ಅಥ ಪಂಚದಶೋಽಧ್ಯಾಯಃ ಅಧ್ಯಾಯ ೧೫

1 ಊರ್ಧ್ವ-ಮೂಲಮಧಃ-ಶಾಖಂ ಅಶ್ವತ್ಥಂ ಪ್ರಾಹುರವ್ಯಯಮ್ । ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದ-ವಿತ್ ॥
ವಿಶ್ವವು ಅಶ್ವತ್ಥಮರದಂತೆ. ಇಂದು ಇದ್ದಂತೆ ನಾಳೆ ಇರದು, ಪೂರ್ತಿ ನಾಶವಾಗದು. ಇದರ ಬೇರು- ಪರಮಾತ್ಮ ಮತ್ತು ಪ್ರಕೃತಿ ಮೇಲೆ ಇದೆ. ಕೆಳಗೆ ಗೆಲ್ಲುಗಳು - ಜಡಜೀವಗಳು, ಎಲೆಗಳು - ವೇದಗಳು. ಇದನ್ನು ತಿಳಿದವನು ವೇದವನ್ನು ಬಲ್ಲವನು.
2 ಅಧಶ್ಚೋರ್ಧ್ವಂ ಚ ಪ್ರಸೃತಾಸ್ತಸ್ಯ ಶಾಖಾಃ ಗುಣ-ಪ್ರವೃದ್ಧಾ ವಿಷಯ-ಪ್ರವಾಳಾಃ । ಅಧಶ್ಚ ಮೂಲಾನ್ಯನು-ಸಂತತಾನಿ ಕರ್ಮಾನುಬಂಧೀನಿ ಮನುಷ್ಯ-ಲೋಕೇ ॥
ತ್ರಿಗುಣಗಳಿಂದ ಬೆಳೆದ ಅದರ ಗೆಲ್ಲುಗಳು ಕೆಳಗೆ ಮತ್ತು ಮೇಲೆ ಹರಡಿಕೊಂಡಿವೆ. ಇಂದ್ರಿಯವಿಷಯಗಳು ಚಿಗುರುಗಳು. ಜೀವಿಗಳ ಕರ್ಮಗಳನ್ನು ಅನುಸರಿಸಿ ಅದರ ಬೇರುಗಳು ಕೆಳಗೆ ಮನುಷ್ಯರ ಈ ಭೂಮಿಯಲ್ಲಿಯೂ ಹರಡಿವೆ.
3 ನ ರೂಪಮಸ್ಯೇಹ ತಥೋಪ-ಲಭ್ಯತೇ ನಾಂತೋ ನ ಚಾದಿರ್ನ ಚ ಸಂ-ಪ್ರತಿಷ್ಠಾ । ಅಶ್ಚತ್ಥಮೇನಂ ಸುವಿರೂಢ-ಮೂಲಂ ಅಸಂಗ-ಶಸ್ತ್ರೇಣ ದೃಢೇನ ಛಿತ್ವಾ ॥
4 ತತಃ ಪರಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ ಗತಾ ನ ನಿವರ್ತಂತಿ ಭೂಯಃ । ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥
ಇದರ ರೂಪ ಇದ್ದ ಹಾಗೆ ಕಾಣಲು ಸಿಗುವುದಿಲ್ಲ, ಇದರ ತುದಿ ಬುಡ ಮತ್ತು ನೆಲೆಯೂ ಕಾಣದು. ಗಟ್ಟಿಯಾಗಿ ಬೇರುಬಿಟ್ಟ ಈ ಅಶ್ವತ್ಥವನ್ನು ಅನಾಸಕ್ತಿ (ಅಂಟಿಸಿಕೊಳ್ಳದಿರುವಿಕೆ) ಎಂಬ ಗಟ್ಟಿಯಾದ ಆಯುಧದಿಂದ ಕಡಿದು ಮತ್ತೆ ಆ ಪರಮಾತ್ಮನನ್ನು ಶಾಸ್ತ್ರಗಳಲ್ಲಿ ಚಿಂತನೆ ಮಾಡಬೇಕು. ಅವನನ್ನು ಸೇರಿದವರು ಮತ್ತೆ ಸಂಸಾರಕ್ಕೆ ಬರುವುದಿಲ್ಲ. ವಿಶ್ವದ ಈ ನಡೆಗಳು ಹಿಂದಿನಿಂದಲೂ ಯಾರಿಂದ ಆಗುತ್ತಿವೆಯೋ ಆ ಮೊದಲಿದ್ದ ಪುರುಷೋತ್ತಮನನ್ನೆ ಶರಣಾಗಬೇಕು.
5 ನಿರ್ಮಾನ-ಮೋಹಾ ಜಿತ-ಸಂಗ-ದೋಷಾಃ ಅಧ್ಯಾತ್ಮ-ನಿತ್ಯಾ ವಿನಿವೃತ್ತ-ಕಾಮಾಃ । ದ್ವಂದ್ವೈರ್ವಿ-ಮುಕ್ತಾಃ ಸುಖ-ದುಃಖ-ಸಂಜ್ಞೈಃ ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ॥
ಶಾಸ್ತ್ರ ವಿಷಯದಲ್ಲಿ ಭ್ರಮೆ ಇಲ್ಲದವರು, ವಿಷಯಗಳ ಸಂಪರ್ಕದ ಹಾನಿಗೆ ಒಳಗಾಗದವರು, ನಿತ್ಯವೂ ಪರಮಾತ್ಮನಲ್ಲಿ ನೆಲೆಗೊಂಡವರು, ಬಯಕೆಗಳನ್ನು ಬಿಟ್ಟವರು, ಸುಖ-ದುಃಖಗಳೆಂಬ ದ್ವಂದ್ವಗಳನ್ನು ಮೀರಿದವರು ಜ್ಞಾನಿಗಳು ಆ ನಾಶವಿಲ್ಲದ ಸ್ಥಾನವನ್ನು ಸೇರುತ್ತಾರೆ.
6 ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ । ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ ॥
ಆ ಸ್ಥಾನವನ್ನು ಸೇರಿದವರು ಮತ್ತೆ ಸಂಸಾರಕ್ಕೆ ಬರುವುದಿಲ್ಲ. ಅದು ನನ್ನ ಶ್ರೇಷ್ಠವಾದ ಸ್ಥಾನ. ಅದನ್ನು ಸೂರ್ಯನಾಗಲಿ, ಚಂದ್ರನಾಗಲಿ ಬೆಳಗಿಸುವುದಿಲ್ಲ, ಬೆಂಕಿಯೂ ಬೆಳಗಿಸದು.
7 ಮಮೈವಾಂಶೋ ಜೀವ-ಲೋಕೇ ಜೀವ-ಭೂತಃ ಸನಾತನಃ । ಮನಃ-ಷಷ್ಠಾನೀಂದ್ರಿಯಾಣಿ ಪ್ರಕೃತಿ-ಸ್ಥಾನಿ ಕರ್ಷತಿ ॥
ಈ ದೇಹದಲ್ಲಿರುವ ನಿತ್ಯನಾದ ಜೀವನೂ ನನ್ನ ಭಿನ್ನಾಂಶನು, ಪ್ರತಿಬಿಂಬನು. ಅವನು ದೇಹದಲ್ಲಿರುವ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜೊತೆಗೆ ವಿಷಯಗಳೆಡೆಗೆ ಎಳೆಯುತ್ತಾನೆ.
8 ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ । ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್ ॥
ಜೀವನು ದೇಹವನ್ನು ಸೇರಿದಾಗ ಮತ್ತು ದೇಹವನ್ನು ಬಿಟ್ಟು ಹೋದಾಗ ಸಚೇಷ್ಟಕನಾದ ದೇವನು ಈ ಇಂದ್ರಿಯಗಳನ್ನು ನಿಯಂತ್ರಿಸುತ್ತ ಜತೆಗೆ ಬರುತ್ತಾನೆ. ಗಾಳಿ ತಾನಿದ್ದ ತಾಣದ ವಾಸನೆಯನ್ನು ಹೊತ್ತು ಬಂದಂತೆ.
9 ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ । ಅಧಿಷ್ಠಾಯ ಮನಶ್ಚಾಯಂ ವಿಷಯಾನುಪ-ಸೇವತೇ ॥
ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತು ಮನಸ್ಸಿನಲ್ಲಿ ನೆಲೆಸಿ ದೇವನು ಉತ್ತಮ ವಿಷಯಗಳನ್ನು ಅನುಭವಿಸುತ್ತಾನೆ.
10 ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಮ್ । ವಿಮೂಢಾ ನಾನು-ಪಶ್ಯಂತಿ ಪಶ್ಯಂತಿ ಜ್ಞಾನ-ಚಕ್ಷುಷಃ ॥
ದೇಹ ಬಿಟ್ಟುಹೋದಾಗ, ದೇಹದಲ್ಲಿ ಇದ್ದಾಗ ಅಥವಾ (ದೋಷವಿಲ್ಲದ) ಗುಣಯುತವಾದ ಸಾರವನ್ನಷ್ಟೆ ಸ್ವೀಕರಿಸುವ ದೇವನನ್ನು ಅಜ್ಞಾನಿಗಳು ತಿಳಿಯಲಾರರು, ಜ್ಞಾನಿಗಳು ತಿಳಿಯುತ್ತಾರೆ.
11 ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಮ್ । ಯತಂತೋಽಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ ॥
ಯೋಗಿಗಳು ಪ್ರಯತ್ನಪಟ್ಟು ತನ್ನಲ್ಲಿ ನೆಲೆಸಿರುವ ದೇವನನ್ನು ಕಾಣುತ್ತಾರೆ. ಅಜ್ಞಾನಿಗಳು, ಅಶುದ್ಧ ಬುದ್ಧಿಯವರು ಪ್ರಯತ್ನಿಸಿದರೂ ಇವನನ್ನು ಕಾಣುವುದಿಲ್ಲ.
12 ಯದಾದಿತ್ಯ-ಗತಂ ತೇಜೋ ಜಗದ್ ಭಾಸಯತೇಽಖಿಲಮ್ । ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ॥
ವಿಶ್ವವನ್ನೆಲ್ಲ ಬೆಳಗುವ ಸೂರ್ಯನಲ್ಲಿದ್ದ ಬೆಳಕು ನನ್ನ ಬೆಳಕು ಎಂದು ತಿಳಿ. ಹಾಗೆಯೆ ಚಂದ್ರನಲ್ಲಿನ ಮತ್ತೆ ಅಗ್ನಿಯಲ್ಲಿನ ಬೆಳಕೂ ನನ್ನದೇ.
13 ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ । ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ ॥
ಭೂಮಿಯನ್ನು ಪ್ರವೇಶಿಸಿ ನಾನೇ ನನ್ನ ಸಾಮರ್ಥ್ಯದಿಂದ ಜಡ-ಜೀವಿಗಳನ್ನೆಲ್ಲ ಹೊತ್ತಿದ್ದೇನೆ. ಅಮೃತರಸರೂಪದ ಚಂದ್ರನಾಗಿ ನಾನೇ ಎಲ್ಲ ಸಸ್ಯಗಳನ್ನು ಪೋಷಿಸುತ್ತೇನೆ.
14 ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ । ಪ್ರಾಣಾಪಾನ-ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥
ನಾನು ವೈಶ್ವಾನರ ಎಂಬ ಬೆಂಕಿಯಾಗಿ ಜೀವಿಗಳ ದೇಹದ ಒಳಗಿದ್ದು ಪ್ರಾಣ ಮತ್ತು ಅಪಾನರೊಡನೆ ನಾಲ್ಕು ಬಗೆಯ (ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ) ಆಹಾರವನ್ನು ಕರಗಿಸುತ್ತೇನೆ.
15 ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ । ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತ-ಕೃದ್ ವೇದ-ವಿದೇವ ಚಾಹಮ್ ॥
ಎಲ್ಲರ ಹೃದಯದಲ್ಲಿ ನಾನು ನೆಲೆಸಿದ್ದೇನೆ. ಎಲ್ಲರಿಗೂ ನನ್ನಿಂದಲೆ ನೆನಪು, ಅರಿವು ಮತ್ತೆ ಮರೆವು. ಎಲ್ಲ ವೇದಗಳಿಂದ ತಿಳಿಯಬೇಕಾದವನು ನಾನೇ. ವೇದಾಂತಸೂತ್ರಗಳನ್ನು ರಚಿಸಿದವನೂ ನಾನೆ. ಮತ್ತೆ ಎಲ್ಲ ವೇದಗಳನ್ನು ಪೂರ್ತಿ ತಿಳಿದವನೂ ನಾನೆ.
16 ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ । ಕ್ಷರಃ ಸರ್ವಾಣಿ ಭೂತಾನಿ ಕೂಟ-ಸ್ಥೋಽಕ್ಷರ ಉಚ್ಯತೇ ॥
ಲೋಕದಲ್ಲಿ ಕ್ಷರ ಮತ್ತು ಅಕ್ಷರ ಎಂಬ ಎರಡು ಬಗೆಯ ಪುರುಷರು. ಶರೀರ ನಾಶವಾಗುವುದರಿಂದ ಎಲ್ಲ ಜೀವರೂ ಕ್ಷರ ಪುರುಷರು. ಶರೀರ ನಾಶವಿರದ ವಿಕಾರ ಇಲ್ಲದೆ ಇರುವ ಚಿತ್‌ಪ್ರಕೃತಿ ಅಕ್ಷರ ಪುರುಷಳು.
17 ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ । ಯೋ ಲೋಕ-ತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ ॥
ಈ ಎರಡಕ್ಕೂ ಮಿಗಿಲಾದವನು ಬೇರೆಯೆ ಪುರುಷನು ಪರಮಾತ್ಮನು ಎಂದು ಕರೆಯಲ್ಪಡುವ ವಿಕಾರವಿರದ ಆ ಸರ್ವೋತ್ತಮನೆ ಮೂರು ಲೋಕದೊಳಗಿದ್ದು ಪಾಲಿಸುತ್ತಾನೆ.
18 ಯಸ್ಮಾತ್ ಕ್ಷರಮತೀತೋಽಹಂ ಅಕ್ಷರಾದಪಿ ಚೋತ್ತಮಃ । ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥
ನಾನು ಕ್ಷರವನ್ನು ಮೀರಿ ನಿಂತಿದ್ದೇನೆ ಮತ್ತು ಅಕ್ಷರಕ್ಕಿಂತಲೂ ಶ್ರೇಷ್ಠನು. ಆದ್ದರಿಂದ ಲೋಕದಲ್ಲೂ ವೇದದಲ್ಲಿಯೂ ಪುರುಷೋತ್ತಮನು ಎಂದೇ ಪ್ರಸಿದ್ಧನು.
19 ಯೋ ಮಾಮೇವಮಸಂ-ಮೂಢೋ ಜಾನಾತಿ ಪುರುಷೋತ್ತಮಮ್ । ಸ ಸರ್ವ-ವಿದ್ ಭಜತಿ ಮಾಂ ಸರ್ವ-ಭಾವೇನ ಭಾರತಃ ॥
ನನ್ನನ್ನು ಹೀಗೆ ಪುರುಷೋತ್ತಮನೆಂದು ತಪ್ಪಿಲ್ಲದೆ ಚೆನ್ನಾಗಿ ತಿಳಿದವನು, ಎಲ್ಲವನ್ನೂ ತಿಳಿದವನು. ಓ ಭಾರತನೆ, ಅವನು ನನ್ನನ್ನೆ ಪೂರ್ಣಭಕ್ತಿಯಿಂದ ಆರಾಧಿಸುತ್ತಾನೆ.
20 ಇತಿ ಗುಹ್ಯ-ತಮಂ ಶಾಸ್ತ್ರಂ ಇದಮುಕ್ತಂ ಮಯಾನಘ । ಏತದ್ ಬುದ್ಧ್ವಾಬುದ್ಧಿ-ಮಾನ್ ಸ್ಯಾತ್ ಕೃತ-ಕೃತ್ಯಶ್ಚ ಭಾರತ ॥
ಓ ಪಾಪದೂರನೆ, ಶಾಸ್ತ್ರದಲ್ಲಿ ತುಂಬಾ ರಹಸ್ಯವಾದ ಮಾತನ್ನು ನಾನು ಹೇಳಿದ್ದೇನೆ. ಓ ಭಾರತನೆ, ಇದನ್ನು ತಿಳಿದವನು ದೇವನನ್ನು ತಿಳಿದವನು ಆಗುತ್ತಾನೆ. ಅವನು ಮತ್ತೆ ಮಾಡಬೇಕಾದ್ದೇನೂ ಉಳಿದಿರುವುದಿಲ್ಲ.

ಇತಿ ಪಂಚದಶೋಽಧ್ಯಾಯಃ