|
ಅರ್ಜುನ
ಉವಾಚ
|
|
1
|
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸು-ನಿಶ್ಚಿತಮ್ ॥ |
|
ಅರ್ಜುನನು ಪ್ರಶ್ನಿಸುತ್ತಾನೆ - ಓ ಕೃಷ್ಣನೇ, ಕರ್ಮಸಂನ್ಯಾಸವನ್ನು ಒಮ್ಮೆ ಶ್ರೇಷ್ಠ ಎನ್ನುವಿ, ಮತ್ತೊಮ್ಮೆ ಕರ್ಮಯೋಗವನ್ನು ಶ್ರೇಷ್ಠ ಎನ್ನುವಿ. ಎರಡರಲ್ಲಿ ಅತಿಶ್ರೇಷ್ಠವಾದ ಒಂದನ್ನು ನನಗೆ ಖಚಿತವಾಗಿ ಹೇಳು. |
|
ಭಗವಾನ್
ಉವಾಚ
|
|
2
|
ಸಂನ್ಯಾಸಃ ಕರ್ಮ-ಯೋಗಶ್ಚ ನಿಃಶ್ರೇಯಸ-ಕರಾವುಭೌ ।
ತಯೋಸ್ತು ಕರ್ಮ-ಸಂನ್ಯಾಸಾತ್ ಕರ್ಮ-ಯೋಗೋ ವಿಶಿಷ್ಯತೇ ॥ |
|
ಕೃಷ್ಣ ಉತ್ತರಿಸುತ್ತಾನೆ - ಕರ್ಮಸಂನ್ಯಾಸವು ಮತ್ತು ಕರ್ಮಯೋಗವು ಎರಡೂ ಒಳ್ಳೆಯದನ್ನು ಮಾಡುವವುಗಳೆ. ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವೇ ಅತಿ ಶ್ರೇಷ್ಠವಾಗಿದೆ. |
|
3
|
ಜ್ಞೇಯಃ ಸ ನಿತ್ಯ-ಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ ಪ್ರಮುಚ್ಯತೇ ॥ |
|
ಕರ್ಮವನ್ನು ದ್ವೇಷಿಸದವ, ಕರ್ಮಫಲವನ್ನು ಬಯಸದವ ನಿಜವಾದ ಕರ್ಮಸಂನ್ಯಾಸಿ. ಓ ಮಹಾಬಾಹುವೆ, ದ್ವಂದ್ವವಿಲ್ಲದವನೆ ಸುಲಭವಾಗಿ ಕರ್ಮಬಂಧದಿಂದ ಬಿಡುಗಡೆ ಹೊಂದುತ್ತಾನೆ. |
|
4
|
ಸಾಂಖ್ಯ-ಯೋಗೌ ಪೃಥಗ್ ಬಾಲಾಃ ಪ್ರ-ವದಂತಿ ನ ಪಂಡಿತಾಃ ।
ಏಕಮಪ್ಯಾಸ್ಥಿತಃ ಸಮ್ಯಕ್ ಉಭಯೋರ್ವಿಂದತೇ ಫಲಮ್ ॥ |
|
ಜ್ಞಾನ ಮತ್ತು ಕರ್ಮ ಬೇರೆ ಬೇರೆ ಎಂದು ಹೇಳುವವರು ಶಾಸ್ತ್ರ ಚೆನ್ನಾಗಿ ತಿಳಿಯದವರು, ಪಂಡಿತರಲ್ಲ. ಒಂದನ್ನು ಚೆನ್ನಾಗಿ ನಡೆಸಿದವನು ಎರಡರ ಫಲವನ್ನು ಪಡೆಯುತ್ತಾನೆ. |
|
5
|
ಯತ್ ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ ಯೋಗೈರಪಿ ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥ |
|
ಜ್ಞಾನಯೋಗಿಗಳು ಪಡೆವ ತಾಣವನ್ನೆ ಕರ್ಮಯೋಗಿಗಳೂ ಪಡೆಯುತ್ತಾರೆ. ಜ್ಞಾನಯೋಗವನ್ನೂ ಕರ್ಮಯೋಗವನ್ನೂ ಒಂದೇ ಎಂದು ತಿಳಿದವನೇ ನಿಜವಾಗಿ ತಿಳಿದವನು. |
|
6
|
ಸಂ-ನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ ।
ಯೋಗ-ಯುಕ್ತೋ ಮುನಿರ್ಬ್ರಹ್ಮ ನ ಚಿರೇಣಾಧಿಗಚ್ಛತಿ ॥ |
|
ಓ ಮಹಾಬಾಹುವೆ, ದೇವರ ಪೂಜೆಯೆಂದು ಕರ್ಮ ಮಾಡುವ ಬದಲು ಕರ್ಮವನ್ನೇ ಬಿಡುವುದು ನರಕವನ್ನೆ ಕೊಡಲಿದೆ. ಅರಿವು ಪಡೆದು ಕರ್ಮ ಮಾಡುವವ ಕೂಡಲೇ ದೇವರನ್ನು ಪಡೆಯುತ್ತಾನೆ. |
|
7
|
ಯೋಗ-ಯುಕ್ತೋ ವಿ-ಶುದ್ಧಾತ್ಮಾ ವಿ-ಜಿತಾತ್ಮಾ ಜಿತೇಂದ್ರಿಯಃ ।
ಸರ್ವ-ಭೂತಾತ್ಮ-ಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ॥ |
|
ದೇಹಶುದ್ಧಿಯೊಡನೆ ಮನಸ್ಸನ್ನೂ ಇಂದ್ರಿಯಗಳನ್ನೂ ಗೆದ್ದವನು ಕರ್ಮಯೋಗದಲ್ಲಿ ತೊಡಗಿದರೆ, ಚರಾಚರ ವಿಶ್ವದ ಅಂತರ್ಯಾಮಿಯಾದ ದೇವರಲ್ಲಿ ಮನಸಿಟ್ಟು ಮಾಡಿದ ಕರ್ಮ ಅಂಟುವುದಿಲ್ಲ. |
|
8
|
ನೈವ ಕಿಂಚಿತ್ ಕರೋಮೀತಿ ಯುಕ್ತೋ ಮನ್ಯೇತ ತತ್ತ್ವ-ವಿತ್ ।
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ॥ |
|
9
|
ಪ್ರಲಪನ್ ವಿಸೃಜನ್ ಗೃಹ್ಣನ್ ಉನ್ಮಿಷನ್ ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ॥ |
|
ಕಾಣುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿನ್ನುವಾಗ, ಹೋಗುವಾಗ, ಮಲಗುವಾಗ, ಉಸಿರು ಬಿಡುವಾಗ, ಹೇಳುವಾಗ, ಬಿಟ್ಟಾಗ, ಹಿಡಿದಾಗ, ರೆಪ್ಪೆ ಬಿಟ್ಟಾಗ-ಮುಚ್ಚಿದಾಗ ಹೀಗೆಲ್ಲ ಇಂದ್ರಿಯಗಳ ವಿಷಯಗಳಲ್ಲಿ ಇಂದ್ರಿಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತವೆ ಎಂದು ತಿಳಿದು (ಯಥಾರ್ಥವನ್ನು ತಿಳಿದವನು) ಕೆಲಸ ಮಾಡುವಾಗ ಏನನ್ನಾದರೂ ನಾನೇ ಮಾಡುತ್ತೇನೆಂದು ತಿಳಿಯಬಾರದು. |
|
10
|
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ ಪದ್ಮ-ಪತ್ರಮಿವಾಂಭಸಾ ॥ |
|
ಕಮಲದ ಎಲೆಯು ನೀರಿನಲ್ಲಿದ್ದರೂ ನೀರನ್ನು ಅಂಟಿಸಿಕೊಳ್ಳದಂತೆ, ಫಲದ ಆಸೆ ತೊರೆದು ಕರ್ಮ ಮಾಡುವವನು ಕರ್ಮಗಳನ್ನು ದೇವರಿಗೆ ಒಪ್ಪಿಸಿದಾಗ ಪಾಪಕ್ಕೆ ಅಂಟಿಕೊಳ್ಳನು. |
|
11
|
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾಽಽತ್ಮ-ಶುದ್ಧಯೇ ॥ |
|
ಯೋಗಿಗಳು ತಮ್ಮ ಒಳಿತಿಗಾಗಿ ಫಲದ ಆಸೆ ಬಿಟ್ಟು, ದೇಹ-ಮನಸ್-ಬುದ್ಧಿ ಮತ್ತು ಕೈ-ಬಾಯಿ ಮುಂತಾದ ಇಂದ್ರಿಯಗಳಿಂದ ಕರ್ಮ ಮಾಡುತ್ತಾರೆ. |
|
12
|
ಯುಕ್ತಃ ಕರ್ಮ-ಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮ-ಕಾರೇಣ ಫಲೇ ಸಕ್ತೋ ನಿ-ಬದ್ಧ್ಯತೇ ॥ |
|
ಕರ್ಮಫಲವನ್ನು ತೊರೆದು ಕೆಲಸ ಮಾಡುವವನು ಕೊನೆಯವರೆಗೂ ನೆಮ್ಮದಿಯಿಂದ ಇರುತ್ತಾನೆ. ಫಲದ ಆಸೆ ಹೊತ್ತು ಕೆಲಸ ಮಾಡಿದವ ಕರ್ಮಬಂಧನಕ್ಕೆ ಒಳಗಾಗುವನು. |
|
13
|
ಸರ್ವ-ಕರ್ಮಾಣಿ ಮನಸಾ ಸನ್ನ್ಯಸ್ಯಾಽಸ್ತೇ ಸುಖಂ ವಶೀ ।
ನವ-ದ್ವಾರೇ ಪುರೇ ದೇಹೀ ನೈವ ಕುರ್ವನ್ ನ ಕಾರಯನ್ ॥ |
|
ಮನಸಾರೆ ಫಲದ ಆಸೆ ಬಿಟ್ಟು ಇಂದ್ರಿಯಗಳನ್ನು ಗೆದ್ದವನು ಈ ಒಂಭತ್ತು ಬಾಗಿಲಿನ ದೇಹದಲ್ಲಿ ಏನೂ ಮಾಡದೆಯೂ ಏನನ್ನೂ ಮಾಡಿಸದೆಯೂ ಸುಖವಾಗಿ ಇರುತ್ತಾನೆ. |
|
14
|
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ ।
ನ ಕರ್ಮ-ಫಲ-ಸಂಯೋಗಂ ಸ್ವ-ಭಾವಸ್ತು ಪ್ರ-ವರ್ತತೇ ॥ |
|
ಜೀವನು ತನ್ನ ಸ್ವಭಾವದಂತೆ ಕರ್ಮ ಮಾಡುತ್ತಾನೆ. ಜೀವನಿಗೆ ಕರ್ಮದಲ್ಲಿ, ಕರ್ಮಫಲದಲ್ಲಿ, ಕರ್ಮ ನಡೆಸುವಲ್ಲಿ ಸ್ವಾತಂತ್ರ‍್ಯವನ್ನು ದೇವರು ನೀಡಲಿಲ್ಲ. |
|
15
|
ನಾಽದತ್ತೇ ಕಸ್ಯ-ಚಿತ್ ಪಾಪಂ ನ ಚೈವ ಸು-ಕೃತಂ ವಿಭುಃ ।
ಅಜ್ಞಾನೇನಾಽವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥ |
|
ಯಾವ ವ್ಯಕ್ತಿಯೂ ಯಾರೊಬ್ಬನ ಕೆಟ್ಟ ಕರ್ಮವನ್ನಾಗಲಿ ಒಳ್ಳೆಯ ಕೆಲಸವನ್ನಾಗಲಿ ನಡೆಸಿಕೊಡಲಾರ. ಜ್ಞಾನವು ಅಜ್ಞಾನದಿಂದ ಆವರಿಸಲ್ಪಟ್ಟಿದೆ. ಇದರಿಂದ ಜನರು ಗೊಂದಲಪಡುತ್ತಾರೆ. |
|
16
|
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ಜ್ಞಾನಂ ಪ್ರ-ಕಾಶಯತಿ ತತ್ ಪರಮ್ ॥ |
|
ಯಾರು ತಮ್ಮ ಅಜ್ಞಾನವನ್ನು ಜ್ಞಾನದಿಂದ ನಾಶಪಡಿಸುತ್ತಾರೋ ಅವರ ಜ್ಞಾನವು ಸೂರ್ಯನಂತೆ ಬೆಳಗಿ ದೇವರನ್ನು ಚೆನ್ನಾಗಿ ತಿಳಿಸುತ್ತದೆ. |
|
17
|
ತದ್ಬುದ್ಧಯಸ್ತದಾತ್ಮಾನಃ ತನ್ನಿಷ್ಠಾಸ್ತತ್ಪರಾಯಣಾಃ ।
ಗಚ್ಛಂತ್ಯಪುನರಾವೃತ್ತಿಂ ಜ್ಞಾನ-ನಿರ್ಧೂತ-ಕಲ್ಮಷಾಃ ॥ |
|
ಬುದ್ಧಿಯಲ್ಲಿ ದೇವರನ್ನೇ ಹೊತ್ತವರು, ಅವನೇ ಸ್ವಾಮಿ ಎಂದು ನಂಬಿದವರು, ಆತನ ಧರ್ಮದಲ್ಲಿಯೆ ಆಸಕ್ತರು, ಅವನನ್ನೇ ಶರಣಾದವರು, ಅವನ ಎಚ್ಚರದಿಂದ ಅಜ್ಞಾನದಿಂದಾದ ಸಂಸಾರವನ್ನೇ ಕಳೆದುಕೊಂಡು ಮತ್ತೆ ಹುಟ್ಟಿಬಾರದ ಮೋಕ್ಷವನ್ನು ಪಡೆಯುತ್ತಾರೆ. |
|
18
|
ವಿದ್ಯಾ-ವಿನಯ-ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮ-ದರ್ಶಿನಃ ॥ |
|
ವಿದ್ಯೆ-ವಿನಯಗಳುಳ್ಳ ಬ್ರಹ್ಮಜ್ಞಾನಿ, ದನ, ಆನೆ, ನಾಯಿ, ಕೆಟ್ಟ ಆಹಾರ ಸೇವಿಸುವವ, ಎಲ್ಲರಲ್ಲೂ ಒಂದೇ ರೀತಿಯಾಗಿ ದೇವರನ್ನು ತಿಳಿದವರು ಕಾಣುವರು. |
|
19
|
ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ ।
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥ |
|
ಒಂದೇ ರೀತಿಯಾದ ದೇವರನ್ನು ತಿಳಿದವರು ಈ ಲೋಕದಲ್ಲಿಯೆ ಸಂಸಾರದ ಹುಟ್ಟನ್ನು ಗೆದ್ದವರು. ದೇವರು ಒಂದೇ ರೀತಿಯಾಗಿರುವುದೆಂದರೆ ಎಲ್ಲೆಡೆಯೂ ದೋಷವಿಲ್ಲದೆ ಇರುವುದು. ಆದ್ದರಿಂದ ಈ ಸಮಭಾವವನ್ನು ತಿಳಿದವರು ದೇವರಲ್ಲಿ ನೆಲೆನಿಂತವರು. |
|
20
|
ನ ಪ್ರ-ಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ ।
ಸ್ಥಿರ-ಬುದ್ಧಿರಸಮ್ಮೂಢೋ ಬ್ರಹ್ಮ-ವಿದ್ ಬ್ರಹ್ಮಣಿ ಸ್ಥಿತಃ ॥ |
|
ದೇವರಲ್ಲಿ ನೆಲೆನಿಂತವನು ದೇವರನ್ನು ತಿಳಿದವನು, ಒಳಿತನ್ನು ಪಡೆದಾಗ ಸಂಭ್ರಮಿಸಬಾರದು, ಕೆಟ್ಟದು ಆದಾಗ ಉದ್ವೇಗಗೊಳ್ಳಬಾರದು. ಬುದ್ಧಿ ಸ್ಥಿರವಾಗಿದ್ದು ಭಾರೀ ಗೊಂದಲಪಡಬಾರದು. |
|
21
|
ಬಾಹ್ಯ-ಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ ಸುಖಮ್ ।
ಸ ಬ್ರಹ್ಮ-ಯೋಗ-ಯುಕ್ತಾತ್ಮಾ ಸುಖಮಕ್ಷಯಮಶ್ನುತೇ ॥ |
|
ಇಂದ್ರಿಯಗಳ ವಿಷಯಗಳಲ್ಲಿ ಹೊರಗೆ ಆಸಕ್ತನಾಗದವನು ಒಳಗೆ ತನ್ನಲ್ಲೆ ಸುಖವನ್ನು ಪಡೆಯುತ್ತಾನೆ. ದೇವರ ಎಚ್ಚರದಲ್ಲಿ ಕರ್ಮ ನಡೆಸುವ ಸಾಧಕನು ಯಾವಾಗಲೂ ಸುಖವನ್ನು ಅನುಭವಿಸುತ್ತಾನೆ. |
|
22
|
ಯೇ ಹಿ ಸಂ-ಸ್ಪರ್ಶಜಾ ಭೋಗಾಃ ದುಃಖ-ಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥ |
|
ಕೌಂತೇಯನೆ, ಇಂದ್ರಿಯವಿಷಯಗಳ ಸುಖವು ದುಃಖವನ್ನೇ ಕೊಡಲಿದೆ. ಸುಖ ಆಗುತ್ತದೆ ಎಂದಾಗಲೆ ಮುಗಿದಿರುತ್ತದೆ. ತಿಳಿದವನು ವಿಷಯಗಳಲ್ಲಿ ಸುಖ ಹುಡುಕುವುದಿಲ್ಲ. |
|
23
|
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರ-ವಿಮೋಕ್ಷಣಾತ್ ।
ಕಾಮ-ಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ॥ |
|
ದೇಹ ಬಿಡುವ ಮೊದಲೆ, ಆಸೆಯ ಅಲೆಯನ್ನು ಸಿಟ್ಟಿನ ಭರವನ್ನು ಇಲ್ಲಿಯೆ ತಡೆಯಬಲ್ಲವನೆ ಯೋಗಿ, ಸುಖವುಳ್ಳ ವ್ಯಕ್ತಿ. |
|
24
|
ಯೋಽಂತಃ-ಸುಖೋಽಂತರಾರಾಮಃ ತಥಾಂಽತರ್ಜ್ಯೋತಿರೇವ ಯಃ ।
ಸ ಯೋಗೀ ಬ್ರಹ್ಮ ನಿರ್ಬಾಣಂ ಬ್ರಹ್ಮ-ಭೂತೋಽಧಿ-ಗಚ್ಛತಿ ॥ |
|
ಒಳಗೆ ಸುಖ ಪಡೆದವನು, ದೇವರ ನೆನಪಲ್ಲಿ ಆನಂದವಾಗಿರುವವನು, ದೇವರ ಅರಿವು ತುಂಬಿದವನು ಯೋಗಿಯು. ಆತ ದೇವರಲ್ಲಿ ನೆಲೆಗೊಂಡವನು. ಭೌತದೇಹ ಇಲ್ಲದ ದೇವರನ್ನೇ ಸೇರುತ್ತಾನೆ. |
|
25
|
ಲಭಂತೇ ಬ್ರಹ್ಮ ನಿರ್ಬಾಣಂ ಋಷಯಃ ಕ್ಷೀಣ-ಕಲ್ಮಷಾಃ ।
ಛಿನ್ನದ್ವೆೈಧಾ ಯತಾತ್ಮಾನಃ ಸರ್ವ-ಭೂತ-ಹಿತೇ ರತಾಃ ॥ |
|
ದ್ವಂದ್ವಗಳಿಗೆ ಒಳಗಾಗದವರು, ಅಜ್ಞಾನ ಕಳಕೊಂಡವರು, ದೇವರನ್ನು ತಿಳಿದವರು, ಚರಾಚರ ವಿಶ್ವಕ್ಕೆ ಒಳಿತನ್ನು ಬಯಸುವವರು, ಪ್ರಪಂಚಾತೀತನಾದ ದೇವರನ್ನು ಪಡೆವರು. |
|
26
|
ಕಾಮ-ಕ್ರೋಧ-ವಿಯುಕ್ತಾನಾಂ ಯತೀನಾಂ ಯತ-ಚೇತಸಾಮ್ ।
ಅಭಿತೋ ಬ್ರಹ್ಮ ನಿರ್ಬಾಣಂ ವರ್ತತೇ ವಿದಿತಾತ್ಮನಾಮ್ ॥ |
|
ಗಟ್ಟಿಮನಸ್ಸಿನಿಂದ ಪ್ರಯತ್ನಪಟ್ಟು ಆಸೆ-ಸಿಟ್ಟನ್ನು ಬಿಟ್ಟು ದೇವರನ್ನು ತಿಳಿದವರಿಗೆ ಎಲ್ಲೆಡೆಯೂ ಭೌತದೇಹವಿರದ ದೇವರೇ ಕಾಣಿಸುತ್ತಾನೆ. |
|
27
|
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾನ್ ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರ-ಚಾರಿಣೌ ॥ |
|
28
|
ಯತೇಂದ್ರಿಯ-ಮನೋವೃತ್ತಿಃ ಮುನಿರ್ಮೋಕ್ಷ-ಪರಾಯಣಃ ।
ವಿ-ಗತೇಚ್ಛಾ-ಭಯ-ಕ್ರೋಧೋ ಯಃ ಸದಾ ಮುಕ್ತ ಏವ ಸಃ ॥ |
|
ಇಂದ್ರಿಯಗಳಿಗೆ ಹೊರಗಿನ ವಿಷಯಗಳ ಸಂಪರ್ಕ ಆಗದಂತಿರಬೇಕು. ಹುಬ್ಬುಗಳ ನಡುವೆ ಕಣ್ಣೋಟ ಇರಬೇಕು. ಮೂಗಿನ ಒಳಗಿರುವ ಪ್ರಾಣ-ಅಪಾನಗಳನ್ನು (ಶ್ವಾಸೋಚ್ಛಾ್ವಸಗಳನ್ನು) ನಿಯಂತ್ರಿಸಿ ಕುಂಭಕದಲ್ಲಿಡಬೇಕು. ಇಂದ್ರಿಯಗಳ ಮತ್ತು ಮನಸ್ಸಿನ ವ್ಯಾಪಾರವನ್ನು ನಿಲ್ಲಿಸಬೇಕು. ಬಿಡುಗಡೆಗೆ ಬಯಸಿ ಧ್ಯಾನ ನಡೆಸಬೇಕು. ಆಸೆ-ಸಿಟ್ಟು-ಭಯಗಳನ್ನು ಬಿಡಬೇಕು. ಇಂಥವನು ಯಾವಾಗಲೂ ಮುಕ್ತನಂತೆಯೆ. |
|
29
|
ಭೋಕ್ತಾರಂ ಯಜ್ಞ-ತಪಸಾಂ ಸರ್ವ-ಲೋಕ-ಮಹೇಶ್ವರಮ್ ।
ಸುಹೃದಂ ಸರ್ವ-ಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥ |
|
ಹೊರಗಿನ ಎಲ್ಲ ಬಗೆಯ ಯಜ್ಞಗಳನ್ನು, ಒಳಗಿನ ಎಲ್ಲ ತಪಸ್ಸುಗಳನ್ನು ಸ್ವೀಕರಿಸುವವನು, ಎಲ್ಲ ಲೋಕದ ದೊಡ್ಡ ಸ್ವಾಮಿ ನಾನು. ಎಲ್ಲರೊಳಗೂ ನಾನು ಇದ್ದೇನೆಂದು ತಿಳಿದಾಗ ಮುಕ್ತಿಯನ್ನು ಪಡೆಯುತ್ತಾನೆ. |