ಅಥ ತೃತೀಯೋಽಧ್ಯಾಯಃ ಅಧ್ಯಾಯ ೩

ಅರ್ಜುನ ಉವಾಚ
1 ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ । ತತ್ ಕಿಂ ಕರ್ಮಣಿ ಘೋರೇ ಮಾಂ ನಿ-ಯೋಜಯಸಿ ಕೇಶವ ॥
ಅರ್ಜುನನು ಪ್ರಶ್ನಿಸುತ್ತಾನೆ - ಓ ಜನಾರ್ದನನೇ, ಕರ್ಮಕ್ಕಿಂತ ಜ್ಞಾನವೇ ಶ್ರೇಷ್ಠ ಎಂದು ನಿನಗೆ ಸಮ್ಮತವಾದರೆ, ಓ ಕೇಶವ, ಮತ್ತೇಕೆ ನನ್ನನ್ನು ಈ ಘೋರವಾದ ಯುದ್ಧಕರ್ಮದಲ್ಲಿ ತೊಡಗಿಸುತ್ತಿರುವೆ?
2 ವ್ಯಾಮಿಶ್ರೇಣೈವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ । ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಽಹಮಾಪ್ನುಯಾಮ್ ॥
ನನ್ನ ಬುದ್ಧಿಯನ್ನು ದ್ವಂದ್ವಾರ್ಥದ ಮಾತಿನಿಂದ ಮೋಹಗೊಳಿಸುವಂತಿರುವೆ. ಯಾವುದರಿಂದ ನಾನು ಒಳಿತನ್ನು ಪಡೆವೆನು ಅದನ್ನೊಂದನ್ನು ನಿರ್ಧರಿಸಿ ಹೇಳು.
ಭಗವಾನ್ ಉವಾಚ
3 ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾಽನಘ । ಜ್ಞಾನ-ಯೋಗೇನ ಸಾಂಖ್ಯಾನಾಂ ಕರ್ಮ-ಯೋಗೇನ ಯೋಗಿನಾಮ್
ಕೃಷ್ಣನು ಉತ್ತರಿಸುತ್ತಾನೆ - ಓ ಪಾಪದೂರನೆ, ಜ್ಞಾನಮಾರ್ಗಿಗಳಿಗೆ ಜ್ಞಾನಪ್ರಧಾನವಾದ ಸಾಧನೆ ಮತ್ತು ಕರ್ಮಯೋಗಿಗಳಿಗೆ ಕರ್ಮಪ್ರಧಾನವಾದ ಸಾಧನೆ, ಹೀಗೆ ಲೋಕದ ಜನರಲ್ಲಿ ಎರಡು ರೀತಿಯ ಸಾಧನೆಯನ್ನು ನಾನು ಹಿಂದೆ ಹೇಳಿದೆ.
4 ನ ಕರ್ಮಣಾಮನಾರಂಭಾತ್ ನೈಷ್ಕರ್ಮ್ಯಂ ಪುರುಷೋಽಶ್ನುತೇ । ನ ಚ ಸಂ-ನ್ಯಸನಾದೇವ ಸಿದ್ಧಿಂ ಸಮಧಿ-ಗಚ್ಛತಿ ॥
ಸಾಧಕನು ಕರ್ಮಗಳನ್ನು ಮಾಡದೆಯೇ ಕರ್ಮಬಂಧದಿಂದ ಕಳಚನು. ಕರ್ಮದ ಫಲವನ್ನು ತ್ಯಾಗ ಮಾಡಿದ್ದರಿಂದಲೇ ಸಿದ್ಧಿಯನ್ನು ಪಡೆಯುವುದೂ ಇಲ್ಲ.
5 ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮ-ಕೃತ್ । ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿ-ಜೈರ್ಗುಣೈಃ ॥
ಯಾವನೊಬ್ಬನೂ ಒಂದು ಕ್ಷಣವಾದರೂ ಎಂದೂ ಏನೂ ಮಾಡದೆ ಇರಲಾರನು. ಪ್ರತಿಯೊಬ್ಬನೂ ದೇವರ ಅಧೀನನಾಗಿ ತನ್ನತನದ ಗುಣಗಳಿಂದ ಕರ್ಮ ಮಾಡುತ್ತಲೇ ಇರುವನು.
6 ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಚರನ್ । ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥
ವಾಕ್ ಪಾಣಿ ಪಾದ ಪಾಯು ಉಪಸ್ಥಗಳೆಂಬ ಐದು ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಆಯಾ ಇಂದ್ರಿಯಗಳ ವಿಷಯಗಳನ್ನು ಮನಸ್ಸಿನಲ್ಲಿಯೇ ಮೆಲುಕು ಹಾಕುತ್ತಿರುವವನು ಬುದ್ಧಿ ಹಾಳಾದವನಿರುತ್ತಾನೆ, ಡಂಭಾಚಾರಿ ಎನಿಸುತ್ತಾನೆ.
7 ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ । ಕರ್ಮೇಂದ್ರಿಯೈಃ ಕರ್ಮ-ಯೋಗಂ ಅಸಕ್ತಃ ಸ ವಿಶಿಷ್ಯತೇ ॥
ಓ ಅರ್ಜುನ, ಇಂದ್ರಿಯಗಳನ್ನು ಮನಸ್ಸಿನಿಂದ ನಿಗ್ರಹಿಸಿ, ಕರ್ಮದ ಫಲದಲ್ಲೆ ಆಸಕ್ತನಾಗದೆ, ಕರ್ಮೇಂದ್ರಿಯಗಳಿಂದ ಕೆಲಸವನ್ನು ನಡೆಸುವವನು ಹೆಚ್ಚಿನವನು.
8 ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ । ಶರೀರ-ಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ॥
ನಿನಗೆ ಹೇಳಿದ ಕರ್ಮವನ್ನು ನೀನು ಮಾಡು. ಸುಮ್ಮನಿರುವುದಕ್ಕಿಂತ ಕರ್ಮ ಮಾಡುವುದು ಶ್ರೇಷ್ಠ. ಏನೂ ಮಾಡದೇ ಇದ್ದರೆ, ನಿನ್ನ ದೇಹದ ಯಾವುದೊಂದು ಚೇಷ್ಟೆಯೂ ಮುಂದುವರಿಯದು!
9 ಯಜ್ಞಾರ್ಥಾತ್ ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮ-ಬಂಧನಃ । ತದರ್ಥಂ ಕರ್ಮ ಕೌಂತೇಯ ಮುಕ್ತ-ಸಂಗಃ ಸಮಾಚರ ॥
ಓ ಕೌಂತೇಯನೆ, ದೇವರ ಪೂಜೆ ಎಂದಲ್ಲದೆ ಮಾಡಿದ ಕರ್ಮಮಾತ್ರವೆ ಎಲ್ಲರಿಗೂ ಬಂಧನ. ಫಲದ ಆಸೆ ಬಿಟ್ಟು ದೇವರ ಪೂಜೆಯೆಂದು ಕರ್ಮವನ್ನು ಮಾಡು.
10 ಸಹ-ಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾ-ಪತಿಃ । ಅನೇನ ಪ್ರ-ಸವಿಷ್ಯಧ್ವಂ ಏಷ ವೋಽಸ್ತ್ವಿಷ್ಟ-ಕಾಮ-ಧುಕ್ ॥
ದೇವರ ಪೂಜಾರೂಪವಾದ ಕರ್ಮದೊಡನೆ ಜನರನ್ನು ಹಿಂದೆ ಚತುರ್ಮುಖ ಬ್ರಹ್ಮನು ಸೃಷ್ಟಿಸಿ ಹೀಗೆ ಹೇಳಿದ್ದನು - ಈ ಬಗೆಯಿಂದ ಕರ್ಮವನ್ನು ನಡೆಸಿರಿ. ಇದು ನಿಮಗೆ ಒಳ್ಳೆಯ ಬಯಕೆಯನ್ನು ಕೊಡುವುದಾಗಲಿ.
11 ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ । ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ॥
ಈ ಯಜ್ಞಕರ್ಮದಿಂದ ದೇವತೆಗಳನ್ನು ಸಂಪರ್ಕಿಸಿರಿ. ಆ ದೇವತೆಗಳು ನಿಮ್ಮನ್ನು ಸಂಪರ್ಕಿಸಲಿ. ಒಬ್ಬರಿಗೊಬ್ಬರು ಸಂಬಂಧಿಸುತ್ತ ಹೆಚ್ಚಿನ ಒಳ್ಳೆಯದನ್ನು ಪಡೆಯಿರಿ.
12 ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞ-ಭಾವಿತಾಃ । ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥
ಯಜ್ಞದಿಂದ ಆರಾಧ್ಯರಾದ ದೇವತೆಗಳು ನೀವು ಬಯಸಿದಂತೆ ಬಗೆಗಳನ್ನು ನೀಡುತ್ತಾರೆ. ಅವರು ನೀಡಿದ್ದನ್ನು ಮತ್ತವರಿಗೆ ಸಮರ್ಪಿಸದೆ ಯಾರು ತಿನ್ನುವನೋ ಅವನು ಕಳ್ಳನೆಂದೇ ಅರ್ಥ.
13 ಯಜ್ಞ-ಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವ-ಕಿಲ್ಬಿಷೈಃ । ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮ-ಕಾರಣಾತ್ ॥
ಯಜ್ಞಗಳನ್ನು ನಡೆಸಿ ಶೇಷಪ್ರಸಾದವನ್ನು ತಿನ್ನುವವರು ಒಳ್ಳೆಯವರು, ಎಲ್ಲ ಪಾಪಗಳಿಂದ ಪಾರಾಗುವರು. ತಮಗಾಗಿ ಅಡುಗೆ ಮಾಡುವವರು ಕೆಟ್ಟವರು, ಪಾಪವನ್ನೇ ಉಣ್ಣುತ್ತಾರೆ.
14 ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನ-ಸಂಭವಃ । ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ-ಸಮುದ್ಭವಃ ॥
ಆಹಾರದಿಂದ ಜೀವಿಗಳು ಬದುಕಿರುತ್ತವೆ, ಆಹಾರವು ಮೋಡದಿಂದ ಬೆಳೆಯಲಿದೆ. ಯಜ್ಞದಿಂದ ಮೋಡದ ಉತ್ಪತ್ತಿ. ಯಜ್ಞವು ಕರ್ಮದಿಂದಲೇ ಆಗಲಿದೆ.
15 ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರ-ಸಮುದ್ಭವಮ್ ॥ ತಸ್ಮಾತ್ ಸರ್ವ-ಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರ-ತಿಷ್ಠಿತಮ್ ॥
ಕರ್ಮವು ದೇವರಿಂದ ಆಗುವುದೆಂದು ತಿಳಿ. ದೇವರನ್ನು ವೇದದಿಂದ ತಿಳಿಯಬೇಕು. ಹೀಗೆ ಎಲ್ಲೆಡೆಯ ದೇವರು ಯಜ್ಞದಲ್ಲಿ ನಿತ್ಯ ಇರುವನು.
16 ಏವಂ ಪ್ರ-ವರ್ತಿತಂ ಚಕ್ರಂ ನಾನು-ವರ್ತಯತೀಹ ಯಃ । ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ ॥
ಓ ಪಾರ್ಥ, ಹೀಗೆ ಸುತ್ತುತ್ತಿರುವ ವಿಶ್ವಚಕ್ರವನ್ನು ಮುಂದುವರಿಸದವನು ಇಲ್ಲಿ ಪಾಪಿಯಾಗಿದ್ದಾನೆ. ಇಂದ್ರಿಯಸುಖದಲ್ಲೆ ಮುಳುಗಿದವನ ಬದುಕು ವ್ಯರ್ಥವಾಗಿದೆ.
17 ಯಸ್ತ್ವಾತ್ಮ-ರತಿರೇವ ಸ್ಯಾತ್ ಆತ್ಮ-ತೃಪ್ತಶ್ಚ ಮಾನವಃ । ಆತ್ಮನ್ಯೇವ ಚ ಸಂತುಷ್ಟಃ ತಸ್ಯ ಕಾರ್ಯಂ ನ ವಿದ್ಯತೇ ॥
ಪರಮಾತ್ಮನ ಭಕ್ತನಾಗಿ, ಆತ ನೀಡಿದ್ದರಲ್ಲಿಯೆ ತೃಪ್ತನಾಗಿ, ಪರಮಾತ್ಮನ ಚಿಂತನೆಯಲ್ಲಿಯೆ ಆನಂದ ಪಡೆವವಗೆ ಮಾಡಬೇಕಾದ್ದೇನೂ ಇರದು.
18 ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ । ನಚಾಸ್ಯ ಸರ್ವ-ಭೂತೇಷು ಕಶ್ಚಿದರ್ಥ-ವ್ಯಪಾಶ್ರಯಃ ॥
ಅಂಥವನು ಇಲ್ಲಿ ಕರ್ಮ ಮಾಡಿದರೂ ಮಾಡದಿದ್ದರೂ ಏನೂ ಪ್ರಯೋಜನವಿಲ್ಲ. ಎಲ್ಲ ಜೀವಿಗಳಲ್ಲಿ ಅವನಿಗೆ ಯಾವುದೇ ರೀತಿಯ ವಿಶೇಷ ವ್ಯವಹಾರ ಇಲ್ಲ.
19 ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ । ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥
ಆದ್ದರಿಂದ ಫಲದ ಆಸೆ ಬಿಟ್ಟು, ಯಾವಾಗಲೂ ಮಾಡಬೇಕಾದ ಕೆಲಸವನ್ನು ಚೆನ್ನಾಗಿ ಮಾಡು. ಹೀಗೆ ಫಲದಾಸೆ ಬಿಟ್ಟು ಕರ್ಮ ಮಾಡುತ್ತಲೇ ವ್ಯಕ್ತಿ ಸರ್ವೋತ್ತಮನನ್ನು ಹೊಂದುವನು.
20 ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾ ಜನಕಾದಯಃ । ಲೋಕ-ಸಂ-ಗ್ರಹಮೇವಾಪಿ ಸಂ-ಪಶ್ಯನ್ ಕರ್ತುಮರ್ಹಸಿ ॥
ಜನಕ ಮುಂತಾದ ರಾಜರು ಕರ್ಮದಿಂದಲೇ ಮೋಕ್ಷವನ್ನು ಪಡೆದರು. ಜನಸಾಮಾನ್ಯರ ಶಿಕ್ಷಣವನ್ನು ತಿಳಿದಾದರೂ ನೀನು ಕರ್ತವ್ಯವನ್ನು ಮಾಡುವುದು ಯೋಗ್ಯವೇ.
21 ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ । ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನು-ವರ್ತತೇ ॥
ದೊಡ್ಡವನು ಏನೆಲ್ಲ ಮಾಡುತ್ತಾನೋ ಅದನ್ನೇ ಜನಸಾಮಾನ್ಯ ಮಾಡುತ್ತಾನೆ. ಅವನು ಯಾವುದನ್ನು ಸರಿ ಎಂದು ಮಾಡುತ್ತಾನೋ ಅದನ್ನೇ ಜನ ಅನುಸರಿಸುತ್ತದೆ.
22 ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ । ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥
ಓ ಪಾರ್ಥನೆ, ಮೂರು ಲೋಕಗಳಲ್ಲೂ ನಾನು ಮಾಡಬೇಕಾದ್ದು ಏನೂ ಇಲ್ಲ. ನನಗೇನೂ ಸಿಗದಿದ್ದದ್ದು, ಸಿಗಬೇಕಾದ್ದೂ ಇಲ್ಲ. ಆದರೂ ಕರ್ಮವನ್ನು ನಡೆಸುತ್ತಲೆ ಇದ್ದೇನೆ.
23 ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ । ಮಮ ವರ್ತ್ಮಾನು-ವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥
ಓ ಪಾರ್ಥನೆ, ನಾನು ಒಮ್ಮೆಯೂ ತಪ್ಪದೆ ಕೆಲಸ ಮಾಡದೆ ಹೋದರೆ, ಮನುಷ್ಯರು ಎಲ್ಲ ರೀತಿಯಿಂದಲೂ ನನ್ನ ದಾರಿಯನ್ನೇ ಅನುಸರಿಸುತ್ತಾರೆ.
24 ಉತ್ಸೀದೇಯುರಿಮೇ ಲೋಕಾಃ ನ ಕುರ್ಯಾಂ ಕರ್ಮ ಚೇದಹಮ್ । ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾಮಿಮಾಃ ಪ್ರಜಾಃ ॥
ನಾನು ಒಂದೊಮ್ಮೆ ಕರ್ಮ ಮಾಡದೇ ಇದ್ದರೆ ಈ ಜನರೆಲ್ಲ ಒಂದೋ ಕರ್ಮ ಮಾಡುವುದಿಲ್ಲ, ಅಥವಾ ತಪ್ಪಾಗಿ ಆಚರಿಸಿ ಹಾಳಾಗುತ್ತಾರೆ. ಈ ಗೊಂದಲಕ್ಕೆ ನಾನೇ ಕಾರಣನಾದೇನು. ಈ ಜನರನ್ನು ನಾನೇ ಹಾನಿಗೊಳಿಸಿದಂತೆ.
25 ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ ॥ ಕುರ್ಯಾದ್ ವಿದ್ವಾಂಸ್ತಥಾಸಕ್ತಃ ಚಿಕೀರ್ಷುರ್ಲೋಕ-ಸಂಗ್ರಹಮ್ ॥
ಓ ಭಾರತನೇ, ತಿಳಿಯದವರು ಫಲದಾಸೆಯಿಂದ ಕೆಲಸ ಮಾಡುತ್ತಾರೆ. ತಿಳಿದವನು ಫಲದಾಸೆ ಬಿಟ್ಟು ಕೆಲಸ ಮಾಡುತ್ತಿರಬೇಕು; ಜನರಿಗೆ ತಿಳಿಸಿಕೊಡಲು ಕರ್ಮ ಮಾಡುತ್ತಲೆ ಇರಬೇಕು.
26 ನ ಬುದ್ಧಿ-ಭೇದಂ ಜನಯೇತ್ ಅಜ್ಞಾನಾಂ ಕರ್ಮ-ಸಂಗಿನಾಮ್ । ಜೋಷಯೇತ್ ಸರ್ವ-ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥
ಫಲದ ಆಸೆಯಿಂದ ದುಡಿವ, ತಿಳಿಯದ ಜನರ ಬುದ್ಧಿಯನ್ನು ತಿಳಿದವನು ಗೊಂದಲಗೊಳಿಸಬಾರದು. ಕರ್ಮಯೋಗವನ್ನು ಅರಿತವನಿವನು ಎಲ್ಲ ಕೆಲಸಗಳನ್ನೂ ಚೆನ್ನಾಗಿ ನಡೆಸುತ್ತ, ಅಜ್ಞರ ಎಲ್ಲ ಕೆಲಸಗಳನ್ನು ಆದರದಿಂದಲೇ ಸರಿಗೊಳಿಸಬೇಕು.
27 ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ । ಅಹಂಕಾರ-ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ॥
ಎಲ್ಲ ಕರ್ಮಗಳೂ ಜೀವನ ಸಹಜ ಗುಣಗಳಿಂದ ನಡೆಯುತ್ತವೆ. ದುರಹಂಕಾರಿಯು ನಾನೇ ಮಾಡಿದವನು ಎಂದು ಭಾವಿಸುತ್ತಾನೆ.
28 ತತ್ತ್ವ-ವಿತ್ತು ಮಹಾಬಾಹೋ ಗುಣ-ಕರ್ಮ-ವಿಭಾಗಯೋಃ । ಗುಣಾ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ ॥
ಓ ಮಹಾಬಾಹುವೆ, ಗುಣಗಳ ಮತ್ತು ಕರ್ಮಗಳ ವಿಶೇಷತೆಯನ್ನು ಸರಿಯಾಗಿ ತಿಳಿದವನು, ಇಂದ್ರಿಯಗಳು ವಿಷಯಗಳಲ್ಲಿ ನಿಂತಿವೆ ಎಂದು ತಿಳಿಯುತ್ತ ಅವುಗಳಲ್ಲಿ ಅಂಟಿಕೊಳ್ಳುವುದಿಲ್ಲ.
29 ಪ್ರಕೃತೇರ್ಗುಣ-ಸಮ್ಮೂಢಾಃ ಸಜ್ಜಂತೇ ಗುಣ-ಕರ್ಮಸು । ತಾನಕೃತ್ಸ್ನ-ವಿದೋ ಮಂದಾನ್ ಕೃತ್ಸ್ನ-ವಿನ್ನ ವಿಚಾಲಯೇತ್ ॥
ಪ್ರಕೃತಿಯ ಅಂಗಗಳಾದ ಇಂದ್ರಿಯಗಳಲ್ಲಿಯೆ ಪೂರ್ತಿ ಆಸಕ್ತರು ಗುಣಕರ್ಮಗಳಲ್ಲೆ ಅಂಟಿಕೊಳ್ಳುತ್ತಾರೆ. ಅರೆಬರೆ ತಿಳಿದ ಅಂಥ ದಡ್ಡರನ್ನು ಪೂರ್ತಿ ಚೆನ್ನಾಗಿ ತಿಳಿದವ ಗೊಂದಲಗೊಳಿಸಬಾರದು.
30 ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ-ಚೇತಸಾ । ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತ-ಜ್ವರಃ ॥
ನಾನು ಸರ್ವೋತ್ತಮನೆಂದು ತಿಳಿದು ನನಗೆ ನಿನ್ನ ಎಲ್ಲ ಕರ್ಮಗಳನ್ನು ಸಮರ್ಪಿಸು. ಫಲದಾಸೆ ಬಿಡು. ನಾನು ಮಾಡುವೆನೆಂದೂ ತಿಳಿಯದಿರು. ಸಂಕಟ ಬಿಟ್ಟು ಹೋರಾಡು.
31 ಯೇ ಮೇ ಮತಮಿದಂ ನಿತ್ಯಂ ಅನು-ತಿಷ್ಠಂತಿ ಮಾನವಾಃ । ಶ್ರ್ರದ್ಧಾವಂತೋಽನಸೂಯಂತೋ ಮುಚ್ಯಂತೇ ತೇಽಪಿ ಕರ್ಮಭಿಃ ॥
ನನ್ನ ಈ ಅಭಿಪ್ರಾಯದಂತೆ ಅಸೂಯೆ ತೊರೆದು ಶ್ರದ್ಧೆಯಿಂದ ನಿತ್ಯವೂ ಯಾರು ಕರ್ಮವನ್ನು ನಡೆಸುತ್ತಾರೋ ಅವರು ಕರ್ಮಬಂಧನದಿಂದ ಬಿಡುಗಡೆ ಪಡೆಯುತ್ತಾರೆ.
32 ಯೇ ತ್ವೇತದಭ್ಯಸೂಯಂತೋ ನಾನು-ತಿಷ್ಠಂತಿ ಮೇ ಮತಮ್ । ಸರ್ವ-ಜ್ಞಾನ-ವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ ॥
ನನ್ನ ಈ ಮತವನ್ನು ದ್ವೇಷಿಸುತ್ತ ಅನುಸರಿಸದವರು ಯಾವುದನ್ನೂ ತಿಳಿವ ಯೋಗ್ಯತೆಯಿರದ ದಡ್ಡರಾಗಿಯೇ ನಾಶ ಹೊಂದುವರು.
33 ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನ-ವಾನಪಿ । ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ ॥
ತಿಳಿದವನು ತನ್ನ ಸ್ವಭಾವಕ್ಕೆ ಸಮನಾಗಿಯೇ ಕೆಲಸ ಮಾಡುತ್ತಾನೆ. ಎಲ್ಲ ಜೀವಿಗಳು ತಮ್ಮತಮ್ಮ ಸ್ವಭಾವದಂತೆ ಇವೆ. ಬಲಾತ್ಕಾರದಿಂದ ಬದಲಾವಣೆ ಏನೂ ಆಗದು !
34 ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗ-ದ್ವೇಷೌ ವ್ಯವಸ್ಥಿತೌ । ತಯೋರ್ನ ವಶಮಾಗಚ್ಛೇತ್ ತೌ ಹ್ಯಸ್ಯ ಪರಿ-ಪಂಥಿನೌ ॥
ರಾಗ ಮತ್ತು ದ್ವೇಷ (ಬೇಕು-ಬೇಡಗಳು) ಪ್ರತಿಯೊಂದು ಇಂದ್ರಿಯದ ವಿಷಯದಲ್ಲಿಯೂ ವಿಪರೀತವಾಗಿ ಇವೆ. ರಾಗ-ದ್ವೇಷಗಳಿಗೆ ಒಳಗಾಗಲೇಬಾರದು. ಇವೆರಡೇ ಸಾಧಕನಿಗೆ ಅಡ್ಡಿಗಳು.
35 ಶ್ರೇಯಾನ್ ಸ್ವ-ಧರ್ಮೋ ವಿಗುಣಃ ಪರ-ಧರ್ಮಾತ್ ಸ್ವನುಷ್ಠಿತಾತ್ । ಸ್ವ-ಧರ್ಮೇ ನಿಧನಂ ಶ್ರೇಯಃ ಪರ-ಧರ್ಮೋ ಭಯಾವಹಃ ॥
(ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಸ್ವಧರ್ಮ. ತನಗೆ ಹೇಳಿಸಿದ್ದಲ್ಲದ, ಬೇರೆಯವರಿಗೆ ಹೇಳಿದ ಕರ್ಮ ಪರಧರ್ಮ.) ಪರಧರ್ಮವನ್ನು ಚೆನ್ನಾಗಿ ನಡೆಸುವುದಕ್ಕಿಂತ ತಪ್ಪಾಗಿಯಾದರೂ ತನ್ನ ಧರ್ಮವನ್ನು ನಡೆಸುವುದು ತುಂಬಾ ಶ್ರೇಷ್ಠ. ಸ್ವಧರ್ಮವನ್ನು ನಡೆಸುತ್ತಾ ಸತ್ತರೂ ಒಳಿತೇ ಆಗಲಿದೆ. ಪರಕೀಯ ಧರ್ಮವು ಭಯವನ್ನುಂಟು ಮಾಡುವುದು.
ಅರ್ಜುನ ಉವಾಚ
36 ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ । ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ॥
ಅರ್ಜುನನು ಪ್ರಶ್ನಿಸುತ್ತಾನೆ - ಓ ವೃಷ್ಣಿವಂಶದ ಕೃಷ್ಣನೆ, ಕೆಟ್ಟದ್ದನ್ನು ನಡೆಸಬೇಕೆಂದು ಇಚ್ಛಿಸದಿದ್ದರೂ ಈ ಮನುಷ್ಯನು ಯಾವುದೋ ಬಲದಿಂದ ತಪ್ಪು ಮಾಡುತ್ತಾನೆ. ಅಂದರೆ ಇದು ಯಾರಿಂದ ಆದದ್ದು?
ಭಗವಾನ್ ಉವಾಚ
37 ಕಾಮ ಏಷಃ ಕ್ರೋಧ ಏಷಃ ರಜೋಗುಣ-ಸಮುದ್ಭವಃ । ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥
ಕೃಷ್ಣನು ಉತ್ತರಿಸುತ್ತಾನೆ - ರಜೋಗುಣದಿಂದ ಹುಟ್ಟುವ ಕಾಮವಿದು, ಕೋಪವಿದು - ಎಲ್ಲವನ್ನೂ ಕಬಳಿಸುವುದು. ಎಲ್ಲಾ ಪಾಪಾಚಾರಗಳನ್ನೂ ನಡೆಸುವುದು. ಇಲ್ಲಿ ಸಾಧನೆಯಲ್ಲಿ ಆಸೆಯನ್ನೂ ಸಿಟ್ಟನ್ನೂ ಶತ್ರುವನ್ನಾಗಿ ತಿಳಿ.
38 ಧೂಮೇನಾವ್ರಿಯತೇ ವಹ್ನಿಃ ಯಥಾದರ್ಶೋ ಮಲೇನ ಚ । ಯಥೋಲ್ಬೇನಾವೃತೋ ಗರ್ಭಃ ತಥಾ ತೇನೇದಮಾವೃತಮ್ ॥
ಹೊಗೆಯಿಂದ ಬೆಂಕಿ ಮುಚ್ಚಿದಂತೆ, ಕೊಳೆಯಿಂದ ಕನ್ನಡಿ ಮಸುಕಾದಂತೆ, ಗರ್ಭಕೋಶದಿಂದ ಭ್ರ್ರೂಣ ಆವರಿಸಿದಂತೆ, ಕಾಮದಿಂದ ಇದೆಲ್ಲವೂ ಆವರಿಸಲ್ಪಟ್ಟಿದೆ.
39 ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯ-ವೈರಿಣಾ । ಕಾಮ-ರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ ॥
ಓ ಕೌಂತೇಯನೆ, ಸಾಕೆನಿಸದ, ಪೂರ್ತಿಗೊಳಿಸಲಾಗದ ಕಾಮವು ಜ್ಞಾನಿಯ ನಿತ್ಯಶತ್ರುವಾಗಿ ಅವನ ಜ್ಞಾನವನ್ನು ಆಕ್ರಮಿಸುತ್ತದೆ.
40 ಇಂದ್ರಿಯಾಣಿ ಮನೋ ಬುದ್ಧಿಃ ಅಸ್ಯಾಧಿಷ್ಠಾನಮುಚ್ಯತೇ । ಏತೈರ್ವಿಮೋಹಯತ್ಯೇಷಃ ಜ್ಞಾನಮಾವೃತ್ಯ ದೇಹಿನಮ್ ॥
ಇಂದ್ರಿಯಗಳು, ಮನಸ್ ಮತ್ತು ಬುದ್ಧಿ ಕಾಮದ ತಾಣಗಳು. ಕಾಮವು ಇಲ್ಲಿದ್ದುಕೊಂಡೆ ಸಾಧಕನ ಜ್ಞಾನವನ್ನು ಆಕ್ರಮಿಸಿ ಆತನನ್ನು ತಪ್ಪುದಾರಿಗೆ ಎಳೆಯುತ್ತದೆ.
41 ತಸ್ಮಾತ್ ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ । ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನ-ವಿಜ್ಞಾನ-ನಾಶನಮ್ ॥
ಓ ಭರತವಂಶಶ್ರೇಷ್ಠನೆ, ನೀನು ಮೊದಲು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು, ಆತ್ಮನ ಮತ್ತು ಪರಮಾತ್ಮನ ಎಚ್ಚರವನ್ನು ಅಳಿಸುವ ಈ ಕೆಟ್ಟ ಕೆಲಸ ಮಾಡಿಸುವ ಕಾಮವನ್ನು ಹೊಡೆದು ಹೊರಗೆ ಹಾಕು.
42 ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ । ಮನಸ್ತಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ ॥
ಇಂದ್ರಿಯಗಳು ದೇಹಕ್ಕಿಂತ ಮಿಗಿಲು. ಇಂದ್ರಿಯಗಳಿಗಿಂತ ಮನಸ್ ಶ್ರೇಷ್ಠ. ಮನಸ್ಸಿಗಿಂತ ಬುದ್ಧಿ ಉತ್ತಮ. ಬುದ್ಧಿಗೂ ನಿಲುಕದ ಆಚಿನ ಸಂಗತಿ ದೇವರು.
43 ಏವಂ ಬುದ್ಧೇಃ ಪರಂ ಬುದ್ಧ್ವಾಸಂಸ್ತಭ್ಯಾತ್ಮಾನಮಾತ್ಮನಾ । ಜಹಿ ಶತ್ರುಂ ಮಹಾಬಾಹೋ ಕಾಮ-ರೂಪಂ ದುರಾಸದಮ್ ॥
ಓ ಮಹಾಬಾಹುವೆ, ಹೀಗೆ ಬುದ್ಧಿಗೂ ಎಟುಕದ ಪರಮಾತ್ಮನನ್ನು ತಿಳಿದು, ತನ್ನನ್ನು ತಾನೇ ಬೆಂಬಲಿಸಿ, ಬಹಳ ಪ್ರಯತ್ನದಿಂದ ವೈರಿಯಂತಿರುವ ಕಾಮನನ್ನು ಹೊಡೆದು ಹೊರಗೆ ಹಾಕು.

ಇತಿ ತೃತೀಯೋಽಧ್ಯಾಯಃ