ಅಥ ಷಷ್ಠೋಽಧ್ಯಾಯಃ ಅಧ್ಯಾಯ ೬

1 ಅನಾಶ್ರಿತಃ ಕರ್ಮ-ಫಲಂ ಕಾರ್ಯಂ ಕರ್ಮ ಕರೋತಿ ಯಃ । ಸ ಸಂ-ನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥
ಕರ್ಮದ ಫಲವನ್ನು ಬಯಸದೆ ಕರ್ತವ್ಯವನ್ನು ಮಾಡುವವನೆ ಸಂನ್ಯಾಸಿಯು, ಅವನೇ ಯೋಗಿಯು. ಅಗ್ನಿಯಲ್ಲಿ ಹೋಮ ನಡೆಸದವನಾಗಲಿ, ಕರ್ಮ ಬಿಟ್ಟವನಾಗಲಿ ಸಂನ್ಯಾಸಿಯಲ್ಲ, ಯೋಗಿಯಲ್ಲ.
2 ಯಂ ಸಂ-ನ್ಯಾಸಮಿತಿ ಪ್ರಾಹುಃ ಯೋಗಂ ತಂ ವಿದ್ಧಿ ಪಾಂಡವ । ನಹ್ಯಸಂ-ನ್ಯಸ್ತ-ಸಂಕಲ್ಪೋ ಯೋಗೀ ಭವತಿ ಕಶ್ಚನ ॥
ಓ ಪಾಂಡವನೆ, ಯಾವುದನ್ನು ಸಂನ್ಯಾಸ ಎನ್ನುವರೋ ಅದನ್ನೇ ಯೋಗ ಎಂದು ತಿಳಿ. ಬಯಕೆಗಳನ್ನು ಬಿಡದವ (ಸಂನ್ಯಾಸ ಮಾಡದವ) ಕರ್ಮಯೋಗಿ ಎನಿಸಲಾರ.
3 ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ । ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ॥
ಯೋಗದ ಹಂತಕ್ಕೆ ಏರಲು ಸಾಧಕನಿಗೆ ಕರ್ಮವೇ ಕಾರಣವಾಗಿದೆ. ಯೋಗದ ಹಂತ ತಲುಪಿದ ಅವನಿಗೆ ದೇವರ ಧ್ಯಾನ ಕಾರಣವಾಗಿದೆ.
4 ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನು-ಷಜ್ಜತೇ । ಸರ್ವ-ಸಂಕಲ್ಪ-ಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥
ಇಂದ್ರಿಯ ವಿಷಯಗಳನ್ನು ಅಂಟಿಸಿಕೊಳ್ಳದೆ, ಕರ್ಮದ ಫಲಗಳಲ್ಲಿ ಆಸಕ್ತನಾಗದೆ, ಎಲ್ಲವನ್ನು ದೇವರು ನಡೆಸುವನೆಂದು ತಿಳಿದವನು ಯೋಗದ ಹಂತವನ್ನು ತಲುಪಿದ್ದಾನೆಂದು ಅರ್ಥ.
5 ಉದ್ಧರೇದಾತ್ಮನಾಽಽತ್ಮಾನಂ ನಾಽತ್ಮಾನಮವಸಾದಯೇತ್ । ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ ॥
ಮನಸ್ಸಿನಿಂದಲೇ ಜೀವನನ್ನು ಮೇಲೆತ್ತಬೇಕು. ಜೀವನನ್ನು ಕೆಳಕ್ಕೆ ತಳ್ಳಬಾರದು. ಜೀವನಿಗೆ ಮನಸ್ಸೇ ಬಂಧು, ಜೀವನಿಗೆ ಮನಸೇ ಶತ್ರು.
6 ಬಂಧುರಾತ್ಮಾಽಽತ್ಮನಸ್ತಸ್ಯ ಯೇನಾಽತ್ಮೈವಾಽತ್ಮನಾ ಜಿತಃ । ಅನಾತ್ಮನಸ್ತು ಶತ್ರುತ್ವೇ ವರ್ತೇತಾಽತ್ಮೈವ ಶತ್ರು-ವತ್ ॥
ಬುದ್ಧಿಯಿಂದ ಮನಸ್ಸನ್ನು ಗೆಲ್ಲಬೇಕು. ಆಗ ಮನಸ್ಸು ಜೀವನಿಗೆ ಬಂಧು ಎನಿಸುತ್ತದೆ. ಬುದ್ಧಿಯಿಲ್ಲದವನಿಗೆ ಮನಸ್ಸೇ ವೈರಿಯಂತೆ ವಿರೋಧ ಮಾಡುತ್ತದೆ.
7 ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ । ಶೀತೋಷ್ಣ-ಸುಖ-ದುಃಖೇಷು ತಥಾ ಮಾನಾಪ-ಮಾನಯೋಃ ॥
8 ಜ್ಞಾನ-ವಿಜ್ಞಾನ-ತೃಪ್ತಾತ್ಮಾ ಕೂಟ-ಸ್ಥೋ ವಿಜಿತೇಂದ್ರಿಯಃ । ಯುಕ್ತ ಇತ್ಯುಚ್ಯತೇ ಯೋಗೀ ಸಮ-ಲೋಷ್ಟಾಶ್ಮ-ಕಾಂಚನಃ ॥
ಮನಸ್ಸನ್ನು ಗೆದ್ದು ಸುಖವಾಗಿರುವವನಿಗೆ ದೇವರು ನೆನಪಿನಲ್ಲಿರುತ್ತಾನೆ. ಈ ಯೋಗಿಯು ತಂಪು-ಬಿಸಿ, ಸುಖ-ದುಃಖ, ಸಂಮಾನ-ಅಪಮಾನ ಮುಂತಾದ ದ್ವಂದಗಳಲ್ಲಿ ವಿಕಾರಗೊಳ್ಳನು. ಇಂದ್ರಿಯಗಳನ್ನು ಗೆದ್ದವ ದೇವರ ಸಾಮಾನ್ಯ ಮತ್ತು ವಿಶೇಷವಾದ ತಿಳಿವಿನಿಂದ ಸುಖವಾಗಿರುವನು. ಮಣ್ಣು, ಕಲ್ಲು, ಚಿನ್ನ ಎಲ್ಲವನ್ನೂ ಸಮನಾಗಿ ಕಾಣಬಲ್ಲ ಈತ ಯೋಗಸಿದ್ಧನು ಎನಿಸುತ್ತಾನೆ.
9 ಸುಹೃನ್ಮಿತ್ರಾರ್ಯುದಾಸೀನ-ಮಧ್ಯಸ್ಥ-ದ್ವೇಷ್ಯ-ಬಂಧುಷು । ಸಾಧುಷ್ವಪಿ ಚ ಪಾಪೇಷು ಸಮ-ಬುದ್ಧಿರ್ವಿಶಿಷ್ಯತೇ ॥
ಹಿತೈಷಿ, ಮಿತ್ರ, ಶತ್ರು, ಉದಾಸೀನ, ಮಧ್ಯಸ್ಥ, ದ್ವೇಷಿ, ಬಂಧು, ಸಾಧು, ಕೆಟ್ಟವ ಇವರಲ್ಲಿ ಎಲ್ಲರಲ್ಲೂ ದೇವರ ಇರವನ್ನು ಸರಿಯಾಗಿ ತಿಳಿದವನೆ ಹೆಚ್ಚಿನವನು.
10 ಯೋಗೀ ಯುಂಜೀತ ಸತತಂ ಆತ್ಮಾನಂ ರಹಸಿ ಸ್ಥಿತಃ । ಏಕಾಕೀ ಯತ-ಚಿತ್ತಾತ್ಮಾ ನಿರಾಶೀರಪರಿ-ಗ್ರಹಃ ॥
ಮನಸ್ಸಿನಲ್ಲಿ ಏನನ್ನೂ ಆಸೆಪಡದೆ, ದೇಹಸುಖಕ್ಕಾಗಿ ಏನನ್ನೂ ಯಾರಿಂದಲೂ ಪಡೆಯದೆ, ಯೋಗಿಯು ತಾನೊಬ್ಬನೇ ಯಾವಾಗಲೂ ಯಾರಿಗೂ ತಿಳಿಯದ ಜಾಗದಲ್ಲಿದ್ದು ಧ್ಯಾನ ನಡೆಸಬೇಕು.
11 ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ । ನಾತ್ಯುಚ್ಛ್ರಿತಂ ನಾತಿ-ನೀಚಂ ಚೇಲಾಜಿನ-ಕುಶೋತ್ತರಮ್ ॥
12 ತತ್ರೈಕಾಗ್ರಂ ಮನಃ ಕೃತ್ವಾ ಯತ-ಚಿತ್ತೇಂದ್ರಿಯ-ಕ್ರಿಯಃ । ಉಪವಿಶ್ಯಾಽಸನೇ ಯುಂಜ್ಯಾತ್ ಯೋಗಮಾತ್ಮ-ವಿಶುದ್ಧಯೇ ॥
ಹೆಚ್ಚು ಎತ್ತರವಾಗದಂತೆ, ಹೆಚ್ಚು ತಗ್ಗೂ ಆಗದಂತೆ ಬಟ್ಟೆಯ ಮೇಲೆ ಜಿಂಕೆಯ ಚರ್ಮ, ಅದರ ಮೇಲೆ ದರ್ಭೆ ಹಾಸಿ, ತನಗಾಗಿ ಶುದ್ಧ ಜಾಗದಲ್ಲಿ ಅಲುಗಾಡದಂತೆ ಆಸನವನ್ನು ತಯಾರಿಸಿಕೊಂಡು, ಆಸನದಲ್ಲಿ ಕುಳಿತು, ಮನದ ಮತ್ತು ಇಂದ್ರಿಯಗಳ ಹೊರ ಕೆಲಸಗಳನ್ನು ನಿಲ್ಲಿಸಿ, ಆತ್ಮಶುದ್ಧಿಗಾಗಿ ಏಕಾಗ್ರತೆಯಿಂದ ಧ್ಯಾನ ಮಾಡಬೇಕು.
13 ಸಮಂ ಕಾಯ-ಶಿರೋ-ಗ್ರೀವಂ ಧಾರಯನ್ನಚಲಂ ಸ್ಥಿರಃ । ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವ-ಲೋಕಯನ್ ॥
14 ಪ್ರ-ಶಾಂತಾತ್ಮಾ ವಿಗತ-ಭೀಃ ಬ್ರಹ್ಮ-ಚಾರಿ-ವ್ರತೇ ಸ್ಥಿತಃ । ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥
ಬೆನ್ನು, ತಲೆ, ಕುತ್ತಿಗೆಗಳನ್ನು ನೇರವಾಗಿಸಿ ಅಲುಗಾಡದೆ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯನ್ನೇ ನೋಡುತ್ತಾ, ಬ್ರಹ್ಮಚರ್ಯದಲ್ಲಿದ್ದು, ನಾನೇ ಎಲ್ಲರಿಗಿಂತ ದೊಡ್ಡವನೆಂದು ನನ್ನನ್ನೇ ನೆನೆಯುತ್ತಾ ಮತ್ತೆ ಮತ್ತೆ ಮನಸ್ಸನ್ನು ಎಳೆದು ಹಿಡಿದು ನಡುದೇಹದಲ್ಲಿ ನನ್ನನ್ನು ಅಂಜದೆಯೆ ಧ್ಯಾನಿಸಬೇಕು.
15 ಯುಂಜನ್ನೇವಂ ಸದಾಽಽತ್ಮಾನಂ ಯೋಗೀ ನಿಯತ-ಮಾನಸಃ । ಶಾಂತಿಂ ನಿರ್ಬಾಣ-ಪರಮಾಂ ಮತ್ಸಂಸ್ಥಾಮಧಿ-ಗಚ್ಛತಿ ॥
ಹೀಗೆ ಮನಸ್ಸನ್ನೂ ನಿಗ್ರಹಿಸಿ ದೇವರನ್ನು ನಿತ್ಯ ಧ್ಯಾನಿಸುತ್ತಾ, ಯೋಗಿಯು ದೇಹ ಬಿಟ್ಟ ಮೇಲೆ ನನ್ನ ಲೋಕವನ್ನು ಸೇರುತ್ತಾನೆ.
16 ನಾತ್ಯಶ್ನತಸ್ತು ಯೋಗೋಽಸ್ತಿ ನ ಚಾತ್ಯಂತಮನಶ್ನತಃ । ನ ಚಾತಿ-ಸ್ವಪ್ನ-ಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥
ಓ ಅರ್ಜುನನೆ, ತುಂಬಾ ತಿನ್ನುತ್ತಲೆ ಇರುವವನಿಗೆ ಧ್ಯಾನಯೋಗ ಸಾಧ್ಯವಿಲ್ಲ. ಹೆಚ್ಚಾಗಿ ಉಪವಾಸ ಮಾಡುತ್ತಿದ್ದರೂ ಧ್ಯಾನ ನಡೆಯದು. ಅತಿ ನಿದ್ದೆಯವನಿಗೂ ಧ್ಯಾನ ಆಗದು. ನಿದ್ದೆ ಬಿಟ್ಟವನಿಗೂ ಧ್ಯಾನ ಮಾಡಲಾಗದು.
17 ಯುಕ್ತಾಹಾರ-ವಿಹಾರಸ್ಯ ಯುಕ್ತ-ಚೇಷ್ಟಸ್ಯ ಕರ್ಮಸು । ಯುಕ್ತ-ಸ್ವಪ್ನಾವ-ಬೋಧಸ್ಯ ಯೋಗೋ ಭವತಿ ದುಃಖ-ಹಾ ॥
ಯೋಗ್ಯವಾದ ಆಹಾರ, ಮತ್ತೆ ವಿಹಾರ, ಹೇಳಿದ್ದಷ್ಟೆ ಕೆಲಸಗಳು, ಸಮಯಕ್ಕೆ ಸರಿಯಾಗಿ ನಿದ್ದೆ, ಮತ್ತೆ ಎಚ್ಚರ, ಹೀಗಿದ್ದವನಿಗೆ ಧ್ಯಾನಯೋಗ ಕಷ್ಟವಿಲ್ಲ.
18 ಯದಾ ವಿ-ನಿಯತಂ ಚಿತ್ತಂ ಆತ್ಮನ್ಯೇವಾವ-ತಿಷ್ಠತೇ । ನಿಸ್ಪೃಹಃ ಸರ್ವ-ಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥
ಎಲ್ಲ ಆಸೆಗಳನ್ನು ಬಿಟ್ಟು, ಮನಸ್ಸನ್ನು ಚೆನ್ನಾಗಿ ನಿಗ್ರಹಿಸಿ, ದೇವರಲ್ಲೆ ನೆಲೆಗೊಳಿಸಿದವನು ಧ್ಯಾನಯೋಗಿ ಎಂದು ಕರೆಯಲ್ಪಡುತ್ತಾನೆ.
19 ಯಥಾ ದೀಪೋ ನಿವಾತ-ಸ್ಥೋ ನೇಂಗತೇ ಸೋಪಮಾ ಮತಾ । ಯೋಗಿನೋ ಯತ-ಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥
ಗಾಳಿ ಬೀಸದಲ್ಲಿ ಇರುವ ದೀಪವು ಅಲ್ಲಾಡುವುದಿಲ್ಲ. ಇದು ಮನಸ್ಸನ್ನು ನಿಗ್ರಹಿಸಿ ದೇವರಲ್ಲಿ ನೆಲೆಗೊಂಡ ಯೋಗಿಗೆ ಹೋಲಿಕೆ ಆಗಿದೆ.
20 ಯತ್ರೋಪ-ರಮತೇ ಚಿತ್ತಂ ನಿ-ರುದ್ಧಂ ಯೋಗ-ಸೇವಯಾ । ಯತ್ರ ಚೈವಾಽತ್ಮನಾಽಽತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ॥
ಧ್ಯಾನಯೋಗದಿಂದ ಹೊರಗೆ ಹೋಗದಂತೆ ನಿಗ್ರಹಿಸಲ್ಪಟ್ಟ ಮನಸ್ ಆನಂದವಾಗಿರುತ್ತದೆ. ಇಂಥ ಮನದಿಂದ ದೇವನನ್ನು ಕಂಡು ತನ್ನಲ್ಲೇ ಸಂತಸಪಡುತ್ತಾನೆ.
21 ಸುಖಮಾತ್ಯಂತಿಕಂ ಯತ್ತತ್ ಬುದ್ಧಿ-ಗ್ರಾಹ್ಯಮತೀಂದ್ರಿಯಮ್ । ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ ॥
ಈಗ ಹೊರ ಇಂದ್ರಿಯಗಳಿಗೆ ಸಿಗದ, ಒಳಮನಸ್ಸಿಗೆ ಸಿಗುವ ಅತಿಶಯ ಸುಖವನ್ನು ಅನುಭವಿಸುತ್ತಾನೆ. ಆಗ ದೇವನನ್ನು ಮರೆಯುವುದೇ ಇಲ್ಲ.
22 ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ । ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಽಪಿ ವಿ-ಚಾಲ್ಯತೇ ॥
ದೇವರನ್ನು ಧ್ಯಾನದಲ್ಲಿ ಪಡೆದವನು ಇದಕ್ಕಿಂತ ದೊಡ್ಡ ಲಾಭ ಬೇರೆ ಇದೆ ಎಂದು ತಿಳಿಯುವುದಿಲ್ಲ. ಈ ಹಂತದಲ್ಲಿರುವವನು ಎಂತಹ ದೊಡ್ಡ ದುಃಖ ಬಂದರೂ ಯೋಗವನ್ನು ಬಿಡುವುದಿಲ್ಲ.
23 ತಂ ವಿದ್ಯಾದ್ ದುಃಖ-ಸಂಯೋಗ-ವಿಯೋಗಂ ಯೋಗ-ಸಂಜ್ಞಿತಮ್ । ಸ ನಿಶ್ಚಯೇನ ಯೋಕ್ತವ್ಯೋ ಯೋಗೋ ನಿರ್ವಿಣ್ಣ-ಚೇತಸಾ ॥
ಇದುವೇ, ಬಂದ ದುಃಖಗಳ ದೂರಮಾಡುವ ಯೋಗ ಎನಿಸಿದೆ ಎಂದು ತಿಳಿಯಬೇಕು. ವಿಷಯಗಳಲ್ಲಿ ವೈರಾಗ್ಯ ಬಂದಾಗ ನಿಶ್ಚಯವಾಗಿ ಈ ಯೋಗದಲ್ಲಿ ತೊಡಗಬೇಕು.
24 ಸಂಕಲ್ಪ-ಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನಶೇಷತಃ । ಮನಸೈವೇಂದ್ರಿಯ-ಗ್ರಾಮಂ ವಿ-ನಿಯಮ್ಯ ಸಮಂತತಃ ॥
25 ಶನೈಃ-ಶನೈರುಪ-ರಮೇತ್ ಬುದ್ಧ್ಯಾಧೃತಿ-ಗೃಹೀತಯಾ । ಆತ್ಮ-ಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ॥
ಮನಸ್ಸಿನಲ್ಲಿ ಬಂದಿರುವ ಎಲ್ಲ ಆಸೆಗಳನ್ನು ಪೂರ್ತಿಯಾಗಿ ಬಿಡಬೇಕು. ಹೊರಗಿನ ಇಂದ್ರಿಯಗಳನ್ನೆಲ್ಲ ಎಲ್ಲ ಕಡೆಯಿಂದಲೂ ಮನಸ್ಸಿನಿಂದಲೆ ನಿಗ್ರಹಿಸಿಡಬೇಕು. ಧೈರ್ಯವಹಿಸಿ, ವಿವೇಕದಿಂದ ಮನಸ್ಸನ್ನು ನಿಧಾನವಾಗಿ ದೇವರಲ್ಲಿ ನೆಲೆಗೊಳಿಸಿ ಶಾಂತನಾಗಬೇಕು. ಬೇರೇನನ್ನೂ ನೆನೆಯಬಾರದು.
26 ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ । ತತಸ್ತತೋ ನಿಯಮ್ಯೈತತ್ ಆತ್ಮನ್ಯೇವ ವಶಂ ನಯೇತ್ ॥
ಗಟ್ಟಿ ನಿಲ್ಲದೆ ಎಲ್ಲೆಲ್ಲಿಗೋ ಓಡಿದ ಚಂಚಲ ಮನಸ್ಸನ್ನು ಅಲ್ಲಲ್ಲಿಂದ ಎಳೆದೆಳೆದು ದೇವರಲ್ಲಿಯೆ ನಿಲ್ಲುವಂತೆ ತನ್ನ ವಶಕ್ಕೆ ತರಬೇಕು.
27 ಪ್ರಶಾಂತ-ಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ । ಉಪೈತಿ ಶಾಂತ-ರಜಸಂ ಬ್ರಹ್ಮ-ಭೂತಮಕಲ್ಮಷಮ್ ॥
ರಾಜಸ-ತಾಮಸಭಾವಗಳಿಂದ ದೂರನಾದ ಯೋಗಿಯ ಮನಸ್ಸು ದೇವರಲ್ಲಿ ನೆಲೆಗೊಂಡು ಸಾತ್ವಿಕವಾದಾಗ ಯೋಗಿ ಉತ್ತಮ ಸುಖವನ್ನು ಪಡೆವನು.
28 ಏವಂ ಯುಂಜನ್ ಸದಾತ್ಮಾನಂ ಯೋಗೀ ವಿಗತ-ಕಲ್ಮಷಃ । ಸುಖೇನ ಬ್ರಹ್ಮ-ಸಂಸ್ಪರ್ಶಂ ಅತ್ಯಂತಂ ಸುಖಮಶ್ನುತೇ ॥
ಹೀಗೆ ಮನೋದೋಷ ಇಲ್ಲದೆ ಯೋಗಿ ದೇವರನ್ನು ನಿರಂತರ ಆಯಾಸಪಡದೆ ಧ್ಯಾನಿಸುತ್ತಾ ದೇವರನ್ನು ಮುಟ್ಟಿದ ಭಾರೀ ಸುಖವನ್ನು ಅನುಭವಿಸುವನು.
29 ಸರ್ವ-ಭೂತ-ಸ್ಥಮಾತ್ಮಾನಂ ಸರ್ವ-ಭೂತಾನಿ ಚಾಽತ್ಮನಿ । ಈಕ್ಷತೇ ಯೋಗ-ಯುಕ್ತಾತ್ಮಾ ಸರ್ವತ್ರ ಸಮ-ದರ್ಶನಃ ॥
ಎಲ್ಲೆಡೆ ದೇವನನ್ನು ಸಮನಾಗಿ ಕಾಣುವ ಧ್ಯಾನಯೋಗದ ಸಾಧಕನು ಎಲ್ಲದರಲ್ಲೂ ದೇವನನ್ನು ಕಾಣುತ್ತಾನೆ. ಎಲ್ಲವನ್ನೂ ದೇವರಲ್ಲಿ ಕಾಣುತ್ತಾನೆ.
30 ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ । ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ॥
ಯಾರು ನನ್ನನ್ನು ಎಲ್ಲೆಡೆ ಕಾಣುತ್ತಾನೆ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುತ್ತಾನೆ, ಅವನಿಗೆ ನಾನು ಮರೆಯಾಗುವುದಿಲ್ಲ. ಅವನೂ ನನಗೆ ಮರೆಯಾಗಲಾರ.
31 ಸರ್ವ-ಭೂತ-ಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ । ಸರ್ವಥಾ ವರ್ತಮಾನೋಽಪಿ ಸ ಯೋಗೀ ಮಯಿ ವರ್ತತೇ ॥
ನನಗೆ ಯಾರೂ ಸಮನು ಇಲ್ಲ. ನನಗಿಂತ ಯಾರೊಬ್ಬನೂ ಉತ್ತಮನಿಲ್ಲ. ಹೀಗೆ ನಾನು ಎಲ್ಲರಿಗಿಂತ ಶ್ರೇಷ್ಠನು, ಚರಾಚರದಲ್ಲೆಲ್ಲ ಇರುವೆನು. ಹೀಗೆ ತಿಳಿದು ನನ್ನನ್ನು ಸೇವೆಗೈಯುವ ಯೋಗಿ ಹೇಗೆ ಬೇಕೋ ಹಾಗೆ ಇದ್ದರೂ ನನ್ನಲ್ಲೇ ಇರುತ್ತಾನೆ.
32 ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋಽರ್ಜುನ । ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥
ಓ ಅರ್ಜುನನೇ, ಸುಖವನ್ನಾಗಲಿ ದುಃಖವನ್ನಾಗಲಿ ತನ್ನಂತೆಯೆ ಎಲ್ಲೆಡೆ ಸಮಾನವಾಗಿ ಕಾಣುವವನೇ ಪರಮಯೋಗಿ ಎನಿಸುತ್ತಾನೆ.
ಅರ್ಜುನ ಉವಾಚ
33 ಯೋಽಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧು-ಸೂದನ । ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ ॥
ಅರ್ಜುನ ಹೇಳುತ್ತಾನೆ - ಓ ಮಧುಸೂದನನೇ, ನೀನು ಸಮದೃಷ್ಟಿಯ ಧ್ಯಾನಯೋಗವನ್ನು ಹೇಳಿದೆ. ಮನಸ್ಸು ಚಂಚಲವಾದ್ದರಿಂದ ಇದು ಗಟ್ಟಿಯಾಗಿ ನಿಲ್ಲುತ್ತೆ ಎಂದು ನಾನು ಭಾವಿಸಲಾರೆ.
34 ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲ-ವದ್ ದೃಢಮ್ । ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸು-ದುಷ್ಕರಮ್ ॥
ಓ ಕೃಷ್ಣನೇ, ಚಂಚಲವಾದ ಮನಸ್ಸು ಬಲವುಳ್ಳದ್ದು, ತುಂಬಾ ಕಲಡಿಸುತ್ತದೆ. ಗಾಳಿಯನ್ನು ಹೇಗೆ ಹಿಡಿಯಲಾಗದೋ, ಹಾಗೆ ಮನದ ನಿಗ್ರಹ ಕಷ್ಟವೆಂದೇ ನಾನು ತಿಳಿದಿರುವೆ.
ಭಗವಾನ್ ಉವಾಚ
35 ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ । ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ॥
ಕೃಷ್ಣನು ಹೇಳುತ್ತಾನೆ - ಓ ಮಹಾವೀರನೆ, ಚಂಚಲವಾದ ಮನಸ್ಸನ್ನು ನಿಗ್ರಹಿಸುವುದು ಕಷ್ಟಸಾಧ್ಯ ಎನ್ನುವುದು ನಿಶ್ಚಿತ. ಓ ಕುಂತೀಪುತ್ರನೆ, ಮತ್ತೆ ಮತ್ತೆ ಪ್ರಯತ್ನಿಸುವುದರಿಂದ ಹಾಗೆಯೆ ವೈರಾಗ್ಯದಿಂದ ಮನವನ್ನು ನಿಗ್ರಹ ಮಾಡಬಹುದು.
36 ಅಸಂ-ಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ । ವಶ್ಯಾತ್ಮನಾ ತು ಸತತಂ ಶಕ್ಯೋಽವಾಪ್ತುಮಶೇಷತಃ ॥
ಮನೋನಿಗ್ರಹ ಇಲ್ಲದವನಿಂದ ಧ್ಯಾನಯೋಗ ಆಗದು ಎಂದು ನನ್ನ ಮತ. ಮನಸ್ಸನ್ನು ವಶಮಾಡಿದವನಿಂದ ಧ್ಯಾನವು ಪೂರ್ತಿಯಾಗಿ ಯಾವಾಗಲೂ ಸಾಧ್ಯ.
ಅರ್ಜುನ ಉವಾಚ
37 ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತ-ಮಾನಸಃ । ಅಪ್ರಾಪ್ಯ ಯೋಗ-ಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ॥
ಅರ್ಜುನನ ಪ್ರಶ್ನೆ - ಓ ಕೃಷ್ಣನೇ, ಶ್ರದ್ಧೆವುಳ್ಳವನು ಪ್ರಯತ್ನಿಸಲಾಗದೆ ಮನಸ್ಸಿನಿಂದ ಧ್ಯಾನವನ್ನು ನಡೆಸಿಲ್ಲ. ಯೋಗಸಿದ್ಧಿಯನ್ನು ಪಡೆಯದ ಈತನು ಯಾವ ಗತಿಯನ್ನು ಪಡೆಯುವನು?
38 ಕಚ್ಚಿನ್ನೋಭಯ-ವಿಭ್ರಷ್ಟಃ ಛಿನ್ನಾಭ್ರಮಿವ ನಶ್ಯತಿ । ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ ॥
ಓ ತುಂಬುತೋಳಿನ ಕೃಷ್ಣನೆ, ಯೋಗಸಾಧನೆಯಲ್ಲಿ ದೇವರೆಡೆಗೆ ತೆರಳಿದ್ದಾನೆ ಆದರೆ ಮಾನಸ ತೊಂದರೆಯಿಂದಾಗಿ ಸಿದ್ಧಿಯನ್ನು ಪಡೆದಿಲ್ಲ. ಈಗವನು ಎರಡೂ ಕಡೆ ಇಲ್ಲದೆ ನಡುವೆ ಸಿಲುಕಿದ್ದಾನೆ. ಮೋಡದ ತುಂಡೊಂದು ಅತ್ತ ಮಳೆಯೂ ಆಗದೆ, ಇತ್ತ ಆಕಾಶದಲ್ಲೂ ತೇಲದೆ ಕೆಳಗೆ ಬಿದ್ದು ಹಾಳಾದಂತೆ ನಾಶವಾಗುವನೋ ಏನು?
39 ಏತನ್ಮೇ ಸಂಶಯಂ ಕೃಷ್ಣ ಚ್ಛೇತ್ತುಮರ್ಹಸ್ಯಶೇಷತಃ । ತ್ವದನ್ಯಃ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ ॥
ಓ ಕೃಷ್ಣನೆ, ನನ್ನ ಈ ಸಂಶಯವನ್ನು ಪೂರ್ತಿಯಾಗಿ ಪರಿಹರಿಸು. ನೀನಲ್ಲದೆ ಬೇರೆ ಯಾರೂ ಈ ಸಂಶಯವನ್ನು ತೆಗೆಯುವವರು ಇಲ್ಲ.
ಭಗವಾನ್ ಉವಾಚ
40 ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ । ನಹಿ ಕಲ್ಯಾಣ-ಕೃತ್ ಕಶ್ಚಿದ್ ದುರ್ಗತಿಂ ತಾತ ಗಚ್ಛತಿ ॥
ಕೃಷ್ಣನ ಉತ್ತರ - ಓ ಪಾರ್ಥನೆ, ಇಲ್ಲಿಯಾಗಲಿ ಪರಲೋಕದಲ್ಲಾಗಲಿ ಅವನಿಗೆ ನಾಶವಿಲ್ಲ. ಒಳ್ಳೆಯದು ಮಾಡಿದ ಯಾರೊಬ್ಬನೂ ಕೆಟ್ಟದ್ದನ್ನು ಪಡೆಯುವುದೇ ಇಲ್ಲ ತಾನೆ!
41 ಪ್ರಾಪ್ಯ ಪುಣ್ಯ-ಕೃತಾಂ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ । ಶುಚೀನಾಂ ಶ್ರೀಮತಾಂ ಗೇಹೇ ಯೋಗ-ಭ್ರಷ್ಟೋಽಭಿ-ಜಾಯತೇ ॥
ಹೀಗೆ ಯೋಗಸಾಧನೆಯಲ್ಲಿ ತಪ್ಪಿದವನು ಒಳ್ಳೆಯದು ಮಾಡಿದವರ (ಪಾಲಿಗೆ ಸಿಗುವ ೨೧ ಬಗೆಯ ಸ್ವರ್ಗದ) ಲೋಕಗಳನ್ನು ಪಡೆದು, ಅಲ್ಲಿ ಬಹಳ ಕಾಲ ವಾಸವಿದ್ದು, ಮತ್ತೆ ಆಚಾರ-ವಿಚಾರ ಶುದ್ಧವುಳ್ಳ ಶ್ರೀಮಂತರ ಮನೆಯಲ್ಲಿ ಹುಟ್ಟುತ್ತಾನೆ.
42 ಅಥವಾ ಯೋಗಿನಾಮೇವ ಕುಲೇ ಭವತಿ ಧೀ-ಮತಾಮ್ । ಏತದ್ಧಿ ದುರ್ಲಭ-ತರಂ ಲೋಕೇ ಜನ್ಮ ಯದೀದೃಶಮ್ ॥
ಅಥವಾ ಬುದ್ಧಿವಂತರಾದ ಯೋಗಿಗಳ ವಂಶದಲ್ಲಿ ಹುಟ್ಟುತ್ತಾನೆ. ಈ ಲೋಕದಲ್ಲಿ ಈ ರೀತಿಯ ಹುಟ್ಟು ಹೆಚ್ಚಾಗಿ ಸಿಗುವುದಿಲ್ಲ.
43 ತತ್ರ ತಂ ಬುದ್ಧಿ-ಸಂಯೋಗಂ ಲಭತೇ ಪೌರ್ವದೈಹಿಕಮ್ । ಯತತೇ ಚ ತತೋ ಭೂಯಃ ಸಂಸಿದ್ಧೌ ಕುರು-ನಂದನ ॥
ಓ ಕುರುಕುಮಾರನೆ, ಆ ಜನ್ಮದಲ್ಲಿಯೂ ಹಿಂದಿನ ಜನ್ಮದ ಶರೀರದಲ್ಲಿ ಮಾಡಿದ ಧ್ಯಾನಸಾಧನೆಯನ್ನು ಹೊಂದುತ್ತಾನೆ. ಪೂರ್ತಿ ಸಿದ್ಧಿಗಾಗಿ ಮತ್ತೆ ಪ್ರಯತ್ನಿಸುತ್ತಾನೆ.
44 ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋಽಪಿ ಸಃ । ಜಿಜ್ಞಾಸುರಪಿ ಯೋಗಸ್ಯ ಶಬ್ದ-ಬ್ರಹ್ಮಾತಿ-ವರ್ತತೇ ॥
ಅದೇ ಹಿಂದಿನ ಅಭ್ಯಾಸದಿಂದ ದೇವರ ವಶವಾಗಿ ಆತ ಯೋಗಕ್ಕೇ ಎಳೆಯಲ್ಪಡುತ್ತಾನೆ. ಯೋಗವನ್ನು ತಿಳಿಯಲೇಬೇಕೆಂದು ಇಚ್ಛಿಸಿದವನು ವೇದವೇದ್ಯನಾದ ದೇವನನ್ನು ಪಡೆಯುತ್ತಾನೆ.
45 ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧ-ಕಿಲ್ಬಿಷಃ । ಅನೇಕ-ಜನ್ಮ-ಸಂಸಿದ್ಧಃ ತತೋ ಯಾತಿ ಪರಾಂ ಗತಿಮ್ ॥
ಧ್ಯಾನಯೋಗಿಯು ಪ್ರಯತ್ನಪಟ್ಟು ಮನಸ್ಸಿನ ದೋಷವನ್ನು ದೂರ ಮಾಡಿ ತುಂಬಾ ಜನ್ಮಗಳ ಸಾಧನೆಯಿಂದ ಸಿದ್ದಿ ಹೊಂದಿ, ಮೋಕ್ಷವನ್ನು ಪಡೆವನು.
46 ತಪಸ್ವಿಭ್ಯೋಽಧಿಕೋ ಯೋಗೀ ಜ್ಞಾನಿಭ್ಯೋಽಪಿ ಮತೋಽಧಿಕಃ । ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ ಭವಾರ್ಜುನ ॥
ತಪಸ್ವಿಗಳಿಗಿಂತ ಧ್ಯಾನಯೋಗಿ ಶ್ರೇಷ್ಠ. ತಿಳಿದವರಿಗಿಂತಲೂ ಧ್ಯಾನಿ ಶ್ರೇಷ್ಠ. ಕರ್ಮಯೋಗಿಗಳಿಗಿಂತಲೂ ಧ್ಯಾನಸಾಧಕ ಶ್ರೇಷ್ಠನೇ. ಆದ್ದರಿಂದ, ಓ ಅರ್ಜುನ ಧ್ಯಾನಯೋಗಿ ಆಗು.
47 ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ । ಶ್ರ್ರದ್ಧಾ-ವಾನ್ ಭಜತೇ ಯೋ ಮಾಂ ಸ ಮೇ ಯುಕ್ತ-ತಮೋ ಮತಃ ॥
ಶ್ರದ್ಧೆಯಿಂದ ನನ್ನಲ್ಲೆ ಮನಸ್ಸಿಟ್ಟು ಯಾರು ನನ್ನನ್ನೆ ಸೇವಿಸುವನೋ ಅವನು ಇತರ ಎಲ್ಲ ಬಗೆಯ ಯೋಗಿಗಳಲ್ಲಿ ಶ್ರೇಷ್ಠಯೋಗಿ ಎಂದೇ ನನ್ನ ಮತ.

ಇತಿ ಷಷ್ಠೋಽಧ್ಯಾಯಃ