|
ಅರ್ಜುನ
ಉವಾಚ
|
|
1
|
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮ-ಸಂಜ್ಞಿತಮ್ ।
ಯತ್ ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ ॥ |
|
ಅರ್ಜುನನು ಹೇಳಿದನು - ನನ್ನನ್ನು ಅನುಗ್ರಹಿಸಲು ಅಧ್ಯಾತ್ಮ ಎಂಬ ದೊಡ್ಡ ರಹಸ್ಯವನ್ನು ನೀನು ಹೇಳಿದೆ. ಆ ಮಾತಿನಿಂದ ನನ್ನ ಈ ಮೋಹ (ತಪ್ಪು ಚಿಂತನೆ) ಹೋಯಿತು. |
|
2
|
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲ-ಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥ |
|
ಓ ಕಮಲದ ಎಸಳಿನಂತೆ ನೀಳವಾದ ಕಣ್ಣಿನವನೆ, ಜೀವಿಗಳ ಹುಟ್ಟು-ಸಾವುಗಳನ್ನು ವಿಸ್ತಾರವಾಗಿ ನಿನ್ನಿಂದ ನಾನು ಕೇಳಿದೆನು. ನಿನ್ನ ನಾಶವಿರದ ಮಹಿಮೆಯನ್ನೂ ಕೇಳಿದೆನು. |
|
3
|
ಏವಮೇತದ್ ಯಥಾಽಽತ್ಥ ತ್ವಂ ಆತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಂ ಐಶ್ವರಂ ಪುರುಷೋತ್ತಮ ॥ |
|
ಓ ಪರಮೇಶ್ವರನೆ, ನೀನು ನಿನ್ನ ಬಗ್ಗೆ ಏನು ಹೇಳಿದೆಯೋ ಅದು ಹಾಗೆಯೆ ಇದೆ. ಓ ಪುರುಷೋತ್ತಮನೆ, ಪ್ರಪಂಚವನ್ನು ಪಾಲಿಸುವ ನಿನ್ನ ರೂಪವನ್ನು ಕಾಣಲು ಬಯಸುತ್ತೇನೆ. |
|
4
|
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾಽತ್ಮಾನಮವ್ಯಯಮ್ ॥ |
|
ಓ ಸ್ವಾಮಿಯೆ, ಯೋಗಿಗಳ ಪಾಲಕನೆ, ಆ ರೂಪ ನನ್ನಿಂದ ನೋಡಲು ಸಾಧ್ಯವಿದೆ ಎಂದು ನೀನು ತಿಳಿಯುವುದಾದರೆ, ನನಗೆ ನಾಶವಿರದ ನಿನ್ನ ರೂಪವನ್ನು ತೋರಿಸು. |
|
ಭಗವಾನ್
ಉವಾಚ
|
|
5
|
ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ ।
ನಾನಾ-ವಿಧಾನಿ ದಿವ್ಯಾನಿ ನಾನಾ-ವರ್ಣಾಕೃತೀನಿ ಚ ॥ |
|
ಕೃಷ್ಣನು ಹೇಳಿದನು - ಓ ಪಾರ್ಥನೆ, ಅನೇಕ ಬಣ್ಣಗಳ, ವಿವಿಧ ಆಕಾರಗಳ, ಬಗೆಬಗೆಯಲ್ಲಿ ಹೊಳೆವ ನನ್ನ ನೂರಾರು, ಸಾವಿರಾರು, ಇನ್ನೂ ಹೆಚ್ಚಿನ ರೂಪಗಳನ್ನು ನೋಡು. |
|
6
|
ಪಶ್ಯಾಽದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟ-ಪೂರ್ವಾಣಿ ಪಶ್ಯಾಽಶ್ಚರ್ಯಾಣಿ ಭಾರತ ॥ |
|
ಓ ಭಾರತನೆ, ಆದಿತ್ಯರನ್ನೂ ವಸುಗಳನ್ನೂ ರುದ್ರರನ್ನೂ ಅಶ್ವಿನಿಗಳನ್ನೂ ಮತ್ತು ಮರುತ್ತುಗಳನ್ನೂ ನೋಡು. ಹಿಂದೆಂದೂ ಕಂಡಿರದ ಬಹಳ ಆಶ್ಚರ್ಯಗಳನ್ನು ನೋಡು. |
|
7
|
ಇಹೈಕ-ಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸ-ಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥ |
|
ಓ ನಿದ್ದೆಯನ್ನು ಗೆದ್ದವನೆ, ಇಲ್ಲಿ ಒಂದೇ ಕಡೆ ಸೇರಿದ ಜಡ-ಜೀವಗಳಿಂದ ಕೂಡಿದ ಪೂರ್ತಿ ಪ್ರಪಂಚವನ್ನು ಈಗ ನೋಡು. ಬೇರೆ ಏನನ್ನಾದರೂ ನೋಡಲು ಬಯಸುವೆಯಾದರೆ ಅದನ್ನೂ ನನ್ನ ದೇಹದಲ್ಲಿ ನೋಡು. |
|
8
|
ನತು ಮಾಂ ಶಕ್ಯಸೇ ದ್ರಷ್ಟುಂ ಅನೇನೈವ ಸ್ವ-ಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ॥ |
|
ನಿನ್ನ ಇದೇ ಕಣ್ಣಿನಿಂದ ನನ್ನನ್ನು ನೋಡಲು ಸಮರ್ಥನು ಆಗಲಾರೆ. ನಿನಗೆ ದಿವ್ಯವಾದ ಕಣ್ಣು ನೀಡುತ್ತೇನೆ. ನನ್ನ ವಿಶ್ವಪಾಲನೆಯ ರೂಪವನ್ನು ನೋಡು. |
|
9
|
ಏವಮುಕ್ತ್ವಾ ತತೋ ರಾಜನ್ ಮಹಾ-ಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥ |
|
ಓ ಧೃತರಾಷ್ಟ್ರ ರಾಜನೆ, ಮಹಾಯೋಗಿಗಳಿಗೂ ಸ್ವಾಮಿಯಾದ ಕೃಷ್ಣನು ಹೀಗೆ ಹೇಳಿ, ಮತ್ತೆ ಅರ್ಜುನನಿಗೆ ವಿಶ್ವವನ್ನು ಪಾಲಿಸುವ ಉತ್ತಮ ರೂಪವನ್ನು ತೋರಿಸಿದನು. |
|
10
|
ಅನೇಕ-ವಕ್ತ್ರ-ನಯನಂ ಅನೇಕಾದ್ಭುತ-ದರ್ಶನಮ್ ।
ಅನೇಕ-ದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥ |
|
ಬಹಳ ಬಾಯಿ, ಕಣ್ಣುಗಳ ರೂಪ. ನೋಡಲು ಬಹಳ ಅಚ್ಚರಿಯ ರೂಪ. ಹೊಳೆವ ಬಹಳ ಆಭರಣಗಳುಳ್ಳ ರೂಪ. ಹೊಳೆವ ಬಹಳ ಆಯುಧಗಳ ಎತ್ತಿಹಿಡಿದ ರೂಪ. |
|
11
|
ದಿವ್ಯ-ಮಾಲ್ಯಾಂಬರ-ಧರಂ ದಿವ್ಯ-ಗಂಧಾನು-ಲೇಪನಮ್ ।
ಸರ್ವಾಶ್ಚರ್ಯ-ಮಯಂ ದೇವಂ ಅನಂತಂ ವಿಶ್ವತೋ-ಮುಖಮ್ ॥ |
|
ಹೊಳೆವ ಮಾಲೆಗಳ, ಬಟ್ಟೆಗಳ ಧರಿಸಿರುವ ರೂಪ. ಗಂಧ ಮೆತ್ತಿಕೊಂಡು ಹೊಳೆವ ರೂಪ. ಎಲ್ಲ ಆಶ್ಚರ್ಯಗಳ ರಾಶಿ. ಎಲ್ಲ ಲೀಲೆಗಳ ರೂಪ. ಎಲ್ಲೆಡೆಯೂ ತುಂಬಿರುವ ಅನಂತ ರೂಪ. |
|
12
|
ದಿವಿ ಸೂರ್ಯ-ಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸಸ್ತಸ್ಯ ಮಹಾತ್ಮನಃ ॥ |
|
ಆಕಾಶದಲ್ಲಿ ಸಾವಿರಾರು ಸೂರ್ಯರು ಒಮ್ಮೆಲೇ ಮೂಡಿಬಂದರೆ, ಅಂಥ ಬೆಳಕು ಆ ದೊಡ್ಡ ರೂಪ ಹೊತ್ತವನ ಬೆಳಕಿಗೆ ಸಮ ಆದೀತೋ ಏನೋ? |
|
13
|
ತತ್ರೈಕ-ಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕ-ಧಾ ।
ಅಪಶ್ಯದ್ ದೇವ-ದೇವಸ್ಯ ಶರೀರೇ ಪಾಂಡವಸ್ತದಾ ॥ |
|
ದೇವೋತ್ತಮನಾದ ಕೃಷ್ಣನ ಆ ದೇಹದಲ್ಲಿ ಇಡಿಯ ಪ್ರಪಂಚವು ಬಹಳ ರೀತಿಯಲ್ಲಿ ವಿಭಾಗಗೊಂಡು ಒಂದೇ ಕಡೆ ಇರುವುದನ್ನು ಆಗಲೆ ಅರ್ಜುನನು ಕಂಡನು. |
|
14
|
ತತಃ ಸ ವಿಸ್ಮಯಾವಿಷ್ಟೋ ಹೃಷ್ಟ-ರೋಮಾ ಧನಂ-ಜಯಃ ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥ |
|
ಅರ್ಜುನನು ನಿಬ್ಬೆರಗಾಗಿ ರೋಮಾಂಚನಗೊಂಡು ತಲೆಯನ್ನು ನೆಲಕ್ಕೆ ತಾಗಿಸಿ ಉದ್ದಂಡ ನಮಿಸಿದನು. ಮತ್ತೆ ಆತನು ಕೃಷ್ಣನಿಗೆ ಕೈ ಮುಗಿದು ಹೇಳಿಕೊಂಡನು. |
|
15
|
ಪಶ್ಯಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತ-ವಿಶೇಷ-ಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನ-ಸ್ಥಂ
ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥ |
|
ಓ ದೇವರೆ, ನಿನ್ನ ಶರೀರದಲ್ಲಿ ಎಲ್ಲ ದೇವತೆಗಳನ್ನು ನೋಡುತ್ತಿದ್ದೇನೆ. ಹಾಗೆಯೇ ನಿನ್ನ ಶರೀರದಲ್ಲಿ ಎಲ್ಲ ಬಗೆಯ ಜೀವಿಗಳ ರಾಶಿಗಳನ್ನೂ ನೋಡುತ್ತಿದ್ದೇನೆ. ಬ್ರಹ್ಮನನ್ನು ನೋಡುತ್ತಿದ್ದೇನೆ. ಪದ್ಮದ ಮೇಲಿರುವ ಬ್ರಹ್ಮನ ತೊಡೆಯಲ್ಲಿ ಶಿವನನ್ನು ನೋಡುತ್ತಿದ್ದೇನೆ. ಎಲ್ಲ ಋಷಿಗಳನ್ನೂ ಮತ್ತು ದಿವ್ಯನಾಗಗಳನ್ನೂ ನೋಡುತ್ತಿದ್ದೇನೆ. |
|
16
|
ಅನೇಕ-ಬಾಹೂದರ-ವಕ್ತ್ರ-ನೇತ್ರಂ
ಪಶ್ಯಾಮಿ ತ್ವಾಂ ಸರ್ವತೋಽನಂತ-ರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾಽದಿಂ
ಪಶ್ಯಾಮಿ ವಿಶ್ವೇಶ್ವರ ವಿಶ್ವ-ರೂಪ ॥ |
|
ಅನಂತರೂಪನನ್ನಾಗಿ ನಿನ್ನನ್ನು ಕಾಣುತ್ತಿದ್ದೇನೆ. ಎಲ್ಲೆಡೆಯೂ ಬಹಳ ತೋಳುಗಳು, ಹೊಟ್ಟೆಗಳು, ಬಾಯಿಗಳು, ಕಣ್ಣುಗಳು ಕಾಣುತ್ತಿವೆ. ಓ ವಿಶ್ವರೂಪನೆ, ಎಲ್ಲರ ಸ್ವಾಮಿಯೇ, ನಿನ್ನ ರೂಪದ ತುದಿ ಕಾಣುತ್ತಿಲ್ಲ. ಮಧ್ಯವೂ ಕಾಣದಾಗಿದೆ. ಬುಡವೂ ಕಂಡುಬರುತ್ತಿಲ್ಲ. |
|
17
|
ಕಿರೀಟಿನಂ ಗದಿನಂ ಚಕ್ರಿಣಂ ಚ
ತೇಜೋ-ರಾಶಿಂ ಸರ್ವತೋ ದೀಪ್ತಿ-ಮಂತಮ್ ।
ಪಶ್ಯಾಮಿ ತ್ವಾ ದುರ್ನಿರೀಕ್ಷ್ಯಂ ಸಮಂತಾತ್
ದೀಪ್ತಾನಲಾರ್ಕ-ದ್ಯುತಿಮಪ್ರಮೇಯಮ್ ॥ |
|
ಸುತ್ತಲೂ ಬೆಳಕಿನ ರಾಶಿಯನ್ನೆ ನೋಡುತ್ತಿರುವೆನು. ಹೊಳೆವ ಕಿರೀಟ ತೊಟ್ಟ, ಗದೆ ಹಿಡಿದ, ಚಕ್ರವೆತ್ತಿರುವ ನಿನ್ನನ್ನು ಕಾಣುತ್ತಿದ್ದೇನೆ. ನಿನ್ನ ಆ ರೂಪವನ್ನು ಸರಿಯಾಗಿ ಕಾಣಲಾಗುತ್ತಿಲ್ಲ. ಹೀಗೆಯೇ ಇದೆ ಎಂದು ಹೇಳಲಾಗುತ್ತಿಲ್ಲ. ಸುತ್ತಲೂ ಉರಿವ ಬೆಂಕಿಯಂತೆ ಮತ್ತು ಸೂರ್ಯನಂತೆ ಪ್ರಕಾಶವನ್ನೇ ನೋಡುತ್ತಿದ್ದೇನೆ. |
|
18
|
ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತ-ಧರ್ಮ-ಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ ॥ |
|
ನೀನು ಮುಖ್ಯವಾಗಿ ತಿಳಿಯಬೇಕಾದ ಓಂಕಾರನು. ನೀನು ಈ ಪ್ರಪಂಚಕ್ಕೆ ದೊಡ್ಡ ಆಶ್ರಯ. ನೀನು ನಾಶವಿಲ್ಲದವನು, ಸನಾತನ ಧರ್ಮದ ರಕ್ಷಕನು. ನೀನು ಮೊದಲಿಂದಲೂ ಇದ್ದ ಪುರುಷನು ಎಂದು ನನಗೆ ಗೊತ್ತು. |
|
19
|
ಅನಾದಿ-ಮಧ್ಯಾಂತಮನಂತ-ವೀರ್ಯಂ
ಅನಂತ-ಬಾಹುಂ ಶಶಿ-ಸೂರ್ಯ-ನೇತ್ರಮ್ ।
ಪಶ್ಯಾಮಿ ತ್ವಾ ದೀಪ್ತ-ಹುತಾಶ-ವಕ್ತ್ರಂ
ಸ್ವ-ತೇಜಸಾ ವಿಶ್ವಮಿದಂ ತಪಂತಮ್ ॥ |
|
ತುದಿ, ನಡು, ಬುಡವಿಲ್ಲದ ನಿನ್ನ ರೂಪವನ್ನು ನೋಡುತ್ತಿರುವೆನು. ನಾಶವಾಗದ ಬಲವುಳ್ಳ, ಅನಂತ ಕೈಗಳುಳ್ಳ ರೂಪವನ್ನು ಕಾಣುತ್ತಿರುವೆನು. ಚಂದ್ರ-ಸೂರ್ಯರ ಸೃಷ್ಟಿಸಿದ ಕಣ್ಣುಗಳ ರೂಪವನ್ನು, ಉರಿಯುವ ಬೆಂಕಿಯನ್ನು ಹೊರಚೆಲ್ಲುವ ಬಾಯಿಯ ರೂಪವನ್ನು ನೋಡಿದೆನು. ತನ್ನ ತೇಜಸ್ಸಿನಿಂದ ಈ ಜಗತ್ತನ್ನೆ ಸುಡುತ್ತಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. |
|
20
|
ದ್ಯಾವಾ-ಪೃಥಿವ್ಯೋರಿದಮಂತರಂ ಹಿ
ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾಽದ್ಭುತಂ ರೂಪಮುಗ್ರಂ ತವೇದಂ
ಲೋಕ-ತ್ರಯಂ ಪ್ರವ್ಯಥಿತಂ ಮಹಾತ್ಮನ್ ॥ |
|
ಭೂಲೋಕ ಮತ್ತು ಸ್ವರ್ಗದ ನಡುವಿನ ಅಂತರಿಕ್ಷವನ್ನೆಲ್ಲ ಹತ್ತು ದಿಕ್ಕುಗಳಲ್ಲೂ ನಿನ್ನ ಒಂದೇ ರೂಪ ತುಂಬಿದೆ. ಓ ಬೃಹದ್ರೂಪನೆ, ನಿನ್ನ ಈ ಅದ್ಭುತವಾದ ಭಯಂಕರ ರೂಪವನ್ನು ಕಂಡು ಮೂರೂ ಲೋಕದ ಜನರು ಪೂರ್ತಿ ಹೆದರಿ ನಡುಗುತ್ತಿದ್ದಾರೆ. |
|
21
|
ಅಮೀ ಹಿ ತ್ವಾಸುರ-ಸಂಘಾ ವಿಶಂತಿ
ಕೇಚಿದ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿ-ಸಿದ್ಧ-ಸಂಘಾಃ
ಸ್ತುವಂತಿ ತ್ವಾ ಸ್ತುತಿಭಿಃ ಪುಷ್ಕಳಾಭಿಃ ॥ |
|
ಅಸುರರ ಈ ಗುಂಪುಗಳು ನಿನ್ನೊಳಗೆ ಹೋಗುತ್ತಿವೆ. ಕೆಲವರು ಹೆದರಿ ನಿನ್ನನ್ನು ಕೈಮುಗಿದು ಹೊಗಳುತ್ತಿದ್ದಾರೆ. ಸ್ವಸ್ತಿ (ಒಳ್ಳೆಯದು ಆಗಲಿ) ಎಂದು ಹೇಳುತ್ತಾ ಮಹರ್ಷಿಗಳ, ಸಿದ್ಧರ ಗುಂಪುಗಳು ನಿನ್ನನ್ನು ಸ್ತೋತ್ರಗಳಿಂದ ಸ್ತುತಿಸುತ್ತಿದ್ದಾರೆ. |
|
22
|
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾಃ
ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವ-ಯಕ್ಷಾಸುರ-ಸಿದ್ಧ-ಸಂಘಾಃ
ವೀಕ್ಷಂತೇ ತ್ವಾ ವಿಸ್ಮಿತಾಶ್ಚೈವ ಸರ್ವೇ ॥ |
|
ರಾಶಿಗಟ್ಟಲೆ ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು - ಎಲ್ಲರೂ ಬಾಯಿಮುಚ್ಚಿ ಕಣ್ಣರಳಿಸಿ ನಿನ್ನನ್ನು ನೋಡುತ್ತಿದ್ದಾರೆ. |
|
23
|
ರೂಪಂ ಮಹತ್ತೇ ಬಹು-ವಕ್ತ್ರ-ನೇತ್ರಂ
ಮಹಾ-ಬಾಹೋ ಬಹು-ಬಾಹೂರು-ಪಾದಮ್ ।
ಬಹೂದರಂ ಬಹು-ದಂಷ್ಟ್ರಾ-ಕರಾಳಂ
ದೃಷ್ಟ್ವಾ ಲೋಕಾಃ ಪ್ರ-ವ್ಯಥಿತಾಸ್ತಥಾಽಹಮ್ ॥ |
|
ಓ ವಿಶಾಲವಾದ ದೇಹ ಹೊತ್ತವನೇ, ನಿನ್ನ ದೊಡ್ಡ ರೂಪವು ಬಹಳ ಬಾಯಿ, ಕಣ್ಣು, ಕೈ,. ತೊಡೆ, ಕಾಲು, ಹೊಟ್ಟೆ, ಕೋರೆಹಲ್ಲುಗಳನ್ನು ಹೊಂದಿದೆ. ಉಗ್ರರೂಪವನ್ನು ಕಂಡು ಜನರು ತುಂಬಾ ಹೆದರಿ ನಡುಗಿ ಹೋಗಿದ್ದಾರೆ. ನಾನೂ ಹಾಗೆಯೆ ಬೆದರಿ ನಡುಗುತ್ತಿದ್ದೇನೆ. |
|
24
|
ನಭಃ-ಸ್ಪೃಶಂ ದೀಪ್ತಮನೇಕ-ವರ್ಣಂ
ವ್ಯಾತ್ತಾನನಂ ದೀಪ್ತ-ವಿಶಾಲ-ನೇತ್ರಮ್ ।
ದೃಷ್ಟ್ವಾಹಿ ತ್ವಾ ಪ್ರ-ವ್ಯಥಿತಾಂತರಾತ್ಮಾ
ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥ |
|
ಒಳಗೂ ಹೊರಗೂ ತುಂಬಿ ನಿಂತ ಓ ವಿಷ್ಣುವೆ, ಆಕಾಶವನ್ನು ಮುಟ್ಟಿದ, ಬಹಳ ಬಣ್ಣಗಳ ಬೆಳಕು ಹರಡಿದ, ಬಾಯಿ ತೆರೆದ, ಹೊಳೆವ ಕಣ್ಣುಗಳನ್ನು ಅಗಲಿಸಿದ ನಿನ್ನ ರೂಪವನ್ನು ಕಂಡು ಮನಸ್ಸು ಹೆದರಿದೆ, ಬಾಧೆ ಪಟ್ಟಿದೆ. ಧೈರ್ಯ ತಪ್ಪಿದೆ. ಶಾಂತಿ ಇಲ್ಲವಾಗಿದೆ. |
|
25
|
ದಂಷ್ಟ್ರಾ-ಕರಾಳಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲ-ಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ ॥ |
|
ಪ್ರಳಯಕಾಲದ ಬೆಂಕಿಯನ್ನು ಹರಿಸುತ್ತಿರುವ ಕಪ್ಪು ಕಪ್ಪಾದ ಕೋರೆಹಲ್ಲುಗಳ ನಿನ್ನ ಬಾಯಿಗಳನ್ನು ಕಂಡೇ ದಿಕ್ಕು ತೋಚದಂತಾಗಿದೆ. ಸುಖ ಆಗುತ್ತಿಲ್ಲ. ಓ ದೇವತೆಗಳ ಸ್ವಾಮಿಯೆ, ವಿಶ್ವದಲ್ಲಿ ತುಂಬಿರುವವನೆ, ಪ್ರಸನ್ನನಾಗು, ಸುಂದರವಾಗಿ ಕಾಣಿಸಿಕೋ. |
|
26
|
ಅಮೀ ಚ ತ್ವಾ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿ-ಪಾಲ-ಸಂಘೈಃ ।
ಭೀಷ್ಮೋ ದ್ರೋಣಃ ಸೂತ-ಪುತ್ರಸ್ತಥಾಽಸೌ
ಸಹಾಸ್ಮದೀಯೈರಪಿ ಯೋಧ-ಮುಖ್ಯೈಃ ॥ |
|
27
|
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾ-ಕರಾಳಾನಿ ಭಯಾನಕಾನಿ ।
ಕೇಚಿದ್ ವಿಲಗ್ನಾ ದಶನಾಂತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥ |
|
ರಾಜರೆಲ್ಲರ ರಾಶಿಗಳೊಡನೆ ಧೃತರಾಷ್ಟ್ರನ ಮಕ್ಕಳೆಲ್ಲರೂ ಮತ್ತು ನಮ್ಮ ಮುಖ್ಯ ಹೋರಾಟಗಾರರೊಡನೆ ಭೀಷ್ಮ, ದ್ರೋಣ, ಹಾಗೆ ಈ ಸೂತಪುತ್ರ ಕರ್ಣನೂ ಗಡಿಬಿಡಿಯಿಂದ ನಿನ್ನ ವಿಕಾರ ಕೋರೆಹಲ್ಲುಗಳುಳ್ಳ ಭಯಂಕರವಾದ ಬಾಯಿಗಳೊಳಗೆ ಬೀಳುತ್ತಿದ್ದಾರೆ. ಕೆಲವರು ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದಾರೆ. ಕೆಲವರ ತಲೆಗಳು ಹುಡಿಹುಡಿಯಾಗಿರುವುದು ಸುತ್ತಲೂ ಕಾಣಿಸುತ್ತಿವೆ. |
|
28
|
ಯಥಾ ನದೀನಾಂ ಬಹವೋಂಽಬು-ವೇಗಾಃ
ಸಮುದ್ರಮೇವಾಭಿ-ಮುಖಾ ದ್ರವಂತಿ ।
ತಥಾ ತವಾಮೀ ನರ-ಲೋಕ-ವೀರಾಃ
ವಿಶಂತಿ ವಕ್ತ್ರಾಣ್ಯಭಿ-ವಿಜ್ವಲಂತಿ ॥ |
|
ನದಿಗಳ ಹಲವು ನೀರ ಪ್ರವಾಹಗಳು ಸಮುದ್ರಕ್ಕೆ ಎದುರಾಗಿಯೇ ಹರಿಯುತ್ತವೆ. ಹೀಗೆ ಈ ಮನುಷ್ಯಲೋಕದ ರಾಜರು, ಸುತ್ತಲೂ ಉರಿಯುತ್ತಿರುವ ನಿನ್ನ ಬಾಯಿಗಳ ಒಳಗೆ ಸೇರುತ್ತಿದ್ದಾರೆ. |
|
29
|
ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ
ವಿಶಂತಿ ನಾಶಾಯ ಸಮೃದ್ಧ-ವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಃ
ತವಾಪಿ ವಕ್ತ್ರಾಣಿ ಸಮೃದ್ಧ-ವೇಗಾಃ ॥ |
|
ಉರಿಯುವ ಬೆಂಕಿಗೆ, ಸಾಯಲೆಂದೆ ಹಾತೆಗಳು ಒಮ್ಮೆಲೇ ಹಾರಿಬಂದು ಬೀಳುತ್ತವೆ. ಹಾಗೆ ಲೋಕದ ಜನರು ಸಾಯಲೆಂದೆ ಜೋರಾಗಿ ಓಡುತ್ತ ಬಂದು ನಿನ್ನ ಬಾಯಿಗಳಲ್ಲಿ ಬೀಳುತ್ತಿದ್ದಾರೆ. |
|
30
|
ಲೇಲಿಹ್ಯಸೇ ಗ್ರಸ-ಮಾನಃ ಸಮಂತಾತ್
ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ ಸಮಗ್ರಂ
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥ |
|
ಎಲ್ಲೆಡೆ ತುಂಬಿದ ಓ ವಿಶ್ವರೂಪನೆ, ಬೆಂಕಿ ಹಾರುತ್ತಿರುವ ಬಾಯಿಗಳಿಂದ ಎಲ್ಲ ಜನರನ್ನೂ ನುಂಗುತ್ತ ಸುತ್ತಲೂ ನೆಕ್ಕುತ್ತಿರುವೆ. ನಿನ್ನ ತೀಕ್ಷ್ಣ ಕಿರಣಗಳು ಪ್ರಪಂಚವನ್ನು ಪೂರ್ತಿ ಆವರಿಸಿ ತುಂಬ ಬಿಸಿಯಿಂದ ಸುಡುತ್ತಿವೆ. |
|
31
|
ಆಖ್ಯಾಹಿ ಮೇ ಕೋ ಭವಾನುಗ್ರ-ರೂಪೋ
ನಮೋಽಸ್ತು ತೇ ದೇವ-ವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ
ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥ |
|
ಉಗ್ರರೂಪನು ನೀನು ಏನು ವೈಭವದವನು? ನನಗೆ ಹೇಳು. ಓ ದೇವಶ್ರೇಷ್ಠನೆ, ನಿನಗೆ ನಮಿಸಿದ್ದೇನೆ. ಪ್ರಸನ್ನನಾಗು. ಎಲ್ಲಕ್ಕೂ ಮೊದಲಿರುವ ನಿನ್ನನ್ನು ಚೆನ್ನಾಗಿ ತಿಳಿಯಲು ಬಯಸುತ್ತೇನೆ. ನಿನ್ನ ಲೀಲೆ ಸರಿಯಾಗಿ ತಿಳಿದಿಲ್ಲ. |
|
ಭಗವಾನ್
ಉವಾಚ
|
|
32
|
ಕಾಲೋಽಸ್ಮಿ ಲೋಕ-ಕ್ಷಯ-ಕೃತ್ ಪ್ರವೃದ್ಧೋ
ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ।
ಋತೇಽಪಿ ತ್ವಾ ನ ಭವಿಷ್ಯಂತಿ ಸರ್ವೇ
ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥ |
|
ಕೃಷ್ಣನು ಹೇಳಿದನು - ಎಲ್ಲೆಡೆ ತುಂಬಿದ ವಿಶ್ವರೂಪನು ನಾನು, ಲೋಕಗಳನ್ನು ನಾಶ ಮಾಡುವ ಕಾಲನು ಆಗಿದ್ದೇನೆ. ಎಲ್ಲರನ್ನೂ ಸಂಹರಿಸಲು ಇಲ್ಲಿ ತೊಡಗಿದ್ದೇನೆ. ನೀನು ಇರದಿದ್ದರೂ, ಎಲ್ಲ ಸೇನೆಗಳಲ್ಲಿ ಸೇರಿದ ಎಲ್ಲ ಹೋರಾಟಗಾರರೂ ನಾಶವಾಗುತ್ತಾರೆ. |
|
33
|
ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ
ನಿಮಿತ್ತ-ಮಾತ್ರಂ ಭವ ಸವ್ಯ-ಸಾಚಿನ್ ॥ |
|
ಆದ್ದರಿಂದ ನೀನು ಎದ್ದು ನಿಲ್ಲು, ವೈರಿಗಳನ್ನು ಗೆದ್ದು ಕೀರ್ತಿಯನ್ನು ಹೊಂದು. ಇಡಿಯ ರಾಜ್ಯವನ್ನು ಪಾಲಿಸು. ಇವರೆಲ್ಲ ನನ್ನಿಂದಲೆ ಮೊದಲೇ ಸತ್ತಾಗಿದೆ. ಓ ಸವ್ಯಸಾಚಿಯೆ, ನೀನು ಕೇವಲ ಕಾರಣ ಆಗು. |
|
34
|
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ
ಕರ್ಣಂ ತಥಾಽನ್ಯಾನಪಿ ಯೋಧ-ವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾಃ
ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥ |
|
ನನ್ನಿಂದ ನಾಶಗೊಂಡ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ವೀರ ಹೋರಾಟಗಾರರನ್ನೂ ನೀನು ಕೊಲ್ಲು. ದುಃಖಿಸದಿರು, ಯುದ್ಧ ಮಾಡು. ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವೆ. |
|
35
|
ಏತಚ್ಛ್ರುತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾಽಹ ಕೃಷ್ಣಂ
ಸಗದ್ಗದಂ ಭೀತ-ಭೀತಃ ಪ್ರಣಮ್ಯ ॥ |
|
ಸುತ್ತಲೂ ಕೆದರಿದ ಕೇಶರಾಶಿಯ ಕೃಷ್ಣನ ಈ ಮಾತನ್ನು ಕೇಳಿ ಅರ್ಜುನನು ನಡುಗುತ್ತಾ ಕೈಮುಗಿದು ನಮಸ್ಕರಿಸಿ, ತುಂಬ ಹೆದರಿ ಮತ್ತೆಮತ್ತೆ ತಲೆಬಾಗಿ ನಮಿಸುತ್ತ ಕೃಷ್ಣನ ಬಳಿ ತಡವರಿಸುತ್ತ ಇನ್ನೂ ಹೇಳಿದನು. |
|
36
|
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ
ಜಗತ್ ಪ್ರಹೃಷ್ಯತ್ಯನು-ರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧ-ಸಂಘಾಃ ॥ |
|
ಓ ಹೃಷೀಕೇಶನೆ, ಎಲ್ಲವೂ ಸತ್ಯ. ಜಗತ್ತು ನಿನ್ನ ಮಹಿಮೆಯಿಂದ ಸಂತಸಪಟ್ಟಿದೆ ಮತ್ತು ನಿನ್ನಲ್ಲಿ ಯೋಗ್ಯವಾದ ಭಕ್ತಿ ಮಾಡಿದೆ. ರಕ್ಕಸರು ಹೆದರಿ ಎತ್ತೆತ್ತಲೋ ಓಡುತ್ತಿದ್ದಾರೆ. ಸಿದ್ಧಿ ಪಡೆದವರೆಲ್ಲರೂ ಒಟ್ಟಾಗಿ ನಮಿಸುತ್ತಿದ್ದಾರೆ. |
|
37
|
ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್
ಗರೀಯಸೇ ಬ್ರಹ್ಮಣೋಽಪ್ಯಾದಿ-ಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ
ತ್ವಮಕ್ಷರಂ ಸದಸತ್ ತತ್ಪರಂ ಯತ್ ॥ |
|
ಓ ಮಹಾತ್ಮನೆ, ಚತುರ್ಮುಖನಿಗಿಂತಲೂ ಹಿರಿಯನಾಗಿ ಮೊದಲ ಸೃಷ್ಟಿಕಾರನಾದ ನಿನಗೆ ಅವರೆಲ್ಲರೂ ಹೇಗೆ ನಮಿಸದೆ ಇರುವರು? ಓ ಅನಂತಗುಣನೆ, ದೇವತೆಗಳ ಸ್ವಾಮಿಯೇ, ವಿಶ್ವರೂಪನೇ, ನೀನು ನಾಶವಿಲ್ಲದವನು. ಈ ಕಾಣುವ ಮಣ್ಣು ನೀರು ಬೆಂಕಿ, ಮತ್ತು ಕಾಣದ ಗಾಳಿ ಆಕಾಶ ಪ್ರಪಂಚಕ್ಕಿಂತ ಬೇರೆ ರೀತಿಯವನು, ಮಿಗಿಲಾದವನು. |
|
38
|
ತ್ವಮಾದಿ-ದೇವಃ ಪುರುಷಃ ಪುರಾಣಃ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾಽಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನಂತ-ರೂಪ ॥ |
|
ನೀನು ಎಲ್ಲ ದೇವತೆಗಳಿಗೂ ಮೂಲನು ಮತ್ತು ಎಲ್ಲರೊಳಗೂ ಇರುವವನು. ಮೊದಲಿಂದಲೂ ಇದ್ದವನು. ನೀನು ಈ ಜಗತ್ತಿಗೆ ಮುಖ್ಯ ಆಶ್ರಯನು. ನೀನು ಎಲ್ಲವನ್ನೂ ತಿಳಿದವನು ಮತ್ತು ಎಲ್ಲರಿಂದಲೂ ತಿಳಿಯಬೇಕಾದವನು. ನೀನು ಎಲ್ಲಕ್ಕಿಂತ ಬೇರೆಯಾದ ಸ್ವರೂಪದವನು. ಅನಂತರೂಪನೆ, ಪ್ರಪಂಚವು ನಿನ್ನಿಂದ ತುಂಬಿದೆ. |
|
39
|
ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇಽಸ್ತು ಸಹಸ್ರ-ಕೃತ್ವಃ
ಪುನಶ್ಚ ಭೂಯೋಽಪಿ ನಮೋ-ನಮಸ್ತೇ ॥ |
|
ವಾಯು (ಬಲಜ್ಞಾನ ರೂಪ), ಯಮ (ನಿಯಾಮಕ), ಅಗ್ನಿ (ಚಾಲಕ), ವರುಣ (ಆವರಕ), ಶಶಾಂಕ (ಪೂರ್ಣಾನಂದ), ಪ್ರಜಾಪತಿ (ಪ್ರಜಾಪಾಲಕ) ಎಲ್ಲ ನೀನೆ. ಮತ್ತು ನೀನು ಎಲ್ಲರ ಮುತ್ತಜ್ಜ. ಸಾವಿರ ಬಾರಿ ನಿನಗೆ ನಮಿಸುವೆನು. ಮತ್ತೊಮ್ಮೆ ನಮಿಸುವೆ. ಇನ್ನೂ ನಮಿಸುತ್ತಲೇ ಇರುವೆ. ನಿನಗೆ ನಮೋನಮಃ. |
|
40
|
ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋಽಸ್ತು ತೇ ಸರ್ವತ ಏವ ಸರ್ವ ।
ಅನಂತ-ವೀರ್ಯಾಮಿತ-ವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ॥ |
|
ನಿನ್ನ ಎದುರಲ್ಲಿ ನಮಿಸುವೆ. ಹಿಂದೆಯೂ ನಿನಗೆ ನಮಿಸುವೆ. ಓ ಎಲ್ಲೆಡೆ ತುಂಬಿದವನೇ, ನಿನಗೆ ಎಲ್ಲ ಕಡೆಯಿಂದಲೂ ನಮಸ್ಕರಿಸುವೆನು. ಓ ನಾಶವಾಗದ ಸಾಮರ್ಥ್ಯವುಳ್ಳವನೆ, ನೀನು ಅಳತೆಗೆ ಸಿಗದ ಪರಾಕ್ರಮಶಾಲಿಯು. ನೀನು ಎಲ್ಲವನ್ನೂ ಪೂರ್ತಿ ವ್ಯಾಪಿಸಿ ಇರುವುದರಿಂದಲೇ ನೀನೇ “ಎಲ್ಲ” (ಸರ್ವ). |
|
41
|
ಸಖೇತಿ ಮತ್ವಾ ಪ್ರಸಭಂ ಯದುಕ್ತಂ
ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ
ಮಯಾ ಪ್ರಮಾದಾತ್ ಪ್ರಣಯೇನ ವಾಽಪಿ ॥ |
|
ನಿನ್ನ ಈ ಮಹಿಮೆಯನ್ನು ತಿಳಿಯದೆ ನಾನು ಗೆಳೆಯನೆಂದೆ ಯೋಚಿಸಿ, ಏ ಕೃಷ್ಣ, ಏ ಯಾದವ, ಏ ಸಖನೇ ಎಂದು ಗೆಳೆತನದಲ್ಲೊ, ಗಮನಕೊಡದೆಯೊ ಎಗ್ಗಿಲ್ಲದೆ ಕರೆದು ಕೂಗಿದ್ದುಂಟು. |
|
42
|
ಯಚ್ಚಾಪ-ಹಾಸಾರ್ಥಮಸತ್ಕೃತೋಽಸಿ
ವಿಹಾರ-ಶಯ್ಯಾಸನ-ಭೋಜನೇಷು ।
ಏಕೋಽಥವಾಽಪ್ಯಚ್ಯುತ ತತ್ ಸಮಕ್ಷಂ
ತತ್ ಕ್ಷಾಮಯೇ ತ್ವಾಮಹಮಪ್ರ-ಮೇಯಮ್ ॥ |
|
ಆಟಗಳಲ್ಲಿ, ಊಟಗಳಲ್ಲಿ, ಮಲಗುವ ಮಂಚಗಳಲ್ಲೂ ಒಬ್ಬನೆ ಇದ್ದಾಗಲೂ ಅಥವಾ ಎಲ್ಲರೆದುರೂ ತಮಾಷೆ ಮಾಡಲೆಂದೆ ನಾನು ತಿರಸ್ಕರಿಸಿದ್ದೇನೆ. ಓ ಅಚ್ಯುತನೆ, ಪೂರ್ತಿ ತಿಳಿಯಲಾಗದ ನಿನ್ನನ್ನು ನಾನು ಕ್ಷಮಿಸು ಎಂದು ಬೇಡಿಕೊಳ್ಳುವೆನು. |
|
43
|
ಪಿತಾಽಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ
ಲೋಕ-ತ್ರಯೇಽಪ್ಯಪ್ರತಿಮ-ಪ್ರಭಾವ ॥ |
|
ನೀನು ಈ ಚರಾಚರ ಪ್ರಪಂಚದ ಪಾಲಕನು. ಈ ಲೋಕಕ್ಕೆ ಆರಾಧ್ಯನು ನೀನೆ. ನೀನು ಗುರುವಿಗೂ ಹಿರಿಯ ಗುರು. ಸರಿಸಾಟಿಯಿಲ್ಲದ ರೂಪ ಹೊತ್ತವನೆ, ಮೂರು ಲೋಕದಲ್ಲಿಯೂ ನಿನಗೆ ಸಮನಾದವನೇ ಇಲ್ಲ. ನಿನಗಿಂತ ಹೆಚ್ಚಿನವನು ಬೇರೆ ಎಲ್ಲಿ ಇದ್ದಾನೆ? |
|
44
|
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ
ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ
ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥ |
|
ಆದ್ದರಿಂದ, ಎಲ್ಲರೂ ಸ್ತುತಿಸುವ, ಎಲ್ಲರ ಸ್ವಾಮಿಯಾದ ನಿನ್ನನ್ನು ನಾನು, ದೇಹವನ್ನು ನೆಲದಲ್ಲಿ ಉದ್ದ ಚಾಚಿ ಮನಸಾರೆ ನಮಿಸುತ್ತ ಪ್ರಸನ್ನನಾಗು ಎಂದು ಬೇಡುವೆನು. ಓ ದೇವನೆ, ತಂದೆ ಮಗನ ತಪ್ಪುಗಳನ್ನು, ಗೆಳೆಯ ಗೆಳೆಯನ ತಪ್ಪುಗಳನ್ನು ಸಹಿಸುವಂತೆ, ನನಗೆ ಪ್ರಿಯನಾದ ನೀನು, ನಿನಗೆ ಪ್ರಿಯನಾದ ನನ್ನ ತಪ್ಪುಗಳನ್ನು ಸಹಿಸು, ಕ್ಷಮಿಸು. |
|
45
|
ಅದೃಷ್ಟ-ಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವ ರೂಪಂ
ಪ್ರಸೀದ ದೇವೇಶ ಜಗನ್ನಿವಾಸ ॥ |
|
ಹಿಂದೆ ಕಂಡಿರದ ರೂಪವನ್ನು ಕಂಡು ಸಂತೋಷ ಆಗಿದೆ. ನನ್ನ ಮನಸ್ಸು ಹೆದರಿ ದುಃಖಗೊಂಡಿದೆ. ಓ ದೇವನೆ, ನನಗೆ ಆ ಹಿಂದಿನ ರೂಪವನ್ನೆ ತೋರಿಸು. ಓ ದೇವತೆಗಳ ಸ್ವಾಮಿಯೆ, ಜಗದ ಆಶ್ರಯನೆ ಪ್ರಸನ್ನನಾಗು. |
|
46
|
ಕಿರೀಟಿನಂ ಗದಿನಂ ಚಕ್ರ-ಹಸ್ತಂ
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ
ಸಹಸ್ರ-ಬಾಹೋ ಭವ ವಿಶ್ವ-ಮೂರ್ತೇ ॥ |
|
ಕಿರೀಟ ತೊಟ್ಟ, ಗದೆ-ಚಕ್ರ ಕೈಯಲ್ಲಿ ಹಿಡಿದ, ಹಿಂದಿನ ಆ ರೂಪದಲ್ಲಿಯೇ ನಿನ್ನನ್ನು ನೋಡಲು ನಾನು ಬಯಸುತ್ತೇನೆ. ಸಾವಿರಾರು ತೋಳಿನ ವಿಶ್ವರೂಪನೆ, ನಾಲ್ಕು ಕೈಯ ಹಿಂದಿನ ರೂಪದಿಂದಲೆ ಕಾಣಿಸಿಕೊ. |
|
ಭಗವಾನ್
ಉವಾಚ
|
|
47
|
ಮಯಾ ಪ್ರಸನ್ನೇನ ತವಾರ್ಜುನೇದಂ
ರೂಪಂ ಪರಂ ದರ್ಶಿತಮಾತ್ಮ-ಯೋಗಾತ್ ।
ತೇಜೋ-ಮಯಂ ವಿಶ್ವಮನಂತಮಾದ್ಯಂ
ಯನ್ಮೇ ತ್ವದನ್ಯೇನ ನ ದೃಷ್ಟ-ಪೂರ್ವಮ್ ॥ |
|
ಕೃಷ್ಣನು ಹೇಳಿದನು - ಓ ಅರ್ಜುನನೆ, ನಿನ್ನ ಅನುಗ್ರಹಕ್ಕಾಗಿಯೆ ನಾನು ನನ್ನ ಶಕ್ತಿಯಿಂದ ಈ ಪೂರ್ಣರೂಪವನ್ನು ತೋರಿಸಿದೆ. ಎಲ್ಲಕ್ಕೂ ಕಾರಣವಾದ ನಾಶವಿರದ ನನ್ನ ಈ ಬೆಳಕಿನ ರಾಶಿಯ ವಿಶ್ವರೂಪವನ್ನು ನಿನ್ನ ಹೊರತು ಬೇರೆ ಯಾರೂ ಈ ಹಿಂದೆ ನೋಡಿಲ್ಲ. |
|
48
|
ನ ವೇದ-ಯಜ್ಞಾಧ್ಯಯನೈರ್ನ ದಾನೈಃ
ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂ-ರೂಪಃ ಶಕ್ಯ ಅಹಂ ನೃ-ಲೋಕೇ
ದ್ರಷ್ಟುಂ ತ್ವದನ್ಯೇನ ಕುರು-ಪ್ರವೀರ ॥ |
|
ಓ ಕುರುವಂಶದ ವೀರನೆ, ನಾನು ಹೀಗೆ ವಿಶ್ವರೂಪನು ಮನುಷ್ಯರ ಲೋಕದಲ್ಲಿ ನಿನ್ನ ಹೊರತು ಬೇರೆ ಯಾರಿಂದಲೂ, ಯಜ್ಞಪ್ರಧಾನವಾಗಿ ವೇದಗಳ ಓದಿನಿಂದ, ದಾನಗಳಿಂದ, ವ್ರತ-ನಿಯಮಗಳಿಂದ ಅಥವಾ ಕಠೋರ ತಪಸ್ಸುಗಳಿಂದ ಕಾಣಲು ಸಿಗುವುದಿಲ್ಲ. |
|
49
|
ಮಾ ತೇ ವ್ಯಥಾ ಮಾ ಚ ವಿಮೂಢ-ಭಾವೋ
ದೃಷ್ಟ್ವಾರೂಪಂ ಘೋರಮೀದೃಙ್ಮಮೇದಮ್
ವ್ಯಪೇತ-ಭೀಃ ಪ್ರೀತ-ಮನಾಃ ಪುನಸ್ತ್ವಂ
ತದೇವ ಮೇ ರೂಪಮಿದಂ ಪ್ರಪಶ್ಯ ॥ |
|
ನನ್ನ ಈ ಉಗ್ರರೂಪವನ್ನು ಕಂಡು ಹೆದರಿ ನಡುಗಬೇಡ, ಮೋಹಗೊಳ್ಳಬೇಡ. ಹೆದರಿಕೆ ಬಿಟ್ಟು ಭಕ್ತಿಭಾವದಿಂದ ನೀನು ಮತ್ತೆ ನನ್ನ ಹಿಂದಿನ ರೂಪವನ್ನೆ ಇದೋ ನೋಡು, ಚೆನ್ನಾಗಿ. |
|
50
|
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ
ಭೂತ್ವಾ ಪುನಃ ಸೌಮ್ಯ-ವಪುರ್ಮಹಾತ್ಮಾ ॥ |
|
ಹೀಗೆ ಕೃಷ್ಣನು ಅರ್ಜುನನಿಗೆ ಹೇಳಿ, ಮತ್ತೆ ತನ್ನ ಕೃಷ್ಣರೂಪವನ್ನೆ ತೋರಿಸಿದನು. ವಿಶ್ವರೂಪನಾಗಿದ್ದ ಕೃಷ್ಣನು ಮತ್ತೆ ಶಾಂತರೂಪದವನಾಗಿ ಹೆದರಿದ ಅರ್ಜುನನನ್ನು ಸಮಾಧಾನಪಡಿಸಿದನು. |
|
ಅರ್ಜುನ
ಉವಾಚ
|
|
51
|
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂ-ವೃತ್ತಃ ಸ-ಚೇತಾಃ ಪ್ರಕೃತಿಂ ಗತಃ ॥ |
|
ಅರ್ಜುನನು ಹೇಳಿದನು - ಓ ಜನಾರ್ದನನೆ, ಮನುಷ್ಯನ ಆಕಾರದ ನಿನ್ನ ಈ ಶಾಂತವಾದ ರೂಪವನ್ನು ಕಂಡು ಈಗ ಸಹಜಸ್ಥಿತಿಗೆ ಬಂದಿದ್ದೇನೆ. ಮನಸ್ಸು ಪೂರ್ಣ ತಿಳಿಯಾಗಿದೆ. |
|
ಭಗವಾನ್
ಉವಾಚ
|
|
52
|
ಸು-ದುರ್ದರ್ಶಮಿದಂ ರೂಪಂ ದೃಷ್ಟ-ವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನ-ಕಾಂಕ್ಷಿಣಃ ॥ |
|
ಕೃಷ್ಣನು ಹೇಳಿದನು - ಸುಲಭವಾಗಿ ಕಾಣಲಾಗದ ನನ್ನ ಈ ವಿಶ್ವರೂಪವನ್ನು ಕಂಡೆ. ದೇವತೆಗಳೂ ಈ ರೂಪವನ್ನು ಕಾಣಲು ಯಾವಾಗಲೂ ಬಯಸುತ್ತಾರೆ. |
|
53
|
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂ-ವಿಧೋ ದ್ರಷ್ಟುಂ ದೃಷ್ಟ-ವಾನಸಿ ಮಾಂ ಯಥಾ ॥ |
|
ನೀನು ಕಂಡಂತೆ, ಈ ಬಗೆಯ ನನ್ನನ್ನು ಯಜ್ಞ-ದಾನ-ತಪಸ್ಸುಗಳಿಂದ ಅಥವಾ ವೇದದ ಪಠನಮಾತ್ರದಿಂದಲೊ ಕಾಣಲು ಸಾಧ್ಯವಿಲ್ಲ. |
|
54
|
ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂ-ವಿಧೋಽರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂ ತಪ ॥ |
|
ಓ ಅರ್ಜುನನೆ, ನನ್ನನ್ನು ಈ ರೀತಿಯಾಗಿ ಚೆನ್ನಾಗಿ ಕಾಣಲು, ಚೆನ್ನಾಗಿ ತಿಳಿಯಲು ಮತ್ತೆ ಚೆನ್ನಾಗಿ ಪೂರ್ತಿ ಸೇರಲು, ನನ್ನಲ್ಲೆ ಮಾಡಿದ ಭಕ್ತಿಯಿಂದ ಮಾತ್ರವೆ ಸಾಧ್ಯವಾಗಲಿದೆ. ಸರಿಯಾಗಿ ತಿಳಿ. |
|
55
|
ಮತ್ಕರ್ಮ-ಕೃನ್ಮತ್ಪರಮೋ ಮದ್ಭಕ್ತಃ ಸಂಗ-ವರ್ಜಿತಃ ।
ನಿರ್ವೈರಃ ಸರ್ವ-ಭೂತೇಷು ಯಃ ಸ ಮಾಮೇತಿ ಪಾಂಡವ ॥ |
|
ಓ ಪಾಂಡವನೆ, ನನ್ನ ಧರ್ಮ ಮಾಡುವವನು, ನಾನೇ ಸರ್ವೋತ್ತಮನೆಂದು ತಿಳಿದವನು, ಬೇರೆ ಎಲ್ಲೂ ಆಸಕ್ತನಾಗದೆ ನನ್ನಲ್ಲೆ ಭಕ್ತಿ ಮಾಡಿದವನು, ಎಲ್ಲ ಜೀವರಲ್ಲೂ ದ್ವೇಷವಿಲ್ಲದವನು ಯಾರಾದರೂ ನನ್ನನ್ನು ಹೊಂದುತ್ತಾನೆ. |