ಅಥ ನವಮೋಽಧ್ಯಾಯಃ ಅಧ್ಯಾಯ ೯

1 ಇದಂ ತು ತೇ ಗುಹ್ಯ-ತಮಂ ಪ್ರವಕ್ಷ್ಯಾಮ್ಯನಸೂಯವೇ । ಜ್ಞಾನಂ ವಿಜ್ಞಾನ-ಸಹಿತಂ ಯಜ್‌ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥
ಅಸೂಯೆ ಇಲ್ಲದ ನಿನಗೆ ವಿಜ್ಞಾನದೊಡನೆ ಜ್ಞಾನವನ್ನು ಹೇಳುತ್ತೇನೆ. ಇದು ತುಂಬ ಗುಟ್ಟಿನ ವಿಷಯ. ಇದನ್ನು ತಿಳಿದಾಗ ಕೆಡುಕಿನಿಂದ ಬಿಡುಗಡೆ ಹೊಂದುವೆ.
2 ರಾಜ-ವಿದ್ಯಾ ರಾಜ-ಗುಹ್ಯಂ ಪವಿತ್ರಮಿದಮುತ್ತಮಮ್ । ಪ್ರತ್ಯಕ್ಷಾವ-ಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥
ಇದು ದೊಡ್ಡ ವಿದ್ಯೆ, ದೊಡ್ಡ ರಹಸ್ಯ; ಪವಿತ್ರವಾದದ್ದು, ಉತ್ತಮವಾದುದು. ದೇವನ ಎಚ್ಚರ ನೀಡುವುದು, ವಿಶ್ವಧಾರಕನಿಗೆ ಸಂಬಂಧಿಸಿದ್ದು, ಮಾಡಲು ಸುಲಭವಾದುದು, ನಾಶವಿಲ್ಲದ್ದು.
3 ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯಾಸ್ಯ ಪರಂ-ತಪ । ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯು-ಸಂಸಾರ-ವರ್ತ್ಮನಿ ॥
ಓ ಪರಂತಪನೆ, ಈ ಧರ್ಮದಲ್ಲಿ ಶ್ರದ್ಧೆ ಇಲ್ಲದವರು ನನ್ನನ್ನು ಪಡೆಯದೆ, ಮರಣಮಯ ಸಂಸಾರದ ದಾರಿಯಲ್ಲಿಯೆ ಬೀಳುತ್ತಾರೆ.
4 ಮಯಾ ತತಮಿದಂ ಸರ್ವಂ ಜಗದವ್ಯಕ್ತ-ಮೂರ್ತಿನಾ । ಮತ್‌ಸ್ಥಾನಿ ಸರ್ವ-ಭೂತಾನಿ ನಚಾಹಂ ತೇಷ್ವವಸ್ಥಿತಃ ॥
ನಾನು ಕಾಣದ ರೂಪದಿಂದ ಈ ಜಗತ್ತನ್ನು ಪೂರ್ತಿ ತುಂಬಿದ್ದೇನೆ. ಮತ್ತು ಎಲ್ಲವೂ ಆಸರೆ ಪಡೆದು ನನ್ನಲ್ಲಿಯೆ ಇದೆ. ಅವುಗಳ ಆಸರೆಯಲ್ಲಿ ನಾನು ಇಲ್ಲ.
5 ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ । ಭೂತ-ಭೃನ್ನ ಚ ಭೂತ-ಸ್ಥೋ ಮಮಾಽತ್ಮಾ ಭೂತ-ಭಾವನಃ ॥
ಪಂಚಭೂತಗಳು ನನ್ನಲ್ಲಿ ಇಲ್ಲ. ನನ್ನ ದೊರೆತನದ ರೀತಿಯನ್ನು ನೋಡು. ನನ್ನ ದೇಹವು ಪಂಚಭೂತಗಳನ್ನು ಹೊತ್ತಿದೆ, ಆದರೆ ಪಂಚಭೂತಗಳ ವಿಕಾರವಾಗಿಲ್ಲ. ನಾನು ಪಂಚಭೂತಗಳಿಂದ ಸೃಷ್ಟಿಯನ್ನು ನಡೆಸುತ್ತೇನೆ.
6 ಯಥಾಽಽಕಾಶ-ಸ್ಥಿತೋ ನಿತ್ಯಂ ವಾಯುಃ ಸರ್ವತ್ರ-ಗೋ ಮಹಾನ್ । ತಥಾ ಸರ್ವಾಣಿ ಭೂತಾನಿ ಮತ್‌ಸ್ಥಾನೀತ್ಯುಪ-ಧಾರಯ ॥
ಎಲ್ಲೆಡೆಯೂ ತುಂಬಿರುವ ಗಾಳಿ ಯಾವಾಗಲೂ ಆಕಾಶದಲ್ಲಿಯೆ ಇರುವಂತೆ, ಎಲ್ಲವೂ ನನ್ನಲ್ಲಿಯೆ ಆಸರೆ ಪಡೆದು ಇವೆ ಎಂದೇ ಚಿಂತನೆ ಮಾಡು.
7 ಸರ್ವ-ಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ । ಕಲ್ಪ-ಕ್ಷಯೇ ಪುನಸ್ತಾನಿ ಕಲ್ಪಾದೌ ವಿ-ಸೃಜಾಮ್ಯಹಮ್ ॥
ಓ ಕೌಂತೇಯನೆ, ಬ್ರಹ್ಮಕಲ್ಪಕಾಲ ಮುಗಿದಾಗ ಎಲ್ಲವೂ ನನ್ನ ಅಧೀನವಾದ ಮೂಲಪ್ರಕೃತಿಯನ್ನು ಸೇರುತ್ತವೆ. ಕಲ್ಪದ ಆರಂಭದಲ್ಲಿ ಮತ್ತೆ ಅವೆಲ್ಲವನ್ನೂ ನಾನು ಸೃಷ್ಟಿಸುತ್ತೇನೆ.
8 ಪ್ರಕೃತಿಂ ಸ್ವಾಮವಷ್ಟಭ್ಯ ವಿ-ಸೃಜಾಮಿ ಪುನಃ-ಪುನಃ । ಭೂತ-ಗ್ರಾಮಮಿಮಂ ಕೃತ್ಸ್ನಂ ಅವಶಂ ಪ್ರಕೃತೇರ್ವಶಾತ್ ॥
ಪ್ರಕೃತಿಯನ್ನು ಬಳಸಿ ಈ ಪರತಂತ್ರವಾದ ಸಂಪೂರ್ಣ ವಿಶ್ವವನ್ನು ನನ್ನ ಇಚ್ಛೆಯಂತೆ ಮತ್ತೆ ಮತ್ತೆ ಸೃಷ್ಟಿಸುತ್ತೇನೆ.
9 ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂ-ಜಯ । ಉದಾಸೀನವದಾಸೀನಂ ಅಸಕ್ತಂ ತೇಷು ಕರ್ಮಸು ॥
ಓ ಧನಂಜಯನೆ, ಆ ಸೃಷ್ಟಿಕರ್ಮಗಳಲ್ಲಿ ಅಂಟಿಕೊಳ್ಳದೆ ಮಾಡಿಯೂ ಮಾಡದವನಂತೆ ನಾನು ಇದ್ದೇನೆ. ಆದ್ದರಿಂದ ಆ ಕರ್ಮಗಳು ನನ್ನನ್ನು ಕಟ್ಟಿ ಹಾಕುವುದಿಲ್ಲ.
10 ಮಯಾಽಧ್ಯಕ್ಷೇಣ ಪ್ರಕೃತಿಃ ಸೂಯತೇ ಸ-ಚರಾಚರಮ್ । ಹೇತುನಾಽನೇನ ಕೌಂತೇಯ ಜಗದ್ ವಿಪರಿ-ವರ್ತತೇ ॥
ಓ ಕೌಂತೇಯನೆ, ಜೀವ-ಜಡಗಳ ಈ ವಿಶ್ವವನ್ನು ಪ್ರಕೃತಿಯು ನನ್ನ ಸಾಕ್ಷಿ(ಅಧ್ಯಕ್ಷ)ತನದಲ್ಲಿಯೆ ಹಡೆಯುತ್ತದೆ. ಈ ಕಾರಣದಿಂದಲೆ ಜಗತ್ತು ಬದಲಾಗುತ್ತಲೆ ಇರುತ್ತದೆ. (ಮತ್ತೆ ಮತ್ತೆ ಸೃಷ್ಟಿ-ಲಯಗಳನ್ನು ಪಡೆಯುತ್ತದೆ)
11 ಅವ-ಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ । ಪರಂ ಭಾವಮಜಾನಂತೋ ಮಮ ಭೂತ-ಮಹೇಶ್ವರಮ್ ॥
ಪಂಚಭೂತಗಳ ಪ್ರಪಂಚಕ್ಕೆ ಸ್ವಾಮಿಯಾದ ನನ್ನ, ಪಂಚಭೂತಗಳಿಲ್ಲದ ನೈಜ ಸ್ವರೂಪವನ್ನು ತಿಳಿಯದವರು ಮನುಷ್ಯರಂತೆ ಕಾಣುವ ದೇಹವನ್ನು ಪಡೆದಿರುವ ನನ್ನನ್ನು ಮನುಷ್ಯನೆಂದೆ ತಪ್ಪಾಗಿ ತಿಳಿದು ಕಡೆಗಣಿಸುತ್ತಾರೆ.
12 ಮೋಘಾಶಾ ಮೋಘ-ಕರ್ಮಾಣೋ ಮೋಘ-ಜ್ಞಾನಾ ವಿಚೇತಸಃ । ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ॥
ತಪ್ಪು ತಿಳಿದ ಇವರ ಆಸೆಗಳು, ಕರ್ಮಗಳು, ಜ್ಞಾನವೂ ವ್ಯರ್ಥ. ಮೋಹಕವಾದ, ರಾಕ್ಷಸರ-ಅಸುರರ ತಾಮಸ ಸ್ವಭಾವವನ್ನು ಆಶ್ರಯಿಸಿದವರು.
13 ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ । ಭಜಂತ್ಯನನ್ಯ-ಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ ॥
ಓ ಪಾರ್ಥನೆ, ಸಾತ್ವಿಕಸ್ವಭಾವವನ್ನು ಆಶ್ರಯಿಸಿದ ಉತ್ತಮಜೀವರು ಬೇರೆ ದೇವತೆಗಳಲ್ಲಿ ಮನಸ್ಸಿಡದೆ, ನಾಶವಿಲ್ಲದ ನನ್ನನ್ನೆ ಜಗತ್ತಿನ ಸೃಷ್ಟಿಗೆ ಕಾರಣನನ್ನಾಗಿ ತಿಳಿದು ಸೇವೆ ಮಾಡುತ್ತಾರೆ.
14 ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢ-ವ್ರತಾಃ । ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯ-ಯುಕ್ತಾ ಉಪಾಸತೇ ॥
ಆಚಾರನಿಷ್ಠರಾಗಿ ಪ್ರತಿದಿನವೂ ನನ್ನನ್ನೇ ಪ್ರಯತ್ನಪಟ್ಟು ಜಪಿಸುತ್ತಾರೆ. ಭಕ್ತಿಯಿಂದ ನನ್ನನ್ನೆ ನಮಿಸುತ್ತಾರೆ. ಶಾಸ್ತ್ರನಿಯಮಗಳನ್ನು ತಪ್ಪದೇ ನನ್ನ ಉಪಾಸನೆ ನಡೆಸುತ್ತಾರೆ.
15 ಜ್ಞಾನ-ಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ । ಏಕತ್ವೇನ ಪೃಥಕ್‌ತ್ವೇನ ಬಹುಧಾ ವಿಶ್ವತೋ-ಮುಖಮ್ ॥
ಪಾಠ-ಪ್ರವಚನದ ಮೂಲಕ ಪೂಜಿಸುವ ಕೆಲವರು, ಎಲ್ಲರೊಳಗೂ ನಾನೊಬ್ಬನೆ ಇರುವೆನೆಂದು, ಎಲ್ಲಕ್ಕಿಂತ ಬೇರೆಯಾಗಿಯೆ ಇರುವೆನೆಂದು ವಿಶ್ವವ್ಯಾಪಿಯಾದ ನನ್ನನ್ನು ಬಹಳ ರೀತಿಯಲ್ಲಿ ಉಪಾಸನೆ ಮಾಡುತ್ತಾರೆ.
16 ಅಹಂ ಕ್ರತುರಹಂ ಯಜ್ಞಃ ಸ್ವಧಾಽಹಮಹಮೌಷಧಮ್ । ಮಂತ್ರೋಽಹಮಹಮೇವಾಽಜ್ಯಂ ಅಹಮಗ್ನಿರಹಂ ಹುತಮ್ ॥
ಕ್ರತು (ಬಲಿ ಇರುವ ಯಾಗ), ಯಜ್ಞ (ಬಲಿ ಇರದ ಯಾಗ), ಸ್ವಧಾ (ಶ್ರಾದ್ಧ), ಔಷಧ (ಆಹಾರ), ಮಂತ್ರ, ತುಪ್ಪ, ಅಗ್ನಿ, ಹವಿಸ್ಸು - ಎಲ್ಲವೂ ನಾನೇ.
17 ಪಿತಾಽಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ । ವೇದ್ಯಂ ಪವಿತ್ರಮೋಂಕಾರಃ ಋಕ್ ಸಾಮ ಯಜುರೇವ ಚ ॥
ನಾನು ಈ ಜಗತ್ತಿನ ತಂದೆ, ತಾಯಿ, ಪೋಷಕ, ಅಜ್ಜ ಮತ್ತು ಎಲ್ಲರಿಂದಲೂ ತಿಳಿಯಬೇಕಾದವನು ನಾನು. ನಾನೇ ಪವಿತ್ರನು, ಓಂಕಾರನು. ಋಕ್, ಸಾಮ, ಯಜುಸ್.
18 ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ । ಪ್ರಭವಃ ಪ್ರಳಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ॥
ನಾನು ಗತಿ, ಭರ್ತೃ, ಪ್ರಭು, ಸಾಕ್ಷಿಯು, ನೆಲೆ, ಆಸರೆ, ಒಳ್ಳೆಯವನು. ಎಲ್ಲದರ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನು. ಎಲ್ಲಕ್ಕೂ ವಿಕಾರವಿಲ್ಲದ ಬೀಜನು ಮತ್ತು ಪಾತ್ರನು.
19 ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ । ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥
ಓ ಅರ್ಜುನನೆ, ನಾನು ಸುಡುತ್ತೇನೆ. ನಾನು ಮಳೆಯನ್ನು ತಡೆಯುತ್ತೇನೆ ಮತ್ತು ನೀಡುತ್ತೇನೆ. ಮೋಕ್ಷ ಮತ್ತು ಮರಣ ನನ್ನಿಂದಲೆ. ಕಾಣುವ ಕಾರ್ಯವೂ ಕಾಣದ ಕಾರಣವೂ ನನ್ನಿಂದ.
20 ತ್ರೈವಿದ್ಯಾ ಮಾಂ ಸೋಮ-ಪಾಃ ಪೂತ-ಪಾಪಾಃ ಯಜ್ಞೈರಿಷ್ಟ್ವಾಸ್ವರ್ಗತಿಂ ಪ್ರಾರ್ಥಯಂತೇ । ತೇ ಪುಣ್ಯಮಾಸಾಧ್ಯ ಸುರೇಂದ್ರ-ಲೋಕಂ ಅಶ್ನಂತಿ ದಿವ್ಯಾನ್ ದಿವಿ ದೇವ-ಭೋಗಾನ್ ॥
ಮೂರು ವೇದಗಳ ಮೂಲಕ ಕರ್ಮ ನಡೆಸುವವರು ಸ್ವರ್ಗವನ್ನು ಪಡೆಯಲು ಬಯಸುತ್ತಾರೆ. ಅವರು ಯಜ್ಞಗಳಿಂದ ನನ್ನನ್ನು ಆರಾಧಿಸಿ, ಸೋಮರಸ ಕುಡಿದು, ಪಾಪ ಕಳೆದು ಶುದ್ಧರಾಗಿ, ಪುಣ್ಯದ ಫಲವಾಗಿ ಇಂದ್ರನ ಲೋಕವೆನಿಸಿದ ಸ್ವರ್ಗವನ್ನು ಸೇರುತ್ತಾರೆ. ಅಲ್ಲಿ ಸುರರಿಗೆ ಸಮನಾದ ದಿವ್ಯಭೋಗಗಳನ್ನು ಪಡೆಯುತ್ತಾರೆ.
21 ತೇ ತಂ ಭುಕ್ತ್ವಾ ಸ್ವರ್ಗ-ಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯ-ಲೋಕಂ ವಿಶಂತಿ । ಏವಂ ತ್ರಯೀ-ಧರ್ಮಮನು-ಪ್ರಪನ್ನಾಃ ಗತಾಗತಂ ಕಾಮ-ಕಾಮಾ ಲಭಂತೇ ॥
ದೊಡ್ಡದಾದ ಆ ಸ್ವರ್ಗವನ್ನು ಅವರು ಅನುಭವಿಸಿ ಪುಣ್ಯ ಮುಗಿದಾಗ ಭೂಮಿಗೆ ಬರುತ್ತಾರೆ. ಹೀಗೆ ಬೇಕುಗಳನ್ನು ಬಯಸಿ ವೈದಿಕ ಕರ್ಮಗಳನ್ನು ನಡೆಸುವವರು ಸ್ವರ್ಗಕ್ಕೆ-ಭೂಮಿಗೆ ಹೋಗಿ-ಬರುತ್ತ ಇರುವರು.
22 ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ । ತೇಷಾಂ ನಿತ್ಯಾಭಿ-ಯುಕ್ತಾನಾಂ ಯೋಗ-ಕ್ಷೇಮಂ ವಹಾಮ್ಯಹಮ್ ॥
ಜ್ಞಾನಿಗಳು ಇತರ ದೇವತೆಗಳನ್ನು ನೆನೆಯದೆ, ನನ್ನನ್ನೇ ಪೂರ್ತಿಯಾಗಿ ಆರಾಧಿಸುವರು. ನಿತ್ಯವೂ ನನ್ನನ್ನೆ ನೆನೆವ ಇವರ ಯೋಗ ಮತ್ತು ಕ್ಷೇಮವನ್ನು ನಾನು ನೋಡಿಕೊಳ್ಳುವೆನು.
23 ಯೇಽಪ್ಯನ್ಯ-ದೇವತಾ-ಭಕ್ತಾಃ ಯಜಂತೇ ಶ್ರದ್ಧಯಾಽನ್ವಿತಾಃ । ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿ-ಪೂರ್ವಕಮ್ ॥
ಓ ಕೌಂತೇಯನೆ, ಕೆಲವರು ಇತರ ದೇವತೆಗಳನ್ನು ಭಕ್ತಿಯಿಂದ ಶ್ರದ್ಧೆಯಿಂದ ಪೂಜಿಸುತ್ತಾರೆ, ಅಂಥವರೂ ನನ್ನನ್ನೇ ಆರಾಧಿಸಿದ್ದು, ಆದರೆ ಶಾಸ್ತ್ರ ಹೇಳಿದಂತಲ್ಲ, ತಪ್ಪಾಗಿ.
24 ಅಹಂ ಹಿ ಸರ್ವ-ಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ । ನತು ಮಾಮಭಿ-ಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥
ನನ್ನಿಂದಲೆ ಎಲ್ಲರ ಎಲ್ಲ ಬಗೆಯ ಪೂಜಾ ಕೈಂಕರ್ಯಗಳು ನಡೆಯುವುದು. ಹಾಗಾಗಿ, ನಾನೇ ಎಲ್ಲಾ ಪೂಜೆಗಳನ್ನು ಪಡೆಯುವವನು. ನಿಜವಾಗಿ ನನ್ನನ್ನು ಅವರು ಪೂರ್ತಿ ತಿಳಿದಿಲ್ಲ. ಆದ್ದರಿಂದ ಅವರು ತೊಂದರೆ ಪಡುತ್ತಾರೆ.
25 ಯಾಂತಿ ದೇವ-ವ್ರತಾ ದೇವಾನ್ ಪಿತೄನ್ ಯಾಂತಿ ಪಿತೃ-ವ್ರತಾಃ । ಭೂತೇಜ್ಯಾ ಯಾಂತಿ ಭೂತಾನಿ ಯಾಂತಿ ಮದ್ಯಾಜಿನೋಽಪಿ ಮಾಮ್ ॥
ದೇವತೆಗಳನ್ನು ಆರಾಧಿಸುತ್ತ ಬಂದವರು ದೇವತೆಗಳನ್ನೆ ಸೇರುತ್ತಾರೆ. ಪಿತೃಗಳನ್ನು ಸೇವಿಸುವವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳ ಪೂಜೆಗೈವವರು ದೆವ್ವಗಳನ್ನು ಸೇರುವರು. ನನ್ನನ್ನು ಪೂಜಿಸುವರು ನನ್ನನ್ನೇ ಸೇರುತ್ತಾರೆ.
26 ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಛತಿ । ತದಹಂ ಭಕ್ತ್ಯುಪ-ಹೃತಂ ಅಶ್ನಾಮಿ ಪ್ರಯತಾತ್ಮನಃ ॥
ಎಲೆಯನ್ನೊ ಹೂವನ್ನೊ ಹಣ್ಣನ್ನೊ ನೀರನ್ನೊ ನನಗೆ ಯಾರು ಭಕ್ತಿಯಿಂದ ಸಮರ್ಪಿಸುತ್ತಾನೋ ನನ್ನನ್ನೆ ನಂಬಿದ ಅವನ ಆ ಪ್ರೀತಿಯಿಂದ ಒಪ್ಪಿಸಿದ ವಸ್ತುವನ್ನು ನಾನು ಸ್ವೀಕರಿಸುವೆನು.
27 ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ । ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥
ಓ ಕೌಂತೇಯನೆ, ನೀನು ಮಾಡಿದ ಯಜ್ಞ, ದಾನ, ತಪಸ್ಸು, ಕರ್ಮ, ಅಶನ ಎಲ್ಲವನ್ನೂ ನನಗೆ ಸಮರ್ಪಿಸು.
28 ಶುಭಾಶುಭ-ಫಲೈರೇವಂ ಮೋಕ್ಷ್ಯಸೇ ಕರ್ಮ-ಬಂಧನೈಃ । ಸಂನ್ಯಾಸ-ಯೋಗ-ಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥
ಹೀಗೆ ಫಲದ ಆಸೆ ಬಿಟ್ಟು ಕರ್ತವ್ಯವನ್ನು ನಡೆಸುವ ನೀನು, ಒಳ್ಳೆಯ-ಕೆಟ್ಟ ಫಲಗಳನ್ನು ನೀಡುವ ಕರ್ಮಗಳ ಬಂಧನದಿಂದ ಬಿಡುಗಡೆಯನ್ನು ಪಡೆಯುವೆ. ಹೀಗಾದಾಗ ನನ್ನನ್ನು ಸೇರುವೆ.
29 ಸಮೋಽಹಂ ಸರ್ವ-ಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ । ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥
ನಾನಾಗಿ ಯಾರನ್ನೂ ಪ್ರೀತಿಸಲ್ಲ, ದ್ವೇಷಿಸಲ್ಲ. ನನಗೆ ಎಲ್ಲ ಜೀವಿಗಳೂ ಸಮ. ಆದರೆ ಯಾರು ನನ್ನನ್ನು ಭಕ್ತ್ತಿಯಿಂದ ಸೇವಿಸುತ್ತಾರೋ ಅವರು ನನ್ನವರು, ಮತ್ತೆ ನಾನು ಅವರಲ್ಲಿ ಸೇರಿದವನು.
30 ಅಪಿ ಚೇತ್ ಸು-ದುರಾಚಾರೋ ಭಜತೇ ಮಾಮನನ್ಯ-ಭಾಕ್ । ಸಾಧುರೇವ ಸ ಮಂತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ ॥
ಬೇರೆ ದೇವತೆಗಳನ್ನು ಸೇವೆಗೈಯದೆ ನನ್ನನ್ನು ಸೇವಿಸುವವನು ಅಧರ್ಮ ಮಾಡುವವನಾದರೂ ಒಳ್ಳೆಯವನೆಂದೆ ತಿಳಿಯಬೇಕು. ಏಕೆಂದರೆ ಅವನು ಚೆನ್ನಾಗಿ ಶಾಸ್ತ್ರನಿರ್ಣಯವನ್ನು ತಿಳಿದವನು.
31 ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ । ಕೌಂತೇಯ ಪ್ರತಿ-ಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥
ಅವನು ಕೂಡಲೆ ಧರ್ಮವನ್ನು ಮಾಡುವವನೂ ಆಗುತ್ತಾನೆ. ನಾಶವಾಗದ ಪೂರ್ಣಸುಖವನ್ನು ಅನುಭವಿಸುತ್ತಾನೆ. ಓ ಕೌಂತೇಯನೆ, ಆಣೆ ಮಾಡಿ ಹೇಳು - ನನ್ನ ಭಕ್ತನು ನಾಶ ಹೊಂದನು.
32 ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪ-ಯೋನಯಃ । ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ ತೇಽಪಿ ಯಾಂತಿ ಪರಾಂ ಗತಿಮ್ ॥
ಓ ಪಾರ್ಥನೆ, ಸ್ತ್ರೀಯರು, ವೈಶ್ಯರು, ಶೂದ್ರರು, ಕೆಟ್ಟಜನ್ಮವನ್ನು ಪಡೆದವರು, ಎಲ್ಲರೂ ನನ್ನನ್ನೇ ಆಶ್ರಯಿಸಿ ಆರಾಧಿಸಿ ಉತ್ತಮ ಗತಿಯನ್ನೇ ಹೊಂದಿದ್ದಾರೆ.
33 ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾಃ ಭಕ್ತಾ ರಾಜರ್ಷಯಸ್ತಥಾ । ಅನಿತ್ಯಮಸುಖಂ ಲೋಕಂ ಇಮಂ ಪ್ರಾಪ್ಯ ಭಜಸ್ವ ಮಾಮ್ ॥
ಮತ್ತೆ ಬ್ರಾಹ್ಮಣರು, ಒಳ್ಳೆಯ ಜನ್ಮವನ್ನು ಪಡೆದವರು, ರಾಜರು, ಋಷಿಗಳು ಇವರೆಲ್ಲರೂ ನನ್ನ ಭಕ್ತರು ಉತ್ತಮ ಗತಿಯನ್ನು ಪಡೆದಿದ್ದಾರೆಯೆ. ಹೀಗೆ ನಿತ್ಯವಲ್ಲದ, ಸುಖವಿಲ್ಲದ ಈ ಲೋಕಕ್ಕೆ ಬಂದಾಗ ನನ್ನನ್ನು ಆರಾಧಿಸು.
34 ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು । ಮಾಮೇವೈಷ್ಯಸಿ ಯುಕ್ತ್ವೈವಂ ಆತ್ಮಾನಂ ಮತ್ಪರಾಯಣಃ ॥
ನನ್ನಲ್ಲೇ ಮನಸ್ಸಿಡು, ನನ್ನ ಭಕ್ತನಾಗು. ನನ್ನನ್ನೇ ಪೂಜಿಸು. ನನ್ನನ್ನೇ ನಮಿಸು. ನಾನೇ ಸರ್ವೋತ್ತಮನೆಂದು ನನ್ನನ್ನು ಆಶ್ರಯಿಸು. ಹೀಗೆ ನಿನ್ನನ್ನು ತೊಡಗಿಸಿದರೆ ನನ್ನನ್ನೇ ಸೇರುವೆ.

ಇತಿ ನವಮೋಽಧ್ಯಾಯಃ