂಸ್ಮೃತ್ಯ-ಸಂಸ್ಮೃತ್ಯ ಸಂವಾದಮಿಮಮದ್ಭುತಮ್ । ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥ |
| ಓ ಧೃತರಾಷ್ಟ್ರರಾಜನೆ, ಕೃಷ್ಣಾರ್ಜುನರ ಅಚ್ಚರಿಯ ಈ ಪುಣ್ಯಪ್ರದವಾದ ಸಂಭಾಷಣೆಯನ್ನು ನೆನೆಯುತ್ತ ನೆನೆಯುತ್ತ ಮತ್ತೆ ಮತ್ತೆ ಖುಷಿಪಡುತ್ತಿದ್ದೇನೆ. | |
| 77 | ತಚ್ಚ ಸಂಸ್ಮೃತ್ಯ-ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ । ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ-ಪುನಃ ॥ |
| ಓ ರಾಜನೆ, ಕೃಷ್ಣನ ಆ ಅತ್ಯಾಶ್ಚರ್ಯದ ವಿಶ್ವರೂಪವನ್ನು ನೆನೆಯುತ್ತ ನೆನೆಯುತ್ತ ನನಗೆ ತುಂಬಾ ಬೆರಗಾಗುತ್ತಿದೆ. ಮತ್ತೆ ಮತ್ತೆ ಖುಷಿಪಡುತ್ತಿರುವೆನು. | |
| 78 | ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ । ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ ॥ |
| ಯೋಗಗಳ ಒಡೆಯನಾದ ಕೃಷ್ಣನು ಇರುವಲ್ಲಿ, ಬಿಲ್ಲು ಹಿಡಿದ ಅರ್ಜುನನು ಇರುವಲ್ಲಿ, ಶ್ರೀಮಂತಿಕೆ, ಗೆಲುವು, ಏಳಿಗೆ ಮತ್ತು ಸ್ಥಿರವಾದ ನೀತಿ ಇದೆ ಎಂದು ನನ್ನ ಆಶಯ. | |
ಇತಿ ಅಷ್ಟಾದಶೋಽಧ್ಯಾಯಃ
ಶ್ರೀ ವೇದವ್ಯಾಸರು ರಚಿಸಿದ ಲಕ್ಷಶ್ಲೋಕದ ಶ್ರೀ ಮಹಾಭಾರತಸಂಹಿತೆಯ ಭೀಷ್ಮಮಹಾಪರ್ವದಲ್ಲಿನ ಶ್ರೀಕೃಷ್ಣಾರ್ಜುನ ಸಂವಾದರೂಪವಾದ ಭಗವದ್ಗೀತಾ ಅವಾಂತರಪರ್ವದಲ್ಲಿ ೨೫ರಿಂದ ೪೨ ಅಧ್ಯಾಯಗಳಿವು.