ಅಥ ಸಪ್ತಮೋಽಧ್ಯಾಯಃ ಅಧ್ಯಾಯ ೭

1 ಮಯ್ಯಾಸಕ್ತ-ಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ । ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥
ಓ ಪಾರ್ಥನೇ, ನಾನೇ ಆಸರೆಯೆಂದು ನಂಬಿ ನನ್ನಲ್ಲೆ ಮನಸ್ಸಿಟ್ಟು ಧ್ಯಾನ ಮಾಡಿದರೆ ಖಂಡಿತವಾಗಿಯೂ ನನ್ನನ್ನು ಪೂರ್ತಿ ತಿಳಿಯುವೆ. ಅದು ಹೇಗೆಂದು ಕೇಳು.
2 ಜ್ಞಾನಂ ತೇಽಹಂ ಸ-ವಿಜ್ಞಾನಂ ಇದಂ ವಕ್ಷ್ಯಾಮ್ಯಶೇಷತಃ । ಯಜಾಜ್ಞತ್ವಾ ನೇಹ ಭೂಯೋಽನ್ಯತ್ ಜ್ಞಾತವ್ಯಮವ-ಶಿಷ್ಯತೇ ॥
ನಾನು ನಿನಗೆ ನನ್ನ ಜ್ಞಾನವನ್ನು ವಿಶೇಷ ಚಿಂತನೆಯೊಡನೆ ಪೂರ್ತಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೇನೂ ತಿಳಿಯಬೇಕಾದ್ದು ಉಳಿಯದು.
3 ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ । ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥
ಸಾವಿರಾರು ಮನುಷ್ಯರಲ್ಲಿ ಯಾರೋ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ ಮತ್ತೆ ಸಿದ್ಧಿ ಪಡೆದವರಲ್ಲಿ ಯಾರೋ ಒಬ್ಬ ನನ್ನನ್ನು ಸರಿಯಾಗಿ ತಿಳಿಯುತ್ತಾನೆ.
4 ಭೂಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ । ಅಹಂ-ಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟ-ಧಾ ॥
ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ - ಹೀಗೆ ನನ್ನ ಅಧೀನದಲ್ಲಿರುವ ಈ ಜಡಪ್ರಕೃತಿ ಎಂಟು ಬಗೆಯಾಗಿದೆ.
5 ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ । ಜೀವ-ಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ॥
ಓ ಮಹಾವೀರನೇ, ಈ ಜಡಪ್ರಕೃತಿ ಉತ್ತಮವಲ್ಲ. ಇದಕ್ಕಿಂತ ಬೇರೆಯಾದ ನನ್ನ ಅಧೀನವಾದ ಚೇತನ ಪ್ರಕೃತಿ ಶ್ರೀತತ್ವ ಉತ್ತಮವಾಗಿದೆ ಎಂದು ತಿಳಿ. ಈಕೆ ಪ್ರಪಂಚವನ್ನು ಹೊತ್ತಿದ್ದಾಳೆ.
6 ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪ-ಧಾರಯ । ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ ॥
ಎಲ್ಲ ಜೀವಿಗಳೂ ಈ ಎರಡು ಪ್ರಕೃತಿಗಳಿಂದಲೆ ಹುಟ್ಟಿಬಂದಿವೆ ಎಂದು ತಿಳಿ. ನಾನೇ ಇಡೀ ವಿಶ್ವಕ್ಕೆ ಸೃಷ್ಟಿಕಾರನೂ, ನಾಶಕಾರನೂ ಆಗಿದ್ದೇನೆ.
7 ಮತ್ತಃ ಪರ-ತರಂ ನಾನ್ಯತ್ ಕಿಂಚಿದಸ್ತಿ ಧನಂ-ಜಯ । ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿ-ಗಣಾ ಇವ ॥
ಓ ಧನಂಜಯನೆ, ನನಗಿಂತ ಹೆಚ್ಚಿನ ಬೇರೆ ವಸ್ತು ಒಂದೂ ಇಲ್ಲ. ಒಂದು ದಾರದಲ್ಲಿ ರಾಶಿ ಮಣಿಗಳು ಸೇರಿಕೊಂಡಂತೆ ಈ ಎಲ್ಲವೂ ನನ್ನಲ್ಲಿ ಆಸರೆ ಪಡೆದಿವೆ.
8 ರಸೋಽಹಮಪ್ಸು ಕೌಂತೇಯ ಪ್ರಭಾಽಸ್ಮಿ ಶಶಿ-ಸೂರ್ಯಯೋಃ । ಪ್ರಣವಃ ಸರ್ವ-ವೇದೇಷು ಶಬ್ದಃ ಖೇ ಪೌರುಷಂ ನೃಷು ॥
ಓ ಕೌಂತೇಯನೆ, ನೀರಿನಲ್ಲಿ ನಾನು ರಸ. ಚಂದ್ರ-ಸೂರ್ಯರಲ್ಲಿ ಬೆಳಕು ನಾನಾಗಿದ್ದೇನೆ. ಎಲ್ಲ ವೇದಗಳಲ್ಲಿ ಓಂಕಾರ ನಾನು. ಆಕಾಶದಲ್ಲಿ ಶಬ್ದ ನಾನು. ಗಂಡಸರಲ್ಲಿ ಪೌರುಷ ನಾನು.
9 ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ । ಜೀವನಂ ಸರ್ವ-ಭೂತೇಷು ತಪಶ್ಚಾಸ್ಮಿ ತಪಸ್ವಿಷು ॥
ಮಣ್ಣಿನಲ್ಲಿ ಪರಿಮಳ ನಾನು. ಮತ್ತೆ ಬೆಂಕಿಯಲ್ಲಿ ತೇಜಸ್ ನಾನಾಗಿದ್ದೇನೆ. ಎಲ್ಲ ಜೀವಿಗಳಲ್ಲಿ ಜೀವನ ನಾನು. ತಾಪಸರಲ್ಲಿ ತಪಸ್ಸು ಆಗಿದ್ದೇನೆ.
10 ಬೀಜಂ ಮಾಂ ಸರ್ವ-ಭೂತಾನಾಂ ವಿದ್ಧಿ ಪಾರ್ಥ ಸನಾತನಮ್ । ಬುದ್ಧಿರ್ಬುದ್ಧಿ-ಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ॥
ಓ ಪಾರ್ಥನೆ, ನನ್ನನ್ನು ಎಲ್ಲ ಜೀವಿಗಳ ಸನಾತನ ಬೀಜನನ್ನಾಗಿ ತಿಳಿ. ಬುದ್ಧಿಮಂತರ ಬುದ್ಧಿ ನಾನೆ. ತೇಜಸ್ವಿಗಳ ತೇಜಸ್ ನಾನು.
11 ಬಲಂ ಬಲ-ವತಾಂ ಚಾಹಂ ಕಾಮ-ರಾಗ-ವಿವರ್ಜಿತಮ್ । ಧರ್ಮಾವಿರುದ್ಧೋ ಭೂತೇಷು ಕಾಮೋಽಸ್ಮಿ ಭರತರ್ಷಭ ॥
ತನ್ನ ಬಯಕೆಗೆ ಮತ್ತು ಇತರರ ರಂಜನೆಗೆ ಬಳಸದ ಬಲವುಳ್ಳವರ ಬಲ ನಾನು. ಓ ಭರತವಂಶದವನೆ, ಜೀವಿಗಳಲ್ಲಿ ಧರ್ಮಕ್ಕೆ ವಿರೋಧವಿಲ್ಲದ ಕಾಮ ಆಗಿದ್ದೇನೆ.
12 ಯೇ ಚೈವ ಸಾತ್ತ್ವಿಕಾ ಭಾವಾಃ ರಾಜಸಾಸ್ತಾಮಸಾಶ್ಚ ಯೇ । ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ ॥
ಸತ್ವಗುಣದ, ರಜೋಗುಣದ ಮತ್ತು ತಮೋಗುಣದ ಪ್ರಭಾವಕ್ಕೆ ಒಳಗಾದ ಎಲ್ಲಾ ವಸ್ತುಗಳು ನನ್ನಿಂದಲೇ ಆಗಿವೆ ಎಂದು ತಿಳಿ. ನಾನು ಅವುಗಳ ಆಶ್ರಯದಲ್ಲಿಲ್ಲ. ಅವು ನನ್ನನ್ನೆ ಆಶ್ರಯಿಸಿವೆ.
13 ತ್ರಿಭಿರ್ಗುಣ-ಮಯೈರ್ಭಾವೈಃ ಏಭಿಃ ಸರ್ವಮಿದಂ ಜಗತ್ । ಮೋಹಿತಂ ನಾಭಿ-ಜಾನಾತಿ ಮಾಮೇಭ್ಯಃ ಪರಮವ್ಯಯಮ್ ॥
ಈ ಮೂರು ಗುಣಗಳಿಂದ ದೂರನಾದ ವಿಕಾರಗೊಳ್ಳದ ನನ್ನನ್ನು, ಈ ಮೂರು ಗುಣಗಳುಳ್ಳ ವಸ್ತುಗಳಿಂದ ಮೋಹಗೊಂಡ ಈ ಎಲ್ಲ ಜೀವರಾಶಿ ತಿಳಿಯದು.
14 ದೈವೀ ಹ್ಯೇಷಾ ಗುಣ-ಮಯೀ ಮಮ ಮಾಯಾ ದುರತ್ಯಯಾ । ಮಾಮೇವ ಯೇ ಪ್ರ-ಪದ್ಯಂತೇ ಮಾಯಾಮೇತಾಂ ತರಂತಿ ತೇ ॥
ಲೋಕವನ್ನು ಆಡಿಸುವ ಈ ಗುಣಮಯಿ ಮಾಯೆ ನನ್ನ ಅಧೀನವಾಗಿದೆ, ಯಾರಿಂದಲೂ ಅತಿಕ್ರಮಿಸಲು ಆಗದು. ನನ್ನನ್ನೇ ಶರಣು ಹೊಂದಿದವರು ಈ ಮಾಯೆಯನ್ನು ದಾಟುತ್ತಾರೆ.
15 ನ ಮಾಂ ದುಷ್ಕೃತಿನೋ ಮೂಢಾಃ ಪ್ರ-ಪದ್ಯಂತೇ ನರಾಧಮಾಃ । ಮಾಯಯಾಽಪ-ಹೃತ-ಜ್ಞಾನಾಃ ಆಸುರಂ ಭಾವಮಾಶ್ರಿತಾಃ ॥
ಕೆಟ್ಟದ್ದನ್ನು ನಡೆಸುವವರು, ತಪ್ಪು ತಿಳುವಳಿಕೆಯವರು, ಕೀಳುಮಟ್ಟದವರು, ಇಂದ್ರಿಯ ಸುಖಗಳನ್ನೇ ಮೆಚ್ಚುವವರು, ಮಾಯೆಯಿಂದ ಜ್ಞಾನಹೀನರಾಗಿ ನನ್ನನ್ನು ಶರಣು ಹೊಂದುವುದಿಲ್ಲ.
16 ಚತುರ್ವಿಧಾ ಭಜಂತೇ ಮಾಂ ಜನಾಃ ಸು-ಕೃತಿನೋಽರ್ಜುನ । ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ॥
ಓ ಅರ್ಜುನನೆ, ಕಷ್ಟಕ್ಕೆ ಸಿಲುಕಿದವನು, ತಿಳಿಯಬಯಸುವವನು, ಸಂಪತ್ತು ಬೇಡುವವನು ಮತ್ತು ತಿಳಿದವನು ಹೀಗೆ ನಾಲ್ಕು ಬಗೆಯ ಜನರು ನನ್ನನ್ನು ಒಳ್ಳೆಯ ರೀತಿಯಿಂದ ಆರಾಧಿಸುತ್ತಾರೆ.
17 ತೇಷಾಂ ಜ್ಞಾನೀ ನಿತ್ಯ-ಯುಕ್ತಃ ಏಕ-ಭಕ್ತಿರ್ವಿಶಿಷ್ಯತೇ । ಪ್ರಿಯೋ ಹಿ ಜ್ಞಾನಿನೋಽತ್ಯರ್ಥಂ ಅಹಂ ಸ ಚ ಮಮ ಪ್ರಿಯಃ ॥
ಆ ನಾಲ್ಕು ವಿಧದ ಜನರಲ್ಲಿ ನನ್ನಲ್ಲೇ ಭಕ್ತಿಯುಳ್ಳ, ಸದಾ ನನ್ನನ್ನೇ ಧ್ಯಾನಿಸುವ ಜ್ಞಾನಿ ಶ್ರೇಷ್ಠನು. ಜ್ಞಾನಿಗೋ ನಾನು ತುಂಬಾ ಇಷ್ಟ. ನನಗೂ ಅವನೇ ತುಂಬ ಇಷ್ಟ.
18 ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ । ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ॥
ಈ ನಾಲ್ಕು ಬಗೆಯವರೂ ಒಳ್ಳೆಯವರೇ, ಆದರೆ ತಿಳಿದವನು ಮಾತ್ರ ನನ್ನವನೇ ಎಂದು ನನ್ನ ಅಭಿಪ್ರಾಯ. ಏಕೆಂದರೆ ಅವನು ನನ್ನನ್ನೇ ಧ್ಯಾನಿಸುತ್ತಾ ಸರಿಸಾಟಿ ಇಲ್ಲದ ಗತಿಯೆನಿಸಿದ ನನ್ನನ್ನೆ ಪಡೆದಿದ್ದಾನೆ.
19 ಬಹೂನಾಂ ಜನ್ಮನಾಮಂತೇ ಜ್ಞಾನ-ವಾನ್ ಮಾಂ ಪ್ರ-ಪದ್ಯತೇ । ವಾಸು-ದೇವಃ ಸರ್ವಮಿತಿ ಸ ಮಹಾತ್ಮಾ ಸು-ದುರ್ಲಭಃ ॥
ಜ್ಞಾನಿಯು ಬಹಳ ಜನ್ಮಗಳ ಬಳಿಕ ನನ್ನನ್ನು ಪಡೆಯುತ್ತಾನೆ. ಎಲ್ಲೆಡೆ ಇರುವವನು, ಪೂರ್ಣನು, ಎಲ್ಲದರ ಕಾರಣನು ಎಂದು ನನ್ನನ್ನು ತಿಳಿದ ಅಂಥ ಮಹಾನುಭಾವ ಸಿಗುವುದು ವಿರಳ.
20 ಕಾಮೈಸ್ತೈಸ್ತೈರ್ಹೃತ-ಜ್ಞಾನಾಃ ಪ್ರ-ಪದ್ಯಂತೇಽನ್ಯ-ದೇವತಾಃ । ತಂ-ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥
ಬಗೆಬಗೆಯ ಆಸೆಗಳಿಂದ ಬುದ್ಧಿಹೀನರಾದವರು ತಮ್ಮ ಯೋಗ್ಯತೆಗೆ ಒಳಗಾಗಿ ಆಯಾ ಪದ್ಧತಿಗಳನ್ನು ನಂಬಿ ಬೇರೆ ಬೇರೆ ದೇವತೆಗಳನ್ನು ಆರಾಧಿಸುತ್ತಾರೆ.
21 ಯೋ-ಯೋ ಯಾಂ-ಯಾಂ ತನುಂ ಭಕ್ತಃ ಶ್ರದ್ಧಯಾಽರ್ಚಿತುಮಿಚ್ಛತಿ । ತಸ್ಯ-ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿ-ದಧಾಮ್ಯಹಮ್ ॥
ಯಾರು ಯಾರು ಯಾವ ಯಾವ ಮೂರುತಿಯನ್ನು ಭಕ್ತಿ-ಶ್ರದ್ಧೆಯಿಂದ ಪೂಜಿಸಲು ಬಯಸುತ್ತಾನೋ ಅವನವನಿಗೆ ಅಂಥದೇ ನಂಬಿಕೆಯ ಬುದ್ಧಿಯನ್ನು ಕದಲದಂತೆ ನಾನು ಮಾಡುತ್ತೇನೆ.
22 ಸ ತಯಾ ಶ್ರದ್ಧಯಾ ಯುಕ್ತಃ ತಸ್ಯಾಽರಾಧನಮೀಹತೇ । ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿತಾನ್ ॥
ಅವನು ಅದೇ ಶ್ರದ್ಧೆಯುಳ್ಳವನಾಗಿ ಆಯಾ ದೇವತೆಯ ಪೂಜೆಯನ್ನು ಮಾಡುತ್ತಾನೆ. ಮತ್ತೆ ನನ್ನಿಂದಲೆ ನೀಡಲ್ಪಟ್ಟ ಶುಭಾಶುಭ ಫಲಗಳನ್ನು ಆಯಾ ದೇವತೆಯಿಂದ ಪಡೆಯುತ್ತಾನೆ.
23 ಅಂತ-ವತ್ತು ಫಲಂ ತೇಷಾಂ ತದ್ ಭವತ್ಯಲ್ಪ-ಚೇತಸಾಮ್ । ದೇವಾನ್ ದೇವ-ಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ ॥
ಸಣ್ಣದೇವತೆಗಳ ಪೂಜಿಸಿದ ಅವರ ಫಲ ನಾಶವಾಗುತ್ತದೆ. ದೇವತೆಗಳ ಆರಾಧಿಸಿದವರು ದೇವತೆಗಳನ್ನು ಸೇರುತ್ತಾರೆ. ನನ್ನ ಭಕ್ತರೋ ನನ್ನನ್ನೇ ಸೇರುತ್ತಾರೆ.
24 ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ । ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ ॥
ನಾನು ನಾಶವಾಗುವ ಜಡಕ್ಕಿಂತ ಬೇರೆ ಆಗಿರುವೆನು, ಜೀವರಿಗಿಂತ ಬೇರೆಯಾದ ಮಿಗಿಲಾದ ಚೇತನನಿದ್ದೇನೆ. ಹೀಗೆ ಜಡದೇಹ ಹೊತ್ತು ಕಾಣಿಸಿಕೊಳ್ಳುವ ಜೀವನಂತೆ, ಕಾಣಿಸಿಕೊಳ್ಳದ ನನ್ನನ್ನು ತಿಳಿಯದವರು, ಹುಟ್ಟಿಬಂದವನು (ಕಾಣುತ್ತಿರುವನು) ಎಂದೇ ತಿಳಿದಿದ್ದಾರೆ.
25 ನಾಹಂ ಪ್ರಕಾಶಃ ಸರ್ವಸ್ಯ ಯೋಗ-ಮಾಯಾ-ಸಮಾವೃತಃ । ಮೂಢೋಽಯಂ ನಾಭಿ-ಜಾನಾತಿ ಲೋಕೋ ಮಾಮಜಮವ್ಯಯಮ್ ॥
ನನ್ನ ಇಚ್ಛೆಯಿಂದಲೇ ನಾನು ಪ್ರಕೃತಿಯ ಮಾಯೆಯಿಂದ ಮುಚ್ಚಿಕೊಂಡು ಎಲ್ಲರಿಗೂ ಪೂರ್ತಿ ಸರಿಯಾಗಿ ಕಾಣಿಸಲಾರೆನು. ನನ್ನನ್ನು ತಪ್ಪಾಗಿ ತಿಳಿದ ಈ ಮಂದಿ ನನಗೆ ಹುಟ್ಟು-ಸಾವುಗಳಿಲ್ಲ ಎಂದು ಸರಿಯಾಗಿ ತಿಳಿದಿಲ್ಲ.
26 ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ । ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥
ಓ ಅರ್ಜುನನೆ, ನಾನು ಹಿಂದಿನ, ಇಂದಿನ ಮತ್ತು ಮುಂದಿನ ಜೀವರನ್ನು ತಿಳಿದಿದ್ದೇನೆ. ನನ್ನನ್ನು ಮಾತ್ರ ಯಾರೊಬ್ಬನೂ ತಿಳಿದಿಲ್ಲ.
27 ಇಚ್ಛಾ-ದ್ವೇಷ-ಸಮುತ್ಥೇನ ದ್ವಂದ್ವ-ಮೋಹೇನ ಭಾರತ । ಸರ್ವ-ಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂ ತಪ ॥
ಓ ಭಾರತನೆ, ಎಲ್ಲ ಜೀವಿಗಳು ಹುಟ್ಟಿದಾಗಲೇ ಇಚ್ಛೆ-ದ್ವೇಷಗಳಿಂದಾಗಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯದೆ, ತಪ್ಪನ್ನೇ ಸರಿಯೆಂದು ಭಾವಿಸುತ್ತಾರೆ. ಒಮ್ಮೆ ಯೋಚಿಸು.
28 ಯೇಷಾಂ ತ್ವಂತ-ಗತಂ ಪಾಪಂ ಜನಾನಾಂ ಪುಣ್ಯ-ಕರ್ಮಣಾಮ್ । ತೇ ದ್ವಂದ್ವ-ಮೋಹ-ನಿರ್ಮುಕ್ತಾಃ ಭಜಂತೇ ಮಾಂ ದೃಢ-ವ್ರತಾಃ ॥
ಒಳ್ಳೆಯದು ಮಾಡಿದವರ ಪಾಪ ಕಳೆದಾಗ, ಅವರು ಈ ಸರಿ-ತಪ್ಪುಗಳನ್ನು ಚೆನ್ನಾಗಿ ತಿಳಿದು, ತಪ್ಪನ್ನು ಮಾಡದೆ, ಸರಿಯಾದ್ದನ್ನೆ ಆಚರಿಸಿ ನನ್ನನ್ನು ಸೇವಿಸುವರು.
29 ಜರಾ-ಮರಣ-ಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ । ತೇ ಬ್ರಹ್ಮ ತದ್ ವಿದುಃ ಕೃತ್ಸ್ನಂ ಅಧ್ಯಾತ್ಮಂ ಕರ್ಮ ಚಾಖಿಲಮ್ ॥
ಮುಪ್ಪು-ಸಾವುಗಳಿಂದ ದೂರವಾಗಲು ನನ್ನನ್ನೇ ನಂಬಿ ಸಾಧನೆ ನಡೆಸುವವರು ಆ ಬ್ರಹ್ಮವನ್ನು ತಿಳಿವರು. ಪೂರ್ತಿ ಅಧ್ಯಾತ್ಮವನ್ನೂ ಮತ್ತು ಎಲ್ಲ ಕರ್ಮವನ್ನೂ ತಿಳಿವರು.
30 ಸಾಧಿ-ಭೂತಾಧಿ-ದೈವಂ ಮಾಂ ಸಾಧಿ-ಯಜ್ಞಂ ಚ ಯೇ ವಿದುಃ । ಪ್ರಯಾಣ-ಕಾಲೇಽಪಿ ಚ ಮಾಂ ತೇ ವಿದುರ್ಯುಕ್ತ-ಚೇತಸಃ ॥
ಅಧಿಭೂತ, ಅಧಿದೈವ ಮತ್ತು ಅಧಿಯಜ್ಞದ ಜೊತೆಗೆ ನನ್ನನ್ನು ತಿಳಿದವರು, ನನ್ನಲ್ಲಿ ಮನಸ್ಸಿಟ್ಟವರಾಗಿ ಸಾವಿನ ಹೊತ್ತಿನಲ್ಲೂ ನನ್ನನ್ನೇ ತಿಳಿಯುತ್ತಾರೆ.

ಇತಿ ಸಪ್ತಮೋಽಧ್ಯಾಯಃ