ಅಥ ದಶಮೋಽಧ್ಯಾಯಃ ಅಧ್ಯಾಯ ೧೦

1 ಭೂಯ ಏವ ಮಹಾ-ಬಾಹೋ ಶೃಣು ಮೇ ಪರಮಂ ವಚಃ । ಯತ್ ತೇಽಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತ-ಕಾಮ್ಯಯಾ ॥
ಓ ಮಹಾಬಾಹುವೆ, ನನ್ನ ಉತ್ತಮವಾದ ಮಾತನ್ನು ಮತ್ತೂ ಕೇಳು. ಅರಿವನ್ನು ಇಷ್ಟಪಡುವ ನಿನಗೆ ಹಿತವನ್ನು ಬಯಸಿಯೇ ನಾನು ಹೇಳುತ್ತೇನೆ.
2 ನ ಮೇ ವಿದುಃ ಸುರ-ಗಣಾಃ ಪ್ರಭವಂ ನ ಮಹರ್ಷಯಃ । ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ॥
ನನ್ನ ಹುಟ್ಟನ್ನು ದೇವತೆಗಳೂ ತಿಳಿದಿಲ್ಲ, ಋಷಿಗಳು ತಿಳಿದಿಲ್ಲ, ಏಕೆಂದರೆ ದೇವತೆಗಳಿಗೂ ಋಷಿಗಳಿಗೂ ಎಲ್ಲರಿಗೂ ಮೂಲ ನಾನೇ.
3 ಯೋ ಮಾಮಜಮನಾದಿಂ ಚ ವೇತ್ತಿ ಲೋಕ-ಮಹೇಶ್ವರಮ್ । ಅಸಮ್ಮೂಢಃ ಸ ಮರ್ತ್ಯೇಷು ಸರ್ವ-ಪಾಪೈಃ ಪ್ರಮುಚ್ಯತೇ ॥
ನಾನು ಹುಟ್ಟದವನು, ಪ್ರಾಣನಿಗೂ ತಂದೆಯು, ಲೋಕಪಾಲರಿಗಿಂತಲೂ ಶ್ರೇಷ್ಠನು ಎಂದು ಮನುಷ್ಯರಲ್ಲಿ ತಪ್ಪಿಲ್ಲದೆ ತಿಳಿದವನು ಎಲ್ಲ ಪಾಪಗಳಿಂದ ದೂರನಾಗುತ್ತಾನೆ.
4 ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ । ಸುಖಂ ದುಃಖಂ ಭವೋಽಭಾವೋ ಭಯಂ ಚಾಭಯಮೇವ ಚ ॥
5 ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋಽಯಶಃ । ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ ॥
ಬುದ್ಧಿ, ಜ್ಞಾನ, ನಿಶ್ಚಯ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ದೇವನಲ್ಲಿ ನಿಷ್ಠೆ, ಸುಖ, ದುಃಖ, ಹುಟ್ಟು, ಸಾವು, ಹೆದರಿಕೆ, ಧೈರ್ಯ, ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್, ದಾನ, ಯಶಸ್ಸು, ಅಪಕೀರ್ತಿ - ಹೀಗೆ ಬಗೆಬಗೆಯ ಗುಣಲಕ್ಷಣಗಳು ಜೀವಿಗಳಿಗೆಲ್ಲ ನನ್ನಿಂದಲೇ ಉಂಟಾಗುತ್ತವೆ.
6 ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ । ಮದ್ಭಾವಾ ಮಾನಸಾ ಜಾತಾಃ ಯೇಷಾಂ ಲೋಕ ಇಮಾಃ ಪ್ರಜಾಃ ॥
ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರ‍್ರತು ಮತ್ತು ವಸಿಷ್ಠ - ಈ ಏಳು ಮಂದಿ ಮೊದಲ ಸ್ವಾಯಂಭುವ ಮನ್ವಂತರದ ಮಹರ್ಷಿಗಳು ಹಾಗೂ ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ - ಈ ನಾಲ್ಕು ಮಂದಿ ಮೊದಲ ಮನುಗಳು ಚತುರ್ಮುಖನ ಸಂಕಲ್ಪದಿಂದ ಹುಟ್ಟಿದವರು. ಇವರು ನನ್ನ ಭಕ್ತರು. ಇವರಿಂದಲೆ ವಿಶ್ವದ ಈ ಜನರೆಲ್ಲ ಹುಟ್ಟಿದರು.
7 ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ । ಸೋಽವಿ-ಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ ॥
ನನ್ನ ಈ ವೈಭವವನ್ನು ಮತ್ತು ಯೋಗಸಾಮರ್ಥ್ಯವನ್ನು ಸರಿಯಾಗಿ ತಿಳಿದವನು ಸ್ಥಿರವಾದ ಧ್ಯಾನಯೋಗವನ್ನು ನಡೆಸುತ್ತಾನೆ. ಇದರಲ್ಲಿ ಸಂಶಯವಿಲ್ಲ.
8 ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ । ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವ-ಸಮನ್ವಿತಾಃ ॥
ನಾನು ಎಲ್ಲದರ ಸೃಷ್ಟಿಕಾರ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ ಎಂದು ಜ್ಞಾನಿಗಳು ತಿಳಿದು, ನನ್ನನ್ನು ಭಕ್ತಿಪೂರ್ಣರಾಗಿ ಸೇವಿಸುತ್ತಾರೆ.
9 ಮಚ್ಚಿತ್ತಾ ಮದ್ಗತ-ಪ್ರಾಣಾಃ ಬೋಧಯಂತಃ ಪರಸ್ಪರಮ್ । ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥
ನನ್ನಲ್ಲಿ ಮನಸ್ಸಿಟ್ಟವರು, ನನಗಾಗಿ ಬದುಕುವವರು, ನನ್ನನ್ನೇ ಒಬ್ಬರಿಗೊಬ್ಬರು ತಿಳಿಸುತ್ತ, ಹೇಳುತ್ತ ನಿತ್ಯವೂ ತೃಪ್ತಿಪಡುವರು, ಆನಂದಗೊಳ್ಳುವರು.
10 ತೇಷಾಂ ಸತತ-ಯುಕ್ತಾನಾಂ ಭಜತಾಂ ಪ್ರೀತಿ-ಪೂರ್ವಕಮ್ । ದದಾಮಿ ಬುದ್ಧಿ-ಯೋಗಂ ತಂ ಯೇನ ಮಾಮುಪಯಾಂತಿ ತೇ ॥
ನನ್ನಲ್ಲಿ ಮನಸಿಟ್ಟು ನಿತ್ಯವೂ ಪ್ರೀತಿಯಿಂದ ಸೇವೆಗೈಯುವವರಿಗೆ ಆ ಜ್ಞಾನಯೋಗವನ್ನು ನೀಡುತ್ತೇನೆ. ಅದರಿಂದ ಅವರು ನನ್ನನ್ನು ಸೇರುತ್ತಾರೆ.
11 ತೇಷಾಮೇವಾನು-ಕಂಪಾರ್ಥಂ ಅಹಮಜ್ಞಾನ-ಜಂ ತಮಃ । ನಾಶಯಾಮ್ಯಾತ್ಮ-ಭಾವಸ್ಥೋ ಜ್ಞಾನ-ದೀಪೇನ ಭಾಸ್ವತಾ ॥
ಅವರ ಮೇಲಿನ ಕನಿಕರದಿಂದಲೆ, ನಾನು ಅವರ ಮನಸ್ಸಿನಲ್ಲಿದ್ದು ಅಜ್ಞಾನದಿಂದ ಆದ ತಮಸ್ಸನ್ನು ಬೆಳಗುವ ಜ್ಞಾನದೀಪದಿಂದ ನಾಶ ಮಾಡುತ್ತೇನೆ.
ಅರ್ಜುನ ಉವಾಚ
12 ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ । ಪುರುಷಂ ಶಾಶ್ವತಂ ದಿವ್ಯಂ ಆದಿ-ದೇವಮಜಂ ವಿಭುಮ್ ॥
13 ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ । ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ॥
ಅರ್ಜುನನು ಹೇಳಿದನು - ಪರಿಪೂರ್ಣ ಬ್ರಹ್ಮ ನೀನೆ. ನೀನೆ ಕೊನೆಯ ಆಸರೆ. ಪರಮಪವಿತ್ರ ನೀನು, ನಿನ್ನನ್ನು ಪುರುಷ, ಶಾಶ್ವತ, ದಿವ್ಯ, ಆದಿದೇವ, ಅಜ, ವಿಭು ಎನ್ನುವುದಾಗಿ ಎಲ್ಲ ಋಷಿಗಳೂ ಹೇಳುತ್ತಾರೆ. ಹಾಗೆಯೇ ದೇವರ್ಷಿ ನಾರದರೂ, ಅಸಿತ, ದೇವಲ, ವ್ಯಾಸ ಇವರೂ ಹೇಳುತ್ತಾರೆ. ನೀನೂ ನನಗೆ ಹಾಗೆಯೇ ಹೇಳಿದ್ದಿ.
14 ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ । ನಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ॥
ಓ ಕೇಶವನೆ, ನನಗೆ ಹೇಳಿದ ಅದನ್ನೆಲ್ಲ ನಿಜವೆಂದೆ ತಿಳಿದಿರುವೆನು. ಓ ಭಗವಂತನೆ, ನಿನ್ನ ಅಭಿವ್ಯಕ್ತಿಯನ್ನು ದೇವತೆಗಳಾಗಲಿ ದಾನವರಾಗಲಿ ತಿಳಿದೇ ಇಲ್ಲ.
15 ಸ್ವಯಮೇವಾತ್ಮನಾಽಽತ್ಮಾನಂ ವೇತ್ಥ ತ್ವಂ ಪುರುಷೋತ್ತಮ । ಭೂತ-ಭಾವನ ಭೂತೇಶ ದೇವ-ದೇವ ಜಗತ್‌ಪತೇ ॥
ಓ ಪುರುಷೋತ್ತಮನೆ, ಎಲ್ಲವನ್ನು ಸೃಷ್ಟಿಸಿದವನೆ, ಎಲ್ಲರ ಸ್ವಾಮಿಯೆ, ದೇವತೆಗಳಿಗೂ ಜ್ಞಾನ ನೀಡಿದವನೆ, ವಿಶ್ವಪಾಲಕನೆ, ಯಾರ ಸಹಾಯವೂ ಇಲ್ಲದೆ ನೀನೇ ನೀನಾಗಿ ನಿನ್ನನ್ನು ಸ್ವರೂಪದಿಂದಲೆ ತಿಳಿದಿರುವೆ.
16 ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮ-ವಿಭೂತಯಃ । ಯಾಭಿರ್ವಿಭೂತಿಭಿರ್ಲೋಕಾನ್ ಇಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ॥
ನೀನು ಯಾವ ಯಾವ ರೂಪಗಳಿಂದ ಈ ಲೋಕಗಳನ್ನು ತುಂಬಿ ನಿಂತಿರುವೆಯೋ ನಿನ್ನ ಆ ಎಲ್ಲಾ ದಿವ್ಯ ವಿಭೂತಿರೂಪಗಳನ್ನು ಹೇಳಲೇಬೇಕು.
17 ಕಥಂ ವಿದ್ಯಾಮಹಂ ಯೋಗಿನ್ ತ್ವಾಂ ಸದಾ ಪರಿ-ಚಿಂತಯನ್ । ಕೇಷು-ಕೇಷು ಚ ಭಾವೇಷು ಚಿಂತ್ಯೋಽಸಿ ಭಗವನ್ ಮಯಾ ॥
ಓ ಯೋಗಿಯೆ, ನಿನ್ನನ್ನು ನಿತ್ಯವೂ ಪೂರ್ತಿ ಚಿಂತನೆಗೈಯ್ಯುತ್ತಾ ನಾನು ಹೇಗೆ ತಿಳಿಯಲಿ? ಓ ಭಗವಂತನೆ, ಯಾವ ಯಾವ ವಸ್ತುಗಳಲ್ಲಿ ನಾನು ಹೇಗೆ ಚಿಂತನೆಗೈಯಲಿ?
18 ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ । ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಽಮೃತಮ್ ॥
ಓ ಜನಾರ್ದನನೆ, ನಿನ್ನ ವಿಭೂತಿರೂಪಗಳ ಸಂಬಂಧವನ್ನು ಇನ್ನೂ ವಿಸ್ತರಿಸಿ ಹೇಳು. ನಿತ್ಯವೂ ಇರುವ ನಿನ್ನ ರೂಪವನ್ನು ಕೇಳಿ ನನಗೆ ತೃಪ್ತಿಯೆ ಇಲ್ಲ.
ಭಗವಾನ್ ಉವಾಚ
19 ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮ-ವಿಭೂತಯಃ । ಪ್ರಾಧಾನ್ಯತಃ ಕುರು-ಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ ॥
ಕೃಷ್ಣನು ಹೇಳಿದನು - ಓ ಕುರುಶ್ರೇಷ್ಠನೆ, ನನ್ನ ವಿಶೇಷ ವಿಭೂತಿ ರೂಪಗಳಲ್ಲಿ ಮುಖ್ಯವಾದವುಗಳನ್ನಷ್ಟೆ ನಿನಗಾಗಿ ಹೇಳುತ್ತೇನೆ. ವಿಸ್ತರಿಸಿ ಹೇಳಿದರೆ ನನ್ನ ರೂಪಗಳಿಗೆ ಕೊನೆಯಿಲ್ಲ ತಾನೆ!
20 ಅಹಮಾತ್ಮಾ ಗುಡಾಕೇಶ ಸರ್ವ-ಭೂತಾಶಯ-ಸ್ಥಿತಃ । ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ॥
ಓ ನಿದ್ದೆಯನ್ನು ಗೆದ್ದವನೆ, ಎಲ್ಲ ಜೀವಿಗಳ ಹೃದಯದಲ್ಲಿ ನಾನೇ ಅಂತರ್ಯಾಮಿಯಾಗಿ ಇರುವವನು. ಎಲ್ಲ ಜೀವಿಗಳಿಗೂ ಮೂಲ, ನಡು ಮತ್ತೆ ಕೊನೆಯೂ ನಾನೆ.
21 ಆದಿತ್ಯಾನಾಮಹಂ ವಿಷ್ಣುಃ ಜ್ಯೋತಿಷಾಂ ರವಿರಂಶುಮಾನ್ । ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥
ಅದಿತಿಯ ಹನ್ನೆರಡು ಮಂದಿ ಮಕ್ಕಳಲ್ಲಿ ನಾನು ವಿಷ್ಣು. ಬೆಳಗಿಸುವ ವಸ್ತುಗಳಲ್ಲಿ ಸಾವಿರ ಕಿರಣವುಳ್ಳ ರವಿ ನಾನು. ಮರುತ್ತುಗಳ ವಂಶದವರಲ್ಲಿ ಮರೀಚಿ (ಪ್ರವಹವಾಯುಪುತ್ರ) ನಾನು. ನಕ್ಷತ್ರಗಳ ಒಡೆಯ ಶಶಿ ನಾನು.
22 ವೇದಾನಾಂ ಸಾಮ-ವೇದೋಽಸ್ಮಿ ದೇವಾನಾಮಸ್ಮಿ ವಾಸವಃ । ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ॥
ವೇದಗಳಲ್ಲಿ ಸಾಮವೇದ ನಾನು. ದೇವತೆಗಳಲ್ಲಿ ಇಂದ್ರ ನಾನು. ಹನ್ನೊಂದು ಇಂದ್ರಿಯಗಳಲ್ಲಿ ಮನಸ್ಸು ನಾನು. ಜೀವಿಗಳಲ್ಲಿ ಚೈತನ್ಯ ನಾನು.
23 ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷ-ರಕ್ಷಸಾಮ್ । ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ॥
ರೈವತ, ಓಜಸ್, ಭವ, ಭೀಮ, ವಾಮ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುಧ್ನ್ಯ, ಬಹುರೂಪ ಮತ್ತು ಶಂಕರರೆಂಬ ಹನ್ನೊಂದು ರುದ್ರರಲ್ಲಿ ಶಂಕರನು ನಾನು. ಯಕ್ಷ-ರಾಕ್ಷಸರ ಒಡೆಯ ಕುಬೇರ ನಾನು. ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ, ವಸ್ತು ಮತ್ತು ವಿಭಾವಸುಗಳೆಂಬ ಎಂಟು ವಸುಗಳಲ್ಲಿ ಅಗ್ನಿ ನಾನು. ಗಿರಿಗಳಲ್ಲಿ ಮೇರು ನಾನು.
24 ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ । ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥
ಓ ಪಾರ್ಥನೆ, ಪುರೋಹಿತರಲ್ಲಿ ಶ್ರೇಷ್ಠನಾದ ಗುರು ನಾನು ಎಂದು ತಿಳಿ. ಸೇನಾಪತಿಗಳಲ್ಲಿ ಸ್ಕಂದ ನಾನು. ಜಲಾಶಯಗಳಲ್ಲಿ ಸಮುದ್ರ ನಾನು.
25 ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೈಕಮಕ್ಷರಮ್ । ಯಜ್ಞಾನಾಂ ಜಪ-ಯಜ್ಞೋಽಸ್ಮಿ ಸ್ಥಾವರಾಣಾಂ ಹಿಮಾಲಯಃ ॥
ಮಹರ್ಷಿಗಳಲ್ಲಿ ಭೃಗು ನಾನು. ಮಾತುಗಳಲ್ಲಿ ಒಂದಕ್ಷರ (ಓಂ) ನಾನು. ಯಜ್ಞಗಳಲ್ಲಿ ಜಪಯಜ್ಞ ನಾನು. ಪರ್ವತಗಳಲ್ಲಿ ಹಿಮಾಲಯ ನಾನು.
26 ಅಶ್ವತ್ಥಃ ಸರ್ವ-ವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ । ಗಂಧರ್ವಾಣಾಂ ಚಿತ್ರ-ರಥಃ ಸಿದ್ಧಾನಾಂ ಕಪಿಲೋ ಮುನಿಃ ॥
ಎಲ್ಲ ಮರಗಳಲ್ಲಿ ಅಶ್ವತ್ಥ ನಾನು. ದೇವರ್ಷಿಗಳಲ್ಲಿ ನಾರದ ನಾನು. ಗಂಧರ್ವರಲ್ಲಿ ಚಿತ್ರರಥ ನಾನು. ಸಿದ್ಧರಲ್ಲಿ ಕಪಿಲಋಷಿ ನಾನು.
27 ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ । ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ ॥
ಕುದುರೆಗಳಲ್ಲಿ ಕ್ಷೀರಸಮುದ್ರದಿಂದ ಮೇಲೆ ಬಂದ ಉಚ್ಚೈಃಶ್ರವಸ್ಸು (ಇಂದ್ರನ ಕುದುರೆ) ನಾನು ಎಂದು ತಿಳಿ. ಆನೆಗಳಲ್ಲಿ ಐರಾವತ (ಇಂದ್ರನ ಆನೆ) ನಾನು. ಮನುಷ್ಯರಲ್ಲಿ ರಾಜನು ನಾನು.
28 ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮ-ಧುಕ್ । ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥
ಆಯುಧಗಳಲ್ಲಿ ವಜ್ರಾಯುಧ ನಾನು. ದನಗಳಲ್ಲಿ ಕಾಮಧೇನು ನಾನು. ಸಂತಾನ ನೀಡುವವರಲ್ಲಿ ಶ್ರೇಷ್ಠ ಮನ್ಮಥ ನಾನು. ಸರ್ಪಗಳಲ್ಲಿ ವಾಸುಕಿ ನಾನು.
29 ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ । ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥
ನಾಗಗಳಲ್ಲಿ ಶೇಷ ನಾನು. ಜಲಚರಗಳ ಒಡೆಯ ವರುಣ ನಾನು. ಪಿತೃದೇವತೆಗಳ ಒಡೆಯ ಅರ‍್ಯಮಾ ನಾನು. ದಂಡಿಸುವವರಲ್ಲಿ ಯಮ ನಾನು.
30 ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ । ಮೃಗಾಣಾಂ ಚ ಮೃಗೇಂದ್ರೋಽಹಂ ವೈನತೇಯಶ್ಚ ಪಕ್ಷಿಣಾಮ್ ॥
ದೈತ್ಯರಲ್ಲಿ ಪ್ರಹ್ಲಾದ ನಾನು. ಕಳೆಯುವವರಲ್ಲಿ ಕಾಲ ನಾನು. ಮೃಗಗಳಲ್ಲಿ ಸಿಂಹ ನಾನು. ಹಕ್ಕಿಗಳಲ್ಲಿ ವಿನತೆಯ ಮಗನಾದ ಗರುಡ ನಾನು.
31 ಪವನಃ ಪವತಾಮಸ್ಮಿ ರಾಮಃ ಶಸ್ತ್ರ-ಭೃತಾಮಹಮ್ । ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ॥
ಪಾವನಗೊಳಿಸುವ ವಸ್ತುಗಳಲ್ಲಿ ಗಾಳಿ ನಾನು. ಆಯುಧ ಹೊತ್ತವರಲ್ಲಿ ಪರಶುರಾಮ ನಾನು. ಮೀನುಜಾತಿಗಳಲ್ಲಿ ಮೊಸಳೆ ನಾನು. ನದಿಗಳಲ್ಲಿ ಗಂಗೆ ನಾನು.
32 ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ । ಅಧ್ಯಾತ್ಮ-ವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ॥
ಓ ಅರ್ಜುನನೆ, ಎಲ್ಲದರ ಹುಟ್ಟಿಗೆ ಬುಡ, ನಡು, ಕೊನೆ ನಾನೇ. ವಿದ್ಯೆಗಳಲ್ಲಿ ಅಧ್ಯಾತ್ಮ ವಿದ್ಯೆ ನಾನು. ತತ್ವಕ್ಕಾಗಿ ನಡೆಸುವ ಚರ್ಚೆಗಳಲ್ಲಿ ವಾದ ನಾನು.
33 ಅಕ್ಷರಾಣಾಮಕಾರೋಽಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ । ಅಹಮೇವಾಕ್ಷಯಃ ಕಾಲೋ ಧಾತಾಽಹಂ ವಿಶ್ವತೋ-ಮುಖಃ ॥
ಅಕ್ಷರಗಳಲ್ಲಿ ಅಕಾರ ನಾನು. ಸಮಾಸಗಳಲ್ಲಿ ದ್ವಂದ್ವಸಮಾಸ ನಾನು. ನಾಶವಿಲ್ಲದ ಕಾಲವೂ ನಾನೇ. ಎಲ್ಲೆಡೆ ಇದ್ದು ಎಲ್ಲವನ್ನೂ ಹೊತ್ತು ಪೋಷಿಸುವವನು ನಾನು.
34 ಮೃತ್ಯುಃ ಸರ್ವ-ಹರಶ್ಚಾಹಂ ಉದ್ಭವಶ್ಚ ಭವಿಷ್ಯತಾಮ್ । ಕೀರ್ತಿಃ ಶ್ರೀರ್ವಾಕ್ ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥
ಎಲ್ಲವನ್ನು ಸಂಹರಿಸುವ ಮೃತ್ಯುದೇವತೆ ನಾನು. ಮುಂದೆ ಆಗುವುದನ್ನು ಹುಟ್ಟಿಸುವವನು ನಾನು. ಹೆಂಗಸರಲ್ಲಿ ಕೀರ್ತಿ, ಶ್ರೀ, ಮಾತು, ನೆನಪು, ಧಾರಣಾಶಕ್ತಿ, ಧೈರ್ಯ, ಕ್ಷಮೆ ನಾನು.
35 ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ತ್ರೀ ಛಂದಸಾಮಹಮ್ । ಮಾಸಾನಾಂ ಮಾರ್ಗ-ಶೀರ್ಷೋಽಹಂ ಋತೂನಾಂ ಕುಸುಮಾಕರಃ ॥
ಬೃಹತ್, ರಥಂತರ, ತ್ರಿರೂಪ, ವೈರಾಜ, ಶಾಕ್ವರ ಮತ್ತು ದೈವತಗಳೆಂಬ ಆರು ಸಾಮಗಳಲ್ಲಿ ನಾನು ಬೃಹತ್ಸಾಮ. ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತಿ, ತ್ರಿಷ್ಟುಪ್, ಮತ್ತು ಜಗತೀ ಎಂಬ ಏಳು ಛಂದಸ್ಸುಗಳಲ್ಲಿ ಗಾಯತ್ರೀ ಛಂದಸ್ ನಾನು. ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುನಗಳೆಂಬ ೧೨ ತಿಂಗಳುಗಳಲ್ಲಿ ಮಾರ್ಗಶೀರ್ಷ ನಾನು. ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರಗಳೆಂಬ ಆರು ಋತುಗಳಲ್ಲಿ ವಸಂತ ನಾನು.
36 ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ । ಜಯೋಽಸ್ಮಿ ವ್ಯವಸಾಯೋಽಸ್ಮಿ ಸತ್ವಂ ಸತ್ತ್ವ-ವತಾಮಹಮ್ ॥
ಮೋಸದ ಆಟಗಳಲ್ಲಿ ಜೂಜು ನಾನು. ತೇಜಸ್ವಿಗಳಲ್ಲಿ ತೇಜಸ್ ನಾನು. ಗೆಲುವು ನಾನು. ದುಡಿಮೆ ನಾನು. ಸಾರವುಳ್ಳ ವಸ್ತುಗಳಲ್ಲಿ ಸಾರ ನಾನು.
37 ವೃಷ್ಣೀನಾಂ ವಾಸು-ದೇವೋಽಸ್ಮಿ ಪಾಂಡವಾನಾಂ ಧನಂ-ಜಯಃ । ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥
ಯಾದವರಲ್ಲಿ ವಸುದೇವನ ಮಗ ಕೃಷ್ಣ ನಾನು. ಪಾಂಡುಸುತರಲ್ಲಿ ಅರ್ಜುನ ನಾನು. ಮುನಿಗಳಲ್ಲಿ ನಾನು ವೇದವ್ಯಾಸ. ಕವಿಗಳಲ್ಲಿ ನಾನು ಶುಕ್ರ.
38 ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ । ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನ-ವತಾಮಹಮ್ ॥
ಶಿಕ್ಷಿಸುವುದರಲ್ಲಿ ದಂಡ ನಾನು. ಗೆಲ್ಲಲು ಬಯಸುವವರ ನಯಗಾರಿಕೆ ನಾನು. ಗುಟ್ಟುಗಳಲ್ಲಿ ಮೌನ ನಾನು. ಜ್ಞಾನಿಗಳಲ್ಲಿ ಜ್ಞಾನ ನಾನು.
39 ಯಚ್ಚಾಪಿ ಸರ್ವ-ಭೂತಾನಾಂ ಬೀಜಂ ತದಹಮರ್ಜುನ । ನ ತದಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಂ ಚರಾಚರಮ್ ॥
ಓ ಅರ್ಜುನನೆ, ಎಲ್ಲದರ ಹುಟ್ಟಿಗೆ ಕಾರಣ ಏನೆಲ್ಲ ಇದೆಯೊ ಅದು ನಾನೆ. ಹುಟ್ಟಿದ ಈ ಜಡ-ಜೀವ ಪ್ರಪಂಚ ನನ್ನನ್ನು ಬಿಟ್ಟು ಇಲ್ಲ.
40 ನಾಂತೋಽಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂ ತಪ । ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥
ನನ್ನ ದಿವ್ಯವಿಭೂತಿರೂಪಗಳಿಗೆ ಕೊನೆ ಇಲ್ಲ. ಉದಾಹರಣೆಯಾಗಿ ಕೆಲವು ವಿಭೂತಿರೂಪಗಳನ್ನು ಸ್ವಲ್ಪ ವಿಸ್ತರಿಸಿ ನಾನು ಹೇಳಿದೆ. ಇನ್ನೂ ನೆನಪಿಸಿಕೊ.
41 ಯದ್ಯದ್ ವಿಭೂತಿ-ಮತ್ ಸತ್ವಂ ಶ್ರೀ-ಮದೂರ್ಜಿತಮೇವ ವಾ । ತತ್ತದೇವಾವ-ಗಚ್ಛ ತ್ವಂ ಮಮ ತೇಜೋಽಂಶ-ಸಂಭವಮ್ ॥
ಸಾರವತ್ತಾದ್ದು, ಶ್ರೀಮಂತವಾದ್ದು, ಉತ್ತಮ ಮಟ್ಟದ್ದು ಏನೆಲ್ಲ ಇದೆಯೋ ಅವೆಲ್ಲವೂ ನನ್ನ ವಿಭೂತಿರೂಪವುಳ್ಳದ್ದು ಎಂದು ತಿಳಿ. ಅದು ನನ್ನ ತೇಜಸ್ಸಿನ ತುಣುಕನ್ನು ಹೊತ್ತು ಬಂದಿದೆ.
42 ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ । ವಿಷ್ಟಭ್ಯಾಹಮಿದಂ ಕೃತ್ಸ್ನಂ ಏಕಾಂಶೇನ ಸ್ಥಿತೋ ಜಗತ್ ॥
ಓ ಅರ್ಜುನನೆ, ಮತ್ತೆ ನಿನಗೆ ಈ ನಾನಾ ವಿಭೂತಿಗಳ ಅರಿವಿನಿಂದ ಏನು ತಿಳಿದ ಹಾಗಾಯಿತು? ನಾನು ಒಂದಂಶದಿಂದ ಪೂರ್ತಿ ಪ್ರಪಂಚವನ್ನು ವ್ಯಾಪಿಸಿ ಇದ್ದೇನೆ.

ಇತಿ ದಶಮೋಽಧ್ಯಾಯಃ