ಅಥ ಚತುರ್ದಶೋಽಧ್ಯಾಯಃ ಅಧ್ಯಾಯ ೧೪

1 ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ । ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥
ಕೃಷ್ಣನು ಹೇಳಿದನು - ತಿಳಿಯಬೇಕಾದ ಸಂಗತಿಗಳಲ್ಲಿ ಶ್ರೇಷ್ಠವಾದ ಜ್ಞಾನವನ್ನು ಇನ್ನೂ ಹೆಚ್ಚಿಗೆ ಹೇಳುತ್ತೇನೆ. ಎಲ್ಲ ಮುನಿಗಳು ಇದನ್ನು ತಿಳಿದು ಇಲ್ಲಿಂದ ತೆರಳಿ ಉತ್ತಮ ಗತಿಯನ್ನು ಹೊಂದಿದರು.
2 ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ । ಸರ್ಗೇಽಪಿ ನೋಪ-ಜಾಯಂತೇ ಪ್ರಳಯೇ ನ ವ್ಯಥಂತಿ ಚ ॥
ಈ ಜ್ಞಾನವನ್ನು ಗುರುಗಳಿಂದ ಚೆನ್ನಾಗಿ ಪಡೆದು ನನ್ನ ಸೇವೆಯಿಂದ ನನ್ನೆಡೆಗೆ ಬಂದವರು ಸೃಷ್ಟಿಕಾಲದಲ್ಲಿಯೂ ಹುಟ್ಟುವುದಿಲ್ಲ ಮತ್ತು ಪ್ರಳಯಕಾಲದಲ್ಲಿಯೂ ಬಾಧೆ ಪಡುವುದಿಲ್ಲ.
3 ಮಮ ಯೋನಿರ್ಮಹದ್-ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ । ಸಂಭವಃ ಸರ್ವ-ಭೂತಾನಾಂ ತತೋ ಭವತಿ ಭಾರತ ॥
ಓ ಭಾರತನೆ, ಪ್ರಕೃತಿ (ಲಕ್ಷ್ಮಿ) ನನ್ನ ಪತ್ನಿ. ಅವಳಲ್ಲಿ ನಾನು ಗರ್ಭವನ್ನು ನೀಡುತ್ತೇನೆ. ಅಲ್ಲಿಂದ ಎಲ್ಲ ಜೀವಿಗಳ ಹುಟ್ಟು ಆಗುತ್ತದೆ.
4 ಸರ್ವ-ಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ । ತಾಸಾಂ ಬ್ರಹ್ಮ ಮಹದ್ಯೋನಿಃ ಅಹಂ ಬೀಜ-ಪ್ರದಃ ಪಿತಾ ॥
ಓ ಕೌಂತೇಯನೆ, ಯಾವೆಲ್ಲ ಜಾತಿಗಳಲ್ಲಿ ಏನೆಲ್ಲ ದೇಹಗಳು ಹುಟ್ಟುತ್ತವೆಯೋ ಅವುಗಳಿಗೆಲ್ಲ ಚಿತ್‌ಪ್ರಕೃತಿಯೇ ತಾಯಿ, ನಾನೇ ಬೀಜಬಿತ್ತಿದ ತಂದೆ.
5 ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ-ಸಂಭವಾಃ । ನಿಬಧ್ನಂತಿ ಮಹಾ-ಬಾಹೋ ದೇಹೇ ದೇಹಿನಮವ್ಯಯಮ್ ॥
ಓ ಮಹಾಬಾಹುವೆ, ಜಡಪ್ರಕೃತಿಯಿಂದ ಉಂಟಾದ ಸತ್ವ-ರಜಸ್ಸು-ತಮಸ್ಸು ಎಂಬ ಮೂರು ಗುಣಗಳು, ನಾಶವಿಲ್ಲದ ಜೀವನನ್ನು ದೇಹದಲ್ಲಿ ಕಟ್ಟಿಹಾಕುತ್ತವೆ.
6 ತತ್ರ ಸತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ । ಸುಖ-ಸಂಗೇನ ಬಧ್ನಾತಿ ಜ್ಞಾನ-ಸಂಗೇನ ಚಾನಘ ॥
ಓ ಒಳ್ಳೆಯವನೆ, ಆ ಗುಣತ್ರಯದಲ್ಲಿ ಸತ್ವವು (ಅಭಿಮಾನಿಯಾದ ಶ್ರೀತತ್ವ) ಶುದ್ಧವಾದುದು. ಆದ್ದರಿಂದ ಅದು ಬೆಳಕು ನೀಡುವುದು ಮತ್ತು ದುಃಖ ಕಳೆಯುವುದು. ಸುಖ ಮತ್ತು ಜ್ಞಾನಗಳ ಸಂಬಂಧದಿಂದ ಜೀವನನ್ನು ಹಿಡಿದು ಇಡುವುದು.
7 ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾ-ಸಂಗ-ಸಮುದ್ಭವಮ್ । ತನ್ನಿಬಧ್ನಾತಿ ಕೌಂತೇಯ ಕರ್ಮ-ಸಂಗೇನ ದೇಹಿನಮ್ ॥
ಓ ಕೌಂತೇಯನೆ, ರಜೋಗುಣವು (ಅಭಿಮಾನಿಯಾದ ಭೂತತ್ವ) ರಂಜಿಸುವ ಸ್ವರೂಪದ್ದು, ಆಸಕ್ತಿಗಳನ್ನು ಹುಟ್ಟಿಸುವುದು ಎಂದು ತಿಳಿ. ಅದು ಜೀವನನ್ನು ಕರ್ಮದ ಸಂಬಂಧದಿಂದ ಕಟ್ಟಿಹಾಕುತ್ತದೆ.
8 ತಮಸ್ತ್ವಜ್ಞಾನ-ಜಂ ವಿದ್ಧಿ ಮೋಹನಂ ಸರ್ವ-ದೇಹಿನಾಮ್ । ಪ್ರಮಾದಾಲಸ್ಯ-ನಿದ್ರಾಭಿಃ ತನ್ನಿಬಧ್ನಾತಿ ಭಾರತ ॥
ಓ ಭಾರತನೆ, ತಮೋಗುಣವು (ಅಭಿಮಾನಿಯಾದ ದರ‍್ಗಾತತ್ವ) ಎಲ್ಲ ಜೀವಿಗಳಿಗೆ ಅಜ್ಞಾನವನ್ನು ಹುಟ್ಟಿಸುವುದು, ಭ್ರಮೆಗೊಳಿಸುವುದು ಎಂದು ತಿಳಿ. ಅದು ತಪ್ಪು, ಸೋಮಾರಿತನ ಮತ್ತು ನಿದ್ದೆಗಳಿಂದ ಜೀವನನ್ನು ಕಟ್ಟಿಹಾಕುತ್ತದೆ.
9 ಸತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ । ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥
ಓ ಭಾರತನೆ, ಸತ್ವವು ಸುಖದಲ್ಲಿ, ರಜಸ್ಸು ಕರ್ಮದಲ್ಲಿ ಮತ್ತು ತಮಸ್ಸು ಜ್ಞಾನವನ್ನು ಮುಚ್ಚಿ ತಪ್ಪಿನಲ್ಲಿ ಆಸಕ್ತಿಯನ್ನು ಕೊಡುತ್ತದೆ.
10 ರಜಸ್ತಮಶ್ಚಾಭಿ-ಭೂಯ ಸತ್ವಂ ಭವತಿ ಭಾರತ । ರಜಃ ಸತ್ವಂ ತಮಶ್ಚೈವ ತಮಃ ಸತ್ವಂ ರಜಸ್ತಥಾ ॥
ಓ ಭಾರತನೆ, ರಜಸ್ಸನ್ನು ಮತ್ತು ತಮಸ್ಸನ್ನು ಕಡಿಮೆ ಮಾಡಿ ಸತ್ವವು ಬೆಳೆಯುತ್ತದೆ. ಹೀಗೆ ಸತ್ವವನ್ನು ಮತ್ತು ತಮಸ್ಸನ್ನು ನಿಗ್ರಹಿಸಿ ರಜೋಗುಣ ವೃದ್ಧಿಸುತ್ತದೆ. ಹಾಗೆಯೆ ಸತ್ವವನ್ನು ಮತ್ತು ರಜಸ್ಸನ್ನು ಹಿಂದೆ ಹಾಕಿ ತಮಸ್ಸು ಹೆಚ್ಚಾಗುತ್ತದೆ.
11 ಸರ್ವ-ದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪ-ಜಾಯತೇ । ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ವಮಿತ್ಯುತ ॥
ಈ ದೇಹದಲ್ಲಿ ಎಲ್ಲ ಇಂದ್ರಿಯಗಳಲ್ಲೂ ಜ್ಞಾನದ ಬೆಳಕು ಹುಟ್ಟಿದರೆ ಸತ್ವಗುಣ ಹೆಚ್ಚಿದೆ ಎಂದು ತಿಳಿಯಬೇಕು.
12 ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ । ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥
ಓ ಭರತಶ್ರೇಷ್ಠನೆ, ಜಿಪುಣತನ, ಹೆಚ್ಚು ದುಡಿಮೆ, ಬಹಳ ಕೆಲಸಗಳನ್ನು ಆರಂಭಿಸುವುದು, ಅಶಾಂತಿ, ಅತ್ಯಾಸೆ ಇವುಗಳು ರಜೋಗುಣ ಹೆಚ್ಚಿದಾಗ ಹುಟ್ಟುತ್ತವೆ.
13 ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ । ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರು-ನಂದನ ॥
ಓ ಕುರುನಂದನನೆ, ಅಜ್ಞಾನ, ಕಡಿಮೆ ದುಡಿಮೆ, ತಪ್ಪು, ಭ್ರಮೆ ಇವುಗಳು ತಮೋಗುಣ ಹೆಚ್ಚಾದಾಗ ಹೆಚ್ಚುತ್ತವೆ.
14 ಯದಾ ಸತ್ವೇ ಪ್ರವೃದ್ಧೇ ತು ಪ್ರಳಯಂ ಯಾತಿ ದೇಹ-ಭೃತ್ । ತದೋತ್ತಮ-ವಿದಾಂ ಲೋಕಾನ್ ಅಮಲಾನ್ ಪ್ರತಿಪದ್ಯತೇ ॥
ಸತ್ವ ಹೆಚ್ಚಾದಾಗ ಜೀವಿ ಸತ್ತುಹೋದರೆ, ಮತ್ತೆ ದೇವನನ್ನು ತಿಳಿದವರ ನಡುವೆ ಜ್ಞಾನಯೋಗ್ಯಗಳಾದ ದೇಹಗಳನ್ನು ಪಡೆದು ಹುಟ್ಟುತ್ತಾನೆ.
15 ರಜಸಿ ಪ್ರಳಯಂ ಗತ್ವಾ ಕರ್ಮ-ಸಂಗಿಷು ಜಾಯತೇ । ತಥಾ ಪ್ರಲೀನಸ್ತಮಸಿ ಮೂಢ-ಯೋನಿಷು ಜಾಯತೇ ॥
ರಜೋಗುಣ ಹೆಚ್ಚಿದ್ದಾಗ ಸತ್ತರೆ, ಕರ್ಮಗಳಲ್ಲಿ ಆಸಕ್ತರಾದವರ ನಡುವೆ ಹುಟ್ಟುತ್ತಾನೆ. ತಮಸ್ಸು ಹೆಚ್ಚಿದ್ದಾಗ ಸತ್ತರೆ, ಜ್ಞಾನವಿಲ್ಲದ ಜಾತಿಗಳಲ್ಲಿ ಹುಟ್ಟುತ್ತಾನೆ.
16 ಕರ್ಮಣಃ ಸುಕೃತಸ್ಯಾಹುಃ ಸಾತ್ವಿಕಂ ನಿರ್ಮಲಂ ಫಲಮ್ । ರಜಸಸ್ತು ಫಲಂ ದುಃಖಂ ಅಜ್ಞಾನಂ ತಮಸಃ ಫಲಮ್ ॥
ಶುದ್ಧವಾದ ಸಾತ್ವಿಕ ಫಲವನ್ನು ಒಳ್ಳೆಯ ಕೆಲಸಕ್ಕೆ ಹೇಳುತ್ತಾರೆ. ರಾಜಸ ಕೆಲಸಕ್ಕೆ ಫಲ ದುಃಖದೊಡನೆ ಸುಖ. ತಾಮಸ ಕೆಲಸದ ಫಲ ಅಜ್ಞಾನ.
17 ಸತ್ವಾತ್ ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ । ಪ್ರಮಾದ-ಮೋಹೌ ತಮಸೋ ಭವತೋಽಜ್ಞಾನಮೇವ ಚ ॥
ಸತ್ವಗುಣದಿಂದ ಜ್ಞಾನ ಹೆಚ್ಚುತ್ತದೆ. ರಜಸ್ಸಿನಿಂದ ಜಿಪುಣತನ ಬೆಳೆಯುವುದು. ತಮಸ್ಸಿನಿಂದ ತಪ್ಪು, ಭ್ರಮೆ ಮತ್ತು ಅಜ್ಞಾನವು ಉಂಟಾಗುತ್ತದೆ.
18 ಊರ್ಧ್ವಂ ಗಚ್ಛಂತಿ ಸತ್ವ-ಸ್ಥಾಃ ಮಧ್ಯೇ ತಿಷ್ಠಂತಿ ರಾಜಸಾಃ । ಜಘನ್ಯ-ಗುಣ-ವೃತ್ತಿ-ಸ್ಥಾಃ ಅಧೋ ಗಚ್ಛಂತಿ ತಾಮಸಾಃ ॥
ಸತ್ವದಲ್ಲೆ ಇರುವವರು ಎತ್ತರಕ್ಕೆ ಏರುತ್ತಾರೆ. ರಾಜಸರು ನಡುವೆ ನಿಲ್ಲುತ್ತಾರೆ. ಕೊನೆಯ ಗುಣದ ಸುತ್ತ ಇರುವ ತಾಮಸರು ಕೆಳಗೆ ಹೋಗುತ್ತಾರೆ.
19 ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾಽನು-ಪಶ್ಯತಿ । ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ ॥
ಜ್ಞಾನಿಯು, ತ್ರಿಗುಣಗಳಿಗಿಂತ ಬೇರೆ ಕರ್ತೃ (ಕಾರಣ) ಇಲ್ಲ ಎಂದು ತಿಳಿದಾಗ ತ್ರಿಗುಣಗಳಿಲ್ಲದ ದೇವನನ್ನು ತಿಳಿಯುತ್ತಾನೆ. ಅವನು, ನನ್ನ ಭಕ್ತಿಯನ್ನು ಹೆಚ್ಚು ಗಳಿಸುತ್ತಾನೆ.
20 ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹ-ಸಮುದ್ಭವಾನ್ । ಜನ್ಮ-ಮೃತ್ಯು-ಜರಾ-ದುಃಖೈಃ ವಿಮುಕ್ತೋಽಮೃತಮಶ್ನುತೇ ॥
ದೇಹದಲ್ಲಿ ಉಂಟಾಗುವ ಈ ಮೂರು ಗುಣಗಳನ್ನು ಜೀವನು ದಾಟಿದಾಗ ಹುಟ್ಟು, ಸಾವು, ಮುಪ್ಪು, ದುಃಖಗಳಿಂದ ಬಿಡುಗಡೆ ಹೊಂದಿ ಮುಕ್ತಿಯನ್ನು ಹೊಂದುತ್ತಾನೆ.
ಅರ್ಜುನ ಉವಾಚ
21 ಕೈರ್ಲಿಂಗೈಸ್ತ್ರೀನ್ ಗುಣಾನೇತಾನ್ ಅತೀತೋ ಭವತಿ ಪ್ರಭೋ । ಕಿಮಾಚಾರಃ ಕಥಂ ಚೈತಾನ್ ತ್ರೀನ್ ಗುಣಾನತಿ-ವರ್ತತೇ ॥
ಅರ್ಜುನನು ಕೇಳಿದನು - ಓ ಸ್ವಾಮಿಯೆ, ಈ ಮೂರು ಗುಣಗಳನ್ನು ದಾಟಿದವನು ಯಾವ ಲಕ್ಷಣಗಳಿಂದ ತಿಳಿಯುತ್ತಾನೆ? ಅವನ ನಡೆ ಎಂಥದು? ಮತ್ತು ಈ ಮೂರು ಗುಣಗಳನ್ನು ಹೇಗೆ ದಾಟುತ್ತಾನೆ?
ಭಗವಾನ್ ಉವಾಚ
22 ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ । ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥
ಕೃಷ್ಣನು ಹೇಳುತ್ತಾನೆ - ಓ ಪಾಂಡವನೆ, ಬೆಳಕು, ಹೆಚ್ಚು ದುಡಿಮೆ, ಭ್ರಮೆ - ಇವು ಬಂದಾಗ ವಿರೋಧಿಸುವುದಿಲ್ಲ, ಹೋದಾಗ ಬಯಸುವುದೂ ಇಲ್ಲ.
23 ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ । ಗುಣಾ ವರ್ತಂತ ಇತ್ಯೇವ ಯೋಽವ-ತಿಷ್ಠತಿ ನೇಂಗತೇ ॥
ತ್ರಿಗುಣಗಳಿಂದ ಚಂಚಲನಾಗದೆ, ಗುಣಗಳು ಇರುತ್ತವೆ ಎಂದೆ ಚೆನ್ನಾಗಿ ತಿಳಿಯುತ್ತ ಉದಾಸೀನನಂತೆ ಇರುತ್ತಾನೆ. ವಿಚಲಿತನಾಗನು.
24 ಸಮ-ದುಃಖ-ಸುಖಃ ಸ್ವಸ್ಥಃ ಸಮ-ಲೋಷ್ಟಾಶ್ಮ-ಕಾಂಚನಃ । ತುಲ್ಯ-ಪ್ರಿಯಾಪ್ರಿಯೋ ಧೀರಃ ತುಲ್ಯ-ನಿಂದಾತ್ಮ-ಸಂಸ್ತುತಿಃ ॥
ಗಟ್ಟಿಮನಸ್ಸುಳ್ಳವನಾಗಿ ನೋವು-ನಲಿವುಗಳನ್ನು, ಇಷ್ಟ-ಅನಿಷ್ಟಗಳನ್ನು, ತೆಗಳಿಕೆ-ಹೊಗಳಿಕೆಗಳನ್ನು ಒಂದೇ ತರ ಸ್ವೀಕರಿಸುವವನು, ತನ್ನ ಪಾಡಿಗೆ ತಾನಿರುವವನು, ಮಣ್ಣು-ಕಲ್ಲು-ಚಿನ್ನಗಳನ್ನೂ ಒಂದೇ ತರ ಕಾಣುವವನು.
25 ಮಾನಾಪ-ಮಾನಯೋಸ್ತುಲ್ಯಃ ತುಲ್ಯೋ ಮಿತ್ರಾರಿ-ಪಕ್ಷಯೋಃ । ಸರ್ವಾರಂಭ-ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥
ಗೌರವ ತಿರಸ್ಕಾರಗಳಲ್ಲಿಯೂ ಸಮನು. ಗೆಳೆಯರಲ್ಲಿ ವೈರಿಗಳಲ್ಲಿಯೂ ಒಂದೇ ತರನು. ಲೋಕದ ಎಲ್ಲ ಕೆಲಸವನ್ನೂ ಬಿಟ್ಟವನು. ತ್ರಿಗುಣಗಳನ್ನು ದಾಟಿದವನು ಎನಿಸುತ್ತಾನೆ.
26 ಮಾಂ ಚ ಯೋಽವ್ಯಭಿಚಾರೇಣ ಭಕ್ತಿ-ಯೋಗೇನ ಸೇವತೇ । ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮ-ಭೂಯಾಯ ಕಲ್ಪತೇ ॥
ನನ್ನನ್ನೇ ಪರಿಪೂರ್ಣವಾದ ಭಕ್ತಿಯಿಂದ ಆರಾಧಿಸುವವನು ಈ ತ್ರಿಗುಣಗಳನ್ನು ಪೂರ್ತಿ ದಾಟಿ ಪೂರ್ಣ(ಮುಕ್ತ)ನಾಗಲು ಸಮರ್ಥನಾಗುತ್ತಾನೆ.
27 ಬ್ರಹ್ಮಣೋ ಹಿ ಪ್ರತಿಷ್ಠಾಽಹಂ ಅಮೃತಸ್ಯಾವ್ಯಯಸ್ಯ ಚ । ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥
ನಾಶವಿಲ್ಲದ ವಿಕಾರ ಹೊಂದದ ಚಿತ್‌ಪ್ರಕೃತಿಗೂ ನಾನೇ ಆಶ್ರಯ. ಸನಾತನ ಧರ್ಮಕ್ಕೆ ಮತ್ತು ಕೇವಲ ಸುಖರೂಪದ ಮೋಕ್ಷಕ್ಕೆ ನಾನೇ ಆಶ್ರಯ.

ಇತಿ ಚತುರ್ದಶೋಽಧ್ಯಾಯಃ