ಅಥ ಸಪ್ತದಶೋಽಧ್ಯಾಯಃ ಅಧ್ಯಾಯ ೧೭

ಅರ್ಜುನ ಉವಾಚ
1 ಯೇ ಶಾಸ್ತ್ರ-ವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾಽನ್ವಿತಾಃ । ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥
ಅರ್ಜುನನು ಕೇಳಿದನು - ಓ ಕೃಷ್ಣನೆ, ಕೆಲವರು ನಂಬಿಕೆ ಉಳ್ಳವರು ಶಾಸ್ತ್ರದ ನಿಯಮವನ್ನು ಬಿಟ್ಟು ಪೂಜಿಸುತ್ತಾರೆ. ಅಂಥವರ ನೆಲೆ ಎಂಥದು? ಸತ್ವವೆ? ರಜಸ್ಸೇ? ಅಥವಾ ತಮಸ್ಸೇ?
ಭಗವಾನ್ ಉವಾಚ
2 ತ್ರಿ-ವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವ-ಭಾವ-ಜಾ । ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥
ಕೃಷ್ಣನು ಹೇಳಿದನು - ಜೀವಿಗಳಿಗೆ ತಮ್ಮತನದಿಂದಲೆ ಹುಟ್ಟಿಬಂದ ನಂಬಿಕೆಯು ಸಾತ್ವಿಕ ರಾಜಸ ಮತ್ತು ತಾಮಸ ಎಂಬ ಮೂರು ಬಗೆಯದ್ದು ಆಗಿದೆ. ಆ ನಂಬಿಕೆಯ ಬಗ್ಗೆ ಕೇಳು.
3 ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ । ಶ್ರದ್ಧಾ-ಮಯೋಽಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥
ಓ ಭಾರತನೆ, ಎಲ್ಲರ ಶ್ರದ್ಧೆಯೂ ಅವರ ಸ್ವಭಾವಕ್ಕೆ ಅನುಗುಣವಾಗಿಯೆ ಇರುತ್ತದೆ. ಈ ಜೀವನು ಶ್ರದ್ಧೆಯ ರೂಪನು. ಶ್ರದ್ಧೆ ಯಾವ ರೀತಿಯದ್ದೋ ಅವನು ಅಂಥವನು.
4 ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷ-ರಕ್ಷಾಂಸಿ ರಾಜಸಾಃ । ಪ್ರೇತಾನ್ ಭೂತ-ಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥
ಸಾತ್ವಿಕರು ದೇವತೆಗಳನ್ನು ಪೂಜಿಸುತ್ತಾರೆ. ಮತ್ತೆ ರಾಜಸರು ಯಕ್ಷ-ರಾಕ್ಷಸರನ್ನು ಪೂಜಿಸುತ್ತಾರೆ. ಇತರರು ತಾಮಸ ಶ್ರದ್ಧೆಯವರು ಪ್ರೇತಗಳನ್ನು ಹಾಗೆಯೇ ಭೂತಗಡಣಗಳನ್ನು ಪೂಜಿಸುತ್ತಾರೆ.
5 ಅಶಾಸ್ತ್ರ-ವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ । ಡಂಭಾಹಂಕಾರ-ಸಂಯುಕ್ತಾಃ ಕಾಮ-ರಾಗ-ಬಲಾನ್ವಿತಾಃ ॥
6 ಕರ್ಶಯಂತಃ ಶರೀರ-ಸ್ಥಂ ಭೂತ-ಗ್ರಾಮಮಚೇತಸಃ । ಮಾಂ ಚೈವಾಂತಃ-ಶರೀರ-ಸ್ಥಂ ತಾನ್ ವಿಧ್ಯಾಸುರ-ನಿಶ್ಚಯಾನ್ ॥
ಬೂಟಾಟಿಕೆ ಮತ್ತು ಗರ್ವವುಳ್ಳ ಕೆಲವು ಜನರು ಆಸೆ-ಆಕಾಂಕ್ಷೆಗಳ ಬಲದೊಂದಿಗೆ ದೇಹವನ್ನು ದುಡಿಸುವ ದೇವತೆಗಳ ಸಮೂಹವನ್ನು ಮತ್ತು ದೇಹದೊಳಗಿರುವ ನನ್ನನ್ನೂ ಲೆಕ್ಕಿಸದೆ ಶಾಸ್ತ್ರ ಹೇಳದ ಹಾಳು ತಪಸ್ಸನ್ನು ಆಚರಿಸುವರು, ಆ ಅವಿವೇಕಿಗಳನ್ನು ಅಸುರಸ್ವಭಾವದವರೆಂದು ತಿಳಿ.
7 ಆಹಾರಸ್ತ್ವಪಿ ಸರ್ವಸ್ಯ ತ್ರಿ-ವಿಧೋ ಭವತಿ ಪ್ರಿಯಃ । ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥
ಎಲ್ಲರ ಆಹಾರವೂ ಮೂರು ಬಗೆಯಾಗಿ ಇಷ್ಟ ಆಗುತ್ತದೆ. ಎಲ್ಲರ ಯಜ್ಞ, ತಪಸ್, ದಾನಗಳೂ ಮೂರು ವಿಧದಲ್ಲಿ ಪ್ರಿಯವಾಗಿವೆ. ಅವುಗಳ ಈ ವ್ಯತ್ಯಾಸವನ್ನು ಕೇಳು.
8 ಆಯುಸ್ಸತ್ತ್ವ-ಬಲಾರೋಗ್ಯ-ಸುಖ-ಪ್ರೀತಿ-ವಿವರ್ಧನಾಃ । ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ತ್ವಿಕ-ಪ್ರಿಯಾಃ ॥
ಆಯುಷ್ಯ, ಮನೋಬಲ, ದೇಹಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ಹೆಚ್ಚಿಸುವ ಆಹಾರಗಳು, ರುಚಿಯಾದ, ಪಸೆಯುಳ್ಳ, ಬಹಳ ಕಾಲ ಪರಿಣಾಮ ಕೊಡುವ, ಮನೋಹರವಾದ ಆಹಾರಗಳೂ ಸಾತ್ವಿಕರಿಗೆ ಇಷ್ಟವಾದವುಗಳು.
9 ಕಟ್ವಮ್ಲ-ಲವಣಾತ್ಯುಷ್ಣ-ತೀಕ್ಷ್ಣ-ರೂಕ್ಷ-ವಿದಾಹಿನಃ । ಆಹಾರಾ ರಾಜಸಸ್ಯೇಷ್ಟಾಃ ದುಃಖ-ಶೋಕಾಮಯ-ಪ್ರದಾಃ ॥
ಹೆಚ್ಚಿನ ಖಾರ, ಹುಳಿ, ಉಪ್ಪು, ಬಿಸಿ, ಕಟ್ಟಗೆ, ರಸಹೀನ (ಒಣ) ಮತ್ತು ಶೀತ ತಿನಿಸುಗಳು (ದೇಹಕ್ಕೆ) ದುಃಖ, (ಮನಸ್ಸಿಗೆ) ಸಂಕಟ ಮತ್ತು ರೋಗಗಳನ್ನು ತರುವ ತಿನಿಸುಗಳೂ ರಾಜಸರಿಗೆ ಪ್ರಿಯವಾದವುಗಳು.
10 ಯಾತ-ಯಾಮಂ ಗತ-ರಸಂ ಪೂತಿ ಪರ್ಯುಷಿತಂ ಚ ಯತ್ । ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸ-ಪ್ರಿಯಮ್ ॥
ಹೊತ್ತು ಮೀರಿದ್ದು, ರುಚಿ ಇಲ್ಲದ್ದು, ಹಳಸಿದ್ದು, ಕೊಳಕಾದದ್ದು, ತಂಗಳು ಮತ್ತು ಎಂಜಲು ಇವು ತಾಮಸರಿಗೆ ಪ್ರಿಯವಾದ ಊಟ.
11 ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿ-ದೃಷ್ಟೋ ಯ ಇಜ್ಯತೇ । ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥
ಫಲದ ಆಸೆ ಇಲ್ಲದೆ, ಶಾಸ್ತ್ರ ಹೇಳಿದಂತೆ, ಕರ್ತವ್ಯ ಎಂಬ ನೆಲೆಯಲ್ಲಿ ಇಷ್ಟವಾದ ಮನಸ್ಸಿನಿಂದ ಮಾಡಿದ ಯಜ್ಞ ಸಾತ್ವಿಕ.
12 ಅಭಿ-ಸಂಧಾಯ ತು ಫಲಂ ಡಂಭಾರ್ಥಮಪಿ ಚೈವ ಯತ್ । ಇಜ್ಯತೇ ಭರತ-ಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥
ಫಲದ ಆಸೆಯಿಂದ ಮಾಡಿದ ಯಜ್ಞ ರಾಜಸ. ಓ ಭರತಶ್ರೇಷ್ಠನೆ, ತೋರಿಕೆಗಾಗಿ ಮಾಡಿದ ಯಜ್ಞವನ್ನೂ ರಾಜಸವೆಂದೆ ತಿಳಿ.
13 ವಿಧಿ-ಹೀನಮಸೃಷ್ಟಾನ್ನಂ ಮಂತ್ರ-ಹೀನಮದಕ್ಷಿಣಮ್ । ಶ್ರದ್ಧಾ-ವಿರಹಿತಂ ಯಜ್ಞಂ ತಾಮಸಂ ಪರಿ-ಚಕ್ಷತೇ ॥
ಶಾಸ್ತ್ರನಿಯಮ ಬಿಟ್ಟು ಮಾಡಿದ ಯಜ್ಞವನ್ನು ತಾಮಸ ಎನ್ನುವರು. ಅನ್ನದಾನ, ಮಂತ್ರ, ದಕ್ಷಿಣೆ, ದೇವನಲ್ಲಿ ನಂಬಿಕೆ ಯಾವುದೊಂದೂ ಇಲ್ಲದೆ ಮಾಡಿದ ಯಜ್ಞವೂ ತಾಮಸ.
14 ದೇವ-ದ್ವಿಜ-ಗುರು-ಪ್ರಾಜ್ಞ-ಪೂಜನಂ ಶೌಚಮಾರ್ಜವಮ್ । ಬ್ರಹ್ಮ-ಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥
ವೇದಶಾಸ್ತ್ರದ ದೇವತೆಗಳು, ಅಧ್ಯಯನಯೋಗ್ಯರು, ಅಧ್ಯಾಪಕರು, ವೇದಾರ್ಥ ತಿಳಿದವರು ಇವರನ್ನು ಗೌರವಿಸುವುದು, ತೀರ್ಥಗಳಲ್ಲಿ ಮುಳುಗಿ ಮೀಯುವುದು, ನೇರ ನಡೆ, ಬ್ರಹ್ಮಚರ್ಯ ಮತ್ತು ಯಾರಿಗೂ ಹೊಡೆಯದಿರುವುದು ಶರೀರದ ತಪಸ್ಸು ಎನಿಸುತ್ತದೆ.
15 ಅನುದ್ವೇಗ-ಕರಂ ವಾಕ್ಯಂ ಸತ್ಯಂ ಪ್ರಿಯ-ಹಿತಂ ಚ ಯತ್ । ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥
ಕೆರಳಿಸದ, ಸತ್ಯವಾದ (ಸುಳ್ಳಿರದ), ಕೇಳಲು ಇಷ್ಟವಾದ, ಹಾಗೆಯೆ ಒಳ್ಳೆಯದು ಮಾಡುವ ಮಾತು ಮತ್ತು ಶಾಸ್ತ್ರಗಳ ಕಲಿಕೆಯೂ ಮಾತಿನ ತಪಸ್ಸು ಎನಿಸುತ್ತದೆ.
16 ಮನಃ-ಪ್ರಸಾದಃ ಸೌಮ್ಯತ್ವಂ ಮೌನಮಾತ್ಮ-ವಿನಿಗ್ರಹಃ । ಭಾವ-ಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥
ಕೋಪಿಸದಿರುವುದು, ಮೃದುತನ, ಮನನ, ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯ ಅಭಿಪ್ರಾಯ - ಇವು ಮನದ ತಪಸ್ಸು ಎನಿಸುತ್ತವೆ.
17 ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ ತ್ರಿ-ವಿಧಂ ನರೈಃ । ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿ-ಚಕ್ಷತೇ ॥
ಈ ಮೂರೂ ಬಗೆಯ ತಪಸ್ಸು, ಫಲದ ಆಸೆ ತೊರೆದ ಮನುಜರಿಂದ ಪೂರ್ತಿ ನಂಬಿಕೆಯಿಂದ ದೇವರಿಗಾಗಿ ನಡೆಸಲ್ಪಟ್ಟರೆ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ.
18 ಸತ್ಕಾರ-ಮಾನ-ಪೂಜಾರ್ಥಂ ತಪೋ ಡಂಭೇನ ಚೈವ ಯತ್ । ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥
ಇಲ್ಲಿ ಸಾಧು ಎನಿಸಲು, ಸಂಮಾನ ಪಡೆಯಲು, ಗೌರವಕ್ಕಾಗಿ ಬೂಟಾಟಿಕೆಯಿಂದ ಮಾಡುವ ಚಂಚಲವಾದ, ಶಾಶ್ವತವಲ್ಲದ ಆ ತಪಸ್ಸು ರಾಜಸ ಎನಿಸಿದೆ.
19 ಮೂಢ-ಗ್ರಾಹೇಣಾಽತ್ಮನೋ ಯತ್ ಪೀಡಯಾ ಕ್ರಿಯತೇ ತಪಃ । ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್ ॥
ಶಾಸ್ತ್ರದ ಮಾತನ್ನು ತಪ್ಪಾಗಿ ತಿಳಿದಿದ್ದರಿಂದ ತನ್ನನ್ನೆ ಹಿಂಸಿಸುವ ಮೂಲಕ ಮಾಡಿದ ತಪಸ್ಸು ತಾಮಸ ಎನಿಸಿದೆ ಅಥವಾ ಪರನ ಪೀಡೆಗಾಗಿ ಮಾಡಿದ್ದೂ ತಾಮಸವೆ.
20 ದಾತವ್ಯಮಿತಿ ಯದ್ದಾನಂ ದೀಯತೇಽನುಪ-ಕಾರಿಣೇ । ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್ ॥
ಪ್ರತ್ಯುಪಕಾರಕ್ಕಾಗಿ ಅಲ್ಲದೆ, ಕರ್ತವ್ಯ ಎಂದು ಕೊಡುವ ದಾನವು, ಪುಣ್ಯದೇಶದಲ್ಲಿ ಪ್ರಶಸ್ತಕಾಲದಲ್ಲಿ ಯೋಗ್ಯವ್ಯಕ್ತಿಗೆ ನೀಡಲ್ಪಟ್ಟಾಗ ಅದು ಸಾತ್ವಿಕ ದಾನ ಎನಿಸುವುದು.
21 ಯತ್ತು ಪ್ರತ್ಯುಪ-ಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ । ದೀಯತೇ ಚ ಪರಿ-ಕ್ಲಿಷ್ಟಂ ತದ್ ರಾಜಸಮುದಾಹೃತಮ್ ॥
ಪ್ರತ್ಯುಪಕಾರಕ್ಕಾಗಿ ಅಥವಾ ಫಲದ ಆಸೆಯಿಂದ ಒಳಗೆ ಸಂಕಟಪಡುತ್ತ ನೀಡುವ ದಾನ ರಾಜಸ ಎನಿಸಿದೆ.
22 ಅದೇಶ-ಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ । ಅಸತ್ಕೃತಮವ-ಜ್ಞಾತಂ ತತ್ತಾಮಸಮುದಾಹೃತಮ್ ॥
ಶಾಸ್ತ್ರ ಹೇಳದ ದೇಶ-ಕಾಲಗಳಲ್ಲಿ ಅಯೋಗ್ಯನಿಗೆ, ಗೌರವಿಸದೆ ಅವಹೇಳನೆಯೊಂದಿಗೆ ನೀಡಿದ ದಾನ ತಾಮಸ ಎನಿಸಿದೆ.
23 ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿ-ವಿಧಃ ಸ್ಮೃತಃ । ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥
ಓಂ (ಅಂತರ್ಯಾಮಿ) ತತ್ (ವ್ಯಾಪ್ತ) ಸತ್ (ನಿರ್ದೋಷ) ಎಂದು ದೇವನ ಮೂರು ರೀತಿಯ ಹೆಸರುಗಳು ಎನಿಸಿವೆ. ಆ ದೇವನಿಂದಲೆ ಹಿಂದೆ ವೇದಜ್ಞರು ವೇದಗಳು ಮತ್ತು ಯಜ್ಞಗಳು ಆದವು.
24 ತಸ್ಮಾದೋಮಿತ್ಯುದಾಹೃತ್ಯ ಯಜ್ಞ-ದಾನ-ತಪಃ-ಕ್ರಿಯಾಃ । ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮ-ವಾದಿನಾಮ್ ॥
ಆದ್ದರಿಂದ ವೇದದಲ್ಲಿ ದೇವನನ್ನು ಚಿಂತಿಸುವ ವೈದಿಕರ ವೇದೋಕ್ತ ಕರ್ಮಗಳು ಯಜ್ಞದಾನತಪಸ್ಸುಗಳು ಯಾವಾಗಲೂ ಓಂ ಎಂದು ದೇವನ ನಾಮಸ್ಮರಣೆಯ ಜತೆಗೆ ಆರಂಭವಾಗುತ್ತವೆ.
25 ತದಿತ್ಯನಭಿ-ಸಂಧಾಯ ಫಲಂ ಯಜ್ಞ-ತಪಃ-ಕ್ರಿಯಾಃ । ದಾನ-ಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷ-ಕಾಂಕ್ಷಿಭಿಃ ॥
ಮೋಕ್ಷ ಬಯಸುವವರು, ಫಲವನ್ನು ಬಯಸದೆ ತತ್ ಎಂದು ದೇವನ ನಾಮಸ್ಮರಣೆಯ ಜೊತೆಗೆ ಬಗೆಬಗೆಯ ಯಜ್ಞದಾನತಪಸ್ಸುಗಳನ್ನು ಮಾಡುತ್ತಾರೆ.
26 ಸದ್ಭಾವೇ ಸಾಧು-ಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ । ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥
ಓ ಪಾರ್ಥನೆ, ಹುಟ್ಟು ಮತ್ತು ಒಳ್ಳೆಯತನ ಎಂಬ ಅರ್ಥದಲ್ಲಿ ಸತ್ ಎಂಬ ಶಬ್ದ ಉಪಯೋಗಿಸಲ್ಪಡುತ್ತದೆ. ಹಾಗೆಯೆ ಒಳ್ಳೆಯ ಕೆಲಸ ಎಂಬ ಅರ್ಥದಲ್ಲಿಯೂ ಸತ್ ಶಬ್ದ ಬಳಸಲ್ಪಡುತ್ತದೆ.
27 ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ । ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿ-ಧೀಯತೇ ॥
ಯಜ್ಞ, ದಾನ, ತಪಸ್ಸುಗಳಲ್ಲಿ ನಿಷ್ಠೆಯು ಸತ್ ಎನಿಸುತ್ತದೆ. ದೇವರಿಗಾಗಿ ನಡೆಸುವ ಕರ್ಮವೂ ಸತ್ ಎಂದೇ ಕರೆಯಲ್ಪಡುತ್ತದೆ.
28 ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ । ಅಸದಿತ್ಯುಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ ॥
ಓ ಪಾರ್ಥನೆ, ನಂಬಿಕೆ ಇಲ್ಲದೆ (ಅಸಡ್ಡೆಯಿಂದ) ಮಾಡಿದ ಹೋಮ, ದಾನ, ತಪಸ್ಸು ಮತ್ತು ಯಾವುದೇ ಕರ್ಮವು ಅಸತ್ (ಹಾಳು) ಎಂದು ಹೇಳಲ್ಪಡುವುದು. ಆ ಕರ್ಮ ಸತ್ತ ಬಳಿಕವೂ ಫಲ ಕೊಡದು, ಈ ಲೋಕದಲ್ಲಿಯೂ ಫಲ ನೀಡದು.

ಇತಿ ಸಪ್ತದಶೋಽಧ್ಯಾಯಃ