ಅಥ ಷೋಡಶೋಽಧ್ಯಾಯಃ ಅಧ್ಯಾಯ ೧೬

1 ಅಭಯಂ ಸತ್ತ್ವ-ಸಂಶುದ್ಧಿಃ ಜ್ಞಾನ-ಯೋಗ-ವ್ಯವಸ್ಥಿತಿಃ । ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ॥
2 ಅಹಿಂಸಾ ಸತ್ಯಮಕ್ರೋಧಃ ತ್ಯಾಗಃ ಶಾಂತಿರಪೈಶುನಮ್ । ದಯಾ ಭೂತೇಷ್ವಲೋಲುತ್ವಂ ಮಾರ್ದವಂ ಹ್ರೀರಚಾಪಲಮ್ ॥
3 ತೇಜಃ ಕ್ಷಮಾ ಧೃತಿಃ ಶೌಚಂ ಅದ್ರೋಹೋ ನಾತಿ-ಮಾನಿತಾ । ಭವಂತಿ ಸಂಪದಂ ದೈವೀಂ ಅಭಿ-ಜಾತಸ್ಯ ಭಾರತ ॥
ಓ ಭಾರತನೆ, ದೈವೀಸಂಪತ್ತು (ಒಳ್ಳೆಯತನ) ಪಡೆದು ಹುಟ್ಟಿಬಂದವನಲ್ಲಿ ಈ ಗುಣಗಳಿರುತ್ತವೆ- ಹೆದರದಿರುವುದು ಮತ್ತು ಹೆದರಿಸದಿರುವುದು, ಶುದ್ಧಮನಸ್ಸು, ಜ್ಞಾನಸಂಪಾದನೆಯಲ್ಲಿ ತೊಡಗಿರುವುದು, ದಾನ, ಇಂದ್ರಿಯನಿಗ್ರಹ, ದೇವಪೂಜೆ, ವೇದಗಳ ಓದು, ತಪಸ್ಸು, ನೇರತನ, ಅಹಿಂಸೆ, ಸತ್ಯ, ಸಿಟ್ಟು ಮಾಡಿಕೊಳ್ಳದಿರುವುದು, ತ್ಯಾಗ, ದೇವನಲ್ಲಿ ನಿಂತ ಬುದ್ಧಿ, ಚಾಡಿ ಹೇಳದಿರುವುದು, ಪ್ರಾಣಿದಯೆ, ಅತ್ಯಾಸೆ ಇಲ್ಲದಿರುವುದು, ಮೃದುತನ, ನಾಚಿಕೆ, ಚಪಲತೆ ಇಲ್ಲದಿರುವುದು, ತೇಜಸ್, ಕ್ಷಮೆ, ಧೈರ್ಯ, ಮಡಿವಂತಿಕೆ, ದ್ರೋಹ ಎಸಗದಿರುವುದು ಮತ್ತು ಬೀಗದೆ ಇರುವುದು.
4 ಡಂಭೋ ದರ್ಪೋಽಭಿ-ಮಾನಶ್ಚ ಕ್ರೋಧಃ ಪಾರುಷ್ಯಮೇವ ಚ । ಅಜ್ಞಾನಂ ಚಾಭಿ-ಜಾತಸ್ಯ ಪಾರ್ಥ ಸಂಪದಮಾಸುರೀಮ್ ॥
ಓ ಪಾರ್ಥನೆ, ಆಸುರೀ ಸಂಪತ್ತು (ಕೆಟ್ಟತನ) ಪಡೆದು ಹುಟ್ಟಿದವನ ಗುಣಗಳು - ಬೂಟಾಟಿಕೆ, ಸೊಕ್ಕು, ಬಿಂಕ, ಸಿಟ್ಟು, ಒರಟುತನ ಮತ್ತು ಅಜ್ಞಾನ.
5 ದೈವೀ ಸಂಪದ್ ವಿಮೋಕ್ಷಾಯ ನಿಬಂಧಾಯಾಽಸುರೀ ಮತಾ । ಮಾ ಶುಚಃ ಸಂಪದಂ ದೈವೀಂ ಅಭಿ-ಜಾತೋಽಸಿ ಪಾಂಡವ ॥
ಒಳ್ಳೆಯತನ ಬಿಡುಗಡೆಗಾಗಿ ಇದೆ. ಕೆಟ್ಟತನ ಬಂಧನಕ್ಕಾಗಿ ಇದೆ. ಓ ಪಾಂಡವನೆ, ದುಃಖಿಸದಿರು. ನೀನು ಒಳ್ಳೆತನವನ್ನು ಪಡೆದು ಹುಟ್ಟಿರುವೆ.
6 ದ್ವೌ ಭೂತ-ಸರ್ಗೌ ಲೋಕೇಽಸ್ಮಿನ್ ದೈವ ಆಸುರ ಏವ ಚ । ದೈವೋ ವಿಸ್ತರಶಃ ಪ್ರೋಕ್ತಃ ಆಸುರಂ ಪಾರ್ಥ ಮೇ ಶೃಣು ॥
ಈ ಪ್ರಪಂಚದಲ್ಲಿ ದೈವ (ಒಳ್ಳೆಯದು) ಮತ್ತು ಆಸುರ (ಕೆಟ್ಟದು) ಎಂಬ ಎರಡು ಬಗೆಯ ಜೀವಸೃಷ್ಟಿಗಳಿವೆ. ದೈವವನ್ನು ಬಿಡಿಸಿ ಹೇಳಿಯಾಯಿತು. ಓ ಪಾರ್ಥನೆ, ಆಸುರವನ್ನು ನನ್ನಿಂದ ಕೇಳು.
7 ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ । ನ ಶೌಚಂ ನಾಪಿ ಚಾಽಚಾರೋ ನ ಸತ್ಯಂ ತೇಷು ವಿದ್ಯತೇ ॥
ಅಸುರ ಸ್ವಭಾವದ ಜನರು ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಬಿಡಬೇಕು ಎಂದು ತಿಳಿಯರು. ಅವರಲ್ಲಿ ಮಡಿ ಇಲ್ಲ, ಒಳ್ಳೆಯ ನಡತೆ ಇಲ್ಲ ಮತ್ತು ಸತ್ಯವೂ ಇಲ್ಲ.
8 ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ । ಅಪರಸ್ಪರ-ಸಂಭೂತಂ ಕಿಮನ್ಯತ್ ಕಾಮ-ಹೈತುಕಮ್ ॥
ಅವರು ಈ ವಿಶ್ವವನ್ನು ಸುಳ್ಳು ಎನ್ನುವರು. ಈ ಜಗತ್ತಿಗೆ ಆಶ್ರಯ ಇಲ್ಲ ಎನ್ನುವರು. ಪ್ರಪಂಚಕ್ಕೆ ಪಾಲಿಸುವ ದೊರೆ, ಸರ್ವಶಕ್ತನು ಇಲ್ಲ ಎನ್ನುವರು. ಒಂದರಿಂದ ಇನ್ನೊಂದು ಕ್ರಮವಾಗಿ ಹುಟ್ಟಿದ್ದಲ್ಲ ಎನ್ನುವರು. ಕಾಮದ ಸೃಷ್ಟಿ ಅಲ್ಲದೆ ಬೇರೇನೂ ಅಲ್ಲ ಎನ್ನುವರು.
9 ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪ-ಬುದ್ಧಯಃ । ಪ್ರಭವಂತ್ಯುಗ್ರ-ಕರ್ಮಾಣಃ ಕ್ಷಯಾಯ ಜಗತೋಽಹಿತಾಃ ॥
ಇಂತಹ ಚಿಂತನೆಯನ್ನು ಆಧರಿಸಿ ದೇವನಿಂದ ದೂರರಾದ ಕೆಟ್ಟಬುದ್ಧಿಯ ಇವರು ವಿಶ್ವಕ್ಕೆ ಕೇಡು ಬಯಸುವರು. ವಿಶ್ವದ ನಾಶಕ್ಕೆ ಕೆಟ್ಟ ಕೆಲಸಗಳಲ್ಲಿ ತೊಡಗುವರು.
10 ಕಾಮಮಾಶ್ರಿತ್ಯ ದುಷ್ಪೂರಂ ಡಂಭ-ಮಾನ-ಮದಾನ್ವಿತಾಃ । ಮೋಹಾದ್ ಗೃಹೀತ್ವಾಽಸದ್-ಗ್ರಾಹಾನ್ ಪ್ರವರ್ತಂತೇಽಶುಚಿ-ವ್ರತಾಃ ॥
ಪೂರ್ಣಗೊಳ್ಳದ ಆಸೆಯನ್ನು ಹೊತ್ತು ಬೂಟಾಟಿಕೆ, ಬಿಂಕ ಮತ್ತು ಸೊಕ್ಕಿನವರಾಗಿ ಭ್ರಮೆಯಿಂದ ಇಲ್ಲಸಲ್ಲದ ಉಪದೇಶಗಳನ್ನು ಪಡೆದು ಕೆಟ್ಟ ಆಚರಣೆಯವರಾಗಿ ಬದುಕುತ್ತಾರೆ.
11 ಚಿಂತಾಮಪರಿ-ಮೇಯಾಂ ಚ ಪ್ರಳಯಾಂತಾಮುಪಾಶ್ರಿತಾಃ । ಕಾಮೋಪ-ಭೋಗ-ಪರಮಾಃ ಏತಾವದಿತಿ ನಿಶ್ಚಿತಾಃ ॥
ಸತ್ತಾಗಲೇ ಮುಗಿಯುವಷ್ಟು ಬಹಳ ಚಿಂತೆಗೆ ಒಳಗಾದವರು. ಕಾಮದ ಪೂರ್ಣಭೋಗವೆ ಪ್ರಧಾನವೆನ್ನುತ್ತ ಜಗತ್ತು ಇಷ್ಟೇ ಎಂದು ತೀರ್ಮಾನಿಸಿದವರು.
12 ಆಶಾ-ಪಾಶ-ಶತೈರ್ಬದ್ಧಾಃ ಕಾಮ-ಕ್ರೋಧ-ಪರಾಯಣಾಃ । ಈಹಂತೇ ಕಾಮ-ಭೋಗಾರ್ಥಂ ಅನ್ಯಾಯೇನಾರ್ಥ-ಸಂಚಯಾನ್ ॥
ನೂರಾರು ಆಸೆಗಳ ಬಲೆಯಲ್ಲಿ ಸಿಲುಕಿದವರು ಬಯಕೆ ಮತ್ತು ಕೋಪ ತುಂಬಿಕೊಂಡು ಕಾಮದ ಭೋಗಕ್ಕಾಗಿ ರಾಶಿ ರಾಶಿ ಹಣ-ವಸ್ತುಗಳನ್ನು ತಪ್ಪುದಾರಿಯಿಂದ ಪಡೆಯಲು ತೊಡಗುತ್ತಾರೆ.
13 ಇದಮದ್ಯ ಮಯಾ ಲಬ್ಧಂ ಇಮಂ ಪ್ರಾಪ್ಸ್ಯೇ ಮನೋ-ರಥಮ್ । ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥
14 ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ । ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲ-ವಾನ್ ಸುಖೀ ॥
15 ಆಢ್ಯೋಽಭಿಜನ-ವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ । ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನ-ವಿಮೋಹಿತಾಃ ॥
ಇವರ ಅಜ್ಞಾನದ ಚಿಂತನೆಯ ಮಾತುಗಳು ಹೀಗಿವೆ - ಈ ಆಸೆಯನ್ನು ಈಗ ನಾನು ಪಡೆದೆ, ಈ ಬಯಕೆಯನ್ನು ಮುಂದೆ ಪಡೆಯುವೆನು. ಇಷ್ಟು ಹಣ ಈಗ ಇದೆ, ಮತ್ತೆ ಈ ದುಡ್ಡೂ ನನ್ನದು ಆಗಲಿದೆ. ಈ ವೈರಿಯನ್ನು ಈಗ ಕೊಂದೆ, ಉಳಿದವರನ್ನೂ ಕೊಲ್ಲುತ್ತೇನೆ. ನಾನೇ ವಿಶ್ವವನ್ನು ಆಳುವ ದೇವನು, ನಾನೇ ವಿಶ್ವವನ್ನು ಹೊತ್ತ ಶೇಷನು. ನಾನು ಸಿದ್ಧಪುರುಷನು, ಬಲವಂತನು, ಸುಖವಂತನೂ ಆಗಿದ್ದೇನೆ. ಶ್ರೀಮಂತನೂ ಕುಲವಂತನೂ ನಾನೆ. ನನಗೆ ಸಮನಾದವನು ಬೇರೆ ಯಾವನು ಇದ್ದಾನೆ? ನಾನು ಯಾಗ ಮಾಡಿಸುತ್ತೇನೆ, ದಾನ ನೀಡುತ್ತೇನೆ, ಖುಷಿಪಡುತ್ತೇನೆ.
16 ಅನೇಕ-ಚಿತ್ತ-ವಿಭ್ರಾಂತಾ ಮೋಹ-ಜಾಲ-ಸಮಾವೃತಾಃ । ಪ್ರಸಕ್ತಾಃ ಕಾಮ-ಭೋಗೇಷು ಪತಂತಿ ನರಕೇಽಶುಚೌ ॥
ಬಹಳ ವಿಪರೀತಜ್ಞಾನದ ಬುದ್ಧಿಯವರಾಗಿ ಅಜ್ಞಾನದ ಬಲೆಯಲ್ಲಿ ಪೂರ್ತಿ ಸಿಲುಕಿ, ಕಾಮದ ಭೋಗಗಳಲ್ಲೆ ಚೆನ್ನಾಗಿ ಮುಳುಗಿದವರು ವೈತರಣಿ ಮುಂತಾದ ಕೊಳಕಾದ ನರಕದಲ್ಲಿ ಬೀಳುವರು.
17 ಆತ್ಮ-ಸಂಭಾವಿತಾಃ ಸ್ತಬ್ಧಾಃ ಧನ-ಮಾನ-ಮದಾನ್ವಿತಾಃ । ಯಜಂತೇ ನಾಮ ಯಜ್ಞೈಸ್ತೇ ಡಂಭೇನಾವಿಧಿ-ಪೂರ್ವಕಮ್ ॥
ತಮ್ಮ ಬಗೆಗೆಯೆ ಕೊಚ್ಚಿಕೊಳ್ಳುವವರು, ದುರಹಂಕಾರಿಗಳು, ದುಡ್ಡು-ಗೌರವ-ಸೊಕ್ಕಿನಿಂದ ತುಂಬಿದವರು, ಅಂಥವರೂ ಬೂಟಾಟಿಕೆಯಿಂದ ಶಾಸ್ತ್ರದಲ್ಲಿ ಹೇಳಿದಂತೆ ಅಲ್ಲದೆ ಯಜ್ಞಗಳಿಂದ ಪೂಜಿಸುತ್ತಾರೆ.
18 ಅಹಂ-ಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ । ಮಾಮಾತ್ಮ-ಪರ-ದೇಹೇಷು ಪ್ರದ್ವಿಷಂತೋಽಭ್ಯಸೂಯಕಾಃ ॥
ಗರ್ವ, ಸಾಮರ್ಥ್ಯ, ಸೊಕ್ಕು, ಅಸೆ, ಕೋಪ ಇವೆಲ್ಲ ತುಂಬಿದವರು ತನ್ನ ಮತ್ತು ಬೇರೆಯವರ ಶರೀರಗಳಲ್ಲಿ ನನ್ನನ್ನು ಒಪ್ಪದೆ ನಿರಾಕರಿಸುವರು. ಎಲ್ಲೆಡೆಯೂ ಮತ್ಸರಪಡುವರು.
19 ತಾನಹಂ ದ್ವಿಷತಃ ಕ್ರೂರಾನ್ ಸಂ-ಸಾರೇಷು ನರಾಧಮಾನ್ । ಕ್ಷಿಪಾಮ್ಯಜಸ್ರಮಶುಭಾನ್ ಆಸುರೀಷ್ವೇವ ಯೋನಿಷು ॥
ನನ್ನನ್ನು ದ್ವೇಷಿಸುವ ಆ ಕ್ರೂರಿಗಳಾದ ಕೆಟ್ಟ ನಡೆಯ ನೀಚ ಮನುಷ್ಯರನ್ನು ಸಂಸಾರಗಳಲ್ಲಿ ಅಸುರ ಸ್ವಭಾವದ ಜಾತಿಗಳಲ್ಲಿಯೆ ಮತ್ತೆ ಮತ್ತೆ ಎಸೆಯುತ್ತೇನೆ.
20 ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ-ಜನ್ಮನಿ । ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ॥
ಓ ಕೌಂತೇಯನೆ, ಪ್ರತಿ ಜನ್ಮದಲ್ಲಿಯೂ ಕೆಟ್ಟ ಜಾತಿಯಲ್ಲೆ ಹುಟ್ಟಿ ಬಂದ ಆ ಕೆಟ್ಟ ಬುದ್ಧಿಯವರು, ಮತ್ತೆಂದೂ ನನ್ನನ್ನು ಹೊಂದದೆಯೆ ಅಧೋಗತಿಯನ್ನೆ ಹೊಂದುತ್ತಾರೆ.
21 ತ್ರಿ-ವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ । ಕಾಮಃ ಕ್ರೋಧಸ್ತಥಾ ಲೋಭಃ ತಸ್ಮಾದೇತತ್ ತ್ರಯಂ ತ್ಯಜೇತ್ ॥
ಕಾಮ, ಕ್ರೋಧ ಮತ್ತು ಲೋಭ - ಇದು ಮೂರು ನರಕದ ಬಾಗಿಲು, ಆತ್ಮನ ನಾಶಕ್ಕೆ ಕಾರಣವು. ಆದ್ದರಿಂದ ಈ ಮೂರನ್ನು ಬಿಡಬೇಕು.
22 ಏತೈರ್ವಿಮುಕ್ತಃ ಕೌಂತೇಯ ತಮೋ-ದ್ವಾರೈಸ್ತ್ರಿಭಿರ್ನರಃ । ಆಚರತ್ಯಾತ್ಮನಃ ಶ್ರೇಯಃ ತತೋ ಯಾತಿ ಪರಾಂ ಗತಿಮ್ ॥
ಓ ಕೌಂತೇಯನೆ, ನರಕದ ಈ ಮೂರು ಬಾಗಿಲುಗಳಿಂದ ಪಾರಾದ ಮನುಷ್ಯನು ತನಗೆ ಒಳ್ಳೆಯದನ್ನು ನಡೆಸುತ್ತಾನೆ. ಅದರಿಂದ ಉತ್ತಮ ಗತಿಯನ್ನು ಹೊಂದುತ್ತಾನೆ.
23 ಯಃ ಶಾಸ್ತ್ರ-ವಿಧಿಮುತ್ಸೃಜ್ಯ ವರ್ತತೇ ಕಾಮ-ಕಾರತಃ । ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ॥
ಯಾರಾಗಲೀ ಶಾಸ್ತ್ರದ ನಿಯಮವನ್ನು ಬಿಟ್ಟು ಇಷ್ಟಬಂದಂತೆ ಇರುವವನು ಸಿದ್ಧಿಯನ್ನು ಹೊಂದುವುದಿಲ್ಲ; ಸುಖವನ್ನೂ, ಉತ್ತಮ ಗತಿಯನ್ನೂ ಪಡೆಯುವುದಿಲ್ಲ.
24 ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯ-ವ್ಯವಸ್ಥಿತೌ । ಜ್ಞಾತ್ವಾ ಶಾಸ್ತ್ರ-ವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ॥
ಆದ್ದರಿಂದ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ನಿರ್ಣಯಕ್ಕೆ ಶಾಸ್ತ್ರವೇ ನಿನಗೆ ಪ್ರಮಾಣ. ವಿಧಿ-ನಿಷೇಧಗಳ ರೂಪದಲ್ಲಿ ಶಾಸ್ತ್ರ ಹೇಳಿದ್ದನ್ನು ತಿಳಿದು ಇಲ್ಲಿ ನೀನು ಕರ್ಮ ಮಾಡಲು ಯೋಗ್ಯನಾಗಿರುವೆ.

ಇತಿ ಷೋಡಶೋಽಧ್ಯಾಯಃ