ಅಥ ಚತುರ್ಥೋಽಧ್ಯಾಯಃ ಅಧ್ಯಾಯ ೪

1 ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ । ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್ ॥
ನಾಶ ಹೊಂದದ ಈ ಯೋಗವಿದ್ಯೆಯನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯ ತನ್ನ ಮಗನಾದ ವೈವಸ್ವತಮನುವಿಗೆ ಹೇಳಿದ್ದ. ಮನುವು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದ.
2 ಏವಂ ಪರಂಪರಾ-ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ । ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂ-ತಪ ॥
ಓ ತಿಳಿದವನೆ, ಹೀಗೆ ಒಬ್ಬರಿಂದೊಬ್ಬರು ಕಲಿತುಕೊಂಡು ಬಂದ ಈ ಯೋಗವನ್ನು ಜ್ಞಾನಿಗಳಾದ ದೊರೆಗಳು ತಿಳಿದಿದ್ದರು. ಈಗ ಈ ಯೋಗಮಾರ್ಗವು ಬಹಳ ಕಾಲ ಕಳೆದಿದ್ದರಿಂದ ಇಲ್ಲವಾಗಿದೆ.
3 ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ । ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥
ನೀನು ನನ್ನ ಭಕ್ತ ಮತ್ತು ಗೆಳೆಯನೆಂದು ನಾನು ನಿನಗೆ ಈಗ ಅದೇ ಹಿಂದಿನ ಯೋಗವನ್ನು ಹೇಳಿದೆ. ಇದು ತುಂಬಾ ಗುಟ್ಟಿನ ವಿಷಯ.
ಅರ್ಜುನ ಉವಾಚ
4 ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ । ಕಥಮೇತದ್ ವಿ-ಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥
ಅರ್ಜುನನು ಪ್ರಶ್ನಿಸುತ್ತಾನೆ - ನೀನು ಈಗ ಹುಟ್ಟಿದವನು. ಸೂರ್ಯ ಹಿಂದೆಯೆ ಹುಟ್ಟಿದ್ದಾನೆ. ನೀನು ಮೊದಲು ಇದನ್ನು ಹೇಳಿದ್ದೆಂದು ಹೇಗೆ ತಿಳಿಯಲಿ?
ಭಗವಾನ್ ಉವಾಚ
5 ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ । ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂ ತಪ ॥
ಕೃಷ್ಣನು ಉತ್ತರಿಸುತ್ತಾನೆ - ಓ ಅರ್ಜುನನೇ, ನಾನು ಬಹಳ ಬಾರಿ ಅವತರಿಸಿದ್ದೇನೆ. ನಿನಗೂ ಬಹಳ ಜನ್ಮಗಳಾಗಿವೆ. ನಾನು ಅದೆಲ್ಲವನ್ನು ತಿಳಿದಿದ್ದೇನೆ. ನೀನು ತಿಳಿದಿಲ್ಲ. ಈಗ ತಿಳಿ.
6 ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಽಪಿ ಸನ್ । ಪ್ರಕೃತಿಂ ಸ್ವಾಮಧಿಷ್ಠಾಯ ಸಂ-ಭವಾಮ್ಯಾತ್ಮ-ಮಾಯಯಾ ॥
ನನಗೆ ಹುಟ್ಟಿಲ್ಲ. ನನ್ನ ದೇಹಕ್ಕೆ ನಾಶವಾಗಲಿ, ವಿಕಾರವಾಗಲಿ ಇಲ್ಲ. ನಾನು ಎಲ್ಲ ಜಡ-ಜೀವಿಗಳಿಗೂ ದೊಡ್ಡ ದೊರೆ. ಹೀಗಿದ್ದರೂ ನಾನು ನನ್ನ ಇಚ್ಛೆಯಿಂದಲೇ ಜ್ಞಾನಸ್ವರೂಪದಿಂದ ಅವತರಿಸುವೆನು.
7 ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾಽಽತ್ಮಾನಂ ಸೃಜಾಮ್ಯಹಮ್ ॥
ಓ ಭಾರತನೆ, ಧರ್ಮಕ್ಕೆ ಹಾನಿ ಆದಾಗ ಮತ್ತೆ ಅಧರ್ಮ ಮೆರೆದಾಗ ನಾನು ಅವತರಿಸುತ್ತೇನೆ.
8 ಪರಿ-ತ್ರಾಣಾಯ ಸಾಧೂನಾಂ ವಿ-ನಾಶಾಯ ಚ ದುಷ್ಕೃತಾಮ್ । ಧರ್ಮ-ಸಂ-ಸ್ಥಾಪನಾರ್ಥಾಯ ಸಂ-ಭವಾಮಿ ಯುಗೇ-ಯುಗೇ ॥
ಸಜ್ಜನರನ್ನು ರಕ್ಷಿಸಲು, ದುರುಳರನ್ನು ಮುಗಿಸಲು, ಧರ್ಮವನ್ನು ಗಟ್ಟಿಯಾಗಿ ನೆಲೆಗೊಳಿಸಲು ನಾನು ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ.
9 ಜನ್ಮ ಕರ್ಮ ಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ವತಃ । ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ॥
ನನ್ನ ಈ ಬಗೆಯ ಪ್ರಶಸ್ತವಾದ ಹುಟ್ಟನ್ನು ಮತ್ತು ನನ್ನ ಲೀಲೆಗಳನ್ನು ತಪ್ಪಿಲ್ಲದೆ ತಿಳಿದವನು ದೇಹ ತೊರೆದ ಮೇಲೆ ಮರಳಿ ಹುಟ್ಟುವುದಿಲ್ಲ. ಓ ಅರ್ಜುನನೆ, ಅವನು ನನ್ನನ್ನೇ ಸೇರುತ್ತಾನೆ.
10 ವೀತ-ರಾಗ-ಭಯ-ಕ್ರೋಧಾಃ ಮನ್ಮಯಾ ಮಾಮುಪಾಶ್ರಿತಾಃ । ಬಹವೋ ಜ್ಞಾನ-ತಪಸಾ ಪೂತಾ ಮದ್ಭಾವಮಾಗತಾಃ ॥
ನನ್ನನ್ನು ಸರ್ವೋತ್ತಮನೆಂದು ತಿಳಿದ ಅನೇಕರು ನನ್ನನ್ನೇ ಆಶ್ರಯಿಸಿ ಆಸೆ-ಸಿಟ್ಟು-ಅಂಜಿಕೆಗಳಿಂದ ದೂರರಾಗಿದ್ದಾರೆ. ಜ್ಞಾನಸಾಧನೆಯಿಂದ ಶುದ್ಧ ಮನಸ್ಕರಾಗಿ ನನ್ನನ್ನು ಸೇರಿದ್ದಾರೆ.
11 ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ । ಮಮ ವರ್ತ್ಮಾನು-ವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥
ಓ ಪಾರ್ಥನೆ, ನನ್ನನ್ನು ಯಾವ ರೀತಿಯಲ್ಲಿ ಸೇವೆಗೈಯುವರೊ ಹಾಗೆಯೇ ನಾನು ಅವರನ್ನು ಅನುಗ್ರಹಿಸುತ್ತೇನೆ. ಎಲ್ಲಾ ಮನುಷ್ಯರೂ ನನ್ನ ನಡೆಯನ್ನೆ ಅನುಸರಿಸುತ್ತಾರೆ.
12 ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ । ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮ-ಜಾ ॥
ಕರ್ಮಗಳ ಫಲವನ್ನು ಬಯಸಿ ಈ ಲೋಕದಲ್ಲಿ ಬಗೆಬಗೆಯ ದೇವತೆಗಳನ್ನು ಆರಾಧಿಸುತ್ತಾರೆ. ನಿಶ್ಚಿತವಾಗಿಯೂ ಇಲ್ಲಿ ಕರ್ಮದಿಂದ ಫಲಪ್ರಾಪ್ತಿ ಬೇಗನೆ ಆಗುತ್ತದೆ.
13 ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ-ಕರ್ಮ-ವಿಭಾಗಶಃ । ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥
ತ್ರಿಗುಣಗಳ ಮತ್ತು ಕರ್ಮಗಳ ವ್ಯತ್ಯಾಸದಲ್ಲಿ ನಾನು ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ. ನಾನು ಅದನ್ನು ಮಾಡಿದವನೆಂದು ತಿಳಿ ಮತ್ತು ನನ್ನನ್ನು ಯಾರೂ ನಿರ್ಮಿಸಿದವರು ಇಲ್ಲ. ಏಕೆಂದರೆ ನಾನು ವಿಕಾರವಿಲ್ಲದವನು.
14 ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮ-ಫಲೇ ಸ್ಪೃಹಾ । ಇತಿ ಮಾಂ ಯೋಽಭಿ-ಜಾನಾತಿ ಕರ್ಮಭಿರ್ನ ಸ ಬಧ್ಯತೇ ॥
ನನಗೆ ಕರ್ಮಗಳ ಲೇಪವಿಲ್ಲ. ನನಗೆ ಕರ್ಮಫಲದ ಆಸೆಯೂ ಇಲ್ಲ. ಹೀಗೆ ನನ್ನನ್ನು ತಿಳಿದವನು ಕರ್ಮದ ಬಂಧನದಲ್ಲಿ ಸಿಲುಕುವುದಿಲ್ಲ.
15 ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ । ಕುರು ಕರ್ಮೈವ ತಸ್ಮಾತ್ ತ್ವಂ ಪೂರ್ವೈಃ ಪೂರ್ವ-ತರಂ ಕೃತಮ್ ॥
ಹೀಗೆ ತಿಳಿದೇ ಹಿಂದಿನವರು ಮೋಕ್ಷವನ್ನು ಬಯಸಿ ಕರ್ಮವನ್ನು ಮಾಡಿದ್ದರು. ಆದ್ದರಿಂದ ನೀನೂ ಹಿಂದಿನವರು ಮಾಡಿದ, ಹಿಂದಿನಿಂದ ಬಂದ ಕರ್ಮವನ್ನೇ ಮಾಡು.
16 ಕಿಂ ಕರ್ಮ ಕಿಮಕರ್ಮೇತಿ ಕವಯೋಽಪ್ಯತ್ರ ಮೋಹಿತಾಃ । ತತ್ ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞತ್ವಾ ಮೋಕ್ಷ್ಯಸೇಽಶುಭಾತ್ ॥
ಕರ್ಮ ಯಾವುದು? ಅಕರ್ಮ ಯಾವುದು? ಎಂಬ ವಿಷಯದಲ್ಲಿ ತಿಳಿದವರೂ ಗೊಂದಲಪಡುವರು. ಆದ್ದರಿಂದ ಕರ್ಮ ಯಾವುದೆಂದು ನಿನಗೆ ಹೇಳುತ್ತೇನೆ. ನೀನು ತಿಳಿದರೆ ಕೆಡುಕಿನಿಂದ ಪಾರಾಗುವೆ.
17 ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿ-ಕರ್ಮಣಃ । ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ॥
ಕರ್ಮ (ಸ್ವ-ವಿಹಿತ-ವೃತ್ತಿ), ವಿಕರ್ಮ (ಮಾಡಬಾರದ ಕೆಲಸ) ಮತ್ತು ಅಕರ್ಮ (ಕರ್ಮತ್ಯಾಗ) ಈ ಮೂರನ್ನೂ ನಮ್ಮಿಂದ ತಿಳಿಯಬೇಕು. ಕರ್ಮದ ಬಗ್ಗೆ ನಿಖರವಾಗಿ ತಿಳಿಯುವುದು ತುಂಬಾ ಕಷ್ಟವೆ.
18 ಕರ್ಮಣ್ಯಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ । ಸ ಬುದ್ಧಿ-ಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನ-ಕರ್ಮ-ಕೃತ್ ॥
ತನ್ನಲ್ಲಿ ಮಾಡಿದ ಆ ಕರ್ಮಗಳನ್ನು ಸ್ವತಂತ್ರವಾಗಿ ತಾನು ಮಾಡಿದ್ದಲ್ಲ ಎಂದು ತಿಳಿದವನು, ಕರ್ಮಬದ್ಧನಲ್ಲವಾದರೂ ಎಲ್ಲರ ಕರ್ಮಗಳನ್ನು ದೇವರು ಮಾಡುವನೆಂದು ತಿಳಿದವನು ಮನುಷ್ಯರಲ್ಲಿ ಬುದ್ಧಿಮಂತನು ಎನಿಸುವನು. ಕರ್ಮಯೋಗಿ ಈತ ಎಲ್ಲ ಕರ್ಮಗಳ ಫಲವನ್ನು ಪಡೆವನು.
19 ಯಸ್ಯ ಸರ್ವೇ ಸಮಾರಂಭಾಃ ಕಾಮ-ಸಂಕಲ್ಪ-ವರ್ಜಿತಾಃ । ಜ್ಞಾನಾಗ್ನಿ-ದಗ್ಧ-ಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ॥
ಫಲದ ಆಸೆ ಮತ್ತು ಕರ್ಮ ಮಾಡುವ ಇಚ್ಛೆ ಇವೆರಡನ್ನು ಬಿಟ್ಟು ಎಲ್ಲ ಕರ್ಮಗಳನ್ನು ಚೆನ್ನಾಗಿ ನಡೆಸುವವನ ಕರ್ಮಗಳು ಅವನನ್ನು ಬಂಧಿಸುವುದಿಲ್ಲ. ಆತನ ಅರಿವು ಬೆಂಕಿಯಂತೆ ಆತನ ಕರ್ಮಗಳ ಲೋಪ-ದೋಷಗಳನ್ನೆಲ್ಲ ಸುಟ್ಟುಹಾಕಲಿದೆ. ಈತನನ್ನೆ ತಿಳಿದವರು ಪಂಡಿತನೆಂದು ಹೇಳುವರು.
20 ತ್ಯಕ್ತ್ವಾ ಕರ್ಮ-ಫಲಾಸಂಗಂ ನಿತ್ಯ-ತೃಪ್ತೋ ನಿರಾಶ್ರಯಃ । ಕರ್ಮಣ್ಯಭಿ-ಪ್ರವೃತ್ತೋಽಪಿ ನೈವ ಕಿಂಚಿತ್ ಕರೋತಿ ಸಃ ॥
ಕರ್ಮದ ಫಲದ ಅಪೇಕ್ಷೆ ಬಿಟ್ಟು ದೇವರು ನೀಡಿದ್ದರಲ್ಲಿ ತೃಪ್ತಿಪಟ್ಟು ಬೇರೆ ಯಾರ ಹಂಗೂ ಇರದೆ ಸ್ವಕರ್ಮವನ್ನು ಬಿಡದೆ ಮಾಡುತ್ತಿದ್ದರೂ ಆತ ಏನು ಮಾಡಿಲ್ಲದಂತೆಯೆ ಸರಿ.
21 ನಿರಾಶೀರ್ಯತ-ಚಿತ್ತಾತ್ಮಾ ತ್ಯಕ್ತ-ಸರ್ವ-ಪರಿಗ್ರಹಃ । ಶಾರೀರಂ ಕೇವಲಂ ಕರ್ಮ ಕುರ್ವನ್ ನಾಽಪ್ನೋತಿ ಕಿಲ್ಬಿಷಮ್ ॥
ಗಟ್ಟಿಮನಸ್ಸು ಮಾಡಿ ಆಸೆ ತೊರೆದು, ಯಾರಿಂದಲೂ ಏನನ್ನೂ ಪಡೆಯದೆ, ತನ್ನ ದೇಹಯಾತ್ರೆಗಷ್ಟೆ ನಿತ್ಯಕರ್ಮವನ್ನು ಮಾಡುವವನು (ಕರ್ಮದಲ್ಲಾದ) ಪಾಪವನ್ನು ಪಡೆಯುವುದಿಲ್ಲ.
22 ಯದೃಚ್ಛಾ-ಲಾಭ-ಸಂತುಷ್ಟೋ ದ್ವಂದ್ವಾತೀತೋ ವಿ-ಮತ್ಸರಃ । ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಽಪಿ ನ ನಿ-ಬದ್ಧ್ಯತೇ ॥
ದೇವರು ನೀಡಿದ್ದರಲ್ಲಿ ತೃಪ್ತಿಪಟ್ಟವನು, ಬೇಕು-ಬೇಡಗಳಲ್ಲಿ ಗೊಂದಲ ಇಲ್ಲದವನು, ಹೊಟ್ಟೆಕಿಚ್ಚು ಪಡದವನು, ಕಾರ್ಯ ಆಗಲಿ-ಆಗದಿರಲಿ ವಿಕಾರಗೊಳ್ಳದವನು, ಏನು ಕರ್ಮ ಮಾಡಿದರೂ ಕರ್ಮಬಂಧನಕ್ಕೆ ಒಳಗಾಗನು.
23 ಗತ-ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತ-ಚೇತಸಃ । ಯಜ್ಞಾಯಾಽಚರತಃ ಕರ್ಮ ಸಮಗ್ರಂ ಪ್ರವಿ-ಲೀಯತೇ ॥
ಫಲದಾಸೆ ಬಿಟ್ಟು ದೇಹಾಭಿಮಾನವಿಲ್ಲದೆ ದೇವರ ನೆನಪಿನಲ್ಲಿ ದೇವರ ಸೇವೆಯೆಂದು ಕರ್ಮ ಮಾಡುವವನ ಎಲ್ಲ ಕರ್ಮ ನಾಶವಾಗಲಿದೆ (ಆತನಿಗೆ ಲೇಪವಿರದು)
24 ಬ್ರಹ್ಮಾರ್ಪಣಂ ಬ್ರಹ್ಮ-ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ । ಬ್ರಹ್ಮೆೈವ ತೇನ ಗಂತವ್ಯಂ ಬ್ರಹ್ಮ-ಕರ್ಮ-ಸಮಾಧಿನಾ ॥
ದೇವರ ಪ್ರತೀಕವಾದ ಬೆಂಕಿಯಲ್ಲಿ ದೇವರ ಪ್ರೇರಣೆಯಿಂದಲೇ ಹೋಮಿಸಿದ ದೇವರ ಅಧೀನವಾದ ಸೊತ್ತು-ಹವಿಸ್ಸೆಲ್ಲವೂ ದೇವರಿಗೇನೇ ಸಮರ್ಪಿತವಾಗಲಿದೆ. ದೇವರ ಎಚ್ಚರದಲ್ಲಿ ಮಾಡಿದ ದೇವರ ಸೇವಾರೂಪಕರ್ಮವೂ ದೇವರನ್ನೇ ಸೇರಲಿದೆ.
25 ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ । ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪ-ಜುಹ್ವತಿ ॥
ಕೆಲವರು ಯೋಗಿಗಳು ದೇವರನ್ನೇ ಯಜ್ಞವೆಂದು ಅಂತರಂಗದಲ್ಲಿ ಆರಾಧನೆ ನಡೆಸುತ್ತಾರೆ. ಇತರರು ದೇವರ ಪ್ರತೀಕವಾಗಿ ಬೆಂಕಿಯಲ್ಲಿ ಬಾಹ್ಯದಲ್ಲಿ ಯಾಗರೂಪದಲ್ಲಿ ಆಹುತಿ ನೀಡಿ ಯಜ್ಞನಾರಾಯಣನನ್ನು ಉಪಾಸನೆಗೈಯುತ್ತಾರೆ.
26 ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂ-ಯಮಾಗ್ನಿಷು ಜುಹ್ವತಿ । ಶಬ್ದಾದೀನ್ ವಿಷಯಾನನ್ಯೇ ಇಂದ್ರಿಯಾಗ್ನಿಷು ಜುಹ್ವತಿ ॥
ಕೆಲವರು ವಿಷಯಗಳನ್ನು ಇಂದ್ರಿಯಗಳಿಗೆ ನೀಡದವರು, ವಿಷಯಗಳೆಡೆಗೆ ಇಂದ್ರಿಯಗಳನ್ನು ಹೋಗದಂತೆ ನಿಯಂತ್ರಣವೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ. ಇನ್ನು ಕೆಲವರು ಕಿವಿ, ಕಣ್ಣು ಮುಂತಾದ ಇಂದ್ರಿಯಗಳನ್ನೇ ಬೆಂಕಿ ಎಂದು ಭಾವಿಸಿ, ಶಬ್ದ ರೂಪ ಮುಂತಾದ ವಿಷಯಗಳನ್ನು ಹೋಮಿಸುತ್ತಾರೆ.
27 ಸರ್ವಾಣೀಂದ್ರಿಯ-ಕರ್ಮಾಣಿ ಪ್ರಾಣ-ಕರ್ಮಾಣಿ ಚಾಪರೇ । ಆತ್ಮ-ಸಂಯಮ-ಯೋಗಾಗ್ನೌ ಜುಹ್ವತಿ ಜ್ಞಾನ-ದೀಪಿತೇ ॥
ಮತ್ತೆ ಕೆಲವರು ಇಂದ್ರಿಯಕರ್ಮಗಳೆಲ್ಲವನ್ನೂ ಪ್ರಾಣವಾಯುವಿನ ಚೇಷ್ಟೆಗಳನ್ನೂ ಜ್ಞಾನದಿಂದ ಚೆನ್ನಾಗಿ ಉರಿವ ಆತ್ಮನಿಗ್ರಹದ ಯೋಗಸಾಧನೆಯೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ.
28 ದ್ರವ್ಯ-ಯಜ್ಞಾಸ್ತಪೋ-ಯಜ್ಞಾಃ ಯೋಗ-ಯಜ್ಞಾಸ್ತಥಾ ಪರೇ । ಸ್ವಾಧ್ಯಾಯ-ಜ್ಞಾನ-ಯಜ್ಞಾಶ್ಚ ಯತಯಃ ಸಂಶಿತ-ವ್ರತಾಃ ॥
ಕೆಲವರು ಸಾಕ್ಷಾತ್ತಾಗಿಯೇ ಬೆಂಕಿಯಲ್ಲಿ ಬಗೆಬಗೆಯ ವಸ್ತುಗಳನ್ನು ಹೋಮಿಸಿ ಯಜ್ಞ ನಡೆಸುವರು. ವ್ರತೋಪವಾಸನಿಯಮಗಳೆ ಕೆಲವರ ಯಜ್ಞವಾಗಿದೆ. ಮತ್ತಿತರರು ಸ್ವಕರ್ಮವನ್ನೇ ಯಜ್ಞವಾಗಿಸಿದ್ದಾರೆ. (ಹಲವರು) ಪ್ರಯತ್ನಪಟ್ಟು ನಡೆಸುವ ಶಾಸ್ತ್ರಾಧ್ಯಯನವು ಯಜ್ಞ. ಪಾಠ-ಪ್ರವಚನವಂತು ಉತ್ತಮ ಯಜ್ಞ.
29 ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾ ಪರೇ । ಪ್ರಾಣಾಪಾನ-ಗತೀ ರುದ್ಧ್ವಾ ಪ್ರಾಣಾಯಾಮ-ಪರಾಯಣಾಃ ॥
ಕೆಲವರು ಪ್ರಾಣಾಯಾಮವನ್ನು ಚೆನ್ನಾಗಿ ತಿಳಿದವರು ಪ್ರಾಣ ಮತ್ತು ಅಪಾನದ ನಡೆಯನ್ನು ತಡೆಹಿಡಿದು ಅಪಾನದಲ್ಲಿ ಪ್ರಾಣವನ್ನು ಹೋಮಿಸುತ್ತಾರೆ. ಹಾಗೆಯೇ ಪ್ರಾಣದಲ್ಲಿ ಅಪಾನವನ್ನು ಹೋಮಿಸುತ್ತಾರೆ.
30 ಅಪರೇ ನಿಯತಾಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ । ಸರ್ವೇಽಪ್ಯೇತೇ ಯಜ್ಞ-ವಿದೋ ಯಜ್ಞ-ಕ್ಷಪಿತ-ಕಲ್ಮಷಾಃ ॥
ಕೆಲವರು ಉಪವಾಸವಿರುವವರು ಕಿರಿಯರಾದ ಇಂದ್ರಿಯೇಶರನ್ನು ಹಿರಿಯರಾದ ಇಂದ್ರಿಯೇಶರಲ್ಲಿ ಲಯ(ಹೋಮ)ವನ್ನು ಚಿಂತನೆ ಮಾಡುವರು. ಇವರೆಲ್ಲರೂ ಯಜ್ಞವನ್ನು ಬಲ್ಲವರು, ಯಜ್ಞದಿಂದ ಪಾಪವನ್ನು ಕಳೆದುಕೊಂಡವರು.
31 ಯಜ್ಞ-ಶಿಷ್ಟಾಮೃತ-ಭುಜೋ ಯಾಂತಿ ಬ್ರಹ್ಮ ಸನಾತನಮ್ । ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರು-ಸತ್ತಮ ॥
ಯಜ್ಞದಲ್ಲಿ ಅರ್ಪಿಸಿ ಉಳಿದದ್ದು ಅಮೃತ ಎನಿಸಿದೆ. ಆ ಯಜ್ಞಶೇಷವನ್ನು ದೇವರ ಪ್ರಸಾದವನ್ನು ತಿನ್ನುವವರು ಶಾಶ್ವತವಾದ ದೇವನಲ್ಲಿಗೆ ತೆರಳುತ್ತಾರೆ. ಓ ಅರ್ಜುನನೆ, ದೇವರ ಆರಾಧನೆ ಎನಿಸುವ ಯಜ್ಞವನ್ನು ಮಾಡದವನಿಗೆ ಈ ಲೋಕವೇ ಇಲ್ಲ, ಪರಲೋಕ ಹೇಗೆ ಸಿಗಲಿದೆ?
32 ಏವಂ ಬಹು-ವಿಧಾ ಯಜ್ಞಾಃ ವಿತತಾ ಬ್ರಹ್ಮಣೋ ಮುಖೇ । ಕರ್ಮ-ಜಾನ್ ವಿದ್ಧಿ ತಾನ್ ಸರ್ವಾನ್ ಏವಂ ಜ್ಞಾತ್ವಾ ವಿಮೋಕ್ಷ್ಯಸೇ ॥
ಹೀಗೆ ಬಹಳ ರೀತಿಯ ಯಜ್ಞಗಳು ದೇವರ ಬಾಯಲ್ಲಿ ನೆಲೆಗೊಂಡಿವೆ. ಎಲ್ಲವೂ ಕರ್ಮದಿಂದಲೇ ಆಗುವಂಥವು ಎಂದೇ ತಿಳಿ. ಹೀಗೆ ತಿಳಿದಾಗ ಬಿಡುಗಡೆಯನ್ನು ಪಡೆಯುವೆ.
33 ಶ್ರೇಯಾನ್ ದ್ರವ್ಯ-ಮಯಾದ್ ಯಜ್ಞಾತ್ ಜ್ಞಾನ-ಯಜ್ಞಃ ಪರಂ-ತಪ । ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿ-ಸಮಾಪ್ಯತೇ ॥
ಓ ಶ್ರೇಷ್ಠತಪಸ್ವಿಯೆ, ದ್ರವ್ಯಗಳ ಹೋಮಕ್ಕಿಂತ ಜ್ಞಾನಯಜ್ಞ ಶ್ರೇಷ್ಠ. ಓ ಪಾರ್ಥನೆ, ಎಲ್ಲ ಕರ್ಮವೂ ಜ್ಞಾನದಲ್ಲಿಯೇ ಪೂರ್ತಿ ಆಗಲಿದೆ.
34 ತದ್ ವಿದ್ಧಿ ಪ್ರಣಿಪಾತೇನ ಪರಿ-ಪ್ರಶ್ನೇನ ಸೇವಯಾ । ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವ-ದರ್ಶಿನಃ ॥
ದಂಡಪ್ರಣಾಮಗೈದು, ಮತ್ತೆಮತ್ತೆ ಪ್ರಶ್ನೆ ಕೇಳಿ, ಗುರುಸೇವೆಯಿಂದ ಆ ಜ್ಞಾನವನ್ನು ತಿಳಿ. ಎಲ್ಲವನ್ನು ಸರಿಯಾಗಿ ಕಂಡವರು ಜ್ಞಾನಿಗಳು ನಿನಗೆ ಆ ತಿಳಿವನ್ನು ತಿಳಿಸಿಕೊಡುತ್ತಾರೆ
35 ಯಜ್ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ । ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ ॥
ಓ ಪಾಂಡವನೆ, ಹಾಗೆ ತಿಳಿದಾಗ ಮತ್ತೆ ತಪ್ಪು ಚಿಂತನೆಗಳಿಗೆ ಒಳಗಾಗುವುದಿಲ್ಲ. ಇದರಿಂದಾಗಿ ವ್ಯಾಪ್ತನಾದ ನನ್ನಲ್ಲಿ ಎಲ್ಲವನ್ನು ಪೂರ್ತಿಯಾಗಿ ಕಾಣಬಲ್ಲೆ.
36 ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ-ಕೃತ್ತಮಃ । ಸರ್ವಂ ಜ್ಞಾನ-ಪ್ಲವೇನೈವ ವೃಜಿನಂ ಸಂ-ತರಿಷ್ಯಸಿ ॥
ಎಲ್ಲ ಪಾಪಿಗಳಿಗಿಂತಲೂ ಹೆಚ್ಚಿನ ಪಾಪಿ ನೀನೆ ಆಗಿದ್ದರೂ, ಎಲ್ಲ ಪಾಪಗಳನ್ನೂ ಜ್ಞಾನವೆಂಬ ದೋಣಿಯಿಂದ ದಾಟಿಬಿಡುವೆ.
37 ಯಥೈಧಾಂಸಿ ಸಮಿದ್ಧೋಽಗ್ನಿಃ ಭಸ್ಮಸಾತ್ ಕುರುತೇಽರ್ಜುನ । ಜ್ಞಾನಾಗ್ನಿಃ ಸರ್ವ-ಕರ್ಮಾಣಿ ಭಸ್ಮಸಾತ್ ಕುರುತೇ ತಥಾ ॥
ಓ ಅರ್ಜುನನೆ, ಜೋರಾಗಿ ಉರಿಯುವ ಬೆಂಕಿ ಕಟ್ಟಿಗೆಗಳನ್ನೆಲ್ಲ ಸುಟ್ಟುಬಿಡುವ ಹಾಗೆ ಜ್ಞಾನವೆಂಬ ಬೆಂಕಿ ಕರ್ಮಗಳನ್ನೆಲ್ಲ ಸುಟ್ಟು ಭಸ್ಮ ಮಾಡುತ್ತದೆ.
38 ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ । ತತ್ ಸ್ವಯಂ ಯೋಗ-ಸಂಸಿದ್ಧಃ ಕಾಲೇನಾಽತ್ಮನಿ ವಿಂದತಿ ॥
ಈ ಲೋಕದಲ್ಲಿ ಜ್ಞಾನಕ್ಕೆ ಸರಿಯಾದ ಪವಿತ್ರವಾದ್ದು ಇನ್ನೊಂದಿಲ್ಲ. ಯೋಗಸಾಧನೆಯಿಂದ ಚೆನ್ನಾಗಿ ತಯಾರಾದವನು ಬಹಳ ಕಾಲದ ಬಳಿಕ ತನ್ನಲ್ಲಿಯೇ ಅಂಥ ಜ್ಞಾನವನ್ನು ಪಡೆಯುತ್ತಾನೆ.
39 ಶ್ರದ್ಧಾ-ವಾನ್ ಲಭತೇ ಜ್ಞಾನಂ ಮತ್ಪರಃ ಸಂ-ಯತೇಂದ್ರಿಯಃ । ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ ಅಚಿರೇಣಾಧಿ-ಗಚ್ಛತಿ ॥
ಇಂದ್ರಿಯಗಳನ್ನು ನಿಯಂತ್ರಿಸಿದವನು, ನಾನೇ ಸರ್ವೋತ್ತಮನೆಂಬ ಆಸ್ತಿಕನು ಜ್ಞಾನವನ್ನು ಹೊಂದುತ್ತಾನೆ. ಜ್ಞಾನವನ್ನು ಪಡೆದ ಕೂಡಲೆ ಉತ್ತಮ ಸುಖದ ಮುಕ್ತಿಯನ್ನು ಹೊಂದುವನು.
40 ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿ-ನಶ್ಯತಿ । ನಾಯಂ ಲೋಕೋಽಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ ॥
ತಿಳಿವು ಇಲ್ಲದವನು ನಾಸ್ತಿಕನು ಸಂಶಯ ಸ್ವಭಾವದವನು ನಾಶ ಹೊಂದುತ್ತಾನೆ. ಬುದ್ಧಿಯಲ್ಲಿ ಸಂಶಯವನ್ನೇ ಕೊನೆಯವರೆಗೂ ಕಟ್ಟಿಕೊಂಡವನಿಗೆ ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ, ಸುಖವೂ ಇಲ್ಲ.
41 ಯೋಗ-ಸಂನ್ಯಸ್ತ-ಕರ್ಮಾಣಂ ಜ್ಞಾನ-ಸಂಛಿನ್ನ-ಸಂಶಯಮ್ । ಆತ್ಮ-ವಂತಂ ನ ಕರ್ಮಾಣಿ ನಿ-ಬಧ್ನಂತಿ ಧನಂ-ಜಯ ॥
ಓ ಧನಂಜಯನೆ, ತಿಳಿವಿನಿಂದ ಸಂಶಯಗಳನ್ನು ಕಳೆದು, ಕರ್ಮಫಲದ ಆಸೆ ತೊರೆದು, ದೇವರ ಸೇವೆಯೆಂದು ಕರ್ಮಗಳನ್ನು ಮಾಡುವವನನ್ನು ಕರ್ಮಗಳು ಬಂಧಿಸುವುದಿಲ್ಲ
42 ತಸ್ಮಾದಜ್ಞಾನ-ಸಂಭೂತಂ ಹೃತ್-ಸ್ಥಂ ಜ್ಞಾನಾಸಿನಾಽಽತ್ಮನಃ । ಛಿತ್ವೈನಂ ಸಂಶಯಂ ಯೋಗಂ ಆತಿಷ್ಠೋತ್ತಿಷ್ಠ ಭಾರತ ॥
ಹೀಗಾಗಿ ಅಜ್ಞಾನದಿಂದಲೆ ಹುಟ್ಟಿಕೊಂಡ ನಿನ್ನ ಮನಸ್ಸಿನಲ್ಲಿ ನೆಲೆಸಿದ ಸಂಶಯವನ್ನು ಜ್ಞಾನ ಎಂಬ ಖಡ್ಗದಿಂದ ಕತ್ತರಿಸಿ ಜ್ಞಾನಯೋಗವನ್ನು ನಡೆಸು. ಓ ಭಾರತನೆ, ಎದ್ದು ನಿಲ್ಲು.

ಇತಿ ಚತುರ್ಥೋಽಧ್ಯಾಯಃ